Asianet Suvarna News Asianet Suvarna News

ಧರಣಿ ‘ಮಂಡಲ’ ಮಧ್ಯದೊಳಗೆ; ಮಂಡಲ ಎಂಬುದು ಚಿತ್ರವೇ, ಚಿತ್ತ ಪರಿಧಿಯೇ!

ಕೊರೋನಾ ಕಾಲಕ್ಕೆ ಆಧ್ಯಾತ್ಮ ಹೆಚ್ಚು ಆಪ್ತವಾಗುತ್ತಿದೆ. ಸ್ಪಿರಿಚ್ಯುವಲ್‌ ಎಕ್ಸ್‌ಪೀರಿಯನ್ಸ್‌ಅನ್ನು ಇನ್ನಷ್ಟುಗಾಢವಾಗಿಸುವುದು ಮಂಡಲಗಳು. ಈ ವೃತ್ತಾಕಾರದ ರಚನೆಗಳ ಹಿಂದಿರುವ ಅದಮ್ಯ ಶಕ್ತಿಯ ಕುರಿತ ಬರಹವಿದು.

whats is mandalas here is what you need to know about its spirituality
Author
Bangalore, First Published Jul 7, 2020, 3:58 PM IST

- ಸೌಮ್ಯಾ ಬೀನಾ

ನಾವು ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತೇವೆ. ಅಲ್ಲಿನ ಸುತ್ತಮುತ್ತಲಿನ ವಾತಾವರಣ, ನಮ್ಮ ಮನಸ್ಸನ್ನು ತಿಳಿಗೊಳಿಸಿ, ನಾವು ಮಾಡುವ ಪ್ರಾರ್ಥನೆ-ಧ್ಯಾನಗಳ ಮೂಲಕ ಮನಸ್ಸನ್ನು ತಹಬಂದಿಗೆ ತರಲು ಸಹಾಯ ಮಾಡುತ್ತದೆ. ಇಂತಹ ಧ್ಯಾನ ಮಂದಿರಗಳ ವಾಸ್ತುಶಿಲ್ಪವನ್ನು ನೀವು ಗಮನಿಸಿರಬಹುದು. ಗೋಪುರಗಳಲ್ಲಿ, ಮೇಲ್ಛಾವಣಿಗಳಲ್ಲಿ ಕಾಣಸಿಗುವ ಸುಂದರ ಕೆತ್ತನೆಯ ವಿನ್ಯಾಸಗಳು ಹೆಚ್ಚಿನವು ವೃತ್ತಾಕಾರದಲ್ಲಿಯೇ ಇರುತ್ತದೆ. ಇಂತಹ ಸ್ಥಳಗಳು ನಮ್ಮನ್ನು ಉಲ್ಲಾಸಭರಿತರನ್ನಾಗಿ ಮಾಡುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಕೆಲವು ಪೂಜೆಗಳಲ್ಲಿ ವರ್ಣರಂಜಿತ ನಿರ್ದಿಷ್ಟವೃತ್ತಾಕಾರದ ರಚನೆಯನ್ನು ಮಾಡಿ ದೈವವನ್ನು ಆರಾಧಿಸಲಾಗುತ್ತದೆ. ಇವುಗಳನ್ನು ಕಂಡಾಗ ನೆಮ್ಮದಿ ಮತ್ತು ಸಂತೋಷದ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ಮನೆಯಂಗಳದಿ ಹಾಕಿದ ಗೋಲಾಕಾರದ ರಂಗೋಲಿ ನೋಡಿದಾಗ ಮನಸ್ಸಿಗೆ ಒಂದು ರೀತಿಯ ಮುದ ಸಿಗುತ್ತದೆ. ಇವುಗಳಿಗೂ ನಮ್ಮ ಮನಸ್ಸಿಗೂ ಏನಾದರೂ ಸಂಬಂಧವಿದೆಯೇ? ಹೌದು, ಕೇವಲ ಚಿತ್ರಗಳ ರೂಪದಲ್ಲಿಯೇ ನಮ್ಮಲ್ಲಿ ಅದಮ್ಯವಾದ ಶಕ್ತಿಯನ್ನು ತುಂಬುವ, ನವ ಚೈತನ್ಯದ ರೂಪವಾದ ಇಂತಹ ಪವಿತ್ರವಾದ ಚಿಹ್ನೆಗಳಿಗೆ ಮಂಡಲಗಳು ಎಂದು ಕರೆಯುತ್ತಾರೆ.

