- ಡಾ. ಸುಮಲತಾ ಜೋಶಿ

ಕೆಲಸಕ್ಕೋಸ್ಕರ ಬೆಂಗಳೂರಿನ ಬಂದ ಮೇಲೆ ಈ ಹಬ್ಬದ ವಿಸ್ತಾರ ಅರಿವಾಗುತ್ತಾ ಹೋಯಿತು. ಅವತ್ತು ದನ ಕರುಗಳನ್ನು ಕಿಚ್ಚು ಹಾಯಿಸುತ್ತಾರೆ ಎಂಬ ವಿಚಾರ ಗೊತ್ತಾಗಿ ಬಸವನಗುಡಿಯ ದೊಡ್ಡಬಸವನ ದೇಗುಲಕ್ಕೆ ಹೋಗಿದ್ದೆವು. ಅಲ್ಲಿ ಜನರೆಲ್ಲಾ ಸಂಭ್ರಮದಿಂದ ದನಗಳನ್ನು ಕಿಚ್ಚು ಹಾಯಿಸುತ್ತಿದ್ದರು. ಯಾಕೆ ಕಿಚ್ಚು ಹಾಯಿಸುತ್ತಾರೆ ಅನ್ನುವುದನ್ನು ಹುಡುಕಿಕೊಂಡು ಹೋದಾಗ ಗೊತ್ತಾಯಿತು, ಇದು ರೈತರ ಹಬ್ಬ. ದನಗಳಿಗೆ ಬರಬಹುದಾದ ಕಾಯಿಲೆಗಳು ಕಿಚ್ಚು ಹಾಯಿಸುವುದರಿಂದ ದೂರಾಗುತ್ತದಎ ಎಂಬ ನಂಬಿಕೆಯಿಂದಲೇ ಈ ಕಿಚ್ಚು ಹಾಯಿಸುವ ಸಂಪ್ರದಾಯ ಆಚರಣೆಗೆ ಬಂದಿದೆ. ಅಗ್ನಿ ದಿವ್ಯ ಹಾದು ಬಂದರೆ ದೇಹಕ್ಕೆ, ಮನಸ್ಸಿಗೆ ಎಲ್ಲಕ್ಕೂ ಒಳ್ಳೆಯದಾಗುತ್ತದೆ. ಅಂದಿನಿಂದ ಶುಭಾರಂಭ ಎಂಬ ನಂಬಿಕೆ ಎಷ್ಟುಒಳ್ಳೆಯದು.

ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಅದಕ್ಕೆ ಆ ದಿನ ಉತ್ತರಾಯಣ ಪುಣ್ಯಕಾಲ. ಆ ದಿನವನ್ನೇ ಮಕರ ಸಂಕ್ರಾಂತಿ ಎನ್ನುವುದು. ಈ ದಿನ ತಿಲದಾನ ಮಾಡುತ್ತಾರೆ. ತಿಲ ಎಂದರೆ ಎಳ್ಳು. ಎಳ್ಳು ದಾನ ಮಾಡಿದರೆ ಒಳ್ಳೆಯದು ಎಂಬ ಪ್ರತೀತಿ. ಅವತ್ತು ಬಹುತೇಕರು ಎಳ್ಳು ಬೆಲ್ಲ ನೀಡುವುದು ಅದೇ ಕಾರಣಕ್ಕೆ. ಆದಿನ ಸಂಜೆ ಹಸೆಮಣೆಯಲ್ಲಿ ಮಕ್ಕಳನ್ನು ಕೂರಿಸಿ ಎಳಚಿಹಣ್ಣಿನೊಡನೆ ಎಳ್ಳು ಸುರಿಯುವ ಪರಿಪಾಠವೂ ಇದೆ. ಈ ಎಲ್ಲಾ ಆಚರಣೆಗಳ ಹಿಂದೆಯೂ ಇರುವುದು ಶುಭವಾಗಲಿ ಎಂಬ ನಂಬಿಕೆಯಷ್ಟೇ. ಆ ನಂಬಿಕೆಯ ಜೊತೆಗೆ ಭರವಸೆ ಇದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ಇದೆ. ಅದಕ್ಕಾಗಿ ಸಂಕ್ರಾಂತಿ ಎಳ್ಳು ಬೆಲ್ಲದ ಹಬ್ಬ ಮಾತ್ರವಲ್ಲ, ಭರವಸೆ ತುಂಬುವ ವಿಶ್ವಾಸದ ಹಬ್ಬ.

