Asianet Suvarna News Asianet Suvarna News

Paryaya mahotsava 2022: ಉಡುಪಿ ಪರ್ಯಾಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?

ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವ ನಡೆದಿದೆ. ವಿದ್ಯಾಸಾಗರ ಶ್ರೀಗಳು ಪೀಠಾರೋಹಣ ಮಾಡಿದ್ದಾರೆ. ಇಷ್ಟಕ್ಕೂ ಈ ಪರ್ಯಾಯ ಎಂದರೇನು? ಇದರ ಹಿಂದಿನ ಕತೆಯೇನು ಎಂಬುದು ಕೇಳಲು ಬಹಳ ಸ್ವಾರಸ್ಯಕರವಾಗಿದೆ. 

know about unique tradition of Udupi Paryaya skr
Author
Bangalore, First Published Jan 18, 2022, 10:35 AM IST

ಇಂದು ಉಡುಪಿ(Udupi)ಯ ಕೃಷ್ಣ ಮಠದಲ್ಲಿ ಪರ್ಯಾಯೋತ್ಸವ. ಕಳೆದೆರಡು ವರ್ಷಗಳಿಂದ ಅದಮಾರು ಮಠದ ಕೈಲಿದ್ದ ಮಠದ ಅಧಿಕಾರ ಕೃಷ್ಣಾಪುರ ಮಠಕ್ಕೆ ಹಸ್ತಾಂತರವಾಗಿದೆ. ವಿದ್ಯಾಸಾಗರ ಶ್ರೀಗಳು ಪೀಠಾರೋಹಣ ಮಾಡಿದ್ದಾರೆ. ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಪರ್ಯಾಯ ಮಹೋತ್ಸವ ಜರುಗಿದೆ. ಇಷ್ಟಕ್ಕೂ ಈ ಪರ್ಯಾಯ ಮಹೋತ್ಸವ ಎಂದರೇನು? ಏನಿದರ ವಿಶೇಷ?

14ನೇ ಶತಮಾನದ ಆರಂಭದಲ್ಲಿ ದ್ವೈತ ತತ್ವ ಸಾಧಕರಾದ ಮಧ್ವಾಚಾರ್ಯ(Madhwacharya)ರು ಉಡುಪಿಯಲ್ಲಿ ಶ್ರೀ ಕೃಷ್ಣ ದೇವಾಲಯವನ್ನು ಕಟ್ಟಿಸಿದರು. ಅವರು ಮಲ್ಪೆಯ ತೀರದಲ್ಲಿ ಹಡಗೊಂದನ್ನು ರಕ್ಷಿಸಿದ್ದರ ಬದಲಾಗಿ ದ್ವಾರಕೆಯಲ್ಲಿ ಗೋಪಿಚಂದನದಿಂದ ಮಾಡಿದ ಎರಡು ಬಾಕ್ಸ್‌ಗಳನ್ನು ಪಡೆದರು. ಅದರಲ್ಲಿ ಕೃಷ್ಣ ಹಾಗೂ ಬಲರಾಮ(Balarama)ರ ವಿಗ್ರಹಗಳಿದ್ದವು. ಬಲರಾಮನ ವಿಗ್ರಹವನ್ನು ಮಲ್ಪೆ ಬಳಿ ಒಡಂಬಡೇಶ್ವರದಲ್ಲಿ ಪ್ರತಿಷ್ಠಾಪಿಸಿದರೆ, ಕೃಷ್ಣ(Krishna)ನನ್ನು ಉಡುಪಿಗೆ ತಂದ ಮಧ್ವಾಚಾರ್ಯರು ಅದನ್ನು ಮಧ್ವ ಸರೋವರದಲ್ಲಿ ತೊಳೆದು ಈಗಿರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿ ದೇವಾಲಯ ಕಟ್ಟಿಸಿದರು. ನಂತರ ಈ ಮೂರ್ತಿಯ ಪೂಜೆಗಾಗಿ ವಿಶೇಷ ಆಚರಣೆ ಹುಟ್ಟುಹಾಕಿ ತಾವು ಬದ್ರಿಕಾಶ್ರಮಕ್ಕೆ ಹೋಗಿ ನೆಲೆಸಿದರು. 

