Asianet Suvarna News Asianet Suvarna News

Mythology: ಅಗಸ್ತ್ಯರ ಮೇಲೆ ಮುನಿದು ನದಿಯಾಗಿ ಭೋರ್ಗರೆದ ಕಾವೇರಿ!

ಕನ್ನಡ ನಾಡಿನ ಜೀವನದಿ ಎಂಬ ಹೆಗ್ಗಳಿಕೆ ಪಡೆದಿರುವ ಕಾವೇರಿ ನದಿ ಕನ್ನಡಿಗರ ಭಾವಕೊಂಡಿಯಲ್ಲಿ ಬೆಸೆದು ನಿರಂತರವಾಗಿ ಹರಿಯುತ್ತಿದ್ದಾಳೆ. ಪುರಾಣಗಳಲ್ಲಿ ಆಕೆಯ ಕತೆ ವಿಶಿಷ್ಠವಾಗಿದೆ. 

Mythological story of Cauvery river skr
Author
First Published Oct 17, 2022, 11:09 AM IST | Last Updated Oct 17, 2022, 11:09 AM IST

'ಗಂಗೇಚ ಯಮುನೇ ಚೈವ ಗೋಧಾವರಿ ಸರಸ್ವತೀ 
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಗುರು'

ಭಾರತದ ಏಳು ಪವಿತ್ರ ನದಿಗಳಲ್ಲೊಂದಾಗಿ ಗುರುತಿಸಿಕೊಂಡಿದ್ದಾಳೆ ಕನ್ನಡನಾಡಿನ ಕಾವೇರಿ. ಕಾವೇರಿ ಈ ಮಣ್ಣಿನ ಜೀವನದಿ. ಕೋಟ್ಯಂತರ ಜನರ ನಿತ್ಯ ದಾಹ ತಣಿಸುತ್ತಾ ಹರಿಯುತ್ತಲೇ ಇರುವ ಆಕೆ ಕನ್ನಡಿಗರ ಭಾವಲಹರಿಯಲ್ಲಿ ಬೆಸೆದುಕೊಂಡಿದ್ದಾಳೆ. 
ಇಂದು(ಅಕ್ಟೋಬರ್ 17) ಕಾವೇರಿ ಉಗಮ ಸ್ಥಳ ಭಾಗಮಂಡಲದ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ. ಪ್ರತಿ ವರ್ಷ ಸೂರ್ಯನ ತುಲಾ ಸಂಕ್ರಮಣ(Sun Transit in Libra)ದ ದಿನ ಕಾವೇರಿ ತನ್ನ ಕುಂಡಿಗೆಯಲ್ಲಿ ಬುಗ್ಗೆ ಬುಗ್ಗೆಯಾಗಿ ಚಿಮ್ಮುತ್ತಾಳೆ. ಇದನ್ನೇ ತೀರ್ಥೋದ್ಭವ ಎನ್ನುವುದು. ತುಲಾ ಸಂಕ್ರಮಣದ ದಿನವೇ ಕಾವೇರಿ(Cauvery) ಯಾಕೆ ಚಿಮ್ಮುತ್ತಾಳೆ ಎಂಬುದು ಇನ್ನೂ ನಿಗೂಢವೇ ಆಗಿದೆ. ಆಕೆ ತನ್ನ ಮಕ್ಕಳನ್ನು ನೋಡಿಕೊಂಡು ಹೋಗಲು ತುಲಾ ಸಂಕ್ರಮಣದ ದಿನ ಭೇಟಿ ನೀಡುತ್ತಾಳೆ ಎಂಬುದು ಕೊಡವರ ನಂಬಿಕೆ. 

ಸೂರ್ಯನ ತುಲಾ ಸಂಕ್ರಮಣ; ಇಂದು ತಲಕಾವೇರಿ ತೀರ್ಥೋದ್ಭವ

ಪುರಾಣಗಳಲ್ಲಿ ಕೂಡಾ ಕಾವೇರಿಗೆ ಅತ್ಯುತ್ತಮ ಸ್ಥಾನ ಇರುವುದಕ್ಕೆ ಮಂತ್ರಗಳಲ್ಲಿ ಆಕೆ ಸ್ಥಾನ ಪಡೆದಿರುವುದೇ ಸಾಕ್ಷಿ. ಕಾವೇರಿಯ ಪೌರಾಣಿಕ ಹಿನ್ನೆಲೆ(Mythological background) ತಿಳಿದಿದ್ದೀರಾ?

