Asianet Suvarna News Asianet Suvarna News

Janmastami 2022: ರಾತ್ರಿ ವಧು, ಮುಂಜಾನೆ ವಿಧವೆ!

ಕೃಷ್ಣನು ಮಹಾಭಾರತ ಯುದ್ಧದ ಸಮಯದಲ್ಲಿ ಒಂದು ರಾತ್ರಿಗೆ ವಧುವಾಗಿ, ಮರುದಿನ ವಿಧವೆಯಾದ ಕತೆಯೊಂದಿದೆ. ಇದನ್ನು ತೃತೀಯ ಲಿಂಗಿಗಳು ಕೂತಾಂಡವರ್ ಎಂದು ಆಚರಿಸುತ್ತಾರೆ. ಈ ಹಬ್ಬವೇನು, ಹಿನ್ನೆಲೆಯೇನು ನೋಡೋಣ. 

When Krishna became a bride for just one night skr
Author
Bangalore, First Published Aug 15, 2022, 10:52 AM IST

ಹಿಜ್ರಾ ಸಮುದಾಯವು ಹೆಚ್ಚು ನಿಗೂಢವಾದ ಸಂಪ್ರದಾಯಗಳನ್ನು ಹೊಂದಿದೆ. ಭಾರತದಲ್ಲಿ ಆಚರಿಸಲಾಗುವ ಅನೇಕ ವಿಲಕ್ಷಣ ಮತ್ತು ವಿಚಿತ್ರ ಪದ್ಧತಿಗಳು ಮತ್ತು ಹಬ್ಬಗಳಲ್ಲಿ, ಕೂವಾಗಂನ ಕೂತಾಂಡವರ್ ಉತ್ಸವವು ಅತ್ಯಂತ ಪೌರಾಣಿಕವಾಗಿದೆ. ಪ್ರೀತಿ, ಸಾವು ಮತ್ತು ತ್ಯಾಗದ ಈ ಆಚರಣೆಯು ಮಹಾಭಾರತ ಯುದ್ಧದ ಆಳದಲ್ಲಿ, ಕೃಷ್ಣನ ಕುತಂತ್ರದಲ್ಲಿ ಮತ್ತು ವೀರ ಯುವಕನ ಉದಾತ್ತ ಸ್ವಭಾವದಲ್ಲಿ ಬೇರುಗಳನ್ನು ಹೊಂದಿದೆ. ಈ ನಿಗೂಢ ಕಥೆಯನ್ನು ತಿಳಿಯಲು ಮುಂದೆ ಓದಿ.

ಮಹಾಭಾರತ ಯುದ್ಧದ ಆರಂಭದಲ್ಲಿ
ಪಾಂಡವರು ಮತ್ತು ಕೌರವರ ನಡುವೆ ಯುದ್ಧ ಸನ್ನಿಹಿತವಾಗಿತ್ತು. ಲಕ್ಷಾಂತರ ಅಮಾಯಕ ಮಾನವ ಜೀವಗಳನ್ನು ಉಳಿಸಲು ಯುದ್ಧವನ್ನು ತಡೆಯುವ ಹೊರತಾಗಿ ಬೇರಾವುದೇ ಮಾರ್ಗವಿರಲಿಲ್ಲ. ಬ್ರಹ್ಮಾಂಡದ ರಕ್ಷಕನಾದ ಕೃಷ್ಣನು ಯುದ್ಧದ ಫಲಿತಾಂಶದ ಬಗ್ಗೆ ಚಿಂತಿತನಾಗಿದ್ದನು. ಅವನು ತನ್ನ ದೈವಿಕ ಶಕ್ತಿಗಳೊಂದಿಗೆ ಮಧ್ಯ ಪ್ರವೇಶಿಸಿ ದುರಂತವನ್ನು ತಪ್ಪಿಸಬಹುದು ಎಂಬುದು ನಿಜ, ಆದರೆ ಮಾನವರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಅಗತ್ಯವಿದೆ. ಅದನ್ನೇ ವೇದಗಳು ಮತ್ತು ಶಾಸ್ತ್ರಗಳು ಹೇಳುತ್ತವೆ. ಹಾಗಾಗಿ ಕೃಷ್ಣನು ಆದಷ್ಟು ಬೇಗ ಯುದ್ಧ ಮುಗಿಸುವ ದಾರಿ ಹುಡುಕುತ್ತಿದ್ದನು. 

