ಮನೆಯೊಳಗೆ ಹಾವು ಬಂದರೆ ಏನರ್ಥ? ನೀವೇನು ಮಾಡಬೇಕು?
ಕೆಲವೊಮ್ಮೆ ನಾಗ ಮನೆಯೊಳಗೆ ಕಾಣಿಸಿಕೊಂಡು ಮನೆ ಸದಸ್ಯರಿಗೆಲ್ಲ ಭಯ ಹುಟ್ಟಿಸುತ್ತದೆ. ಆದರೆ, ನಾಗರಹಾವು ಮನೆಗೆ ಬಂದರೆ ಏನು ಮಾಡಬೇಕು? ಅದೇಕೆ ಮನೆಗೆ ಬರುತ್ತದೆ? ಈ ಬಗ್ಗೆ ಸದ್ಗುರು ಏನಂತಾರೆ?
ಹಾವುಗಳು(Snakes) ಕಣ್ಣಿಗೆ ಕಂಡರೇ ಹೌಹಾರುವಂತಾಗುತ್ತದೆ. ಇದಕ್ಕೆ ಅವು ಕಚ್ಚುವ ಭಯ ಒಂದೆಡೆಯಾದರೆ, ಅವುಗಳ ಮೈ ಚರ್ಮವೇ ಭಯಾನಕವಾಗಿರುವುದು ಮತ್ತೊಂದು ಕಾರಣ. ಇಂಥ ಹಾವುಗಳನ್ನು ವಿಡಿಯೋದಲ್ಲಿ ನೋಡಿದರೂ ಹೆದರುವವರು ಸಾಕಷ್ಟಿದ್ದಾರೆ. ಅಂಥದರಲ್ಲಿ ಅವು ಮನೆಗೇ ಬಂದರೆ?! ಅದರಲ್ಲೂ ನಾಗರಹಾವು ಮನೆಗೆ ಬಂದರೆ ಭಯ(fear) ಬೀಳುತ್ತಾರೆ. ಇದೇನೋ ದೋಷದ ಸೂಚನೆಯೂ, ಬರಲಿರುವ ಅನಾಹುತದ ಸೂಚನೆಯೋ ಎಂದು ಗೊಂದಲವಾಗುತ್ತದೆ. ಮತ್ತೆ ಕೆಲವರು ಹಾವು ಮನೆಗೆ ಬರುವುದು ಶುಭ ಎಂದು ನಂಬುತ್ತಾರೆ.
ಹಾವುಗಳಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನವಿದೆ. ಅವು ಎಲ್ಲೆಡೆ ಪೂಜಿಸಲ್ಪಡುತ್ತವೆ. ಭಾರತದಲ್ಲಿನ ಹೆಚ್ಚಿನ ದೇವಾಲಯಗಳು(temples) ಯಾವಾಗಲೂ ಹಾವುಗಳ ಚಿತ್ರಣ ಮತ್ತು ಸಾಂಕೇತಿಕತೆಯನ್ನು ಹೊಂದಿರುತ್ತವೆ. ಏಕೆಂದರೆ ಅನಾದಿ ಕಾಲದಿಂದಲೂ ಜನರು ಹಾವುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದಾರೆ.
ರಾಹು ಕೇತು(Rahu ketu)ಗಳನ್ನು ಕೂಡಾ ಹಾವಿನ ತಲೆ ಮತ್ತು ದೇಹ ಎಂದು ಭಾವಿಸಲಾಗುತ್ತದೆ. ಸರ್ಪವನ್ನು ಕೊಂದರೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಸರ್ಪ ಸಂಸ್ಕಾರ ಮಾಡಲೇಬೇಕು, ಇಲ್ಲದಿದ್ದರೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ನಂಬಲಾಗುತ್ತದೆ. ಹಾವುಗಳು ಕನಸಿನಲ್ಲಿ ಕಂಡರೂ ಅವೇನೋ ಸೂಚನೆ ನೀಡುತ್ತಿವೆ ಎಂದು ಭಾವಿಸುವ ನಮಗೆ ಅವು ನೇರ ಮನೆಗೇ ಬಂದರೆ ಶುಭ ಶಕುನವೋ, ಅಪಶಕುನವೋ ತಿಳಿಯದೆ ಕಂಗಾಲಾಗುವಂತಾಗುತ್ತದೆ. ಇಷ್ಟಕ್ಕೂ ಹಾವುಗಳು ಮನೆಗೆ ಬಂದರೆ ಏನರ್ಥ ನೋಡೋಣ.
ಮರಣಾ ನಂತರ ಕೊಡುವ ಈ ದಶದಾನಗಳು ಪಿತೃದೋಷ ನಿವಾರಿಸುತ್ತವೆ!
