ಒಂದು ಸಾವಿರ ಜನ ಸೇರುವ ಕಾರ್ಯಕ್ರಮದಲ್ಲೇ ನೂಕು ನುಗ್ಗಲು ಆಗುವ ಸಾಧ್ಯತೆಗಳಿರುತ್ತದೆ. ಅವ್ಯವಸ್ಥೆಯ ಬಗ್ಗೆ ದೂಷಿಸುವ ಮಾತುಗಳು ಸಾಮಾನ್ಯ. ಕುಂಭಮೇಳ ಸ್ವಾಗತಿಸಿದ್ದು 64 ಕೋಟಿ ಭಕ್ತ ಸಾಗರವನ್ನು. ಎಲ್ಲಿಯೂ ಪಾವಿತ್ರ್ಯತೆಗೆ ಧಕ್ಕೆಯಾಗದ ಹಾಗೆ ಅತಿದೊಡ್ಡ ಧಾರ್ಮಿಕ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ನವ್ಯಶ್ರೀ ಶೆಟ್ಟಿ

ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಭೆಗೆ ಇಂದು ತೆರೆ ಬೀಳಲಿದೆ. ದೇಶದ ಸಾಂಸ್ಕೃತಿಕ, ಧಾರ್ಮಿಕ ರಾಜಧಾನಿ ಅಂತಲೇ ಬಿಂಬಿತವಾಗಿರುವ ಉತ್ತರ ಪ್ರದೇಶದಲ್ಲಿ 45 ದಿನಗಳ ಕಾಲ ಹಬ್ಬದ ವಾತಾವರಣ ತುಂಬಿತ್ತು. ಕಣ್ಣು ಹಾಯಿಸಿದ ದೂರಕ್ಕೂ ಕಾಣ ಸಿಗುತ್ತಿದ್ದ ಜನರು, ಎತ್ತ ನೋಡಿದರೂ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಭಕ್ತಿ ಭಾವ ಮೆರೆಯುತ್ತಿದ್ದ ಭಕ್ತರು. ಒಟ್ಟಿನಲ್ಲಿ ಕುಂಭಮೇಳದಲ್ಲಿ ಭಕ್ತ ಸಾಗರವೇ ನೆರೆದಿತ್ತು. ಮಾತ್ರವಲ್ಲದೇ ಕುಂಭ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಈ ಕುರಿತಾದ ಮಾಹಿತಿ ಇಲ್ಲಿದೆ.

15 ಲಕ್ಷ ವಿದೇಶಿಗರಿಂದ ಪುಣ್ಯ ಸ್ನಾನ: ಕುಂಭಮೇಳವು ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಒಂದೆಡೆ ಸೇರುವ ಧಾರ್ಮಿಕ ಉತ್ಸವ. ಭಾರತೀಯರು ಮಾತ್ರವಲ್ಲ, ವಿದೇಶಿಗರು ಸಹ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಿದ್ದಾರೆ. ಮೂಲಗಳ ಪ್ರಕಾರ 15 ಲಕ್ಷಕ್ಕೂ ಹೆಚ್ಚು ವಿದೇಶಿಗರು ಸಂಗಮ ಸ್ನಾನ ಮಾಡಿ ಪುನೀತರಾಗಿದ್ದಾರೆ. ಒಂದು ಸಾವಿರ ಜನ ಸೇರುವ ಕಾರ್ಯಕ್ರಮದಲ್ಲೇ ನೂಕು ನುಗ್ಗಲು ಆಗುವ ಸಾಧ್ಯತೆಗಳಿರುತ್ತದೆ. ಅವ್ಯವಸ್ಥೆಯ ಬಗ್ಗೆ ದೂಷಿಸುವ ಮಾತುಗಳು ಸಾಮಾನ್ಯ. ಅಂತಹದ್ದರಲ್ಲಿ ಭಾಷೆ, ಗಡಿ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳ ಹಂಗಿಲ್ಲದೇ ಕೋಟ್ಯಂತರ ಭಕ್ತರು ಒಂದೆಡೆ ಸೇರಿದರೆ ಅಲ್ಲಿ ಎಷ್ಟು ಅಚ್ಚುಕಟ್ಟುತನ, ಎಚ್ಚರವಿದ್ದರೂ ಸಾಲದು. ಕಾಲ್ತುಳಿತದ ಕಹಿ ಘಟನೆಯೊಂದನ್ನು ಹೊರತು ಪಡಿಸಿದರೆ ಉತ್ತರ ಪ್ರದೇಶ ಸರ್ಕಾರ ಅದರಲ್ಲಿ ಯಶಸ್ಸು ಕಂಡಿದ್ದೂ ಸುಳ್ಳಲ್ಲ.