ಮಂಡಲ ಒಂದು ಧ್ಯಾನ ಮಾಧ್ಯಮ

ಮಂಡಲ ಎಂದರೆ ಕೇವಲ ಒಂದು ಆಕಾರವಲ್ಲ. ಸಂಸ್ಕೃತದ ಮೂಲಪದ ಮಂಡಲ ಎಂದರೆ ವರ್ತುಲ, ಆದರೆ ಅದಕ್ಕಿಂತಲೂ ಹೆಚ್ಚಾಗಿ ಮಂಡಲವೆಂದರೆ ಒಂದು ಪವಿತ್ರವಾದ ಚಿಹ್ನೆ ಅಥವಾ ಒಂದು ಸಂಪೂರ್ಣತೆ ಎಂಬ ಅರ್ಥವಿದೆ. ನಾವು ನಿಂತಿರುವ ಭೂಮಿ, ಕಾಣುವ ಸೂರ್ಯ ಚಂದ್ರಾದಿಗಳಿಂದ ಹಿಡಿದು, ನೋಡುವ ಕಣ್ಣುಗಳವರೆಗೆ ಇಡೀ ವಿಶ್ವದಲ್ಲಿ ವ್ಯಾಪಕವಾಗಿ ಇರುವುದು ವರ್ತುಲಗಳು. ಇವೆಲ್ಲವೂ ಪೂರ್ಣತೆಯ ಪ್ರತೀಕಗಳು, ಶಕ್ತಿಯ ಸ್ವರೂಪಗಳು. ಇನ್ನು ಮಾನವ ನಿರ್ಮಿತ ಪ್ರಪಂಚದಲ್ಲಂತೂ ವಾಸ್ತುಶಾಸ್ತ್ರದಿಂದ ಹಿಡಿದು ಭಾಷಾಶಾಸ್ತ್ರದವರೆಗೆ, ಚಕ್ರಗಳಿಂದ ಹಿಡಿದು ತಂತ್ರಜ್ಞಾನದವರೆಗೆ, ದಿನನಿತ್ಯ ನಾವು ನೋಡುವ ಸಾಕಷ್ಟುವಸ್ತುಗಳಲ್ಲಿ ಈ ಬಾಗಿದ ಆಕಾರ ಹಾಸುಹೊಕ್ಕಿದೆ.

whats is mandalas here is what you need to know about its spirituality

ಮಂಡಲ ಮುಖ್ಯವಾಗಿ ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಸಾವಿರಾರು ವರ್ಷಗಳಿಂದಲೂ ಬಳಸಿಕೊಂಡು ಬಂದಿರುವ ಒಂದು ಶ್ರದ್ಧಾಪೂರ್ವಚಿತ್ರಣ. ಭೌತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಶಕ್ತಿಗಳನ್ನು ಒಟ್ಟುಗೂಡಿಸಿ, ಮನಸ್ಸು ವಿಚಲಿತಗೊಳ್ಳದಂತೆ ಒಂದೆಡೆ ಕೇಂದ್ರೀಕೃತಗೊಳಿಸಿಕೊಳ್ಳಲು ಸೃಷ್ಟಿಸಲು ಬೇಕಾದ ಧ್ಯಾನ ಮಾಧ್ಯಮವೊಂದರ ರಚನೆಯೇ ಈ ಮಂಡಲಗಳ ಹುಟ್ಟಿನ ಇತಿಹಾಸ. ಮಂಡಲ ಎಂಬುದು ತನ್ನಲ್ಲಿಯೇ ತಾನು ಸರ್ವಸ್ವವನ್ನು ಹಿಡಿದಿಟ್ಟುಕೊಳ್ಳುವ ಆದರೂ ಎಲ್ಲೆಡೆ ತನ್ನಿಂದಲೇ ಹೊರಹೊಮ್ಮಿಸುವ ಒಂದು ಅಗಾಧ ಶಕ್ತಿಯ ಪ್ರತೀಕವಾದ್ದರಿಂದ ಇಂದಿಗೂ ಕೂಡ ಮಂಡಲಗಳ ಪವಿತ್ರ ರಚನೆ ಮತ್ತು ಚಿಕಿತ್ಸಕ ಬಳಕೆ ಪ್ರಪಂಚದಾದ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.

