Asianet Suvarna News Asianet Suvarna News

ಮಾನವತೆಯ ಸಾಧಕಮೂರ್ತಿ ರಾಜೇಂದ್ರ ಶ್ರೀಗಳು: ಸಿದ್ದಮಲ್ಲಿಕಾರ್ಜುನ ಸ್ವಾಮಿ

ಇಂದು ಸುತ್ತೂರು ಕ್ಷೇತ್ರ ಅಂತಾರಾಷ್ಟ್ರೀಯ ಕೀರ್ತಿಯ ಧಾರ್ಮಿಕ ಕ್ಷೇತ್ರವಾಗಿದೆ. ಇದಕ್ಕೆ ಕಾರಣ ತಮ್ಮ ಗುರುಗಳ ಆಶಯದಂತೆ ಇಂದಿನ ಜಗದ್ಗುರುಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಹ ಸೇವೆಯ ಮಹದಾಸೆಯನ್ನು ಮುಂದಿಟ್ಟುಕೊಂಡು ತಮ್ಮ ಕಾರ್ಯಕ್ಷಮತೆ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಂದ ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿ, ಸಾಗರದಾಚೆಗೂ ಶಿಕ್ಷಣದ ಜೊತೆಯಲ್ಲಿ ಧರ್ಮ, ಸಂಸ್ಕೃತಿ, ಆಧ್ಯಾತ್ಮವನ್ನು ಬಿತ್ತರಿಸುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.

Rajendra Shri the Embodiment of Humanity Says HS Siddamallikarjun Swamiji grg
Author
First Published Aug 29, 2023, 1:27 PM IST

ಬೆಂಗಳೂರು(ಆ.29):  ಒಂದೇ ಒಂದು ವಿದ್ಯಾರ್ಥಿನಿಲಯದಿಂದ ಪ್ರಾರಂಭವಾದ ರಾಜೇಂದ್ರ ಶ್ರೀಗಳ ಜನಹಿತ ಕಾರ್ಯ ಇಂದು 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿನಿಲ್ಲಿಸಿದೆ. ಇದು ಸಣ್ಣ ಸಂಗತಿಯಲ್ಲ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಸುತ್ತೂರು ಸಂಸ್ಥೆಯ ಪವಾಡ ನಡೆಯುತ್ತಲೇ ಇದೆ. ಇಂದು ನಾಡಿನಲ್ಲಷ್ಟೇ ಅಲ್ಲ ಹೊರನಾಡಿನಲ್ಲಿ ಹಾಗೂ ದೇಶದ ಗಡಿಯಿಂದಾಚೆಗೂ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿರುವುದು ಸುತ್ತೂರಿನ ಸಾಧನೆ.

ವೃಕ್ಷಕಲ್ಲ ವೃಕ್ಷದ ಫಲವು
ನದಿಯ ನೀರು ನದಿಗಲ್ಲ
ಸಂತನ ಬದುಕು ಸಂತನಿಗಲ್ಲ
ಅದು ಲೋಕದ ಹಿತಕೆ

ಎನ್ನುವ ಕಬೀರರ ನಡಿಯಂತೆ ತ್ಯಾಗ ಮತ್ತು ಸೇವೆಯೆಂಬ ಎರಡು ಆದರ್ಶಗಳನ್ನು ಬದುಕಿನ ಧ್ಯೇಯವಾಗಿಸಿಕೊಂಡು ತಮ್ಮ ಇಡೀ ಬದುಕನ್ನು ಲೋಕಕಲ್ಯಾಣಕ್ಕಾಗಿ ಮುಡಿಪಿಟ್ಟವರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ‘ರಾಜಗುರುತಿಲಕ’, ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು.

ವಿಷ್ಣು-ಲಲಿತಾ ಸಹಸ್ರನಾಮದ ಬಗ್ಗೆ ಕ್ರೈಸ್ತ ಮಹಿಳೆ ಮಾತು; ವೈರಲ್ ವಿಡಿಯೋದಲ್ಲಿ ಏನಿದೆ?

ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳು ಸಂಸ್ಥಾಪಿಸಿದ ಮಠದ 23ನೆಯ ಜಗದ್ಗುರುಗಳಾದ ಶಿವರಾತ್ರಿ ರಾಜೇಂದ್ರ ಶ್ರೀಗಳು ಸುತ್ತೂರಿನ ಮರಮ್ಮಣ್ಣಿ ಮತ್ತು ಮಲ್ಲಿಕಾರ್ಜುನಸ್ವಾಮಿ ದಂಪತಿ ಮಗನಾಗಿ 29 ಆಗಸ್ಟ್‌ 1916ರಲ್ಲಿ ಜನಿಸಿದರು. ಪೂಜ್ಯರ ವ್ಯಕ್ತಿತ್ವ ಎಲ್ಲರನ್ನು ಬೆರಗುಗೊಳಿಸುವಷ್ಟುಮಹತ್ತರವಾದುದು. ಕಾಯಕಸಿದ್ಧರಾಗಿ, ಕರ್ಮಯೋಗಿಯಾಗಿ, ಸೇವಾವ್ರತಿಗಳಾಗಿ, ಮಾತೃ ಹೃದಯಿಗಳಾಗಿದ್ದರು.

ಬೆಳೆಯುವ ಸಿರಿ ಮೊಳಕೆಯಲ್ಲಿ

ಪರಮಪೂಜ್ಯರ ಬದುಕೇ ಒಂದು ವಿಸ್ಮಯ! ಕಾಯಕದ ಮಹಿಮೆ ಸಾರಿದ ಈ ಸಂತನ ಬದುಕು ನೂರು ನೂರು ಕಾವ್ಯಗಳಿಗೆ ಸಮ. ಶಿವರಾತ್ರಿ ರಾಜೇಂದ್ರರಿಗೆ 12 ವರ್ಷಗಳಿದ್ದಾಗಲೇ ಪಟ್ಟಾಭಿಷೇಕ ಮಾಡಿ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ವ್ಯವಸ್ಥೆ ಮಾಡಲಾಯಿತು. ಹಿಂದಿನ ಬಾಲಕ ಶಿವರಾತ್ರಿ ರಾಜೇಂದ್ರರು ಈಗ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಾಗಿದ್ದರು. ಅವರು ಸೋಮಶೇಖರ ಸ್ವಾಮಿಗಳಿಂದಾಗಿ ಮೈಸೂರಿನ ಪಂಚಗವಿ ಮಠಾಧ್ಯಕ್ಷರಾಗಿದ್ದ ಗೌರೀಶಂಕರ ಸ್ವಾಮಿಗಳ ಘನ ಪಾಂಡಿತ್ಯ, ಭಾಷಾ ಪ್ರೌಢಿಮೆಗಳ ಬಗ್ಗೆ ಪರಿಚಯವಾಗಿ ತಾನೂ ಅವರಂತಾಗಬೇಕು ಅಂದುಕೊಂಡರು. ಅಂತೆಯೇ ಕಾಶಿಯಲ್ಲಿದ್ದ ಗೌರಿಶಂಕರ ಸ್ವಾಮಿಗಳ ಭೇಟಿಗೆ ದಿಢೀರನೇ ತೆರಳಿದರು. ಶ್ರೀಗಳು ಇವರನ್ನು ಅತ್ಯಂತ ಪ್ರೀತಿಯಿಂದ ನೋಡಿದರು. ಮುಗುಳ್ನಗುತ್ತಾ ‘ನಿಮ್ಮ ಈ ಹಂಬಲ ಒಳ್ಳೆಯದೆ; ಪಾಂಡಿತ್ಯ ಪಡೆಯುವುದು ಉತ್ತಮ ಸಾಧನೆಯೂ ಹೌದು. ಆದರೆ, ಅದಕ್ಕಿಂತಲೂ ಶ್ರೇಷ್ಠವಾದುದನ್ನು ನೀವು ಸಾಧಿಸಲೆಂದೇ ಜನ್ಮತಾಳಿದವರು. ನಿಮ್ಮಿಂದ ಸಮಾಜ ಅಪೂರ್ವವಾದುದನ್ನು ನಿರೀಕ್ಷಿಸುತ್ತಿದೆ. ನಮ್ಮ ದೇಶದಲ್ಲಿ ಅಸಂಖ್ಯಾತ ಜನ ಅನ್ನ, ಅರಿವು, ಆಶ್ರಯವಿಲ್ಲದೆ ಬಳಲುತ್ತಿದ್ದಾರೆ. ಇಂತಹ ಜನರನ್ನು ಉದ್ಧಾರ ಮಾಡುವುದು ಅತ್ಯಗತ್ಯ. ಈ ಕಾರ್ಯ ನಿಮಗಾಗಿ ಕಾಯುತ್ತಿದೆ. ನೀವೊಬ್ಬರೇ ವಿದ್ವಾಂಸರಾದರೆ ಸಾಕೆ? ಯೋಚಿಸಿ ನೋಡಿ’ ಎಂದ ಗೌರೀಶಂಕರ ಸ್ವಾಮಿಗಳ ಮಾತು ಕೇಳಿ ರಾಜೇಂದ್ರ ಶ್ರೀಗಳು ಮೈಸೂರಿಗೆ ಹಿಂದಿರುಗಿದರು.

