*  ಕರಾವಳಿಯ ಒಂದೊಂದು ಆಚರಣೆಗಳು ವಿಶೇಷ* ವಿಷು ಹಬ್ಬದ  ಸಂಪ್ರದಾಯ* ತುಳುನಾಡಿನಲ್ಲಿ ಪವಿತ್ರ ಹಬ್ಬ* ಬೀಸು ಹಬ್ಬ ಎಂದು ಕರೆಯುವುದು ವಾಡಿಕೆ

ಶಶಿಧರ ನಾಯ್ಕ ಎ, ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ಮಂಗಳೂರು(ಏ. 15) ಕರ್ನಾಟಕದ ಕರಾವಳಿ ಮತ್ತು ಕೇರಳ ಭಾಗದ ಜನರು ವಿಶೇಷ ಭಕ್ತಿಗಳಿಂದ ಆಚರಿಸುವ ಹಬ್ಬವೇ ವಿಷು ಹಬ್ಬ ಈ ಹಬ್ಬದ ಆಚರಣೆ ಬಹಳ ವಿಶೇಷ.

ವಿಷು ಹಬ್ಬವು ಸೌರಮಾನ ಪದ್ಧತಿಯಲ್ಲಿ ಬರುವಂತಹ ಹಬ್ಬ ಇದನ್ನು ತುಳುನಾಡಿನಲ್ಲಿ ಬಿಸುಹಬ್ಬ ಎಂದು ಕರೆಯುವ ವಾಡಿಕೆ ಇದೆ. ಚಂದ್ರಮಾನ ಯುಗಾದಿಯಂತೆಯೇ ಸೌರಮಾನ ಯುಗಾದಿಯನ್ನು ಭಾರತ ದೇಶದ ಹಲವಾರು ಪ್ರದೇಶದಲ್ಲಿ ವರ್ಷದ ಮೊದಲ ದಿನವನ್ನು ಆಚರಿಸುವ ಪದ್ಧತಿ ಬೆಳೆದು ಬಂದಿದೆ. ಈ ದಿನ ವಿಷು ಕಣಿ ಇಡುವ ಪದ್ಧತಿ ಇದೆ. ಈ ದಿನ ಕರ್ನಾಟಕದ ಕರಾವಳಿ ಭಾಗದವರಿಗೆ ಮತ್ತು ಕೇರಳ ಭಾಗದವರಿಗೆ ಅತ್ಯಂತ ಪವಿತ್ರ ದಿನವಾಗಿದೆ. ಉಳಿದಂತೆ ಹಬ್ಬವನ್ನು ದೇಶದ ಹಲವಾರು ಬಗೆಯಲ್ಲಿ ಇದು ಹೆಸರುಗಳಿಂದ ಕರೆಯುವ ವಾಡಿಕೆ ಇದೆ.

ಸಂಸ್ಕೃತದಲ್ಲಿ ವಿಷಯ ಎಂದರೆ ಸಮಾನ ಎಂಬ ಅರ್ಥವಿದೆ ಇದು ದಿನದ ಅವಧಿ ಮತ್ತು ರಾತ್ರಿ ಅವಮಾನ ಎಂಬರ್ಥವಿದೆ ದೇವರನ್ನು ಆರಾಧನೆ ಮಾಡುವ ಹೆಚ್ಚಿನ ಮನೆಗಳಲ್ಲಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ವಿಷು ಹಬ್ಬದ ಪುರಾಣದ ಹಿನ್ನೆಲೆ :  ಕರ್ನಾಟಕದ ಕರಾವಳಿ ಮತ್ತು ಕೇರಳ ರಾಜ್ಯದಲ್ಲಿ ಆಚರಿಸಲಾಗುವ ಹಬ್ಬದ ಬಗ್ಗೆ ಹಲವು ಪುರಾಣ ಕಥೆಗಳಿವೆ . ವಿಷು ರಾಕ್ಷಸನನ್ನು ಮಾಡಿರುವುದನ್ನು ಹಬ್ಬ ಎಂದು ಆಚರಿಸಲಾಗುತ್ತದೆ ಇನ್ನೊಂದು ಕಥೆಯ ಪ್ರಕಾರ ಅಧಿಪತಿಯಾದ ರಾವಣನು ಸೂರ್ಯದೇವರಿಗೆ ಪೂರ್ವದಿಂದ ಉದಯಿಸಲು ಅವಕಾಶ ನೀಡುತ್ತಿರಲಿಲ್ಲ ಅಯೋಧ್ಯಾಧಿಪತಿ ರಾಮದೇವರು ರಾಕ್ಷಸನಾದ ರಾವಣನ ವಧೆ ಮಾಡಿದ ಬಳಿಕ ಸೂರ್ಯದೇವರು ಪೂರ್ವದಿಂದ ಉದಯಿಸಲು ಆರಂಭಿಸಿದರು ಎಂಬ ಮಾಹಿತಿಯಿದೆ.

