Asianet Suvarna News Asianet Suvarna News

Hindu Mythology: ಅರೆ! ರಾಮಾಯಣದ ಈ ವ್ಯಕ್ತಿಗಳು ಮಹಾಭಾರತದಲ್ಲೂ ಇದ್ದಾರೆ, ಯಾರವರು?

ರಾಮಾಯಣದಲ್ಲಿ ಕಾಣಿಸಿಕೊಳ್ಳುವ ಕೆಲವು ಪಾತ್ರಗಳು ಮಹಾಭಾರತದಲ್ಲೂ ಮತ್ತೆ ಬರುತ್ತಾರೆ. ಅವರ್ಯಾರು ಎಂಬುದು ನಿಮಗೆ ಗೊತ್ತೆ?
 

Meet the characters who appear both in Ramayana and Mahabharat
Author
bengaluru, First Published Feb 21, 2022, 12:56 PM IST | Last Updated Feb 21, 2022, 12:56 PM IST

ರಾಮಾಯಣ (Ramayana) ನಡೆಯುವುದು ತ್ರೇತಾಯುಗದಲ್ಲಿ. ಮಹಾಭಾರತ (Mahabharath) ನಡೆಯುವುದು ದ್ವಾಪರಯುಗದಲ್ಲಿ, ಈ ಎರಡರ ನಡುವೆ ಸಾವಿರಾರು ವರ್ಷಗಳ ವ್ಯತ್ಯಾಸ ಇದೆ. ಆದರೂ ರಾಮಾಯಣದ ಕೆಲವು ಪಾತ್ರಗಳು ಮಹಾಭಾರತದಲ್ಲೂ ಮತ್ತೆ ಕಾಣಿಸಿಕೊಳ್ಳುತ್ತಾರೆ. ಅವರ್ಯಾರು?

ಹನುಮಂತ (Hanuman) 
ರಾಮಭಕ್ತ ಆಂಜನೇಯ ಶ್ರೀರಾಮನ ನೆಚ್ಚಿನ ಸಖ. ರಾವಣ ಕದ್ದೊಯ್ದ ಸೀತಾದೇವಿಯನ್ನು ಹುಡುಕಲು ಅವನೇ ನಿಮಿತ್ತ. ಬಾಲ್ಯದಲ್ಲೇ ಚಿರಂಜೀವಿಯಾಗು ಎಂದು ದೇವತೆಗಳಿಂದ ವರ ಪಡೆದ ಈ ಮಹಾನ್ ವ್ಯಕ್ತಿ, ಶ್ರೀರಾಮನ ಅವತಾರ ಪರಿಸಮಾಪ್ತಿಯ ಬಳಿಕ ಹಿಮಾಲಯದ ಕದಳಿವನದಲ್ಲಿ ಇರುತ್ತಾನೆ. ಸೌಗಂಧಿಕಾ ಪುಷ್ಪಹರಣಕ್ಕೆ ಭೀಮಸೇನ ಬಂದಾಗ, ಅಲ್ಲಿ ಅವನಿಗೆ ಕಾಣಿಸಿಕೊಳ್ಳುತ್ತಾನೆ. ಹನುಮನ ಬಾಲ ಎತ್ತಲು ಸೋತ ಭೀಮನಿಗೆ ತನ್ನ ನಿಜರೂಪ ತೋರುತ್ತಾನೆ. ನಂತರ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಮೇಲೆ ಧ್ವಜವಾಗಿ ಕೂರುತ್ತಾನೆ. 

ಜಾಂಬವ (Jambuvan)
ಜಾಂಬವರು ಸೃಷ್ಟಿಯ ಆದಿಯಲ್ಲೇ ಇದ್ದವರು. ಶಿವ- ಗಿರಿಜೆಯರ ಕಲ್ಯಾಣ ಆದಾಗ ಇವರಿಗೆ ಹತ್ತೊಂಬತ್ತು ವರ್ಷವಂತೆ. ರಾಮಾಯಣದಲ್ಲಿ ಹನುಮನಿಗೆ ಅವನ ನಿಜಶಕ್ತಿಯ ದರ್ಶನ ಮಾಡಿಸುವವರು ಅವರೇ. ಬ್ರಹ್ಮನ ಮಾನಸಪುತ್ರರಾದ ಇವರೂ ಚಿರಂಜೀವಿ. ದ್ವಾಪರಯುಗದಲ್ಲಿ, ಸತ್ರಾಜಿತನ ಬಳಿ ಇದ್ದ ಸ್ಯಮಂತಕಮಣಿ ಮಾಯವಾದಾಗ, ಅದರ ಅಪವಾದ ಶ್ರೀಕೃಷ್ಣನ ಮೇಲೆ ಬರುತ್ತದೆ. ಅಪವಾದ ತೊಡೆದುಹಾಕಲು ಮಣಿಯ ಹುಡುಕಾಟದಲ್ಲಿ ಕಾಡಿಗೆ ಬಂದ ಕೃಷ್ಣನಿಗೆ, ಅದು ಜಾಂಬವರ ಗುಹೆಯಲ್ಲಿ ಇರುವುದು ಗೊತ್ತಾಗುತ್ತದೆ. ಘೋರ ಕಾಳಗದ ಬಳಿಕ, ತಾನೇ ರಾಮನೆಂದು ತಿಳಿಸಿದ ಶ್ರೀಕೃಷ್ಣನಿಗೆ ಜಾಂಬವ ಮಣಿಯುತ್ತಾನೆ.