ಅಷ್ಟ ಮಠಗಳು(mathas)
ಮಧ್ವರು 8 ಬಾಲ ಯತಿಗಳಿಗೆ ಸನ್ಯಾಸ ದೀಕ್ಷೆ ನೀಡಿ ಅವರನ್ನು ಕೃಷ್ಣಪೂಜೆಯ ಹೊಣೆಗಾರರನ್ನಾಗಿ ಮಾಡಿದರು. ಪ್ರತಿಯೊಬ್ಬ ಯತಿಯು 2 ತಿಂಗಳ ಕಾಲ ಕೃಷ್ಣನ ಪೂಜೆ ಮಾಡಬೇಕು. ಆಗ 16 ತಿಂಗಳ ಬಳಿಕ ಮತ್ತೆ ಮೊದಲಿನವರಿಗೆ ಪೂಜೆಯ ಅಧಿಕಾರ ಕೈಗೆ ಬರುವುದು ಎಂದು ನಿಯಮ ರೂಪಿಸಿದರು. 200 ವರ್ಷಗಳ ಕಾಲ ಇದು ಹೀಗೆಯೇ ನಡೆಯಿತು. ಎಂಟು ಯತಿಗಳು ತಮ್ಮದೇ ಆದ 8 ಮಠಗಳನ್ನು ಸ್ಥಳೀಯ ರಾಜರ ಸಹಾಯದಿಂದ ಕಟ್ಟಿಸಿಕೊಂಡರು. ಮಠವಿದ್ದ ಊರಿನ ಹೆಸರಲ್ಲಿ ಈ ಮಠಗಳ ಹೆಸರು ಮನೆಮಾತಾಯಿತು. ಅವೆಂದರೆ ಪಲಿಮಾರು ಮಠ, ಅದಮಾರು ಮಠ, ಕೃಷ್ಣಾಪುರ ಮಠ, ಪುತ್ತಿಗೆ ಮಠ, ಶಿರೂರು ಮಠ, ಸೋದೆ ಮಠ, ಕಣಿಯೂರು ಮಠ, ಪೇಜಾವರ ಮಠ. 

Successful Zodiacs: ಈ ನಾಲ್ಕು ರಾಶಿಯವರು ಹುಟ್ಟಿರೋದೇ ಯಶಸ್ಸು ಕಾಣೋಕೆ!

ಪರ್ಯಾಯ(Paryaya)
1522-23ರಲ್ಲಿ ಸೋದೆ ಮಠಕ್ಕೆ ಸೇರಿದ ವಾದಿರಾಜ ತೀರ್ಥ(Vadiraja Tirtha)ರು ಈ ಮಠದ ಪೂಜಾ ವಿಧಾನಕ್ಕೆ ಬದಲಾವಣೆ ತರುವ ಬಗ್ಗೆ ಯೋಚಿಸಿದರು. ಎರಡು ತಿಂಗಳ ಪೂಜೆಯ ಅಧಿಕಾರದಲ್ಲಿ ವರ್ಷದ ಎಲ್ಲ ಹಬ್ಬಗಳು ಎಲ್ಲ ಯತಿಗಳಿಗೆ ಸಿಗುತ್ತಿರಲಿಲ್ಲ, ತೀರ್ಥಯಾತ್ರೆಗೆ ಹೋದರೆ ಬೇಗ ಹಿಂದಿರುಗಬೇಕಾಗುತ್ತಿತ್ತು. ಮಠದ ಅಷ್ಟೂ ಜವಾಬ್ದಾರಿಯನ್ನು ಎರಡು ತಿಂಗಳಲ್ಲಿ ಪೂರೈಸುವುದು ಕಷ್ಟವಾಗುತ್ತಿತ್ತು. ಹಾಗಾಗಿ, ವಾದಿರಾಜರು ಈ ಪೂಜಾ ಅಧಿಕಾರ ಹಸ್ತಾಂತರ ಸಮಯವನ್ನು 2 ವರ್ಷಗಳಿಗೇರಿಸಿದರು. ಈ ಹೊಸ ವ್ಯವಸ್ಥೆಯು ಪಲಿಮಾರು ಮಠದಿಂದ ಆರಂಭವಾಗಿ ಪೇಜಾವರ ಮಠಕ್ಕೆ ಬರುವಾಗ ಒಂದು ಸುತ್ತು ಪೂರೈಸುತ್ತದೆ. ಈ ವೃತ್ತ ಪುನರಾವರ್ತನೆಯಾಗುತ್ತಲೇ ಇದೆ. ಈ ಕೃಷ್ಣ ಪೂಜಾ ಅಧಿಕಾರ ಹಸ್ತಾಂತರವೇ ಪರ್ಯಾಯ ಮಹೋತ್ಸವ. ಇದು ಪ್ರತಿ ಬಾರಿಯೂ ಸಂಕ್ರಮಣದ ಬಳಿಕ ನಾಲ್ಕು ದಿನಗಳ ನಂತರವೇ ನಡೆಯುತ್ತದೆ. ಅಂದರೆ, ಸಾಮಾನ್ಯವಾಗಿ ಜನವರಿ 18 ಇಲ್ಲವೇ 19ರಂದೇ ಪರ್ಯಾಯ ಮಹೋತ್ಸವ ಜರುಗುತ್ತದೆ. 