ಋಷಿ ಅಗಸ್ತ್ಯರ ಪತ್ನಿ
ಸಾವಿರಾರು ವರ್ಷಗಳ ಹಿಂದೆ ಕೊಡಗಿನ ಬ್ರಹ್ಮಗಿರಿ ಪರ್ವತದ ಬಳಿ ಕಾವೇರು ಎಂಬ ರಾಜನಿದ್ದ. ಆತನಿಗೆ ಮಕ್ಕಳಿಲ್ಲದ ಕಾರಣ ತಪಸ್ವಿಗಳ ಸಲಹೆಯಂತೆ ಆತ ಮಗು ಬೇಡಿ ಬ್ರಹ್ಮ(Lord Brahma)ನಿಗೆ ತಪಸ್ಸಾಚರಿಸಿದ. ಫಲವಾಗಿ ಬ್ರಹ್ಮನು ಆತನಿಗೆ ಮುದ್ದಾದ ಹೆಣ್ಣುಮಗುವನ್ನು ಕರುಣಿಸುತ್ತಾನೆ. ಅವಳಿಗೆ ರಾಜ ಕಾವೇರಿ ಎಂಬ ಹೆಸರಿಡುತ್ತಾನೆ. ಕಾವೇರಿ ಸುಂದರವಾಗಿ ಬೆಳೆಯುತ್ತಾಳೆ. ಯವ್ವನಕ್ಕೆ ಬಂದಾಗ ಅಗಸ್ತ್ಯ ಮಹಾಮುನಿಗಳು ಆಕೆಯನ್ನು ವಿವಾಹವಾಗುವ ಇಂಗಿತ ವ್ಯಕ್ತಪಡಿಸುತ್ತಾರೆ. ಇದಕ್ಕೆ ಒಪ್ಪುವ ಕಾವೇರಿ, ವಿವಾಹ ಸಮಯದಲ್ಲಿ ಅಗಸ್ತ್ಯರಿಗೆ ತನ್ನನ್ನು ಎಂದಿಗೂ ಎಲ್ಲಿಯೂ ಒಂಟಿಯಾಗಿ ಬಿಟ್ಟು ಹೋಗಬಾರದೆಂಬ ಷರತ್ತು ವಿಧಿಸುತ್ತಾಳೆ. ಅಗಸ್ತ್ಯ(Agastya)ರು ಸಮ್ಮತಿ ಸೂಚಿಸಿದ ಬಳಿಕವೇ ವಿವಾಹವಾಗುತ್ತದೆ. ತಮ್ಮ ಮಾತಿಗೆ ತಕ್ಕಂತೆಯೇ ಅಗಸ್ತ್ಯರು ತಾವು ಹೋದಲ್ಲೆಲ್ಲ ಕಾವೇರಿಯನ್ನೂ ಕರೆದೊಯ್ಯುತ್ತಿರುತ್ತಾರೆ. ಆದರೆ ಒಮ್ಮೆ ಮಾತ್ರ ತಮ್ಮ ಶಿಷ್ಯರಿಗೆ ತತ್ತ್ವಶಾಸ್ತ್ರ ರಹಸ್ಯಗಳನ್ನು ಬೋಧಿಸುವ ಸಲುವಾಗಿ ಪತ್ನಿಯನ್ನು ಬಿಟ್ಟು ಅವರನ್ನು ದೂರ ಕರೆದುಕೊಂಡು ಹೋಗಿ ಪಾಠ ಮಾಡುತ್ತಾರೆ. 
ಆಗ ಕಾವೇರಿ ಸಿಟ್ಟಾಗಿ ನದಿಗೆ ಧುಮುಕುತ್ತಾಳೆ. ಬ್ರಹ್ಮನ ಪ್ರಸಾದವಾಗಿ ಜನಿಸಿದ್ದರಿಂದ ಆಕೆ ತಾನೇ ಸ್ವತಃ ನದಿಯಾಗಿ ಬ್ರಹ್ಮಗಿರಿ ತಪ್ಪಲಿನಿಂದ ಪ್ರವಹಿಸತೊಡಗುತ್ತಾಳೆ. 