ಕಾವಿ ತೊಟ್ಟ ಅಕ್ಷಯ್, ಹಾರ ಹಾಕಿಸಿಕೊಂಡ ಕತ್ರಿನಾ: ತ್ರಿವೇಣಿ ಸಂಗಮದಲ್ಲಿ ತಾರೆಯರ ಪುಣ್ಯಸ್ನಾನ- ವಿಡಿಯೋ ವೈರಲ್

ನಿರೀಕ್ಷಿಸಿದ್ದು 45 ಕೋಟಿ, ಬಂದಿದ್ದು 64 ಕೋಟಿ: 45 ದಿನಗಳ ಕಾಲ ನಡೆಯುವ ಕುಂಭಮೇಳದಲ್ಲಿ ಸುಮಾರು 40 - 45ಕೋಟಿ ಭಕ್ತರು ಆಗಮಿಸಬಹುದು ಎನ್ನುವ ಲೆಕ್ಕಾಚಾರವನ್ನು ಉತ್ತರ ಪ್ರದೇಶ ಸರ್ಕಾರ ಹಾಕಿಕೊಂಡಿತ್ತು. ನಿರೀಕ್ಷೆಗಿಂತ ಶೇ.3ರಷ್ಟು ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ ಆ ಎಲ್ಲ ಲೆಕ್ಕಾಚಾರವನ್ನೇ ತಲೆ ಕಳೆಗೆ ಮಾಡಿತ್ತು ಹರಿದು ಬಂದ ಜನಸಾಗರ . ಹೌದು ಕುಂಭಮೇಳಕ್ಕೆ ಬರೋಬ್ಬರಿ 64 ಕೋಟಿಗೂ ಭಕ್ತರು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ನೆರವೇರಿಸಿದ್ದರು ಎಂದು ಅಂಕಿ ಅಂಶಗಳು ಹೇಳುತ್ತವೆ. ಮಾತ್ರವಲ್ಲದೇ ಈ ಬಗ್ಗೆ ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಸ್ಪಷ್ಟ ಪಡಿಸಿದ್ದರು. ಇದು ಐತಿಹಾಸಿಕ ದಾಖಲೆ ಎಂದಿದ್ದರು. ಜೊತೆಗೆ ದೇಶದಲ್ಲಿರುವ ಅರ್ಧದಷ್ಟು ಸನಾತನಿ ಕುಂಭಮೇಳಕ್ಕೆ ಆಗಮಿಸಿದ್ದಾರೆ ಎಂದಿದ್ದಾರೆ. ಇದುವರೆಗಿನ ಕುಂಭದಲ್ಲಿ ಈ ಪ್ರಮಾಣದಲ್ಲಿ ಜನ ಸೇರಿದ್ದು ಇದೇ ಮೊದಲು.

