ಮಂತ್ರಾಲಯದ ತುಂಗಾ ತೀರದಲ್ಲಿ ತುಂಗಾರತಿ ಸಂಭ್ರಮ
ತುಂಗಾರತಿ ಮತ್ತು ತೆಪ್ಪೋತ್ಸವ ಸಡಗರ
ತುಂಗಾರತಿ ಮಾಡಿದ ಮಂತ್ರಾಲಯ ಶ್ರೀಗಳು
ಶ್ರೀ ಸುಬುಧೇಂದ್ರ ತೀರ್ಥರು ತೆಪ್ಪೋತ್ಸವಕ್ಕೆ ಚಾಲನೆ
ಸಾವಿರಾರು ಭಕ್ತರು ತುಂಗಾರತಿ ವೇಳೆ ಭಾಗಿ
ಭಕ್ತರಿಗೆ ಅನುಗ್ರಹ ಸಂದೇಶ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮೀಜಿಗಳು ನೆಲೆಸಿರುವ ಮಂತ್ರಾಲಯದಲ್ಲಿ ಕಾರ್ತಿಕ ಪೌರ್ಣಿಮೆ ನಿಮಿತ್ತ ತುಂಗಾರತಿ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಸಂಜೆ ವೇಳೆ ನಡೆದ ಕಾರ್ಯಕ್ರಮದಲ್ಲಿ ದೇಶದ ನಾನಾ ಕಡೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಭಾಗಿಯಾಗಿ ಗುರು ರಾಯರ ದರ್ಶನ ಪಡೆದು ಪುನೀತರಾದರು. ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ತುಂಗಭದ್ರಾ ನದಿಗೆ ತುಂಗಾರತಿ ನೆರವೇರಿಸಿದರು.
ರಾಘವೇಂದ್ರ ಮಠದಿಂದ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೊಂದಿಗೆ ತುಂಗಭದ್ರಾ ನದಿತೀರಕ್ಕೆ ತಂದು ತುಂಗಾಭದ್ರಾ ನದಿ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ತುಂಗಾರತಿ ಹಿನ್ನೆಲೆ ಮಂತ್ರಾಲಯಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿ, ತುಂಗಾ ನದಿ ಸ್ನಾನ ಮಾಡಿ, ರಾಯರ ದರ್ಶನ ಪಡೆದು, ಪುನೀತರಾದ್ರು. ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ತುಂಗಭದ್ರಾ ನದಿಗೆ ಆರತಿ ಮಾಡಿ, ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ಈ ವೇಳೆ ಶ್ರೀಗಳು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ, ತೆರೆದ ತೆಪ್ಪೋತ್ಸವ ನೇರವೇರಿಸಿ ನದಿ ವಿಹಾರ ಮಾಡಿದ ನಂತರದಲ್ಲಿ ಭಕ್ತರಿಗೆ ಫಲ, ಮಂತ್ರಾಕ್ಷತೆ ಕೊಟ್ಟು ಶುಭ ಹಾರೈಸಿದರು.
ದಾಂಪತ್ಯ ಸುಖವೇ ಇಲ್ಲ, ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸುಧಾರಿಸುತ್ತೆ ಸಂಬಂಧ!
ತುಂಗಾ ನದಿ ತೀರಕ್ಕೆ ಬಂದ ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ತೆಪ್ಪೋತ್ಸವ ಹಾಗೂ ತುಂಗಾರತಿ ಜರುಗಿತ್ತು. ಹಣತೆಯಲ್ಲಿ ಹಚ್ಚಿದ ದೀಪವನ್ನು ಸಾರ್ವಜನಿಕರು ನದಿಯಲ್ಲಿ ಹರಿಬಿಟ್ಟರು. ನದಿಯಲ್ಲಿ ತೇಲಿ ಬಿಟ್ಟ ಹಣತೆಗಳು ನೋಡುಗರನ್ನು ಕಣಮ್ಮನ ಸೆಳೆದವು.
ಒಟ್ಟಿನಲ್ಲಿ ಕಾರ್ತಿಕ ಮಾಸದಲ್ಲಿ ನದಿಯಲ್ಲಿ ದೀಪಗಳನ್ನು ಹಚ್ಚಿ ಬಿಟ್ಟರೆ ಶುಭವಾಗುತ್ತೆ ಎಂಬ ನಂಬಿಕೆ ಇದೆ. ಹೀಗಾಗಿ ಸಾವಿರಾರು ಭಕ್ತರು ತುಂಗಾ ತೀರಕ್ಕೆ ಬಂದು ರಾಯರ ದರ್ಶನ ಪಡೆದು ತುಂಗಾರತಿ ಮತ್ತು ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.