- ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ

ಘಾಟಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಸುಮಾರು 600 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸಂಡೂರು ಸಂಸ್ಥಾನದ ಘೋರ್ಪಡೆ ಮಹಾರಾಜರ ವಂಶಸ್ಥರು ಅಭಿವೃದ್ಧಿ ಪಡಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿನ ಗರ್ಭಗುಡಿಯ ಮುಂಭಾಗದಲ್ಲಿ ಸರ್ಪರೂಪಿ ಸುಬ್ರಹ್ಮಣ್ಯಸ್ವಾಮಿ ದರ್ಶನವಾದರೆ, ಹಿಂಬದಿಯ ಕನ್ನಡಿಯಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ದರ್ಶನವಾಗುತ್ತದೆ. ಏಕಶಿಲೆಯಲ್ಲಿ ಸುಬ್ರಹ್ಮಣ್ಯ ಮತ್ತು ನರಸಿಂಹಸ್ವಾಮಿ ರೂಪಗೊಂಡಿರುವುದು ಅತ್ಯಂತ ವಿರಳ ಮತ್ತು ಆಕರ್ಷಣೀಯ. ಹೀಗಾಗಿ ಘಾಟಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚು. ಸರ್ಪ ದೋಷ ಸೇರಿದಂತೆ ಭಕ್ತರು ತಮ್ಮ ಕಷ್ಟಗಳಿಗೆ ಪರಿಹಾರ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

ಕ್ಷೇತ್ರ ವೈಶಿಷ್ಟ್ಯ:
ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಇಲ್ಲಿನ ಪ್ರಧಾನ ದೇವರುಗಳು. ದರ್ಶನಕ್ಕೆಂದು ನಿತ್ಯವೂ ಸಾವಿರಾರು ಜನ ಭಕ್ತರು  ಬರುತ್ತಾರೆ. ಪ್ರತಿವರ್ಷ ಪುಷ್ಯಶುದ್ಧಿ ಷಷ್ಠಿಯಂದು ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಸಂತಾನ ಪ್ರಾಪ್ತಿಗಾಗಿ ಭಕ್ತರು ಸುಬ್ರಹ್ಮಣ್ಯಸ್ವಾಮಿಗೆ ಹರಕೆ ಕಟ್ಟಿಕೊಳ್ಳುವ ಸಂಪ್ರದಾಯವೂ ಇದೆ. ಇಲ್ಲಿನ ಅಶ್ವತ್ಥ ಕಟ್ಟೆಗಳಲ್ಲಿ ನಾಗರ ಕಲ್ಲು ಪ್ರತಿಷ್ಠಾಪಿಸಿ ಪೂಜಿಸುವ ಹರಕೆ ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದೆ. ಸಾವಿರಾರು ನಾಗರಕಲ್ಲುಗಳು, ಕುಮಾರಧಾರ ಕಲ್ಯಾಣಿ, ಹುತ್ತಗಳು ಇಲ್ಲಿನ ವಿಶೇಷ. ಸರ್ಪದೋಷ ನಿವಾರಣೆಗೂ ಕ್ಷೇತ್ರ ಸ್ರಸಿದ್ದಿ ಪಡೆದಿದೆ.  

ಹೀಗೆ ಬನ್ನಿ..
ರಾಜ್ಯ ರಾಜಧಾನಿ ಬೆಂಗಳೂರಿನಿಂದ 51 ಕಿ.ಮೀ.ದೂರದಲ್ಲಿರುವ ನಿಸರ್ಗ ರಮಣೀಯ ತಾಣವಿದು. ಬೆಂಗಳೂರು, ದೊಡ್ಡಬಳ್ಳಾಪುರಗಳಿಂದ ಸಾರಿಗೆ ಸಂಸ್ಥೆ ಬಸ್ ಸೌಲಭ್ಯವಿದೆ. ಸ್ವಂತ ವಾಹನಗಳಲ್ಲಿ ಬರುವವರು ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಮಾರ್ಗದಲ್ಲಿ ಕಂಟನಕುಂಟೆ ಬಳಿ ಬಲ ತಿರುವು ಪಡೆದರೆ ಅಲ್ಲಿಂದ 8 ಕಿ.ಮೀ. ಪ್ರಯಾಣ. ಮಾಕಳಿದುರ್ಗ ಮಾರ್ಗವಾಗಿಯೂ ಉತ್ತಮ ರಸ್ತೆ ಸಂಪರ್ಕ ಇದೆ