ಕೃಷ್ಣ ನಿಂದ ಕಂಸನ ಸಂಹಾರ: ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?
* ಕಂಸನನ್ನು ಕೃಷ್ಣ ಸಂಹಾರ ಮಾಡಿದ ನಂತರ ಜನ್ಮಾಷ್ಟಮಿಯ ಆಚರಣೆ ರೂಢಿಗೆ ಬಂತು
* ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?
ನಾಗೇಶ ಜಿ. ವೈದ್ಯ, ಬೆಂಗಳೂರು
ಶಿಷ್ಟರ ರಕ್ಷಣೆ ಮತ್ತು ದುಷ್ಟರ ಹರಣ ಮಾಡಿ, ಮಾನವಕುಲದ ಕಲ್ಯಾಣಕ್ಕಾಗಿ ವಿಷ್ಣುವಿನ ಹತ್ತು ಅವತಾರಗಳಲ್ಲೊಂದಾಗಿ, ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿಯ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ವಸುದೇವ, ದೇವಕಿಯರ ಮಗನಾಗಿ ಭೂಮಿಯ ಮೇಲೆ ಅವತರಿಸಿದವನು ಶ್ರಿಕೃಷ್ಣ.
ಶ್ರೀಕೃಷ್ಣನ ಜೀವನ ವೈವಿಧ್ಯಮಯ. ಅದೊಂದು ಪಾಠಶಾಲೆ. ಬಾಲ್ಯದ ಪವಾಡಗಳು, ಯೌವನದಲ್ಲಿ ಗೋಪಿಯರೊಂದಿಗಿನ ಸ್ನೇಹ, ಪ್ರೇಮ, ರಾಸಲೀಲೆಗಳು, ಜೀವನದುದ್ದಕ್ಕೂ ದೀನ ರಕ್ಷಕ, ಶಿಕ್ಷಕ, ದಾರ್ಶನಿಕ, ಜ್ಞಾನಿಯಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮತ್ತು ಮಹಾಭಾರತದ ಯುದ್ಧಭೂಮಿಯಲ್ಲಿ ಬೋಧಿಸಿದ ತತ್ವಜ್ಞಾನಗಳಿಂದಾಗಿ ಎಲ್ಲರಿಗೂ ಬೇಕಾದವ ಶ್ರೀಕೃಷ್ಣ. ಗೆಳೆಯ, ಪ್ರಿಯತಮ, ವೀರ, ನಾಯಕ, ಜಗದೋದ್ಧಾರಕನಾಗಿ ಕಾಣಸಿಗುವ ಕೃಷ್ಣ, ಜ್ಞಾನ, ಬಲ, ಶಕ್ತಿ, ತೇಜಸ್ಸುಗಳ ಆಗರ. ಭಗವದ್ಗೀತೆಯ ಸಂದೇಶವಂತೂ ಪ್ರತಿಬಾರಿ ಓದಿದಾಗಲೂ ಹೊಸತೊಂದು ಅರ್ಥವನ್ನು ಹೊರಹೊಮ್ಮಿಸಬಲ್ಲ ಬೋಧನೆ. ಭಗವದ್ಗೀತೆಯ ಮೂಲಕ ಕೃಷ್ಣನ ಬೋಧನೆಗಳು ಅನಾದಿಕಾಲದಿಂದಲೂ ಜೀವನ, ಧರ್ಮ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಸಂದೇಶವನ್ನು ಪ್ರಸ್ತುತಪಡಿಸುತ್ತಿವೆ. ಈ ಆಪದ್ಬಾಂಧವನ ಆಗಮನವನ್ನು ಸಂಭ್ರಮಿಸುವುದೇ ಶ್ರೀಕೃಷ್ಣ ಜನ್ಮಾಷ್ಟಮಿ.