ಮಂಡಲ ಒಂದು ಚಿಕಿತ್ಸಕ ಕಲೆ /ಉಪಯೋಗಗಳು

ಮಂಡಲಗಳೆಂದರೆ ಅದೊಂದು ಕೇವಲ ಕೈಬರಹವಲ್ಲ ಅಥವಾ ಪೈಂಟ್‌ ಬ್ರಶ್‌ನಿಂದ ಒಟ್ಟಾರೆಯಾಗಿ ಗೀಚಿ ರಚಿಸಿದ ಚಿತ್ರಪಟವಲ್ಲ. ಸ್ಯಾನ್‌್ಡ ಮಂಡಲ, ಮಂತ್ರ ಮಂಡಲಗಳು, ಹಿಂದೂ ಮಂಡಲಗಳು, ಯಂತ್ರ ಮಂಡಲಗಳು, ಜೈವಿಕ ಮಂಡಲಗಳು, ಬುದ್ಧ ಮಂಡಲಗಳು ಹೀಗೆ ನಾನಾ ಬಗೆಯ ನಿರ್ದಿಷ್ಟಸಾಂಪ್ರದಾಯಿಕ ಮಂಡಲಗಳು ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಅವುಗಳಿಗೆ ಅವುಗಳದ್ದೇ ಆದ ವಿಶೇಷ ಅರ್ಥಗಳು ಮತ್ತು ಅನುಸರಿಸುವ ಕ್ರಮಗಳಿರುತ್ತವೆ. ಮಂಡಲ ರಚನೆ ಎಂಬುದು ನಮ್ಮ ಅಂತರಾತ್ಮದ ಪರಾಮರ್ಶೆ ಎಂದು ವಿಶ್ಲೇಷಿಸುತ್ತಾರೆ ಸಾಂಪ್ರದಾಯಿಕ ಪರಿಣಿತ ಮಂಡಲ ರಚನಾಕಾರರು. ಸಾಂಪ್ರದಾಯಿಕ ಆಚರಣೆಗಳ ಉದ್ದೇಶವನ್ನೂ ಮೀರಿ, ಮಂಡಲ ರಚನೆ ಎಂಬುದು ಒಂದು ಚಿಕಿತ್ಸಕ ಕಲೆ ಎಂಬುದು ಸಾಕಷ್ಟುವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿದೆ.

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಕಣ್ಣಿನ ಮೂಲಕ ಹೀರಿಕೊಂಡ ಮಂಡಲಗಳ ವಿವಿಧ ಜ್ಯಾಮಿತಿಯ ಆಕಾರಗಳು, ವರ್ತುಲಗಳು, ವಿವಿಧ ವರ್ಣಗಳು ಮನುಷ್ಯನ ಮೆದುಳಿನಲ್ಲಿ ಕಂಪನಗಳನ್ನು ಸೃಷ್ಟಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ. ವರ್ತುಲದ ಆಕಾರಗಳು ಮೆದುಳಿನಲ್ಲಿ ಬೇರೆಲ್ಲ ಆಕಾರಗಳಿಗಿಂತ ಹೆಚ್ಚು ಆಹ್ಲಾದಕರ ಭಾವನೆಯನ್ನು ತರಿಸುತ್ತದೆ. ಇದೇ ಕಾರಣಕ್ಕಾಗಿ ಹೆಚ್ಚಿನ ಧ್ಯಾನ, ಯೋಗಶಾಲೆಗಳಲ್ಲಿ, ಮಾನಸಿಕ ಖಾಯಿಲೆಗಳ ಚಿಕಿತ್ಸಾ ಕೇಂದ್ರಗಳಲ್ಲಿ ಮಂಡಲ ವೀಕ್ಷಣೆ ಮತ್ತು ಚಿತ್ರಕಲೆಗಳ ಚಿಕಿತ್ಸೆಯ ಬಳಕೆ ಮಾಡಲಾಗುತ್ತದೆ.

ಮಂಡಲ ಚಿತ್ರಣಗಳನ್ನು ಮನೆಯಲ್ಲಿ ನಮ್ಮ ಕಣ್ಣೆದುರಲ್ಲಿ ಕಾಣುವಂತೆ ಇರಿಸಿಕೊಂಡು ಸಾಧ್ಯವಾದಾಗಲೆಲ್ಲ ಅದನ್ನು ವೀಕ್ಷಿಸುವುದರಿಂದ, ಅನಾವಶ್ಯಕ ಮಾನಸಿಕ ಕಿರಿಕಿರಿ ಕಡಿಮೆಯಾಗಿ, ಮನಸ್ಸು ಪ್ರಸನ್ನಗೊಳ್ಳುತ್ತದೆ. ತಿಳಿಯಾದ ಮತ್ತು ಆಕರ್ಷಕ ಬಣ್ಣಗಳಿಂದ ಕೂಡಿದ ಚಿತ್ತಾರ ವೀಕ್ಷಣೆ ಸಹಜವಾಗಿಯೇ ಮನಸ್ಸನ್ನು ಪ್ರಫುಲ್ಲಗೊಳಿಸಲು ಸಹಾಯ ಮಾಡುತ್ತದೆ.

