ನವರಾತ್ರಿಯು ನವದುರ್ಗೆಯರನ್ನು ಪೂಜಿಸುವ ಪವಿತ್ರ ಆಚರಣೆ. ದುರ್ಗೆಯ ಒಂಭತ್ತು ಅವತಾರಗಳನ್ನು ಆರಾಧಿಸಿ, ಮನೋಭಿಲಾಷೆಯನ್ನು ಬೇಡಿಕೊಳ್ಳುವ ಸುಸಮಯ ನವರಾತ್ರಿ.  ನವರಾತ್ರಿಯಲ್ಲಿ ಮುತ್ತೈದೆಯರಿಗೆ ಬಾಗಿನವನ್ನು ನೀಡಿ, ಆಶೀರ್ವಾದವನ್ನು ಪಡೆಯುವ ಪದ್ಧತಿಯಿದೆ. ಜೊತೆಗೆ ಕನ್ಯೆಯರನ್ನು ಪೂಜಿಸಿ ಬಾಗಿನ ನೀಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಕನ್ಯೆಯರನ್ನು ದೇವಿಯ ರೂಪವೆಂದು ತಿಳಿದು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಮತ್ತು ಪರಂಪರೆ ಹಲವು ಕಡೆ ಇದೆ.

ಹಿಂದೂ ಸಂಸ್ಕೃತಿಯಲ್ಲಿ ಮಕ್ಕಳನ್ನು ದೇವರೆಂದು ಹೇಳುತ್ತಾರೆ. ಹಾಗೆಯೇ ಶಾಸ್ತ್ರದ ಪ್ರಕಾರ ಒಂಭತ್ತು ವರ್ಷದೊಳಗಿನ ಹೆಣ್ಣು ಮಕ್ಕಳು ದೇವಿಯ ಸ್ವರೂಪವೆಂದು ಹೇಳಲಾಗಿದೆ. ನವರಾತ್ರಿಯಲ್ಲಿ ದೇವಿಯು ಭೂಲೋಕಕ್ಕೆ ಬಂದು ಕನ್ಯೆಯರಲ್ಲಿ ವಿರಾಜಮಾನಳಾಗುತ್ತಾಳೆಂಬ ನಂಬಿಕೆ ಇದೆ.ನವರಾತ್ರಿಯ ಅಷ್ಟಮಿ ತಿಥಿಯಂದು ಕನ್ಯಾ ಪೂಜೆ ಮಾಡಲಾಗುತ್ತದೆ. ಈ ಬಾರಿ ಅಕ್ಟೋಬರ್ 24ರಂದು ಕನ್ಯೆಯರಿಗೆ ಪೂಜೆ ಮಾಡಿ ಬಾಗಿನ ಕೊಡಬಹುದಾಗಿದೆ. ನವರಾತ್ರಿಯ ಎಲ್ಲ ದಿನವೂ ಕನ್ಯಾ ಪೂಜೆ ಮಾಡಬಹುದಾಗಿದ್ದು, ಕೆಲವು ಕಡೆ ಅಷ್ಟಮಿಯಂದು ಕನ್ಯೆಯರಿಗೆ ಬಾಗಿನ ಕೊಡುವ ಪರಂಪರೆ ಇದೆ.

ಇದನ್ನು ಓದಿ: ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ, ಮತ್ತದರ ಲಾಭ! 