ಮತ್ತೊಂದು ಕತೆಯಂತೆ ತಾವು ಹೋದಲ್ಲೆಲ್ಲ ಕರೆದುಕೊಂಡು ಹೋಗಬೇಕಾದ ಕಾರಣ ಅಗಸ್ತ್ಯ ಮಹಾಮುನಿಗಳು ಕಾವೇರಿಯನ್ನು ತಮ್ಮ ಮಂತ್ರಶಕ್ತಿಯಿಂದ ನೀರಾಗಿ ಪರಿವರ್ತಿಸಿ ಕಮಂಡಲುವಿನೊಳಗೆ ಇಟ್ಟುಕೊಳ್ಳುತ್ತಾರೆ. ಇದರಿಂದ ಕೋಪಗೊಂಡ ಕಾವೇರಿ ಶಿವನಲ್ಲಿ ತನ್ನ ಮುಕ್ತಿಗಾಗಿ ಬೇಡಿಕೊಳ್ಳುತ್ತಾಳೆ. ಆಗ ಶಿವನು ಮಗ ಗಣಪತಿಯನ್ನು ಕಾವೇರಿಯನ್ನು ಕಮಂಡಲುವಿನಿಂದ ಬಿಡಿಸಲು ಕಳುಹಿಸುತ್ತಾನೆ. ಗಣಪತಿಯು ಕಾಗೆಯ ರೂಪ ತಾಳಿ, ಅಗಸ್ತ್ಯ ಮಹಾಮುನಿಗಳು ಸ್ನಾನಕ್ಕೆ ತೆರಳಿದಾಗ ದಂಡೆಯಲ್ಲಿದ್ದ ಕಮಂಡಲುವನ್ನು ಬೀಳಿಸುತ್ತಾನೆ. ಹೊರ ಚೆಲ್ಲಿದ ಕಾವೇರಿ ಭೋರ್ಗರೆಯುವ ನದಿಯಾಗಿ ಹರಿಯುತ್ತಾಳೆ. 

Sun Transit In Tula: ಮೂರು ರಾಶಿಗೆ ಮಂಗಳಕರ ಸೂರ್ಯ ಗೋಚಾರ

ಇನ್ನೂ ಒಂದು ಕತೆಯಂತೆ ಅಗಸ್ತ್ಯಮುನಿಗಳು ಕಾವೇರಿಯನ್ನು ಕಮಂಡಲದ ನೀರಾಗಿ ಇಟ್ಟುಕೊಂಡು ಹೋದಲ್ಲೆಲ್ಲ ಕೊಂಡೊಯ್ಯುತ್ತಿರುತ್ತಾರೆ. ಆಗ ಈ ಪ್ರದೇಶದಲ್ಲಿ ಕ್ಷಾಮ ಬರುತ್ತದೆ. ಆಗ ಪ್ರಜೆಗಳು ನೀರಿಗಾಗಿ ಗಣಪತಿಯ ಪೂಜೆ ನಡೆಸುತ್ತಾರೆ. ಗೋವಿನ ರೂಪದಲ್ಲಿ ಬಂದ ಗಣಪನು ಕಮಂಡಲವನ್ನು ಬೀಳಿಸುತ್ತಾನೆ. ಆ ನೀರು ಕಾವೇರಿಯಾಗಿ ಹರಿದು ಸುತ್ತಲ ಪ್ರದೇಶದ ಕ್ಷಾಮ ತೆಗೆದು, ಅಲ್ಲೆಲ್ಲ ಹಸಿರು ಕಂಗೊಳಿಸುವಂತೆ ಮಾಡುತ್ತಾಳೆ. ಪ್ರಸ್ತುತ ಕಾವೇರಿಯು ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಪ್ರವಹಿಸುತ್ತಾಳೆ. ಹಲವಾರು ಉಪನದಿಗಳಾಗಿ ಹರಿಯುತ್ತಾಳೆ. 

 

Latest Videos
Follow Us:
Download App:
  • android
  • ios