Extramarital affair: ಈ ರಾಶಿಯವರು ದಾಂಪತ್ಯದಾಚೆಗೂ ಜಿಗಿಯಬಲ್ಲರು, ಹುಷಾರಾಗಿರಿ!

ವಿಭೀಷಣ (Vibhishana)
ರಾವಣ ಸತ್ತ ನಂತರ ವಿಭೀಷಣ ಲಂಕೆಯ ಅರಸನಾಗುತ್ತಾನೆ. ಮಹಾಭಾರತದಲ್ಲಿ, ರಾಜಸೂಯ ಯಾಗ ಮಾಡಲೆಂದು ಧರ್ಮರಾಯ ಹೊರಟಾಗ, ದಕ್ಷಿಣ ದಿಕ್ಕಿಗೆ ಸೈನ್ಯ ತೆಗೆದುಕೊಂಡು ಸಹದೇವ ಹೋಗಿರುತ್ತಾನೆ. ಆಗ ಲಂಕೆಗೂ ಕಪ್ಪ ಕಾಣಿಕೆ ಸಂಗ್ರಹಿಸಲು ಜನ ಕಳುಹಿಸುತ್ತಾನೆ. ಯಾವುದೇ ಸಂಘರ್ಷವಿಲ್ಲದೆ ಕಪ್ಪಕಾಣಿಕೆ ನೀಡಿ ಕಳಿಸುತ್ತಾನೆ ವಿಭೀಷಣ. ನಂತರ ಧರ್ಮರಾಯನ ಯಾಗಮಂಟಪಕ್ಕೂ ಬರುತ್ತಾನೆ. ತಾನು ರಾಮನನ್ನು ಹೊರತುಪಡಿಸಿ ಯಾವ ಮನುಷ್ಯನ ಕಾಲಿಗೂ ಮಣಿಯುವುದಿಲ್ಲ ಎನ್ನುತ್ತಾನೆ. ಆದರೆ ಶ್ರೀಕೃಷ್ಣನೇ ಧರ್ಮರಾಯನ ಕಾಲಿಗೆ ಮಣಿದದ್ದನ್ನು ಕಂಡು, ತಾನೂ ನಮಸ್ಕರಿಸುತ್ತಾನೆ.  

Shiva Karma: ಸಂತೋಷವಾಗಿರಲು ಶಿವ ಹೇಳಿದ ನಿಯಮಗಳಿವು..

ಪರಶುರಾಮ (Parashurama)
ಪರಶುರಾಮರು ಜಮದಗ್ನಿಯ ಮಗ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ, ದುಷ್ಟ ಕ್ಷತ್ರಿಯರ ತಲೆ ಕಡಿದರು. ಶಿವನು ಕೊಟ್ಟಿದ್ದ ಧನುಸ್ಸನ್ನು ಶ್ರೀ ರಾಮಚಂದ್ರನೆಂಬ ಅಯೋಧ್ಯೆಯ ಕ್ಷತ್ರಿಯ ಮುರಿದ ಸುದ್ದಿ ಕೇಳಿ, ಅವನ ಮೇಲಿನ ಸಿಟ್ಟಿನಿಂದ ರಾಮನಿಗೆ ಎದುರಾಗಿ ಬರುತ್ತಾರೆ. ಆದರೆ ರಾಮ ಅವರನ್ನು ಸುಲಭವಾಗಿ ಮಣಿಸುತ್ತಾನೆ. ಅವನೇ ವಿಷ್ಣುವಿನ ಅವತಾರ ಎಂಬುದು ಪರಶುರಾಮರಿಗೆ ತಿಳಿಯುತ್ತದೆ. ಮುಂದೆ ಮಹಾಭಾರತ ಕಾಲದಲ್ಲಿ ಭೀಷ್ಮ, ದ್ರೋಣ, ಕರ್ಣರಿಗೆ ಅವರು ಗುರುವಾಗಿರುತ್ತಾರೆ. ಅಂಬೆಯ ಪ್ರಕರಣದಲ್ಲಿ ಭೀಷ್ಮನನ್ನು ಶಿಕ್ಷಿಸಲು ಬಂದು ಸೋಲುತ್ತಾರೆ. ಕೃಷ್ಣಸಂಧಾನದ ಸಂದರ್ಭದಲ್ಲಿ ಹಾಜರಿರುತ್ತಾರೆ.      