Good Friday 2022: ಈ ದಿನದ ಮಹತ್ವ, ಹಿನ್ನೆಲೆ ಹಾಗೂ ಆಚರಣೆ ಏನು?

ತುಳುನಾಡಿನಲ್ಲಿ ವಿಶು ಹಬ್ಬದ ಆಚರಣೆ :
 ವಿಶು ಹಬ್ಬವು ತುಳುನಾಡಿನ ಜನರಿಗೆ ಬಹು ವಿಶೇಷವಾಗಿದೆ. ತುಳುನಾಡಿನ ತರವಾಡು ಮನೆಯಲ್ಲಿ ವಿಶೇಷವಾಗಿ ಆ ಮನೆಯ ಯಜಮಾನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ದೇವರಿಗೆ ವಿಷು ಕನಿ ಇಡುವ ಸಂಪ್ರದಾಯ ಇದೆ. ವಿಷು ಕನಿ ತಯಾರಿಕೆಯಂತೆ ದೇವರ ಕೋಣೆಯಲ್ಲಿ ಮೊದಲು ದೇವರಿಗೆ ದೀಪ ಉರಿಸಿ ತದ ನಂತರ ಎರಡು ಬಾಳೆ ಎಲೆ ಯನ್ನು ಇಟ್ಟು ಅದರ ಮೇಲೆ ಒಂದು ಸೇರು ಕುಚ್ಚಲಕ್ಕಿಯನ್ನು ಹಾಕಿ ಅದರ ಮೇಲೆ ಸುಲಿದ ತೆಂಗಿನಕಾಯಿಯನ್ನು ಇಟ್ಟು ಅದರ ಅಕ್ಕಪಕ್ಕ ಹಿಂಗಾರ ಬಾಳೆಹಣ್ಣು ವೀಳ್ಯದೆಲೆ, ಅಡಿಕೆ ಮತ್ತು ಇತರ ಹಣ್ಣು ಹಂಪಲುಗಳು, ಮನೆಯಲ್ಲೇ ಬೆಳೆದ ತರಕಾರಿಗಳನ್ನು ಇಡುವ ಸಂಪ್ರದಾಯವಿದೆ.

ಇದರ ಬಳಿಕ ಕುಟುಂಬದ ಹಿರಿಯರು ಜೊತೆ ಸೇರಿ ಈ ವರ್ಷದ ಎಲ್ಲಾ ಬೆಳೆಗಳಿಗೆ ಶುಭವಾಗಲಿ, ಕುಟುಂಬದ ಯಾವುದೇ ಸದಸ್ಯರಿಗೆ ಯಾವುದೇ ತೊಂದರೆ ಜೀವನದಲ್ಲಿ ಅಭಿವೃದ್ಧಿಗೊಳಿಸು ಎಂದು ಪ್ರಾರ್ಥಿಸುವ ಪದ್ಧತಿ ಇದೆ. ಇದರ ಬಳಿಕ ಸಂಪ್ರದಾಯದಂತೆ ಕುಟುಂಬದ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವ ಕ್ರಮವಿದೆ. ಕರಾವಳಿಗರ ಮನೆಯಲ್ಲಿ ಈ ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ ಕೂಡಿ ಸಂಭ್ರಮದ ವಾತಾವರಣವೇ ಮನೆ ಮಾಡಿರುತ್ತದೆ