ರೋಮಾಂಚಕ ಜನ್ಮ
ಮಥುರಾದ ಮಹಾರಾಜ ಅಗ್ರಸೇನನಿಂದ ಅವನ ಮಗ ಕಂಸ ಬಲವಂತವಾಗಿ ಸಿಂಹಾಸನವನ್ನು ಕಿತ್ತುಕೊಂಡು ಪಟ್ಟಕ್ಕೇರುತ್ತಾನೆ. ಒಮ್ಮೆ ಆಕಾಶದಿಂದ ಅಶರೀರವಾಣಿಯೊಂದು ಕೇಳಿಬರುತ್ತದೆ. ದೇವಕಿಯ 8ನೇ ಮಗುವೇ ನಿನ್ನ ಮೃತ್ಯುವಿಗೆ ಕಾರಣವಾಗಲಿದೆ ಎನ್ನುತ್ತದೆ ಅಶರೀರವಾಣಿ. ಭಯಭೀತನಾದ ಕಂಸ, ದಂಪತಿಗಳನ್ನು ಕಾರಾಗೃಹಕ್ಕೆ ತಳ್ಳುತ್ತಾನೆ. ಒಂದಾದ ಮೇಲೊಂದರಂತೆ ಜನಿಸಿದ ಏಳೂ ಮಕ್ಕಳನ್ನು ಆತ ಕೊಲ್ಲುತ್ತಾನೆ. ಎಂಟನೇ ಬಾರಿಗೆ ದೇವಕಿ ಗರ್ಭವತಿಯಾದಾಗ ಕಾವಲು ಬಿಗಿಗೊಳಿಸುತ್ತಾನೆ. ಪ್ರಸವದ ವೇಳೆ ದಂಪತಿಗಳೆದುರು ದೇವರೇ ಪ್ರತ್ಯಕ್ಷನಾಗುತ್ತಾನೆ. ತಾನೀಗ ಅವರ ಮಗುವಾಗಿ ಜನಿಸುವುದಾಗಿಯೂ, ವಸುದೇವ ತನ್ನನ್ನು ತಕ್ಷಣ ಹೊತ್ತುಕೊಂಡು ಗೋಕುಲದಲ್ಲಿ ನಂದನ ಮನೆಗೆ ತೆರಳಿ, ಅಲ್ಲಿ ಹುಟ್ಟಲಿರುವ ಹೆಣ್ಣು ಮಗುವಿನ ಜೊತೆ ತನ್ನನ್ನು ಅದಲು ಬದಲು ಮಾಡಲು ಹೇಳುತ್ತಾನೆ. ಮಗು ಜನಿಸುತ್ತಲೇ, ವಸುದೇವ ಅವನನ್ನು ಬುಟ್ಟಿಯಲ್ಲಿಟ್ಟು ತೆಗೆದುಕೊಂಡು ಹೋಗಿ, ಯಶೋದೆಯ ಪಕ್ಕ ಮಲಗಿದ್ದ ಹುಡುಗಿಯನ್ನು ಎತ್ತಿಕೊಂಡು, ಕೃಷ್ಣನನ್ನು ಯಶೋದೆಯ ಮಡಿಲಿಗಿಟ್ಟು ಮರಳಿದ. ಆಗಲೂ ಕಾರಾಗೃಹದ ಬಾಗಿಲು ತಾನಾಗಿಯೇ ತೆರೆದು ಮುಚ್ಚಿಕೊಂಡಿತು. ಮಗುವನ್ನು ಬದಲಾಯಿಸಿ ಬಂದದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಹೆಣ್ಣು ಮಗುವಿನ ಜನನದ ಸುದ್ದಿ ತಿಳಿದ ಕಂಸ ಓಡಿ ಬಂದು, ಅವಳನ್ನು ಕೊಲ್ಲಲು ಮುಂದಾಗುತ್ತಾನೆ. ಆ ವೇಳೆಗೆ ಹುಡುಗಿ ಅವನ ಬಿಗಿಮುಷ್ಟಿಯಿಂದ ತಪ್ಪಿಸಿಕೊಂಡು, ನಿನ್ನನ್ನು ಕೊಲ್ಲುವವ ಗೋಕುಲದಲ್ಲಿದ್ದಾನೆ ಎಂದು ಹೇಳುತ್ತಾ ಆಕಾಶಕ್ಕೆ ಹಾರುತ್ತಾಳೆ. ಕಂಪಿಸಿದ ಕಂಸ, ಕೃಷ್ಣನನ್ನು ಪತ್ತೆಹಚ್ಚಿ ಅವನನ್ನು ಕೊಲ್ಲಲು ಹಲವಾರು ಪ್ರಯತ್ನ ಮಾಡುತ್ತಾನೆ, ರಾಕ್ಷಸರನ್ನು ಕಳಿಸುತ್ತಾನೆ. ಕೃಷ್ಣನ ಎದುರು ಯಾರೊಬ್ಬರ ಆಟವೂ ನಡೆಯುವುದಿಲ್ಲ.