7000 ಕೋಟಿ ವೆಚ್ಚ ಕಳೆದ ಬಾರಿಗಿಂತ 2 ಪಟ್ಟು ಅಧಿಕ (2 ಕುಂಭ): ಮಹಾಕುಂಭಮೇಳಕ್ಕಾಗಿ ಮಹಾಕುಂಭನಗರ ಎನ್ನುವ ತಾತ್ಕಾಲಿಕ ನಗರವನ್ನೇ ಮಾಡಲಾಗಿದೆ. 2019ರಲ್ಲಿಯೂ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆದಿತ್ತು. ಆದರೆ ಬಾರಿ ನಡೆದಿರುವುದು 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ. ಕಳೆದ ಸಲ 7900 ಎಕರೆ ಜಾಗದಲ್ಲಿ ಕುಂಭಮೇಳ ಆಯೋಜಿಸಲಾಗಿತ್ತು. ಆದರೆ ಈ ಸಲ ಅದನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಸುಮಾರು 10 ಸಾವಿರ ಎಕರೆ ವಿಸ್ತೀರ್ಣ ಜಾಗದಲ್ಲಿ ಉತ್ಸವ ಆಯೋಜಿಸಲಾಗಿದೆ.. ಕಳೆದ ಬಾರಿ 3500 ಕೋಟಿ ರು. ವೆಚ್ಚದಲ್ಲಿ ಕುಂಭಮೇಳ ನಡೆದಿತ್ತು. ಆದರೆ ಈ ಸಲ ಅದಕ್ಕೂ ದುಪ್ಪಟ್ಟು ಹಣ ಖರ್ಚಾಗಿದೆ. ಸುಮಾರು 7000 ಕೋ.ರು.ಬಳಸಲಾಗಿದೆ. 2019ರಲ್ಲಿ ಘಾಟ್‌ಗಳ ಉದ್ದ 8 ಕಿ.ಮೀ. ಈ ಬಾರಿ ಅದನ್ನು 12 ಕಿ.ಮೀಗೆ ಹೆಚ್ಚಿಸಲಾಗಿದೆ.

ಕೆನಡಾದ ಜನಸಂಖ್ಯೆಗಿಂತ 15 ಪಟ್ಟು ಅಧಿಕ: ಆಗಲೇ ಹೇಳಿದಂತೆ ಸಂಗಮದಲ್ಲಿ 64 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದರು. ಇದು ಅಮೆರಿಕ, ಕೆನಡಾ ಜನಸಂಖ್ಯೆಗಿಂತಲೇ ಅಧಿಕ. ಅಮೆರಿಕ 34 ಕೋಟಿ ಜನಸಂಖ್ಯೆ ಹೊಂದಿದ್ದರೆ , ಕೆನಡಾ 4 ಕೋಟಿ ಜನಸಂಖ್ಯೆ ಹೊಂದಿದೆ. ಮಾತ್ರವಲ್ಲದೇ ನ್ಯೂಜಿಲ್ಯಾಂಡ್‌ಗಿಂತ 12 ಪಟ್ಟು, ಆಸ್ಟ್ರೇಲಿಯಾಗಿಂತ 7 ಪಟ್ಟು, ಜಪಾನ್‌ಗಿಂತ 6 ಪಟ್ಟು, ಬ್ರಿಟನ್‌ಗಿಂತ 8 ಪಟ್ಟು, ರಷ್ಯಾಗಿಂತ ಸುಮಾರು 5 ಪಟ್ಟು ಹೆಚ್ಚಿನ ಜನರು ಕುಂಭಕ್ಕೆ ಆಗಮಿಸಿದ್ದಾರೆ. ಒಂದು ದೇಶದ ಜನಸಂಖ್ಯೆಗಿಂತ ಹಲವು ಪಟ್ಟು ಭಕ್ತರು ಒಂದೆಡೆ ಸೇರಿದ್ದು ವಿಶೇಷ.

14 ಸಾವಿರಕ್ಕೂ ಹೆಚ್ಚು ರೈಲುಗಳ ಸಂಚಾರ: ಕುಂಭಮೇಳದ ಸಂಚಾರಕ್ಕಾಗಿ 14 ಸಾವಿರಕ್ಕೂ ಹೆಚ್ಚು ರೈಲುಗಳು ಉತ್ತರ ಪ್ರದೇಶದಿಂದ ಕಾರ್ಯನಿರ್ವಹಿಸಿವೆ. ಕುಂಭ ಪ್ರದೇಶದಲ್ಲಿ 3.6 ಕೋಟಿ ಭಕ್ತರು ಪ್ರಯೋಜನ ಪಡೆದುಕೊಂಡಿದ್ದಾರೆ. ಶೇ. 92ರಷ್ಟು ರೈಲುಗಳು ಮೇಲ್‌, ಎಕ್ಸ್‌ಪ್ರೆಸ್‌, ಸೂಪರ್‌ಫಾಸ್ಟ್‌, ಪ್ಯಾಸೆಂಜರ್‌ ಮತ್ತು ಮೆಮು ಸೇವೆಗಳಾಗಿದ್ದು, 472 ರಾಜಧಾನಿ, 282 ವಂದೇ ಭಾರತ್‌ ರೈಲುಗಳು ಸಂಚರಿಸಿವೆ. ಒಟ್ಟಾರೆ 12- 15 ಕೋಟಿ ಭಕ್ತರು ರೈಲಿನಲ್ಲಿ ಸಂಚರಿಸಿದ್ದಾರೆ.

