Story Behind Dashanana: ದಸರಾ ಹಬ್ಬದಂದು ರಾವಣನ ಪ್ರತಿಕೃತಿಯನ್ನು ದಹಿಸುವ ಸಂಪ್ರದಾಯವಿದೆ. ಆದರೆ, ರಾವಣನಿಗೆ ಹತ್ತು ತಲೆಗಳು ಹೇಗೆ ಬಂದವು ಎಂಬುದು ನಿಮಗೆ ಗೊತ್ತೇ? ಹತ್ತು ತಲೆಗಳ ಹಿಂದಿರುವ ರೋಚಕ ಪೌರಾಣಿಕ ಕಥೆಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.
ದಶಾನನ ರಾವಣನ ರೋಚಕ ಕಥೆ
ಲಂಕೆಯ ರಾಜ ರಾವಣನಿಗೆ ದಶಾನನ, ದಶಕಂಠ ಎಂಬ ಹೆಸರೂ ಇದೆ. ದಶಾನನ ಎಂದರೆ ಹತ್ತು ಮುಖಗಳನ್ನು ಹೊಂದಿರುವವನು ಎಂದರ್ಥ. ದಸರಾ ಸಂದರ್ಭದಲ್ಲಿ ರಾವಣನ ಹತ್ತು ತಲೆಗಳನ್ನು ಹೊಂದಿರುವ ಪ್ರತಿಕೃತಿಗಳನ್ನು ನೀವು ನೋಡಿರಬಹುದು. ಹಾಗಾದರೆ, ಒಬ್ಬ ವ್ಯಕ್ತಿಗೆ ಹತ್ತು ತಲೆಗಳು ಹೇಗೆ ಇರಲು ಸಾಧ್ಯ? ರಾವಣನಿಗೆ ಹುಟ್ಟಿನಿಂದಲೇ ಹತ್ತು ತಲೆಗಳು ಇರಲಿಲ್ಲ. ಅದಕ್ಕಾಗಿ ಅವನು ಕಠಿಣ ತಪಸ್ಸು ಮಾಡಿದ್ದನು ಎಂಬುದು ಪೌರಾಣಿಕ ಕಥನಗಳಲ್ಲಿ ಉಲ್ಲೇಖವಾಗಿದೆ. ಅಷ್ಟೇ ಅಲ್ಲ, ರಾವಣನ ಹತ್ತು ತಲೆಗಳಿಗೆ ವಿಶೇಷ ಸಾಂಕೇತಿಕ ಅರ್ಥವೂ ಇದೆ.
ರಾವಣನಿಗೆ ಹತ್ತು ತಲೆಗಳು ಹೇಗೆ ಬಂದವು?
ವಾಲ್ಮೀಕಿ ರಾಮಾಯಣ, ಶ್ರೀರಾಮಚರಿತಮಾನಸ ಮತ್ತು ಶ್ರೀಮದ್ಭಾಗವತ ಪುರಾಣಗಳಲ್ಲಿ ರಾವಣನ ಹತ್ತು ತಲೆಗಳ ಕುರಿತು ಉಲ್ಲೇಖಗಳಿವೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದ 10ನೇ ಸರ್ಗದ ಪ್ರಕಾರ, ರಾವಣನು ಬ್ರಹ್ಮದೇವನನ್ನು ಮೆಚ್ಚಿಸಲು ಗೋಕರ್ಣ ತೀರ್ಥದಲ್ಲಿ 10,000 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದನು ಎಂದು ಹೇಳಲಾಗಿದೆ. ರಾವಣನು 