ಸಂಕ್ರಾಂತಿ ವಿಶೇಷ; ಖಾರ ಪೊಂಗಲ್‌,ಸಕ್ಕರೆ ಪೊಂಗಲ್‌ ರೆಸಿಪಿ 

ಮಕರ ಸಂಕ್ರಾಂತಿಯಿಂದ ಆರು ತಿಂಗಳ ಅವಧಿ ದೇವತೆಗಳಿಗೆ ಒಂದು ಹಗಲಿನ ಸಮಾನ ಎಂಬ ನಂಬಿಕೆಯೂ ಉಂಟು. ಈ ಕಾಲವನ್ನು ಅಗ್ನಿ, ಜ್ಯೋತಿಸ್ಸು, ಅಹಸ್ಸು, ಶುಕ್ಲ ಎಂದೂ ಈ ಅವಧಿಯಲ್ಲಿ ಮೃತರಾದ ಯೋಗಿಗಳಿಗೆ ಪುನರಾವೃತ್ತಿ ಇಲ್ಲವೆಂದೂ ಭಗವದ್ಗೀತೆ ಸಾರುತ್ತದೆ. ಅದಕ್ಕೆ ಪೂರಕವಾಗಿ ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವ ಕಥೆ ಭೀಷ್ಮನದು. ಕುರುಕ್ಷೇತ್ರ ಯುದ್ಧದಲ್ಲಿ ಇಚ್ಛಾಮರಣಿ ಭೀಷ್ಮ ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಕಾಲಕ್ಕಾಗಿ ಕಾಯುತ್ತಿದ್ದದ್ದು ಇದೇ ಕಾರಣಕ್ಕೆ. ಅದಕ್ಕೆ ಸರಿಯಾಗಿ ಮಕರ ಸಂಕ್ರಾಂತಿಯಿಂದ ಶುರುವಾಗಿ ಸುಮಾರು ಆರು ತಿಂಗಳು ಮದುವೆ, ಮುಂಜಿ, ದೇವಪ್ರತಿಷ್ಠೆ ಮುಂತಾದ ಶುಭಕಾರ್ಯಗಳೆಲ್ಲಾ ಜರುಗುತ್ತವೆ.

ಈ ಎಲ್ಲಾ ಸಂಗತಿಗಳೂ ಸಾರುವುದು ಒಂದೇ ಒಂದು ವಿಚಾರ. ಮಕರ ಸಂಕ್ರಾಂತಿಯಿಂದ ಎಲ್ಲವೂ ಎಲ್ಲರಿಗೂ ಒಳ್ಳೆಯದಾಗಲಿದೆ. ಕಳೆದ ವರ್ಷ ಪೂರ್ತಿ ಎಲ್ಲರೂ ಬಳಲಿದ್ದಾರೆ. ಯಾರಾದರೂ ಕೈ ಹಿಡಿದು ಇನ್ನು ಆಗುವುದೆಲ್ಲಾ ಒಳ್ಳೆಯದೇ ಎಂದು ಹೇಳಬೇಕಿದೆ. ಆದರೆ ಆ ಶಕ್ತಿ ಎಲ್ಲರಿಗೂ ಇಲ್ಲ. ಶಕ್ತಿ ಇರುವವರು ಮಾತನಾಡದೇ ಹೋಗಬಹುದು. ಧೈರ್ಯ ತುಂಬುವ ಮನಸ್ಸು ಇರುವವರೇ ಸೋತು ಹೋಗಿರಬಹುದು. ದೊಡ್ಡವರಿಗೆ ಸಣ್ಣವರಿಗೆ ಹಿರಿಯರಿಗೆ ಕಿರಿಯರಿಗೆ ಸಾಮಾನ್ಯರಿಗೆ ಅಸಾಮಾನ್ಯರಿಗೆ ಎಲ್ಲರಿಗೂ ಹುಮ್ಮಸ್ಸು ತುಂಬುವುದಕ್ಕೆಂದೇ ಮಕರ ಸಂಕ್ರಾಂತಿ ಹಬ್ಬ ಬಂದಿದೆ. ಈ ಭರವಸೆಯ ಹಬ್ಬ ಎಲ್ಲರಿಗೂ ಹುಮ್ಮಸ್ಸು ತುಂಬಲಿ ಎಂಬ ಪ್ರಾರ್ಥನೆ.