ಶಾಸ್ತ್ರದ ಪ್ರಕಾರ ಕನ್ಯೆಯರಲ್ಲಿ ದೇವಿಯ ರೂಪ
ಶಾಸ್ತ್ರದಲ್ಲಿ ಹತ್ತು ವರ್ಷದ ವರೆಗಿನ ಕನ್ಯೆಯರಿಗೂ ಒಂದೊಂದು ದೇವಿ ಸ್ವರೂಪರೆಂದು ಹೇಳಲಾಗಿದೆ. ಎರಡು ವರ್ಷದ ಕುಮಾರಿಯನ್ನು ಕನ್ಯಾ ಕುಮಾರಿ, ಮೂರು ವರ್ಷದ ಕುವರಿ ತ್ರಿಮೂರ್ತಿ, ನಾಲ್ಕು ವರ್ಷದ ಹುಡುಗಿಯನ್ನು ಕಲ್ಯಾಣಿ, ಐದು ವರ್ಷದ ಬಾಲೆಯನ್ನು ರೋಹಿಣಿ, ಆರು ವರ್ಷದ ಕನ್ಯೆಯನ್ನು ಕಾಳಿಕಾ, ಏಳು ವರ್ಷದ ಕನ್ಯೆ ಚಂಡಿಕಾ, ಎಂಟು ವರ್ಷದ ಕನ್ಯೆ ಶಾಂಭವಿ, ಒಂಭತ್ತು ವರ್ಷದ ಕನ್ಯೆಯನ್ನು ದುರ್ಗಾ ಮತ್ತು ಹತ್ತು ವರ್ಷದ ಕನ್ಯೆಯನ್ನು ಸುಭದ್ರಾ ಸ್ವರೂಪವೆಂದು ಉಲ್ಲೇಖಿಸಲಾಗಿದೆ. ಹೀಗೆ ಸ್ವರೂಪಗಳನ್ನು ತಿಳಿದು, ಕನ್ಯೆಯರಿಗೆ ಪೂಜಿಸಿದ ಬಳಿಕ ಭೋಜನದ ಸಮಯದಲ್ಲಿ ದಕ್ಷಿಣೆಯನ್ನು ನೀಡಿ ಜಗನ್ಮಾತೆಯ ಕೃಪೆ ಪಡೆಯಲಾಗುತ್ತದೆ.

ಇದನ್ನು ಓದಿ: ನವರಾತ್ರಿ ಸಂಭ್ರಮ: ಒಂಭತ್ತು ಬಣ್ಣಗಳಲ್ಲಿದೆ ವಿಶೇಷ ಶಕ್ತಿ..! 

ಕನ್ಯಾ ಪೂಜೆಯ ಲಾಭಗಳು 
ಶಾಸ್ತ್ರಗಳ ಅನುಸಾರ ಒಬ್ಬ ಕನ್ಯೆಯನ್ನು ಕರೆದು ಪೂಜಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಎರಡು ಕನ್ಯೆಯರನ್ನು ಪೂಜಿಸಿದರೆ ಭೋಗ ಮತ್ತು ಮೋಕ್ಷ ಲಭಿಸುತ್ತದೆ. ಮೂರು ಕನ್ಯೆಯರನ್ನು ಪೂಜಿಸಿದರೆ ಧರ್ಮ, ಅರ್ಥ ಮತ್ತು ಕಾಮ-ಮೋಕ್ಷ ಪ್ರಾಪ್ತಿ. ನಾಲ್ಕು ಕನ್ಯೆಯರನ್ನು ಪೂಜಿಸಿದರೆ ಉಚ್ಛ ಪದವಿ ಪ್ರಾಪ್ತಿ ಯೋಗ ಲಭಿಸುತ್ತದೆ. ಐದು ಕನ್ಯೆಯರನ್ನು ಪೂಜಿಸಿದರೆ ವಿದ್ಯಾ ಪ್ರಾಪ್ತಿಯಾಗುತ್ತದೆ. ಆರು ಕನ್ಯೆಯರನ್ನು ಪೂಜಿಸುವುದರಿಂದ ಆರು ಪ್ರಕಾರದ ಸಿದ್ಧಿ ಪ್ರಾಪ್ತವಾಗುತ್ತದೆ. ಏಳು ಕನ್ಯೆಯರನ್ನು ಪೂಜಿಸುವುದರಿಂದ ರಾಜ್ಯ ಪ್ರಾಪ್ತವಾಗುತ್ತದೆ. ಎಂಟು ಕನ್ಯೆಯರನ್ನು ಪೂಜಿಸುವುದರಿಂದ ಸಂಪತ್ತು ಲಭಿಸುತ್ತದೆ. ಒಂಭತ್ತು ಕನ್ಯೆಯರನ್ನು ಪೂಜಿಸುವುದರಿಂದ ಪೃಥ್ವಿಯ ಪ್ರಭುತ್ವ ಪ್ರಾಪ್ತವಾಗುತ್ತದೆ ಎಂಬುದಾಗಿ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. 