Valentine Day : ಪ್ರೇಮಿಗಳ ದಿನದಂದು ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

ಇಲ್ಲಿ ಅಧಿಕಾರ ಹಸ್ತಾಂತರ ಎಂದರೆ ಕೇವಲ ಒಂದು ಕೀಲಿಕೈ ಹಸ್ತಾಂತರವಲ್ಲ, ಅದು ಕೃಷ್ಣನಿಗೆ ನಿತ್ಯ 14 ಪೂಜೆಗಳನ್ನು ಮಾಡುವ ಪರಮ ಕರ್ತವ್ಯದ ಹಸ್ತಾಂತರವೂ ಹೌದು. ಜೊತೆಗೆ, ಕೃಷ್ಣ ಮಠದ ಸಮಗ್ರ ಆಡಳಿತದ ಹಸ್ತಾಂತರವೂ ಹೌದು. ಮಠಕ್ಕೆ ನಿತ್ಯ ಆಗಮಿಸುವ ಹತ್ತಾರು ಸಾವಿರ ಭಕ್ತರಿಗೆ ಅನ್ನಪ್ರಸಾದ ವಿತರಣೆ, ಕೃಷ್ಣನ ರಥಬೀದಿಯಲ್ಲಿ ನಿತ್ಯವೂ ನಡೆಯುವ ನಡೆಯುವ ಉತ್ಸವಗಳು, ರಾಜಾಂಗಣದಲ್ಲಿ ಒಂದು ದಿನವೂ ಬಿಡದೇ ನಡೆಯುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸುವ ಮಹತ್ತರ ಹೊಣೆಯ ಹಸ್ತಾಂತರವೂ ಹೌದು.

ಸರ್ವಜ್ಞ ಪೀಠ(Sarvajna Peeta)
ಕೃಷ್ಣಮಠದಲ್ಲಿ ಒಂದು ಮರದ ಮಣೆ ಇದೆ. ಶ್ರೀ ಮಧ್ವಾಚಾರ್ಯರ ಸನ್ನಿಧಾನವಿರುವ ಅದನ್ನು ಸರ್ವಜ್ಞ ಪೀಠ ಎಂದು ಕರೆಯಲಾಗುತ್ತದೆ. ಕೃಷ್ಣನ ಪೂಜೆ ಮಾಡುವ ಮಠಾಧೀಶರಿಗಷ್ಟೇ ಅದು ಮೀಸಲು. ಪರ್ಯಾಯೋತ್ಸವದ ಮುಂಜಾನೆ ಕೃಷ್ಣನ ಪೂಜೆಗೆ ಆಗಮಿಸಿದ ನೂತನ ಮಠಾಧೀಶರ ಕೈ ಹಿಡಿದು, ನಿರ್ಗಮನ ಮಠಾಧೀಶರು ಈ ಸರ್ವಜ್ಞ ಪೀಠದ ಮೇಲೆ ಕುಳ್ಳಿರಿಸುತ್ತಾರೆ. ಅಲ್ಲಿಗೆ ಕೃಷ್ಣನ ಪೂಜೆಯ ಅಧಿಕಾರ ಪೀಠಾರೋಹಣಗೈದ ಮಠಾಧೀಶರಿಗೆ ಹಸ್ತಾಂತರವಾಗಿಬಿಡುತ್ತದೆ. ಪತ್ರ, ಸಹಿ, ದಾಖಲೆ ಇತ್ಯಾದಿ ಯಾವ ಜಂಜಾಟಗಳೂ ಇರುವುದಿಲ್ಲ. ಮಠದಲ್ಲಿ ಕೃಷ್ಣನ ಪೂಜೆಯನ್ನು ಮಠಾಧೀಶರೇ ನೆರವೇರಿಸುತ್ತಾರೆ ಹೊರತು ಅರ್ಚಕರ ನೇಮಕ ಮಾಡುವುದಿಲ್ಲ. 
 

Follow Us:
Download App:
  • android
  • ios