ಸಹದೇವನ ಭವಿಷ್ಯವಾಣಿ
ಸಹದೇವನಿಗೆ ಭವಿಷ್ಯ ತಿಳಿಯುತ್ತಿತ್ತು. ಆತ ಕೃಷ್ಣನಿಗೆ ಹೇಳಿದನು, 'ಮುಂಬರುವ ಯುದ್ಧದಲ್ಲಿ ಜಯವನ್ನು ಸಾಧಿಸಲು, ನೀವು ಯುದ್ಧದ ದೇವತೆಯಾದ ಕಾಳಿಗೆ ಶೌರ್ಯ, ಶಕ್ತಿ, ಸೌಂದರ್ಯ ಮತ್ತು ಎಲ್ಲಾ ಉತ್ತಮ ಗುಣಗಳಿಂದ ತುಂಬಿದ ಮನುಷ್ಯನನ್ನು ಬಲಿ ಕೊಡಬೇಕು. ಯಾರು ಮೊದಲು ಈ ಯಜ್ಞವನ್ನು ಮಾಡುತ್ತಾರೋ ಅವರು ಕಾಳಿಯ ಆಶೀರ್ವಾದ ಪಡೆದು ಯುದ್ಧವನ್ನು ಗೆಲ್ಲುತ್ತಾರೆ'.

ಅರ್ಜುನ ಒಬ್ಬನೇ?
ಹಿಂತಿರುಗುವ ದಾರಿಯುದ್ದಕ್ಕೂ, ಕೃಷ್ಣನ ಮನಸ್ಸು ಒಂದೇ ಆಲೋಚನೆಯಿಂದ ತುಂಬಿತ್ತು, 'ಅರ್ಜುನನನ್ನು ಹೊರತುಪಡಿಸಿ ಯಾರಾದರೂ ಈ ಬಲಿದಾನಕ್ಕೆ ಸಮರ್ಥರಾಗಿರುವರೇ?' ಇಲ್ಲ ಎಂಬುದೇ ಉತ್ತರವಾಗಿದ್ದಾಗ ಅರ್ಜುನನ್ನು ಬಲಿ ಕೊಡುವ ವಿಚಾರ ಕೃಷ್ಣನಿಗೆ ಬಹಳ ದುಃಖಕರವಾಗಿತ್ತು. 

ಆಗ ಸುಂದರನಾಗಿದ್ದ ಯೋಧನಂತೆಯೂ, ಅರ್ಜುನನಂತೆಯೂ ಕಾಣುತ್ತಿದ್ದ ವ್ಯಕ್ತಿಯೊಬ್ಬ ಕೃಷ್ಣನಲ್ಲಿ ಪ್ರಶ್ನಿಸಿದ, 'ನಾನು ಬಲಿಯಾಗಲು ಅರ್ಹನೇ?' 

ನಿಮ್ಮ ಈ ವಾರದ ಭವಿಷ್ಯದ ಬಗ್ಗೆ ಟ್ಯಾರೋ ಕಾರ್ಡ್ ಹೇಳೋದೇನು?

ಆತ ಅರ್ಜುನ ಮತ್ತು ನಾಗ ರಾಜಕುಮಾರಿ ಉಲುಪಿಗೆ ಅಕ್ರಮ ಸಂಬಂಧದಿಂದ ಜನಿಸಿದ್ದ ಮಗ ಐರಾವಣನಾಗಿದ್ದ. ಆತ ತಂದೆಗೆ ಜಯ ತಂದುಕೊಡಲು ಬಂದವನು ಗೆಲುವಿಗಾಗಿ ತನ್ನನ್ನೇ ತ್ಯಾಗ ಮಾಡಲು ಸಿದ್ಧನಾಗಿದ್ದ. ಆಗ ಕೃಷ್ಣನು ತನ್ನ ದೈವಿಕ ಶಕ್ತಿಯನ್ನು ಬಳಸಿಕೊಂಡು, ಐರಾವಣನು ನಿಜವಾಗಿಯೂ ಅತ್ಯುತ್ತಮ ಗುಣಗಳಿಂದ ಕೂಡಿದ ಒಬ್ಬ ಶ್ರೇಷ್ಠ ಯೋಧ ಎಂಬುದನ್ನು ಅರಿಯುತ್ತಾನೆ. ಕೂಡಲೇ ಆತನನ್ನು ಕರೆದುಕೊಂಡು ಹೋಗಿ ಆತನ ತಂದೆ ಅರ್ಜುನನೂ ಸೇರಿದಂತೆ ಪಾಂಡವರಿಗೆ ಐರಾವಣನ ಪರಿಚಯ ಮಾಡಿಕೊಡುತ್ತಾನೆ. ಐರಾವಣನ ತ್ಯಾಗದ ಗುಣಗಳನ್ನು ಹೊಗಳುತ್ತಾನೆ. 