ನವರಾತ್ರಿಯ ನವಮಿಯಂದು ಅಥವಾ ಇತರೆ ದಿನಗಳಂದು ಕನ್ಯಾ ಪೂಜೆ ಮಾಡುತ್ತಾರೆ. ಎಲ್ಲಕ್ಕಿಂತ ಅಷ್ಟಮಿಯಂದು ಮಾಡುವ ಕನ್ಯಾ ಪೂಜೆಯೇ ಶ್ರೇಷ್ಠವೆಂದು ಹೇಳಲಾಗುತ್ತದೆ. ಒಂಭತ್ತು ಕನ್ಯೆಯರಿಗೆ ಪೂಜೆ ಸಲ್ಲಿಸಿದರೆ ಅತೀ ಉತ್ತಮವೆಂದು ಹೇಳಲಾಗಿದೆ. ಕನ್ಯೆಯರ ವಯಸ್ಸು ಹತ್ತು ವರ್ಷಕ್ಕಿಂತ ಹೆಚ್ಚಾಗಿರಬಾರದು. ಹತ್ತು ವರ್ಷದೊಳಗಿನ ಕನ್ಯೆಯರು ಮಾತ್ರ ಈ ಪೂಜೆಗೆ ಶ್ರೇಷ್ಠರಾಗಿರುತ್ತಾರೆ.

ಇದನ್ನು ಓದಿ:  ನವರಾತ್ರಿಯಲ್ಲಿ ಈ ವಸ್ತುಗಳನ್ನು ದಾನ ಮಾಡಿ, ಧನ ಲಾಭ ಪಡೆಯಿರಿ..! 

ಕನ್ಯಾ ಪೂಜೆ ವಿಧಾನ
ಕನ್ಯೆಯರ ಕಾಲು ತೊಳೆದು, ಕುಳಿತುಕೊಳ್ಳಲು ಆಸನವನ್ನು ನೀಡಬೇಕು. ನಂತರ ಕನ್ಯೆಯ ಪಾದಕ್ಕೆ ಪುಷ್ಪವನ್ನಿಟ್ಟು, ಅರಿಶಿಣ-ಕುಂಕುಮವನ್ನು ಹಚ್ಚಿ ಅಕ್ಷತೆ ಹಾಕಬೇಕು. ನೈವೇದ್ಯಕ್ಕೆ ಮಾಡಿದ ಸಿಹಿ, ಪಾಯಸ, ಕೀರು ಮುಂತಾದ ಭಕ್ಷ್ಯ-ಭೋಜ್ಯಗಳನ್ನು ದೇವಿಗೆ ಅರ್ಪಿಸಿದ, ಅದೇ ಪ್ರಸಾದವನ್ನು ಕನ್ಯೆಯರಿಗೆ ನೀಡಲಾಗುತ್ತದೆ. ಕನ್ಯೆಯರಿಗೆ ಬಾಗಿನವನ್ನು ನೀಡಲಾಗುತ್ತದೆ. ಬಾಗಿನದಲ್ಲಿ ಅಕ್ಕಿ, ಅರಿಶಿಣ-ಕುಂಕುಮ, ತೆಂಗಿನಕಾಯಿ, ನಾಣ್ಯ, ಗಾಜಿನ ಬಳೆ, ಮತ್ತು ವಸ್ತ್ರವನ್ನಿಟ್ಟು ಕನ್ಯೆಯರಿಗೆ ನೀಡಲಾಗುತ್ತದೆ. ಭೋಜನದ ಸಮಯದಲ್ಲಿ ಕನ್ಯೆಯರಿಗೆ ದಕ್ಷಿಣೆಯನ್ನು ಸಹ ನೀಡಲಾಗುತ್ತದೆ. 
ಉತ್ತರ ಭಾರತದ ಹಲವು ಕಡೆ ಕನ್ಯೆಯರ ಜೊತೆ ಒಬ್ಬ ಹುಡುಗನಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಭಾರತದ ಬೇರೆ ಬೇರೆ ಕಡೆಗಳಲ್ಲಿ ನವರಾತ್ರಿಯ ಆಚರಣೆ ಭಿನ್ನವಾಗಿರುತ್ತದೆ. ಆಯಾ ರಾಜ್ಯದ ಅಥವಾ ಪ್ರದೇಶದ ಸಂಪ್ರದಾಯ ಮತ್ತು ಆಚರಣೆಗೆ ತಕ್ಕಂತೆ ನವರಾತ್ರಿಯನ್ನು ಆಚರಿಸುತ್ತಾರೆ.