ಧ್ಯಾನ ಮಾಡುವಾಗ, ಮಂಡಲವನ್ನು ಎದುರಿಗಿರಿಸಿಕೊಂಡು ಸ್ವಲ್ಪ ಸಮಯದವರೆಗೆ ತದೇಕಚಿತ್ತದಿಂದ ಅದನ್ನೇ ಗಮನಿಸಿ ನಂತರದಲ್ಲಿ ಕಣ್ಣನ್ನು ಮುಚ್ಚಿ ಮಂಡಲದ ಚಿತ್ರಣವನ್ನಷ್ಟೇ ನೆನಪಿಸಿಕೊಳ್ಳುತ್ತಾ ಹೋದಂತೆಯೂ ಏಕಾಗ್ರತೆ ಹೆಚ್ಚುತ್ತದೆ.

ಇನ್ನು ಮಂಡಲ ಚಿತ್ರಗಳ ರಚನೆಯೂ ಕೂಡ ಒಂದು ಉತ್ತಮ ಚಿಕಿತ್ಸಕ ಕ್ರಿಯೆ. ನಿರ್ದಿಷ್ಟಸಾಂಪ್ರದಾಯಿಕ ಮಂಡಲಗಳನ್ನು ಹೊರತು ಪಡಿಸಿ, ಮಂಡಲಗಳನ್ನು ಚಿತ್ರಿಸಲು ಇಂತದ್ದೇ ಎನ್ನುವ ನಿಯಮಗಳಿಲ್ಲ. ಹೆಣ್ಣು-ಗಂಡು, ಹಿರಿಯ-ಕಿರಿಯ, ಮಕ್ಕಳು ಹೀಗೆ ಯಾರಾದರೂ ಯಾವ ವಯಸ್ಸಿನವರಾದರೂ ಚಿತ್ರಿಸಬಹುದು. ಮಂಡಲ ಚಿತ್ರಗಳೆಂದರೆ

ವಿವಿಧ ಮಾದರಿಯ ಆಕೃತಿಗಳನ್ನು, ಒಂದೇ ಹದದಲ್ಲಿ ವರ್ತುಲದೊಳಗೆ ಬರೆಯುವ ಕ್ರಮವಾದ್ದರಿಂದ ಅದನ್ನು ರಚಿಸುವಾಗ ಏಕಾಗ್ರತೆ ಅತ್ಯಗತ್ಯ. ಹಾಗಾಗಿ ಮಕ್ಕಳಿಗೆ ಇದು ಒಂದು ಉಪಯುಕ್ತ ಹವ್ಯಾಸ. ಮಂಡಲ ರಚನೆ ಅಥವಾ ಮಂಡಲ ಚಿತ್ರಗಳ ಬಣ್ಣ ತುಂಬುವ ಹವ್ಯಾಸ ಒಂದು ಅತ್ಯುತ್ತಮ ಸ್ಟೆ್ರಸ್‌ ರಿಲೀವಿಂಗ್‌ ಥೆರಪಿ. ಏಕೆಂದರೆ ಮಂಡಲಗಳನ್ನು ರಚಿಸುವಾಗ ನಮ್ಮ ಕೈ, ಕಣ್ಣು ಮತ್ತು ಮನಸ್ಸು ಮೂರು ಏಕಕಾಲದಲ್ಲಿ ತೊಡಗಿಕೊಳ್ಳುವುದರಿಂದ, ನಿರಂತರ ಯೋಚನೆಗಳು, ಅನಾವಶ್ಯಕ ಚಿಂತೆಗಳಿಂದ ಒಂದು ಬ್ರೇಕ್‌ ಸಿಕ್ಕಂತಾಗಿ, ಆ ಕ್ಷಣಕ್ಕೆ ಮನಸ್ಸು ಶಾಂತವಾಗಲು ಇದು ಸಹಾಯಕವಾಗುತ್ತದೆ. ಮಂಡಲಗಳಿಗೆ ವಿವಿಧ ಆಕರ್ಷಕ ಬಣ್ಣಗಳನ್ನು ತುಂಬಿ ಆಕರ್ಷಕ ಚಿತ್ರಗಳನ್ನು ಮಾಡುವುದು ಎಂಥವರಿಗಾದರೂ ಮನಸ್ಸಿಗೆ ಖುಷಿ ಕೊಡುತ್ತದೆ. ಮಂಡಲಗಳು ನಮ್ಮಲ್ಲಿನ ಕಲ್ಪನಾ ಶಕ್ತಿ, ಕ್ರಿಯಾಶೀಲತೆಯನ್ನು ನಾವು ಕಂಡುಕೊಳ್ಳುವಲ್ಲಿ ಸಹಕಾರಿಯಾಗುವುದರ ಜೊತೆಗೆ, ನಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

Follow Us:
Download App:
  • android
  • ios