ಆದರೆ ಅರ್ಜುನನಿಗೆ ಉಲುಪಿಯಾಗಲಿ, ಆತನ ಪುತ್ರನಾಗಲಿ ನೆನಪಿನಲ್ಲಿರುವುದಿಲ್ಲ. ಆಗ ಕೃಷ್ಣ ಹೇಳುತ್ತಾನೆ, 'ನಿಮಗೆ ಏಳು ಸೇನೆಗಳಿವೆ. ಕೌರವರಿಗೆ ಹನ್ನೊಂದು. ನಿಮಗೆ ಸಿಗುವಷ್ಟೂ ಯೋಧರು ಬೇಕು. ಅವನ ತಾಯಿಯ ನೆನಪಿಲ್ಲದಿದ್ದರೂ ಅವನನ್ನು ಅರ್ಜುನ ತನ್ನ ಮಗನೆಂದು ಒಪ್ಪಿಕೊಳ್ಳಲಿ. ಅವನನ್ನು ತಬ್ಬಿಕೊಳ್ಳಲಿ. ಅವನನ್ನು ಬಂಧಿಸಿ. ಹೋಗಲು ಬಿಡಬೇಡಿ, ಆತ ಈ ತ್ಯಾಗಕ್ಕೆ ಸಮರ್ಥ ವ್ಯಕ್ತಿಯಾಗಿದ್ದಾನೆ.'

ಇಷ್ಟೊತ್ತಿಗಾಗಲೇ ಐರಾವಣನಿಗೆ ತನ್ನನ್ನು ತನ್ನ ತಂದೆ ಪ್ರೀತಿಸುವುದಿಲ್ಲ ಎಂಬುದು ಅರಿವಾಗುತ್ತದೆ. ಅಷ್ಟೇ ಅಲ್ಲ, ಯುದ್ಧಭೂಮಿಯಲ್ಲಿ ಯಾರೂ ಅವನ ಕಾಳಜಿ ವಹಿಸುವುದಿಲ್ಲ ಎಂಬುದೂ ತಿಳಿಯುತ್ತದೆ. ತಾನು ಕೇವಲ ದೇವಿಗೆ ಪರಿಪೂರ್ಣ ಅರ್ಪಣೆ ಎಂದಷ್ಟೇ ಇವರು ಹರಕೆಯ ಕುರಿಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿಯುತ್ತದೆ. 

ಆಗ ಕೃಷ್ಣ ಸ್ವಇಚ್ಛೆಯಿಂದ ಸಿದ್ಧನಿದ್ದವನು ಮಾತ್ರ ತನ್ನನ್ನು ತ್ಯಾಗ ಮಾಡಬಹುದು ಎನ್ನುತ್ತಾನೆ. ಆಗ ಐರಾವಣ ಹೇಳುತ್ತಾನೆ, 'ನಾನು ಸಿದ್ಧನಿದ್ದೇನೆ. ತನ್ನ ತಂದೆಗಾಗಿ ತನ್ನನ್ನು ತ್ಯಾಗ ಮಾಡಿದ ವೀರ ಎಂದು ಎಲ್ಲರೂ ನನ್ನ ಸ್ಮರಿಸಿಕೊಳ್ಳಲು ಬಯಸುತ್ತೇನೆ. ಆದರೆ, ಇಲ್ಲಿ ಯಾರೂ ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಾನು ಹೋದರೆ ತಾಯಿಯೊಬ್ಬಳೇ ಉಳಿಯುತ್ತಾಳೆ. ನಾನು ಸತ್ತಾಗ ನನಗಾಗಿ ಎದೆಗೆ ಬಡಿದು ತಲೆಗೂದಲು ಬಿಚ್ಚಿಕೊಂಡು ಕೆಸರಿನಲ್ಲಿ ಉರುಳುವ ವಿಧವೆ ಇರಬೇಕು. ಅಂದರೆ ನನಗೊಬ್ಬಳು ಹೆಂಡತಿ ಬೇಕು' ಎನ್ನುತ್ತಾನೆ ಐರಾವಣ. 

ಆದರೆ ಸಾಯುತ್ತಿರುವ ವ್ಯಕ್ತಿಯನ್ನು ಮದುವೆಯಾಗಲು ಯಾರು ಬಯಸುತ್ತಾರೆ? ಎಂಬುದು ಪಾಂಡವರ ಪ್ರಶ್ನೆಯಾಗಿತ್ತು. ಆದರೆ, ಆತನನ್ನು ಸ್ವಇಚ್ಛೆಯಿಂದ ಬಲಿಪೀಠಕ್ಕೆ ಹೋಗುವಂತೆ ಮಾಡಲು ಪತ್ನಿಯೊಬ್ಬಳು ಬೇಕೇಬೇಕಿತ್ತು. ಹಾಗಾಗಿ, ಕೃಷ್ಣನು ತನ್ನನ್ನು ತಾನೇ ಮೋಹಿನಿಯಾಗಿ ಮಾರ್ಪಡಿಸಿಕೊಂಡನು.  ಹಿರಿಯರ ಸಮ್ಮುಖದಲ್ಲಿ ಐರಾವಣನನ್ನು ಮದುವೆಯಾದನು. ಆ ರಾತ್ರಿ ಐರಾವಣನ ಆಸೆ ಈಡೇರಿತು. ಆತನಿಗೆ ಅಲ್ಲಿ ಬಂದುದು ಕೃಷ್ಣನೇ ಎಂಬುದು ತಿಳಿಯಲಿಲ್ಲ. ಮರು ಬೆಳಗ್ಗೆ ಆತ ತನ್ನನ್ನೇ ಬಲಿ ಕೊಟ್ಟು ಕಾಳಿಯನ್ನು ತೃಪ್ತಿಪಡಿಸಿದನು. ಆಗ ವಿಧವೆಯಾಗಿದ್ದ ಮೋಹಿನಿಯು ಸತ್ತ ತನ್ನ ಗಂಡನಿಗಾಗಿ ಗೋಳಾಡುವುದನ್ನು ನೋಡಿ ಆತನ ಆತ್ಮ ತೃಪ್ತಿಯಿಂದ ಸ್ವರ್ಗ ಸೇರಿತು. ಮೋಹಿನಿಯು ಐರಾವಣನಿಗಾಗಿ ಅತ್ತಂತೆ ಬೇರಾವ ಹೆಣ್ಣೂ ಸತ್ತ ತನ್ನ ಪತಿಗೆ ಅತ್ತಿರಲಿಲ್ಲ. ಅಷ್ಟೊಂದು ಜೋರಾದ ಗೋಳಾಟ ಆಕೆಯದಾಗಿತ್ತು. 

ಚಾಣಕ್ಯ ನೀತಿ: ಯಶಸ್ವಿಯಾಗಲು,ಕತ್ತೆಯಿಂದ ಈ ವಿಷ್ಯಗಳನ್ನು ಕಲಿಯಬೇಕಂತೆ

ಕೂವಗಂ ಹಬ್ಬ
ಮಹಾಭಾರತದಲ್ಲಿನ ಈ ಅಧ್ಯಾಯವು ಕೂವಗಂನಲ್ಲಿ 18 ದಿನಗಳ ಉತ್ಸವವಾಗಿ ನಡೆಯುತ್ತದೆ. ಇಲ್ಲಿರುವ ಸಣ್ಣ ದೇವಾಲಯವು ಐರಾವಣನಿಗೆ ಮಾತ್ರ ಸಮರ್ಪಿತವಾಗಿದೆ ಮತ್ತು ಅವನನ್ನು ಕೂತಂಡವರ್ ಎಂದು ಪೂಜಿಸಲಾಗುತ್ತದೆ. ಈ ಹಬ್ಬದ ಪ್ರಮುಖ ಅಂಶವೆಂದರೆ ಐರಾವಣನ ಮದುವೆ. ಇಲ್ಲಿ ಸೇರುವ ತೃತೀಯಲಿಂಗಿಗಳು ಐರಾವಣನ ಸ್ವಯಂಘೋಷಿತ ವಧುಗಳು. ಅವರು ಸ್ತ್ರೀಯರ ದೇಹದೊಳಗೆ ಸಿಕ್ಕಿಬಿದ್ದ ಪುರುಷನಾಗಿದ್ದ ಕೃಷ್ಣನ ಅವತಾರದಂತೆ ತಾವೂ ಎಂದು ಹೇಳಿಕೊಳ್ಳುತ್ತಾರೆ. ಹಬ್ಬದ ಮೊದಲ 15 ದಿನಗಳು ತೃತೀಯ ಲಿಂಗಿಗಳು ವರ್ಣರಂಜಿತ ಮತ್ತು ಉತ್ಸಾಹಭರಿತ ಪ್ರದರ್ಶನಗಳನ್ನು ನೀಡುತ್ತಾರೆ. 17ನೇ ದಿನದಂದು, ಅರ್ಚಕರು ಐರಾವಣನ ವಿಗ್ರಹಕ್ಕೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ ಮತ್ತು ಅಲ್ಲಿರುವ ಎಲ್ಲ ವಧುಗಲ ಕತ್ತಿಗೆ ಮಂಗಳ ಸೂತ್ರ ಕಟ್ಟಲಾಗುತ್ತದೆ. ರಾತ್ರಿ ಉಲ್ಲಾಸ, ನಗು ಮತ್ತು ನೃತ್ಯದಿಂದ ತುಂಬಿರುತ್ತದೆ. 

Follow Us:
Download App:
  • android
  • ios