ಬಿಎಂಟಿಸಿ ಪ್ರಯಾಣಿಕರಿಗಿಂತ 6 ಪಟ್ಟು ಅಧಿಕ ಜನರಿಂದ ಸ್ನಾನ: ಬೆಂಗಳೂರಿನ ಸಂಚಾರ ಜೀವನಾಡಿ ಬಿಎಂಟಿಸಿಯಲ್ಲಿ ನಿತ್ಯ ಸರಿ ಸುಮಾರು 38 ಲಕ್ಷ ಪ್ರಯಾಣಿಕರು ಓಡಾಟ ನಡೆಸುತ್ತಾರೆ. ಅದನ್ನು ನೀವು 45 ದಿನಗಳ ಲೆಕ್ಕಾಚಾರ ಹಾಕಿದರೆ ಸುಮಾರು 17 ಕೋಟಿ ಜನರು ಸಂಚಾರ ನಡೆಸಿದಂತಾಗುತ್ತದೆ. ವ್ಯಾಟಿಕನ್, ಮೊನಾಕೊ, ನೌರಾ, ತುವಾಲು ದಂತಹ ದ್ವೀಪ ರಾಷ್ಟ್ರಗಳ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಸಿದ್ಧಗೊಂಡ ಕುಂಭನಗರದಲ್ಲಿ ಭಕ್ತರ ಸಂಖ್ಯೆ ಐಟಿ ಸಿಟಿಯಲ್ಲಿ ಓಡಾಟ ನಡೆಸುವ ಪ್ರಯಾಣಿಕರ ಸಂಖ್ಯೆಗಿಂತ ಸರಿ ಸುಮಾರು 6 ಪಟ್ಟು ಅಧಿಕ.

ಕಾಶಿ, ಅಯೋಧ್ಯೆಗೆ ಜನ ಸಾಗರ: ರಾಮ ಮಂದಿರ ಉದ್ಘಾಟನೆ ಬಳಿಕ ಉತ್ತರ ಪ್ರದೇಶದ ಪ್ರವಾಸೋದ್ಯಮಕ್ಕೆ ಬೂಸ್ಟರ್‌ ಡೋಸ್‌ ಸಿಕ್ಕಂತಾಗಿತ್ತು. ಕುಂಭಮೇಳದಿಂದ ಮತ್ತಷ್ಟು ವೇಗ ಪಡೆಯಿತು. ಕುಂಭಮೇಳ ಕಣ್ತುಂಬಿಕೊಳ್ಳಲು ಬರುವವರು ರಾಜ್ಯದ ಇತರ ಧಾರ್ಮಿಕ, ಪ್ರವಾಸಿ ಕೇಂದ್ರಗಳಿಗೂ ಭೇಟಿ ಪ್ರಾರಂಭಿಸಿದರು. ಪರಿಣಾಮ ಅಯೋಧ್ಯೆ, ವಾರಣಾಸಿ, ಕಾಶಿ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟಾಯಿತು. ಅದಕ್ಕೆ ಸಾಕ್ಷಿ ಎನ್ನುವಂತೆ ಗಣರಾಜ್ಯೋತ್ಸವದ ಒಂದೇ ದಿನ 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದರು.