1,000 ವರ್ಷಗಳ ಕಾಲ ತಪಸ್ಸು ಮಾಡಿದರೂ ಬ್ರಹ್ಮದೇವನು ಪ್ರತ್ಯಕ್ಷನಾಗಲಿಲ್ಲ. ಆಗ ರಾವಣನು ತನ್ನ ತಲೆಯನ್ನು ಕತ್ತರಿಸಿ ಅಗ್ನಿಕುಂಡಕ್ಕೆ ಅರ್ಪಿಸಿದನು. ಆದರೆ ಬ್ರಹ್ಮದೇವನು ಅವನಿಗೆ ಮತ್ತೆ ತಲೆಯನ್ನು ಕರುಣಿಸಿದನು ಎಂದು ಪೌರಾಣಿಕ ಕಥನ ತಿಳಿಸುತ್ತದೆ. ಇದೇ ರೀತಿ ರಾವಣನು ಒಟ್ಟು 9,000 ವರ್ಷಗಳ ಕಾಲ ತಪಸ್ಸು ಮುಂದುವರಿಸಿದನು. ಪ್ರತಿ 1,000 ವರ್ಷಗಳ ತಪಸ್ಸಿನ ನಂತರ ತನ್ನ ಒಂದು ತಲೆಯನ್ನು ಕತ್ತರಿಸಿ ಅಗ್ನಿಗೆ ಅರ್ಪಿಸುತ್ತಿದ್ದನು. ಪ್ರತಿ ಬಾರಿಯೂ ಅವನಿಗೆ ಮತ್ತೆ ತಲೆ ದೊರೆಯುತ್ತಿತ್ತು ಎಂದು ಹೇಳಲಾಗುತ್ತದೆ.
10,000ನೇ ವರ್ಷದಲ್ಲಿ ಹತ್ತು ತಲೆಗಳು ಮತ್ತು ಅಮೃತದ ವರ ಪಡೆದ ರಾವಣ!
ರಾವಣನು 10,000ನೇ ವರ್ಷದಲ್ಲಿ ತನ್ನ ಕೊನೆಯ ತಲೆಯನ್ನು ಕತ್ತರಿಸಲು ಮುಂದಾದಾಗ ಬ್ರಹ್ಮದೇವನು ಪ್ರತ್ಯಕ್ಷನಾದನು. ರಾವಣನ ತಪಸ್ಸಿಗೆ ಮೆಚ್ಚಿ ಅವನಿಗೆ ಹತ್ತು ತಲೆಗಳು ಹಾಗೂ ನಾಭಿಯಲ್ಲಿ ಅಮೃತವಿರುವ ವರವನ್ನು ನೀಡಿದನು ಎನ್ನುತ್ತದೆ ಪೌರಾಣಿಕ ಕಥೆ. ಹೀಗೆ ಹತ್ತು ತಲೆಗಳನ್ನು ಪಡೆದ ಕಾರಣ ರಾವಣನು ದಶಾನನ ಎಂಬ ಹೆಸರಿನಿಂದ ಪ್ರಸಿದ್ಧನಾದನು. ಇನ್ನು ಲಂಕಾ ಯುದ್ಧದ ಸಂದರ್ಭದಲ್ಲಿ ವಿಭೀಷಣನು ಶ್ರೀರಾಮನಿಗೆ ರಾವಣನ ನಾಭಿಯಲ್ಲಿ ಅಮೃತವಿದೆ ಎಂದು ತಿಳಿಸಿದನು. ರಾವಣನ ನಾಭಿಗೆ ಬಾಣ ಪ್ರಯೋಗಿಸಿದಾಗ ಮಾತ್ರ ಅವನನ್ನು ಸಂಹರಿಸಲು ಸಾಧ್ಯ ಎಂದು ವಿಭೀಷಣನು ತಿಳಿಸಿದನು. ಅದರಂತೆ ಶ್ರೀರಾಮನು ರಾವಣನ ನಾಭಿಗೆ ಬಾಣ ಬಿಟ್ಟು ಅವನನ್ನು ಸಂಹರಿಸಿದನು ಎಂದು ರಾಮಾಯಣದಲ್ಲಿ ವಿವರಿಸಲಾಗಿದೆ.
ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ, ಶ್ರೀರಾಮಚರಿತಮಾನಸದಲ್ಲಿಯೂ ತುಳಸೀದಾಸರು ಉತ್ತರಕಾಂಡದಲ್ಲಿ ಹಾಗೂ ಶ್ರೀಮದ್ಭಾಗವತ ಪುರಾಣದ ಏಳನೇ ಸ್ಕಂಧದ 10ನೇ ಅಧ್ಯಾಯದಲ್ಲಿಯೂ ರಾವಣನ ಕಠಿಣ ತಪಸ್ಸಿನ ಕುರಿತು, ಹತ್ತು ತಲೆಗಳನ್ನು ಅಗ್ನಿಗೆ ಅರ್ಪಿಸಿದುದರ ಕುರಿತು ಉಲ್ಲೇಖಿಸಲಾಗಿದೆ.
ರಾವಣನ ಹತ್ತು ತಲೆಗಳ ಅರ್ಥವೇನು?
ರಾವಣನು ಬ್ರಾಹ್ಮಣ ಮತ್ತು ಅಸುರ ವಂಶದ ಗುಣಗಳನ್ನು ಹೊಂದಿದ್ದ ವ್ಯಕ್ತಿ ಎಂದು ಪೌರಾಣಿಕ ಕಥನಗಳಲ್ಲಿ ವಿವರಿಸಲಾಗುತ್ತದೆ. ಅವನ ತಂದೆ ಬ್ರಾಹ್ಮಣನಾಗಿದ್ದರೆ, ತಾಯಿ ಅಸುರ ವಂಶದವಳಾಗಿದ್ದಳು. ಈ ಕಾರಣದಿಂದ ರಾವಣನು ಮಹಾಜ್ಞಾನಿ, ಪಂಡಿತ ಮತ್ತು ಶಿವಭಕ್ತನಾಗಿದ್ದರೂ ಅವನಲ್ಲಿ ಅಸುರ ಪ್ರವೃತ್ತಿಗಳೂ ಇದ್ದವು. ರಾವಣನ ಹತ್ತು ತಲೆಗಳನ್ನು ಅವನಲ್ಲಿದ್ದ ಹತ್ತು ಬಗೆಯ ದೋಷಗಳು ಮತ್ತು ದುರ್ಗುಣಗಳ ಸಾಂಕೇತಿಕ ರೂಪವೆಂದೂ ಪರಿಗಣಿಸಲಾಗುತ್ತದೆ. ಅವು ಯಾವುವೆಂದರೆ: ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ, ಚಂಚಲತೆ, ತಪ್ಪು ಬುದ್ಧಿ, ಅಹಂಕಾರದಿಂದ ಆವೃತವಾದ ಮನಸ್ಸು, ಅಹಂಕಾರ .
ದಸರಾ ಹಬ್ಬವು ಕೇವಲ ರಾವಣನ ಪ್ರತಿಕೃತಿ ದಹಿಸುವ ಹಬ್ಬವಲ್ಲ; ನಮ್ಮೊಳಗಿನ ದುರ್ಗುಣಗಳನ್ನು ತೊರೆದು ಸತ್ಯ, ಧರ್ಮ ಮತ್ತು ಸಜ್ಜನಿಕೆಯ ಹಾದಿಯಲ್ಲಿ ನಡೆಯಬೇಕೆಂಬ ಸಂದೇಶವನ್ನೂ ನೀಡುತ್ತದೆ. ಆದ್ದರಿಂದ, ಈ ವಿಜಯದಶಮಿಯಂದು ನಮ್ಮೊಳಗಿನ ಕಾಮ, ಕ್ರೋಧ, ಮೋಹ, ಲೋಭ, ಅಹಂಕಾರ ಸೇರಿದಂತೆ ಎಲ್ಲ ನಕಾರಾತ್ಮಕ ಗುಣಗಳನ್ನು ದೂರಮಾಡಿ ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.