ಸ್ವಾತಂತ್ರ್ಯಪೂರ್ವದ ಸಾಹಸಗಾಥೆ

ಮೈಸೂರಿಗೆ ಮರಳಿದ ಶ್ರೀಗಳು ಗ್ರಾಮೀಣ ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಸಂಕಲ್ಪಿಸಿದರು. ತಾವು ಓದುವಾಗ ತಮ್ಮ ಜೊತೆಗಿದ್ದ ಬಡ ವಿದ್ಯಾರ್ಥಿಗಳ ಕಷ್ಟನೋಡಿ ತಮ್ಮ ಖರ್ಚಿಗೆ ಕೊಟ್ಟಹಣವನ್ನೇ ಉಳಿಸಿ ಅವರಿಗೆ ನೆರವಾಗುತ್ತಿದ್ದರು. ಆ ವಯಸ್ಸಿನಲ್ಲಿಯೇ ಬಡವರ ಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭಿಸುವ ಬಯಕೆಯನ್ನು ಹಿರಿಯರ ಮುಂದೆ ವ್ಯಕ್ತಪಡಿಸಿದಾಗ ಈಗಾಗಲೇ ಒಂದು ವಿದ್ಯಾರ್ಥಿ ನಿಲಯವಿದೆ, ಮತ್ತೊಂದು ಮಾಡಲು ಇದು ಸಕಾಲವಲ್ಲ ಎಂದಿದ್ದರು. ಆದರೂ ಗುರುಗಳ ಮನಸ್ಸು ಕೇಳಲಿಲ್ಲ. ಹೇಗೋ ಕಷ್ಟಪಟ್ಟು 1941ರಲ್ಲಿ ಮಠದ ಆಶ್ರಯದಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ರಾಜೇಂದ್ರ ಮಹಾಸ್ವಾಮಿಗಳು ಯಾವುದೇ ಬಂಡವಾಳವನ್ನಿಟ್ಟುಕೊಂಡು ಸಂಸ್ಥೆ ಕಟ್ಟಲಿಲ್ಲ. ಅವರು ಶಾಲೆಗಳನ್ನು ಕಟ್ಟಿದ್ದು ನಗರ ಪ್ರದೇಶಗಳಿಂದ ದೂರವಿದ್ದ ಕುಗ್ರಾಮಗಳಲ್ಲಿ. ಶಿಕ್ಷಣ ಪಡೆಯಲು ಪರಿತಪಿಸುತ್ತಿದ್ದವರಿಗೆ ಊರುಗೋಲಾದರು. ಅದೂ ಸ್ವಾತಂತ್ರ್ಯ ಪೂರ್ವದಲ್ಲಿ. ಒಂದೇ ಒಂದು ವಿದ್ಯಾರ್ಥಿನಿಲಯದಿಂದ ಪ್ರಾರಂಭವಾದ ಪೂಜ್ಯರ ಜನಹಿತ ಕಾರ್ಯ ಇಂದು 300 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವುದು ಸಾಮಾನ್ಯ ಸಂಗತಿಯಲ್ಲ. ಅಲ್ಲಿಂದ ಇಲ್ಲಿಯವರೆಗೂ ಸುತ್ತೂರು ಸಂಸ್ಥೆಯ ಈ ಪವಾಡ ನಡೆಯುತ್ತಲೇ ಇದೆ. ಇಂದು ನಾಡಿನಲ್ಲಷ್ಟೇ ಅಲ್ಲ ಹೊರನಾಡಿನಲ್ಲಿ ಹಾಗೂ ದೇಶದ ಗಡಿಯಿಂದಾಚೆಗೂ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿರುವುದು ಹೆಮ್ಮೆಯ ಸಂಗತಿ.

ವಿದ್ಯಾಸಂಸ್ಥೆಗಳ ಮಹಾ ಸಾಮ್ರಾಜ್ಯ

ಒಮ್ಮೆ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ ಅಡುಗೆಗೆ ಅಕ್ಕಿ ಇರಲಿಲ್ಲ. ಸಂಬಂಧಪಟ್ಟವರು ಗುರುಗಳಿಗೆ ತಿಳಿಸಿದ್ದರು. ದಿನಸಿ ಕೊಡುವ ಅಂಗಡಿಯವನು ಸಾಲ ಕೊಡಲು ನಿರಾಕರಿಸಿದ. ಅನೇಕ ಅಂಗಡಿಗಳಿಗೆ ಹೋದರೂ ಪ್ರಯೋಜನವಾಗಲಿಲ್ಲ. ಅವರ ಕಾರು ಚಾಲಕನಿಗೆ ಹಾಸ್ಟೆಲ… ವ್ಯವಸ್ಥಾಪಕರಿಗೆ ಇಂದು ಊಟ ಸ್ವಲ್ಪ ತಡವಾಗುತ್ತದೆ ಎಂದು ತಿಳಿಸಲು ಹೇಳಿ ಕಳಿಸಿದರು. ಕೊರಳಲ್ಲಿದ್ದ ಚಿನ್ನದ ಕರಡಿಗೆಯನ್ನು ಅಡವಿಟ್ಟು 800 ರು. ಸಾಲ ಪಡೆದರು. ಬಂದ ಹಣದಿಂದ ಹಾಸ್ಟೆಲ್‌ಗೆ ದವಸ ಧಾನ್ಯಗಳನ್ನು ಕಳಿಸಿದರು. ಎಷ್ಟೋ ಬಾರಿ ಸಾಲಗಾರರಿಗೆ ಸುಳ್ಳು ಹೇಳಿದ್ದೂ ಉಂಟು. ಪೂಜ್ಯರ ಲೋಕಹಿತ ಕಾರ್ಯಗಳು ಮೈಸೂರು ಮಹಾರಾಜರನ್ನೂ ಆಕರ್ಷಿಸಿದವು. ಸಂಸ್ಥೆಯ ಆಶ್ರಯದ ನೂರಾರು ಶಿಕ್ಷಣ ಸಂಸ್ಥೆಗಳನ್ನು ಒಗ್ಗೂಡಿಸಿ 1954ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠವನ್ನು ಸ್ಥಾಪಿಸಿದರು.

ವಿದ್ಯಾಪೀಠ ಸ್ಥಾಪಿತವಾದ ಮೇಲೆ ಅದು ಅಕ್ಷರ ಜ್ಯೋತಿಯ ಜಗತ್ತಿನಲ್ಲಿ ಪಸರಿಸಿತು. ಅದರ ಅಡಿಯಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಸಂಶೋಧನ ಕೇಂದ್ರ, ಬಡವರ ಆರೋಗ್ಯಕ್ಕಾಗಿ ಆಸ್ಪತ್ರೆ, ಕಲಾ ಪ್ರಚಾರಕ್ಕಾಗಿ ಕಲಾಮಂಟಪ, ಶಾಸ್ತ್ರೀಯ ಸಂಗೀತ ಪ್ರೋತ್ಸಾಹಕ್ಕೋಸ್ಕರ ಸಂಗೀತ ಸಭಾ, ದುಡಿಯುವವರ ಕಲ್ಯಾಣಕ್ಕಾಗಿ ಕನ್ಸ್ಯೂಮರ್‌ ಕೋ ಆಪರೇಟಿವ್‌ ಸೊಸೈಟಿ ಇನ್ನೂ ಹಲವು ಕಾರ್ಯಗಳು ಜಗದ್ಗುರುಗಳ ಪರಿಪೂರ್ಣ ಜೀವನದೃಷ್ಟಿಗೆ ಹೆಗ್ಗುರುತುಗಳಾಗಿವೆ.

ರಾಷ್ಟ್ರಕವಿ ಕುವೆಂಪು ಯಾವತ್ತೂ ಮಠಮಾನ್ಯಗಳಿಗೆ ಹೋದವರಲ್ಲ. ವೈಜ್ಞಾನಿಕ ಮನೋಭಾವದ ಅವರು ವಿಚಾರ ಕ್ರಾಂತಿಗೆ ಕರೆಕೊಟ್ಟಪ್ರಗತಿಪರ ಚಿಂತನೆಯ ಧೀಮಂತ ಸಾಹಿತಿಗಳು. ಅವರು ಪೂಜ್ಯರು ಪೀಠಾರೋಹಣ ಮಾಡಿದ ಐವತ್ತನೇ ವರ್ಷದ ಶುಭಸಮಾರಂಭಕ್ಕೆ ಆಗಮಿಸಿ; ನಾನು ಬಂದಿರುವುದು ನಿಮ್ಮಲ್ಲಿ ಅನೇಕರಿಗೆ ಹೇಗೋ ಹಾಗೇ ಸ್ವತಃ ನನಗೇ ಆಶ್ಚರ್ಯವನ್ನುಂಟುಮಾಡಿದೆ! ಅದಕ್ಕೆ ಕಾರಣ ಶ್ರೀ ರಾಮಕೃಷ್ಣ ಮಹಾಸಂಘವನ್ನುಳಿದು ಬೇರೆ ಯಾವುದೇ ಮಠ, ದೇವಸ್ಥಾನಗಳಿಗೆ ಎಂದೆಂದೂ ಹೋಗಿ ಅಲ್ಲಿನ ಯಾವುದೇ ಕಾರ್ಯಕ್ರಮಗಳಲ್ಲಿ ನಾನು ಇದುವರೆಗೂ ಭಾಗವಹಿಸದೇ ಇದ್ದದ್ದು! ಇಂದು ಈ ಸಮಾರಂಭಕ್ಕೆ ಅತ್ಯಂತ ಪ್ರೀತಿಯಿಂದ ಆಗಮಿಸಿದ್ದೇನೆ. ಇದಕ್ಕೆ ರಾಜೇಂದ್ರ ಶ್ರೀಗಳ ದೂರದರ್ಶಿತ್ವದ ಕಾರ್ಯಕ್ರಮಗಳು ಹಾಗೂ ಅವರ ವ್ಯಕ್ತಿತ್ವ ಮತ್ತು ಸಾಧನೆಯೇ ಕಾರಣವಾಗಿದೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಇದು ಶ್ರೀಗಳ ಆಧ್ಯಾತ್ಮಿಕ ಘನವ್ಯಕ್ತಿತ್ವ ಮತ್ತು ಸೇವಾಮನೋಭಾವದ ಮಹತ್ವವನ್ನು ಸಾದರಪಡಿಸುತ್ತದೆ.

ಪೂಜ್ಯರು ನಿಷ್ಠಾವಂತ ಸಾಧಕರಾಗಿದ್ದರಿಂದ ಭಕ್ತವರ್ಗ ಅವರ ಸಾಧನೆಯನ್ನು ಬಣ್ಣಿಸಿದಾಗ ಅವರು, ‘ಇದರಲ್ಲಿ ನಮ್ಮ ವೈಶಿಷ್ಟ್ಯವೇನಿಲ್ಲ, ಎಲ್ಲವೂ ಶಿವರಾತ್ರೀಶ್ವರರ ಕೃಪೆ ಹಾಗೂ ಭಕ್ತರ ಸಹಕಾರ, ಸಹಾನುಭೂತಿಗಳಿಂದ’ ಎಂದು ತಮಗೆ ಸಂದ ಶ್ರೇಯಸ್ಸನ್ನು ತಮ್ಮ ಗುರುಗಳಿಗೆ ಮತ್ತು ಭಕ್ತರಿಗೆ ಒಪ್ಪಿಸಿರುವುದು ಅವರ ನಿರಂಹಕಾರ ಸ್ವಭಾವಕ್ಕೆ ನಿದರ್ಶನವಾಗಿದೆ.

ಸರಳತೆಯ ಸಾಕಾರಮೂರ್ತಿ

ಒಮ್ಮೆ ಪೂಜ್ಯರು ತಮ್ಮ ಕೋಣೆಯಲ್ಲಿ ಕುಳಿತು ತಾವು ತೊಡಬೇಕಾಗಿದ್ದ ಕಾವಿ ಅಂಗಿಯ ಹರಿದು ಹೋಗಿದ್ದ ಭುಜದ ಭಾಗದಲ್ಲಿ ಸೂಜಿ ದಾರದಿಂದ ಹೊಲಿಗೆ ಹಾಕಿಕೊಳ್ಳುತ್ತಿದ್ದರು. ಆ ವೇಳೆಗೆ ಶ್ರೀಗಳ ಭಕ್ತರಾಗಿದ್ದ ನಾಟಕಕಾರ ಸಿ.ಅಂಕಪ್ಪನವರು ಕೋಣೆಗೆ ಬಂದರು. ಸ್ವಾಮೀಜಿಯವರು ದಪ್ಪದಾರದಿಂದ ದೂರದೂರಕ್ಕೆ ಹೊಲಿಗೆ ಹಾಕುವ ಹಾಗೆ ಅಂಗಿ ಹೊಲೆದುಕೊಳ್ಳುತ್ತಿದ್ದರು. ಈ ದೃಶ್ಯ ಕಂಡ ಅಂಕಪ್ಪನವರು ತಮಗಿದ್ದ ಸಲಿಗೆಯಿಂದಾಗಿ ಕೊಂಚ ಹಾಸ್ಯದ ಧೋರಣೆಯಿಂದ ಹರಿದ ಅಂಗಿಯನ್ನು ಹೊಲೆದು ತೊಡುವ ಬಡತನ ನಿಮಗೇನು ಬಂದಿದೆ ಬುದ್ದಿ? ದೊಡ್ಡ ಮಠದ ಜಗದ್ಗುರುಗಳು ತಾವು. ಅನೇಕ ಸಂಸ್ಥೆಗಳ ಸಂಸ್ಥಾಪಕರು. ನಿಮಗೆ ಬಡತನವೇ? ಎಂದರು. ಆಗ ಪೂಜ್ಯರು ಹೇಳಿದರು: ಹೊಸದಾಗಿ ಬಟ್ಟೆಕೊಳ್ಳಲು ಹೊಸ ಅಂಗಿ ಹೋಲಿಸಿಕೊಳ್ಳಲು ನಮ್ಮದು ಎನ್ನುವುದು ಇಲ್ಲಿ ಏನಿದೆ? ಎಲ್ಲಾ ಭಕ್ತರದು, ಸಾರ್ವಜನಿಕರದು, ಸಮಾಜದ್ದು. ಅಲ್ಲದೆ ಈ ಅಂಗಿ ನಮಗೆ ಬೇಕಾದ ಪ್ರಿಯ ಭಕ್ತರು ಕೊಟ್ಟಿದ್ದು. ಅದಕ್ಕೇ ಇಷ್ಟುಬೇಗ ಇದಕ್ಕೆ ನಿವೃತ್ತಿ ಕೊಡಲು ಬಯಸುವುದಿಲ್ಲ ಎಂದರು.

ಚಿಕ್ಕಮಗಳೂರು: ಮೂರ್ತಿಯ ಮೇಲೆ ಹುತ್ತ ಆವರಿಸಿದ್ದಕ್ಕೆ ಗರ್ಭಗುಡಿಯ ದೇವರನ್ನೇ ವಿಸರ್ಜಿಸೋ ಅಚ್ಚರಿ..!

ದೇಶಿಕೇಂದ್ರ ಶ್ರೀಗಳ ಸಮರ್ಥ ನೇತೃತ್ವ

ಇಂದು ಸುತ್ತೂರು ಕ್ಷೇತ್ರ ಅಂತಾರಾಷ್ಟ್ರೀಯ ಕೀರ್ತಿಯ ಧಾರ್ಮಿಕ ಕ್ಷೇತ್ರವಾಗಿದೆ. ಇದಕ್ಕೆ ಕಾರಣ ತಮ್ಮ ಗುರುಗಳ ಆಶಯದಂತೆ ಇಂದಿನ ಜಗದ್ಗುರುಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಹ ಸೇವೆಯ ಮಹದಾಸೆಯನ್ನು ಮುಂದಿಟ್ಟುಕೊಂಡು ತಮ್ಮ ಕಾರ್ಯಕ್ಷಮತೆ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಂದ ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿ, ಸಾಗರದಾಚೆಗೂ ಶಿಕ್ಷಣದ ಜೊತೆಯಲ್ಲಿ ಧರ್ಮ, ಸಂಸ್ಕೃತಿ, ಆಧ್ಯಾತ್ಮವನ್ನು ಬಿತ್ತರಿಸುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.

ತಮ್ಮ ಗುರುಗಳನ್ನು ಕುರಿತು ಅವರು ಆಡಿರುವ ಮಾತೊಂದು ಇಲ್ಲಿ ಉಲ್ಲೇಖನೀಯ- ನಮ್ಮ ಗುರುಗಳು ಪ್ರಬುದ್ಧ ಪ್ರವಚನ ಮಾಡಲಿಲ್ಲ, ಬರಿಯ ಬಾಯಿಮಾತಿನ ಹಿತವಚನ ಹೇಳಲಿಲ್ಲ, ಯಾವುದೇ ಪ್ರಚಾರದ ಹಂಗಿಲ್ಲದೆ ಹಸಿವಿಗೆ ಅನ್ನವನ್ನು ಇಕ್ಕಿದ್ದು, ಬುದ್ಧಿಗೆ ಹೃದಯಕ್ಕೆ ಅರಿವಿನ ಸಂಸ್ಕಾರವನ್ನು ಕೊಟ್ಟದ್ದು ಅವರು ಮಾಡಿದ ಬಹು ದೊಡ್ಡ ಮೌನಕ್ರಾಂತಿ. ಈ ಮಾತು ಕೇವಲ ಒಂದು ನುಡಿಚಿತ್ರವಲ್ಲ, ಪೂಜ್ಯ ರಾಜೇಂದ್ರ ಮಹಾಸ್ವಾಮಿಗಳೇ ಅಲ್ಲಿ ಸಾಕ್ಷಾತ್ಕಾರಗೈದಂತಿದೆ. ಈ ಶಕ್ತಿಗೆ ನೆರವಾಗಿರುವ ಪ್ರಾತಃಸ್ಮರಣೀಯರಾದ ರಾಜೇಂದ್ರ ಶ್ರೀಗಳ ನೆನಪು ಇಂದಿಗೂ ಭಕ್ತರಲ್ಲಿ ಕರ್ತೃತ್ವ ಶಕ್ತಿಯನ್ನು ಮೂಡಿಸುತ್ತದೆ. ಆಗಸ್ಟ್‌ 29ರಂದು ಶಿವರಾತ್ರಿ ರಾಜೇಂದ್ರ ಶ್ರೀಗಳ 108ನೆಯ ಜಯಂತಿಯ ಶುಭ ಸಂದರ್ಭದಲ್ಲಿ ದಿವ್ಯ ಚೇತನವನ್ನು ನೆನೆದು ಅವರು ಹಾಕಿಕೊಟ್ಟ ಆದರ್ಶದ ಹಾದಿಯಲ್ಲಿ ಮುನ್ನಡೆಯೋಣ ಎಂದು ಗುಂಡ್ಲುಪೇಟೆ ಎಚ್‌.ಎಸ್‌.ಸಿದ್ದಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ. 

Follow Us:
Download App:
  • android
  • ios