ಹಾವು ಮನೆಗೆ ಬರೋದು ಅದೃಷ್ಟದ ಸಂಕೇತ
ಸಾಮಾನ್ಯವಾಗಿ ಹಾವು ಮನೆಗೆ ಬಂದರೆ ಮಂಗಳಕರ(Auspecious)ವಾಗಿರುತ್ತದೆ. ಕಪ್ಪು ಹಾವು ಮನೆಗೆ ಬಂದರೆ, ನೀವು ಯಶಸ್ಸನ್ನು ಪಡೆಯುತ್ತೀರಿ, ಬಯಕೆ ಈಡೇರಲಿದೆ ಎಂದು ಇದು ಸೂಚಿಸುತ್ತದೆ. ಅದೂ ಅಲ್ಲದೆ, ಸರ್ಪದೋಷವಿದ್ದಾಗ ಸಂತಾನ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗುತ್ತದೆ. ಹೀಗಾಗಿ, ಈ ಹಾವು ಮನೆಗೆ ಬಂದಾಗ ಅದು ಸಂತಾನ ಭಾಗ್ಯದ ಸೂಚನೆ ಎಂದೂ ತಿಳಿಯಲಾಗುತ್ತದೆ.
ಇನ್ನು ಬಿಳಿ ನಾಗರ ಮನೆಗೆ ಬಂದರೆ ಮನೆಯಲ್ಲಿ ಸಂಪತ್ತಿನ ಮಳೆಯಾಗುತ್ತದೆ ಎಂದು ಭಾವಿಸಲಾಗುತ್ತದೆ. ಹಾವಿನ ಮರಿ ಬಂದರೆ ಅದು ಅದೃಷ್ಟ ಖುಲಾಯಿಸುತ್ತಿರುವ, ದೊಡ್ಡ ಲಾಭದ ಸೂಚನೆ. ಹಸಿರು ಹಾವು ಬಂದರೆ, ಸಮಸ್ಯೆಗಳು ಮುಗಿವ ಕಾಲ ಎಂದು ಭಾವಿಸಬಹುದು.
ಸದ್ಗುರು ಏನಂತಾರೆ?
ಹಾವಿಗೆ ಸಿಕ್ಕಾಪಟ್ಟೆ ಗ್ರಹಣ ಶಕ್ತಿ ಇದೆ. ಶಿವ ನಾಗನಿಗೆ ಮಹತ್ವ ಕೊಟ್ಟಿದ್ದೇಕೆಂದರೆ ಸ್ಪಷ್ಟತೆಯಲ್ಲಿ ಈತ ತನಗಿಂತ ಮೇಲಿದ್ದಾನೆ ಎಂದು ಮೇಲಿಟ್ಟ. ಇಲ್ಲಿರುವ ನಾಗರಹಾವಿಗೆ ವಿದೇಶದಲ್ಲಿ ಆಗುವ ಭೂಕಂಪ ಕೂಡಾ ವಾರಕ್ಕೆ ಮುಂಚೆಯೇ ತಿಳಿಯುತ್ತದೆ. ಅಂಥಾ ಗ್ರಹಣ ಶಕ್ತಿ ಅದರದ್ದು. ಮನುಷ್ಯರಿದ್ದಾರೆ ಎಂದು ತಿಳಿದರೆ ಸಾಮಾನ್ಯವಾಗಿ ಅಲ್ಲಿ ಸುಳಿಯುವುದಿಲ್ಲ ಹಾವು. ಅದಕ್ಕೆ ದೂರದಿಂದಲೇ ಒಬ್ಬರ ಇರುವಿಕೆ ತಿಳಿಯುತ್ತದೆ. ಅಂಥದರಲ್ಲೂ ಅದು ಮನೆಗೆ ಬಂದಿದೆ, ಮತ್ತೆ ಮತ್ತೆ ಬರುತ್ತಿದೆ ಎಂದರೆ ಏನೋ ವಿಶೇಷವಿದೆ ಎಂದರ್ಥ ಎನ್ನುತ್ತಾರೆ ಸದ್ಗುರುಗಳು.
ಹಾಗಂಥ ನಗರಗಳಲ್ಲಿ ಜಾಗ ಸಿಗದೆ ಮನೆಗೆ ಹಾವು ಬಂದಿರುವುದನ್ನೆಲ್ಲ ಇದೇ ಲಾಜಿಕ್‌ನಲ್ಲಿ ಕಟ್ಟಿ ಹಾಕುವುದಕ್ಕಾಗುವುದಿಲ್ಲ. ಹಾವು ಮನೆಗೆ ಬಂದರೆ ನಿಮ್ಮ ಎಚ್ಚರಿಕೆಯಲ್ಲಿರಬೇಕೇ ಹೊರತು, ಅವಕ್ಕೆ ಯಾವುದೇ ಹಾನಿ ಮಾಡಕೂಡದು. ಹಾವುಗಳು ಸಾಮಾನ್ಯವಾಗಿ ನಾಚಿಕೆ ಸ್ವಭಾವದವು ಮತ್ತು ಪ್ರಚೋದಿಸದ ಹೊರತು ದಾಳಿ ಮಾಡುವುದಿಲ್ಲ. ಹೀಗಾಗಿ, ಅವು ಮನೆಗೆ ಬಂದಾಗ ಉರಗ ತಜ್ಞರನ್ನು ಕರೆಸಿ ಅವನ್ನು ಕಾಡಿನಲ್ಲಿ ಬಿಡುವುದು ಉತ್ತಮ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.