ದುರ್ವಾಸ ಮುನಿ (Durvasa)
ದುರ್ವಾಸ ಮುನಿಗಳು ರಾಮಾಯಣದ ಕೊನೆಯಲ್ಲಿ, ಶ್ರೀರಾಮನ ನಿರ್ಯಾಣದ ಹಂತದಲ್ಲಿ ಕಾಣಿಸಿಕೊಳ್ಳುತ್ತಾರೆ. ಶ್ರೀರಾಮನು ಕಾಲಪುರುಷನ ಇಚ್ಛೆಯಂತೆ ಭೂಮಿ ತೊರೆದುಹೋಗಲು ಸಹಾಯಕರಾಗುತ್ತಾರೆ. ನಂತರ ದ್ವಾಪರಯುಗದಲ್ಲಿ, ಕುಂತಿಗೆ ದೇವಪುರುಷರಿಂದ ಸಂತಾನಪ್ರಾಪ್ತಿಯ ಐದು ಮಂತ್ರಗಳನ್ನು ನೀಡುತ್ತಾರೆ. ಮುಂದೆ ದುರ್ಯೋಧನನ ದುಷ್ಪ್ರೇರಣೆಯಂತೆ ಪಾಂಡವರು ಕಾಡಿನಲ್ಲಿದ್ದಾಗ ಬಂದು, ಶ್ರೀಕೃಷ್ಣನ ಕೃಪೆಯಿಂದ ಊಟ ಮಾಡಿದಂತೆ ಸಂತೃಪ್ತರಾಗಿ ಹೋಗುತ್ತಾರೆ. 

ಮೈಂದ- ದ್ವಿವಿಧರು
ಇವರು ಅಶ್ವಿನಿ ದೇವತೆಗಳಿಂದ ಜನಿಸಿದ ಇಬ್ಬರು ಕಪಿವೀರರು. ಕಿಷ್ಕಿಂಧೆಯಲ್ಲಿದ್ದರು. ರಾಮಾಯಣದಲ್ಲಿ ಶ್ರೀರಾಮನಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅಶ್ವಿನಿ ದೇವತೆಗಳಿಂದ ಪಡೆದ ಚಿರಯವ್ವನ ಇವರದು. ದ್ವಾಪರದಲ್ಲಿ, ರಾಮನೆಂಬ ಹೆಸರಿನ ಇನ್ನೊಬ್ಬನಿದ್ದಾನೆ (ಬಲರಾಮ) ಎಂಬುದನ್ನು ಕೇಳಿ, ಅವನೇ ರಾಮನಿರಬಹುದಾ ಎಂಬ ಕುತೂಹಲದಲ್ಲಿ ದ್ವಾಪರಕ್ಕೆ ಬರುತ್ತಾರೆ. ಶ್ರೀಕೃಷ್ಣನು ಚತುರತೆಯಿಂದ ಅವರನ್ನು ಬಲರಾಮ, ಗರುಡರ ಗರ್ವಭಂಗ ಮಾಡಲು ಬಳಸಿಕೊಳ್ಳುತ್ತಾನೆ. 

Vastu tips: ನೆಗೆಟಿವಿಟಿ ದೂರಮಾಡೋಕೆ ಇಲ್ಲಿದೆ ಸಿಂಪಲ್ ಸೂತ್ರ...

ಅಗಸ್ತ್ಯ ಮುನಿ (Agasthya)
ಅಗಸ್ತ್ಯರು ಶ್ರೀರಾಮನಿಗೆ (Sri Rama) ರಾವಣನ (Ravana) ಜೊತೆ ಯುದ್ಧ ನಡೆದಾಗ, ಯುದ್ಧಕಣಕ್ಕೆ ಬಂದು ಆದಿತ್ಯಕವಚ ಮಂತ್ರವನ್ನು ಉಪದೇಶಿಸಿ ಅವನು ಮೃತ್ಯುಂಜಯನಾಗುವಂತೆ ನೋಡಿಕೊಳ್ಳುತ್ತಾರೆ. ಮಹಾಭಾರತದಲ್ಲೂ ಅವರು ಪಾಂಡವರ ಅರಣ್ಯವಾಸದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಲ್ಲದೆ ಶಿವ, ದೇವೇಂದ್ರ, ಕುಬೇರ ಮುಂತಾದ ದೇವತೆಗಳು ಹಾಗೂ ಹಲವಾರು ಋಷಿಮುನಿಗಳು ಸದಾಕಾಲವೂ ಇರುವುದರಿಂದ, ಅವರೂ ಕಾಣಿಸಿಕೊಳ್ಳುತ್ತಾರೆ.    

 

Latest Videos
Follow Us:
Download App:
  • android
  • ios