ಆರ್ಥಿಕ ಅಭಿವೃದ್ಧಿಗೆ ಸಾಕ್ಷಿ: ಕುಂಭಮೇಳ ಆರ್ಥಿಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಹಲವು ವ್ಯಾಪಾರಿಗಳ ಬದುಕು ಹಸನಾಗಿದೆ. ಉತ್ತರ ಪ್ರದೇಶಕ್ಕೂ ನವ ರೂಪ ಬಂದಿದೆ. ಸಾರಿಗೆಯ ಜೊತೆಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಭಕ್ತರ ಕೃಪೆಯಿಂದ ಊಟ, ವಸತಿ, ಸಾರಿಗೆಯ ಭಾಗವಾಗಿ ಅನೇಕರು ಉದ್ಯೋಗ ಕಂಡುಕೊಂಡಿದ್ದಾರೆ. ಕ್ಯಾಬ್ ಚಾಲಕರು, ಪೂಜಾ ಸಾಮಾಗ್ರಿಗಳ ಮಾರಾಟ ಮಳಿಗೆಯವರು, ಸ್ಮರಣಿಕೆಗಳನ್ನು ಮಾಡುವವರು ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಮಾತ್ರವಲ್ಲದೇ ಬೈಕ್‌ಗಳು ಕೂಡ ಸಂಚಾರ ಜೀವನಾಡಿಯಾಗಿತ್ತು. ಭಕ್ತರನ್ನು ಬೈಕ್‌ನಲ್ಲಿ ಕುಂಭಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ಯುವಕರು ಪ್ರತಿ ಸವಾರಿಗೆ 100 ರಿಂದ 1000ರು. ಸೇವಾ ಶುಲ್ಕ ವಿಧಿಸಿ ನಿತ್ಯ 5 ಸಾವಿರದವರೆಗೆ ಆದಾಯ ಗಳಿಸುತ್ತಿದ್ದರು.

ಭಕ್ತರ ಪಾಲಿಗೆ ಭಾರಿ ದುಬಾರಿ!: ರೈಲು ಸಂಚಾರದ ನಡುವೆಯೂ ಕೆಲವರು ಸಮಯದ ಉಳಿತಾಯಕ್ಕೆ ವಿಮಾನಗಳ ಮೊರೆ ಹೋಗಿದ್ದಾರೆ. ಹೀಗೆ ಹೋದವರಿಗೆ ವಿಮಾನದ ದರ ಬಿಸಿ ಮುಟ್ಟಿಸಿದೆ. ವಸತಿ ಶುಲ್ಕವೂ ಗಗನಕ್ಕೇರಿತ್ತು. ವಿಮಾನ ಪ್ರಯಾಣ ದರ ಹಾಗೂ ವಸತಿ ಶುಲ್ಕ ಶೇ.50ರಿಂದ 300ರಷ್ಟು ದುಬಾರಿ ಆಗಿದೆ ಎಂದು ಅಧ್ಯಯನವೊಂದು ಹೇಳಿದೆ. ಶೇ.25ರಷ್ಟು ಮಂದಿ ವಿಮಾನಕ್ಕೆ ಮಾಮುಲಿ ದರಕ್ಕಿಂದ ಶೇ.300ಕ್ಕೂ ಅಧಿಕ ಪಾವತಿಸಿದ್ದಾರೆ ಲಾಡ್ಜ್‌, ಹೋಟೆಲ್‌, ಟೆಂಟ್‌ಗಳಲ್ಲಿ ಶೇ.67ರಷ್ಟು ಜನ ಮಾಮೂಲಿಗಿಂತ ಶೇ.50ರಿಂದ 300ರಷ್ಟು ಅಧಿಕ ಹಣ ಪಾವತಿಸಿದ್ದಾರೆ. ಸ್ಥಳೀಯವಾಗಿ ಸಂಚರಿಸಲು ಹಾಗೂ ದೋಣಿಯಲ್ಲಿ ವಿಹರಿಸಲು ಶೇ.66ರಷ್ಟು ಜನ ಶೇ.50ರಿಂದ 300ರಷ್ಟು ಅಧಿಕ ಪಾವತಿಸಿದ್ದಾರೆ.