ತುಳುನಾಡ ಬಿಸು ಹಬ್ಬದ ಖಾದ್ಯಗಳ ವಿಶೇಷತೆ:
ಬಿಸು ಹಬ್ಬದಂದು ತುಳುನಾಡಿನಲ್ಲಿ ತಯಾರಾಗುವ ಆಹಾರವೇ ಬಲು ವಿಶೇಷ. ಬಿಸು ಹಬ್ಬದಂದು ತಯಾರಾಗುವ ವಿವಿಧ ರೀತಿಯ ಖಾದ್ಯಗಳು ಆಹಾರ ಪ್ರಿಯರ ಬಾಯಲ್ಲಿ ನೀರು ತರಿಸುತ್ತವೆ. ತುಳುನಾಡಿನಲ್ಲಿ ಕೊಟ್ಟಿಗೆ ಅಂದ್ರೇನೆ ಫುಲ್ ಫೇಮಸ್. ಬಿಸು ಹಬ್ಬದಂದು ಕೂಡ ಕೊಟ್ಟಿಗೆಯ ಪಾತ್ರ ಪ್ರಧಾನ. ಬಿಸು ಹಬ್ಬದ ದಿನದ ಬೆಳಗ್ಗಿನ ಉಪಹಾರಕ್ಕೆ ಕೊಟ್ಟಿಗೆ ಬೇಕೇ ಬೇಕು. ಇದನ್ನು ಹಲಸಿನ ಎಲೆಯಲ್ಲಿ ಮೂಡೆ ಕಟ್ಟಿ, ಅಥವಾ ಬಾಳೆ ಎಲೆಯಲ್ಲಿ ಕೂಡ ಮಾಡುವ ವಿಧಾನ ಇದೆ.ಇದರ ತಯಾರಿಯ ಕೆಲಸ ಹಿಂದಿನ ದಿನದಿಂದಲೆ ಆರಂಭ ಆಗುತ್ತದೆ. ಕೆಲವರು ಕೊಟ್ಟಿಗೆಯ ಬದಲು ಇಡ್ಲಿ ಅಥವಾ, ಉದ್ದು ದೋಸೆ ಅಥವಾ ಇತರ ತಿಂಡಿಯನ್ನೂ ಮಾಡುತ್ತಾರೆ. ಸಸ್ಯಾಹಾರ ಪ್ರಿಯರು ಈ ಕೊಟ್ಟಿಗೆ ಬಾಳೆ ಹಣ್ಣಿನ ಸಿಹಿಯಾದ ರಸಾಯನ ಅಥವಾ ಇತರ ತರಕಾರಿ ಪದಾರ್ಥ ಮಾಡುವ ಕ್ರಮವಿದೆ.

ಇನ್ನು ಮಾಂಸಹಾರ ಪ್ರಿಯರಿಗೆ ಮಾತ್ರ ಇಂದು ಭೂರಿ ಭೋಜನ. ನಾಟಿ ಕೋಳಿ ಸಾರು ಮತ್ತು ಕೊಟ್ಟಿಗೆಯ ಜೋಡಿ ಮಾಂಸಹಾರಿ ಪ್ರಿಯರ ನಾಲಗೆಯಲ್ಲಿ ನೀರು ಬರಿಸುತ್ತದೆ. ಕೆಲವು ಮನೆಗಳಲ್ಲಿ ವಿವಿಧ ರೀತಿಯ ಪಾಯಸವು ಕೂಡ ಸವಿಯಲು ಸಿಗುತ್ತದೆ. ಇನ್ನು ತುಳುನಾಡು ಮತ್ತು ಅದಕ್ಕೆ ಹೊಂದಿಕೊಂಡು ಇರುವ ಕೇರಳ ರಾಜ್ಯದ ಕೆಲವು ಪ್ರದೇಶಗಳಲ್ಲಿ ಬಿಸು ಹಬ್ಬದಂದು ಹೊಸ ಬಟ್ಟೆ ತೊಟ್ಟು, ಅಕ್ಕ ಪಕ್ಕದ ಮತ್ತು ಸಂಬಧಿಕರ ಮನೆಗೆ ವಿಶೇಷ ಊಟಕ್ಕೆ ಹೋಗುವ ಪದ್ಧತಿ ಬೆಳೆದು ಬಂದಿದೆ. ಎಲ್ಲರ ಮನೆಯಲ್ಲೂ ವಿವಿಧ ರೀತಿಯ ಖಾದ್ಯಗಳು ಭೋಜನ ಪ್ರಿಯರನ್ನು ಆಹ್ವಾನಿಸುತ್ತಿರುತ್ತವೆ. ವರ್ಷವಿಡಿ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿರುವ ದಿನಗಳಲ್ಲಿ ನೆರೆ ಕರೆಯ ಮನೆಗೆ, ಸಂಬಂಧಿಕರ ಮನೆಗೆ ಭೇಟಿ ನೀಡುವುದರಿಂದ ಸಂಭಂದವೂ ಚೆನ್ನಾಗಿ, ಬಾಂಧವ್ಯ ಗಟ್ಟಿಯಾಗಿರುತ್ತದೆ. 

ಹೀಗೆ ತುಳುನಾಡು ಮತ್ತು ಕೇರಳದಲ್ಲಿ ಆಚರಿಸುವ ವಿಷು ಹಬ್ಬವು ಹಲವಾರು ವಿಶೇಷತೆಗಳಿಂದ ಕೂಡಿದೆ. ದೇಶದ ಉಳಿದ ಭಾಗಗಳಲ್ಲಿಯೂ ಹಲವಾರು ಹೆಸರುಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ. ಕೊರೋನ ಕಾಲದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಈ ಹಬ್ಬಕ್ಕೆ ಮತ್ತೆ ಕಳೆ ಬಂದಿದೆ. ಈ ವಿಷು ಹಬ್ಬವು ಎಲ್ಲರಿಗೂ ಶುಭ ತರಲಿ. ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು.