ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಹೊರನಾಡು, ಶೃಂಗೇರಿಯಲ್ಲಿ ಭಕ್ತರ ಸಾಗರ
ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳಾ ಮಣಿಗಳು ಮುಗಿಬಿದ್ದಿದ್ದು, ಪ್ರಯಾಣಿಕರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಸಹ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಫಿನಾಡಿನ ಪ್ರಮುಖ ಆಕರ್ಷಣೆ ಸ್ಥಳಗಳಲ್ಲಿ ಒಂದಾಗಿರುವ ಹೊರಾನಾಡಿನ ತಾಯಿ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲೂ ಸಂಭ್ರಮ ಮನೆ ಮಾಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.22): ಜಿಲ್ಲೆಯ ಶೃಂಗೇರಿ, ಹೊರನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಶೃಂಗೇರಿ, ಹೊರನಾಡಿನ ದೇವಿ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬಂದಿದೆ. ಇಂದು ಶೃಂಗೇರಿ ಶಾರದೆ ರಾಜರಾಜೇಶ್ವರಿ ಅಲಂಕಾರದಲ್ಲಿ ದರ್ಶನ ನೀಡಿದ್ರೆ, ಅನ್ನಪೂಣೇಶ್ವರಿಗೆ ವೃಷಭಾರೂಢಾ ತ್ರಿಮೂರ್ತಿ ಅಲಂಕಾರದಲ್ಲಿ ಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಳು.
ರಾಜರಾಜೇಶ್ವರಿ ಅಲಂಕಾರದಲ್ಲಿ ವಿದ್ಯಾಧಿದೇವತೆ :
ವಿದ್ಯಾಧಿದೇವತೆ ಶೃಂಗೇರಿ ಶಾರದಾಂಭೆ ನವರಾತ್ರಿ 8ನೇ ದಿನವಾದ ಇಂದು ವೈವಿಧ್ಯಮ ರಾಜರಾಜೇಶ್ವರಿ ಅಲಂಕಾರದಲ್ಲಿ ಶ್ರೀಶಾರದೆ, ಪಾಶ, ಅಂಕುಶ,ಬಿಲ್ಲುಗಳನ್ನು ಧರಿಸಿದ ಜಗನ್ಯಾತೆ ಭಕ್ತರನ್ನು ಅನುಗ್ರಹಿಸಿದಳು. ಚಿಂತಾಮಣಿ ಗೃಹದಲ್ಲಿ ವಿರಾಜಮಾನಳಾಗಿ ಎರಡು ಕೈಗಳಲ್ಲಿ ಲಕ್ಷ್ಮೀ ಹಾಗೂ ಸರಸ್ವತಿಯ ಬಂಗಾರಮೂರ್ತಿಯಿಂದ ಆವೃತ್ತಗೊಂಡ ಚಾಮರಗಳ ಹಿಡಿದ ಶಾರದೆಯ ಅಲಂಕಾರವನ್ನು ಕಂಡು ಭಕ್ತರ ಹೃನ್ಮನಗಳಲ್ಲಿ ಧನ್ಯತಾಭಾವ ಮೂಡಿತು. ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾ.ಪಂ ಭಕ್ತಾದಿಗಳು ಭಾಗವಹಿಸಿದರು.ನವರಾತ್ರಿ ಹಿನ್ನಲೆಯಲ್ಲಿ ಶ್ರೀ ಮಠದಲ್ಲಿ ಪ್ರತಿದಿನದಂತೆ ಇಂದು ಕೂಡ ಪಾರಾಯಣ,ಕುಂಕುಮಾರ್ಚನೆ ಪೂಜೆಗಳು ನೆರವೇರಿದವು.ಬೀದಿ ಉತ್ಸವದ ಜೊತೆಗೆ ಪ್ರತಿನಿತ್ಯ ಸಂಜೆ 6.30 ಕ್ಕೆ ಶ್ರೀಶಾರದಾಂಬೆಗೆ ರಾಜಬೀದಿಯಲ್ಲಿ ರಥೋತ್ಸವ ನಡೆಯುಲಿದೆ.ನವರಾತ್ರಿಯ ಅಂಗವಾಗಿ ಶೃಂಗೇರಿ ಶಾರದಾಂಭೆ ದೇಗುಲದ ಒಳಭಾಗ, ಹೊರಭಾಗದಲ್ಲಿ ಹೂವಿನ ಅಲಂಕಾರ ಭಕ್ತರನ್ನು ಆಕರ್ಷಣೆ ಮಾಡುತ್ತಿದೆ.
ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಭಕ್ತರಿಗೆ ದರ್ಶನದ ಭಾಗ್ಯ ನೀಡಿದ ಶೃಂಗೇರಿ ಶಾರದೆ, ಅನ್ನಪೂಣೇಶ್ವರಿ..!
ವೃಷಭಾರೂಢಾ ತ್ರಿಮೂರ್ತಿ ಅಲಂಕಾರದೊಂದಿಗೆ ಅನ್ನಪೂಣೇಶ್ವರಿ :
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ಭಾನುವಾರ ವೃಷಭಾರೂಢಾ ತ್ರಿಮೂರ್ತಿ ಅಲಂಕಾರದೊಂದಿಗೆ ಕಂಗೊಳಿಸಿದಳು.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ಮತ್ತು ಶ್ರೀ ದುರ್ಗಾ ಮೂಲಮಂತ್ರ ಹೋಮ ನಡೆಯಿತು.ಬೆಳಿಗ್ಗೆ 8.30ಕ್ಕೆ ನಡೆದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಪಾಲ್ಗೊಂಡರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮೃದಂಗ ವಿದ್ವಾನ್ ಹೆಚ್.ಎಲ್.ಶಿವಶಂಕರ ಸ್ವಾಮಿ ಮತ್ತು ತಂಡ ಮೈಸೂರು ಇವರಿಂದ ಶಾಸ್ತ್ರೀಯ ಸಂಗೀತ ಸಂಜೆ ನಾಟ್ಯಶ್ರೀ ಕಲಾ ತಂಡ ಶಿವಮೊಗ್ಗ ಇವರಿಂದ ಯಕ್ಷಗಾನ ನಡೆಯಿತು.ನಾಳೆ ಸಿಂಹಾರೂಢಾ ಸಿದ್ಧಿಧಾತ್ರಿ ಅಲಂಕಾರ ಪೂಜೆ, ಶ್ರೀ ಚಂಡಿಕಾ ಮೂಲಮಂತ್ರಹೋಮ ಹಾಗೂ ಆಯುಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವೇಣುವಾದನ ಸಂಜೆ ಭರತನಾಟ್ಯ ನಡೆಯಲಿದೆ.
ಚಿಕ್ಕಮಗಳೂರು: ಶೃಂಗೇರಿ ಶಾರದೆಗೆ ಮಹಾವಿಷ್ಣುವಿನ ಅಲಂಕಾರ, ಅನ್ನಪೂಣೇಶ್ವರಿಗೆ ಮಕರಾರೂಢ ಸ್ಕಂದಮಾತೆ ಅವತಾರ
ಹೊರನಾಡು , ಶೃಂಗೇರಿಯಲ್ಲಿ ಭಕ್ತ ಸಾಗರ :
ನವರಾತ್ರಿ ಹಬ್ಬ ಹಿನ್ನೆಲೆ ಜಿಲ್ಲೆಯ ದೇವಾಲಯಗಳು ತುಂಬಿ ತುಳುಕುತ್ತಿವೆ. ಶೃಂಗೇರಿ ಶಾರದಾಂಬೆ ದೇವಲಾಯಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಭಕ್ತರ ಹೆಚ್ಚಿದ ಹಿನ್ನೆಲೆ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನು ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನು ಟವೆಲ್‌ನಂತೆ ಪೋಷಕರು ಹತ್ತಿಸುತ್ತಿದ್ದಾರೆ. ಬಸ್ನ ಕಿಟಕಿಯಿಂದ ಮಕ್ಕಳನ್ನು ಹತ್ತಿಸಿ ರಿಸರ್ವೇಶನ್ ಮಾಡುತ್ತಿದ್ದಾರೆ ಕೆಲ ಪ್ರಯಾಣಿಕರು. ಒಂದೇ ಸಾರಿಗೆ ಬಸ್‌ಗೆ ನೂರಾರು ಜನ ಮುಗಿಬಿದ್ದಿದ್ದಾರೆ.ಶಕ್ತಿ ಯೋಜನೆಯ ಫ್ರೀ ಬಸ್ ಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತಾದಿಗಳು ಶೃಂಗೇರಿಗೆ ಆಗಮಿಸುತ್ತಿದ್ದಾರೆ. ಶಕ್ತಿ ಯೋಜನೆಯ ಎಫೆಕ್ಟ್‌ನಿಂದ ಪ್ರವಾಸಿ ಕೇಂದ್ರ ತುಂಬಿತುಳುಕುತ್ತಿದೆ. ಇನ್ನು ಜನರನ್ನು ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೈರಾಣಾಗಿದ್ದಾರೆ.
ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳಾ ಮಣಿಗಳು ಮುಗಿಬಿದ್ದಿದ್ದು, ಪ್ರಯಾಣಿಕರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಸಹ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಫಿನಾಡಿನ ಪ್ರಮುಖ ಆಕರ್ಷಣೆ ಸ್ಥಳಗಳಲ್ಲಿ ಒಂದಾಗಿರುವ ಹೊರಾನಾಡಿನ ತಾಯಿ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲೂ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆ ದಿನನಿತ್ಯ ಸಾವಿರಾರು ಭಕ್ತರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡಿಗೆ ಆಗಮಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ತಾಯಿಯ ದರ್ಶನದೊಂದಿಗೆ ಆಶೀರ್ವಾದ ಪಡೆಯುತ್ತಿದ್ದಾರೆ.