7 ಸಾವಿರ ಮಹಿಳೆಯರ ಸನ್ಯಾಸತ್ವ: ಭಕ್ತಿಯೇ ತುಂಬಿ ತುಳುಕುತ್ತಿದ್ದ ಕುಂಭಮೇಳದಲ್ಲಿ ತ್ರಿವೇಣಿ ಸಂಗಮ ಸ್ನಾನ ಅದೆಷ್ಟು ಸೊಗಸೋ ಅಷ್ಟೇ ಚೆಂದ ನಾಗಸಾಧುಗಳು ಮತ್ತು ಸನ್ಯಾಸಿಗಳನ್ನು ಕಣ್ತುಂಬಿಕೊಳ್ಳುವುದು. 13ಕ್ಕೂ ಹೆಚ್ಚು ಅಖಾಡಗಳು ಕುಂಭಮೇಳದಲ್ಲಿ ಆಗಮಿಸಿದ್ದವು.ಜಾತಿ, ಗಡಿ, ಅಂತಸ್ತಿನ ಬೇಧವಿಲ್ಲದೇ ಕೇವಲ ಭಕ್ತಿಯ ಆರಾಧನೆಯೊಂದೇ ಮಾನದಂಡವಾಗಿದ್ದ ಮಹಾ ಉತ್ಸವದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಮಹಿಳೆಯರು ಸನ್ಯಾಸ ದೀಕ್ಷೆ ಪಡೆದಿದ್ದು ವಿಶೇಷ. ಈ ಪೈಕಿ ಬಹುತೇಕ ವಿದ್ಯಾವಂತರೇ ಎನ್ನುವುದು ಗಮನಿಸಬೇಕಾದ ಅಂಶ. ಪ್ರಮುಖ ಅಖಾಡಗಳಲ್ಲಿ ಗುರುದೀಕ್ಷೆ ಪಡೆದ ಮಹಿಳೆಯರು ಸನಾತನ ಧರ್ಮದ ರಕ್ಷಣೆ ಮಾಡುವ ಪ್ರತಿಜ್ಞೆ ತೊಟ್ಟಿದ್ದಾರೆ. ಮತ್ತೊಂದು ಅಂಕಿ ಅಂಶದ ಪ್ರಕಾರ ಕುಂಭಮೇಳಕ್ಕೆ ಬರುವ ಪ್ರತಿ 10 ಜನರ ಪೈಕಿ ನಾಲ್ವರು ಮಹಿಳೆಯರೇ .

ಪ್ರಯಾಗರಾಜ್ ಮಹಾಕುಂಭ ಮೇಳ ಕುರಿತು ವಿದೇಶಿಗರು ಏನು ಹೇಳುತ್ತಿದ್ದಾರೆ?

ಫೆ.28ರಂದು ಆಗಸದಲ್ಲಿ ಕಾಣಲಿದೆ ಕೌತುಕ: ಮಹಾಕುಂಭ ಮೇಳ ಫೆ.26ರ ಶಿವರಾತ್ರಿಯಂದು ಮುಕ್ತಾಯವಾಗಲಿದೆ. ಅದಾದ ಎರಡು ದಿನದಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. 7 ಗ್ರಹಗಳು ಒಟ್ಟಿಗೆ ಗೋಚರವಾಗಲಿದೆ ಶನಿ, ಬುಧ, ನೆಪ್ಚ್ಯೂನ್, ಶುಕ್ರ, ಯುರೇನೆಸ್, ಗುರು ಮತ್ತು ಮಂಗಳ ಎಲ್ಲವು ಒಂದೇ ಸಾಲಿನಲ್ಲಿ ಬಂದು ನಿಲ್ಲಲಿವೆ. ಈ ಹಿನ್ನೆಲೆಯಲ್ಲಿ ಮಹಾಕುಂಭಕ್ಕೆ ವೈಜ್ಞಾನಿಕತೆಯೂ ಜೋಡಿಸಿಕೊಂಡಿದ್ದು, ಜನರಲ್ಲಿ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಮಂಕಾಗಿರುವುದರಿಂದ ಬೈನಾಕ್ಯುಲರ್ ಅಗತ್ಯ.