ವಿಶ್ವದ ಶ್ರೀಮಂತ ಗಣೇಶ, ಮುಂಬೈನ ಜಿಎಸ್‌ಬಿ ಗಣಪತಿ ವಿಮೆ ಬರೋಬ್ಬರಿ 400 ಕೋಟಿ ರೂ!
ಗಣೇಶ ಚತುರ್ಥಿ ಮುಂಬೈನಲ್ಲಿ ಭಾರಿ ವಿಶೇಷ. ಅತೀ ಎತ್ತರ, ವಿಶೇಷ ಗಣೇಶನ ಮೂರ್ತಿಗಳನ್ನು ಕೂರಿಸಿ ಪೂಜೆ ನೇರವಿಸಿ ವಿಸರ್ಜನೆ ಮಾಡಲಾಗುತ್ತದೆ. ಇದೀಗ ಮುಂಬೈನ ಜಿಎಸ್‌ಬಿ ಗಣೇಶ ವಿಶ್ವದ ಅತೀ ಶ್ರೀಮಂತ ಗಣೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗಣೇಶನ ವಿಮೆ ಮೊತ್ತ 400 ಕೋಟಿ ರೂ.
ಮುಂಬೈ(ಆ.27) ಗಣೇಶ ಚತುರ್ಥಿ ಹಬ್ಬ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಗಣೇಶನ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಗಲ್ಲಿ ಗಲ್ಲಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನಡೆಯುತ್ತದೆ.ಬಳಿಕ ವಿಸರ್ಜನೆಯೂ ಅಷ್ಟೇ ವಿಜ್ರಂಭಣೆಯಿಂದ ನಡೆಯಲಿದೆ. ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರಿ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ ಕೂಡ ಒಂದು. ಈ ಬಾರಿಯೂ ಜಿಎಸ್‌ಬಿ ಸೇವಾ ಮಂಡಲದ ಗಣೇಶ ವಿಶ್ವದ ಶ್ರೀಮಂತ ಗಣಪ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್‌ಬಿ ಗಣಪನಿಗೆ ಈ ಬಾರಿ ಬರೋಬ್ಬರಿ 400.58 ಕೋಟಿ ರೂಪಾಯಿ ವಿಮೆ ಮಾಡಲಾಗಿದೆ.
ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಈ ಬಾರಿ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಸೆಪ್ಟೆಂಬರ್ 7 ರಿಂದ 11ರ ವರೆಗೆ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್‌ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಸೆಪ್ಟೆಂಬರ್ 5 ರಂದು ಜಿಎಸ್‌ಬಿ ಸೇವಾ ಮಂಡಲ ಮಾಡಲಿದೆ. ಜಿಸ್‌ಬಿ ಸೇವಾ ಮಂಡಲ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ.
ಬೆಂಗಳೂರಿನಲ್ಲಿ 'ಗಲ್ಲಿ ಗಣೇಶ ಕೂರಿಸಲು 63 ಸಿಂಗಲ್ ವಿಂಡೋ ವ್ಯವಸ್ಥೆ' ಮಾಡಿದ ಬಿಬಿಎಂಪಿ!
ಜಿಎಸ್‌ಬಿ ಗಣಪನಿಗೆ ಬರೋಬ್ಬರಿ 66 ಕೆಜಿ ಚಿನ್ನ, 25 ಕೆಜಿ ಬೆಳ್ಳಿ ಹಾಗೂ ಇತರ ಅತ್ಯಮೂಲ್ಯ ಚಿನ್ನಾಭರಣಗಳನ್ನು ತೊಡಿಸಲಾಗುತ್ತದೆ. ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಜಿಎಸ್‌ಬಿ ಗಣಪನಿಗೆ ತೊಡಿಸಲಾಗುತ್ತದೆ. ಹೀಗಾಗಿ ಇದಕ್ಕೆ ಅಷ್ಟೇ ದುಬಾರಿ ಮೊತ್ತದ ವಿಮೆ ಮಾಡಿಸಲಾಗಿದೆ. 400.58 ಕೋಟಿ ರೂಪಾಯಿ ವಿಮೆ ಮೊತ್ತಕ್ಕೆ ಪ್ರಿಮಿಯಂ ಎಷ್ಟು ಪಾವತಿ ಮಾಡಲಾಗಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ 5 ದಿನಗಳ ಗಣೇಶೋತ್ಸವ ಆಚರಿಸಲಾಗುತ್ತಿದೆ. ಎಂದಿನಂತೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಸೇರಿದಂತೆ ಯಾವುದೇ ಹಾನಿಕಾರ ವಸ್ತುಗಳ ಬಳಕೆ ಮಾಡಿಲ್ಲ. ಪೂರ್ತಿಯಾಗಿ ಮಣ್ಣಿನ ಗಣಪನ ಕೂರಿಸಿ ಪೂಜೆ ಮಾಡಲಾಗುತ್ತದೆ ಎಂದು ಜಿಎಸ್‌ಬಿ ಸೇವಾ ಮಂಡಲ್ ಮುಖ್ಯಸ್ಥ ಅಮಿತ್ ದಿನೇಶ್ ಪೈ ಹೇಳಿದ್ದಾರೆ.
ಕಳೆದ ವರ್ಷ 360.40 ಕೋಟಿ ರೂಪಾಯಿ ವಿಮೆ ಮಾಡಲಾಗಿತ್ತು. ಈ ಬಾರಿ ಈ ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಸ್ವಯಂ ಸೇವಕರು, ಕಾರ್ಯಕರ್ತರು ಎಲ್ಲರು ಸಜ್ಜಾಗಿದ್ದಾರೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಳ್ಮೆಯಿಂದ ದರ್ಶನ ಮಾಡಬೇಕು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲ ಎಂದು ಅಮಿತ್ ದಿನೇಶ್ ಪೈ ಸೂಚಿಸಿದ್ದಾರೆ.
ಗಣೇಶ ಹಬ್ಬದಲ್ಲಿ ರೌಡಿಶೀಟರ್‌ಗಳಿಗೆ ಬಾಲ ಬಿಚ್ಚದಂತೆ ಎಚ್ಚರಿಕೆ ಕೊಟ್ಟ ಪೊಲೀಸ್ ಕಮಿಷನರ್!