ರಾಕ್ಷಸ ಕಂಸನ ಸಂಹಾರ
ಕಂಸನ ಅಣತಿಯಂತೆ ತೃಣಾವರ್ತನೆಂಬ ಭಯಂಕರ ರಾಕ್ಷಸ ಸುಂಟರಗಾಳಿಯ ರೂಪ ಧರಿಸಿ, ಕೃಷ್ಣನನ್ನು ಸುಳಿಯಲ್ಲಿ ಸಿಕ್ಕಿಸಿ ನಭದೆತ್ತರಕ್ಕೆ ಜಿಗಿಯುತ್ತಾನೆ. ಆ ಗಾಳಿಯ ರಭಸಕ್ಕೆ ಧೂಳು ಮುಸುಕಿ ಗೋಕುಲದಲ್ಲಿ ಕತ್ತಲೆ ಆವರಿಸುತ್ತದೆ. ಕೃಷ್ಣ, ಜಾಣ್ಮೆಯಿಂದ ತನ್ನ ತೂಕ ಹೆಚ್ಚಿಸಿಕೊಳ್ಳುತ್ತಾನೆ. ಆ ಹೊರೆಯನ್ನು ನಿಭಾಯಿಸಲಾಗದೇ ದೃತಿಗೆಟ್ಟರಾಕ್ಷಸನ ಕೊರಳನ್ನು ಗಟ್ಟಿಯಾಗಿ ತಿರುಚಿ ಕೊಂದುಬಿಡುತ್ತಾನೆ. ಬಹಳ ಹೊತ್ತಿನವರೆಗೆ ಕಾಣದಿದ್ದ ಕೃಷ್ಣನನ್ನು ಹುಡುಕುತ್ತಾ ಬಂದ ಗೋಕುಲದ ಜನರಿಗೆ, ರಕ್ಕಸನ ದೇಹದ ಮೇಲೆ ವಿರಾಜಿಸುತ್ತಿರುವ ಕೃಷ್ಣನನ್ನು ನೋಡಿ ಹೆಮ್ಮೆಯಾಗುತ್ತದೆ. ಈ ಪುಟ್ಟಹುಡುಗ ದೈತ್ಯ ರಾಕ್ಷಸನನ್ನು ಹೇಗೆ ಕೊಂದನೆಂದು ಅಚ್ಚರಿಯೂ ಆಗುತ್ತದೆ. ಕೊನೆಗೆ ಕಂಸನನ್ನೂ ಕೊಂದು ತನ್ನ ತಂದೆ, ತಾಯಿಯನ್ನು ಬಂಧನದಿಂದ ಬಿಡಿಸುತ್ತಾನೆ ಕೃಷ್ಣ. ಕಂಸನಿಂದ ಹಿಂಸೆಗೊಳಗಾಗಿದ್ದ ಮುಗ್ಧ ಜನರು ನೆಮ್ಮದಿಯ ನಿಟ್ಟುಸಿರುಬಿಡುತ್ತಾರೆ. ಅಂದಿನಿಂದ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಆಚರಣೆ ಆರಂಭವಾಯಿತು.
ಕಥೆಗಳು ನೂರಾರು
ಕೃಷ್ಣನ ಹುಟ್ಟಿನಿಂದ ಅಂತ್ಯದವರೆಗೆ ಅನೇಕ ರೋಚಕ ಕತೆಗಳಿದ್ದು, ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಒಂದೊಂದು ಕಥೆಯಲ್ಲೂ ಬದುಕಿನ ವಿವಿಧ ರೂಪಗಳನ್ನು ತೋರುತ್ತಾನೆ. ಬಾಲಕರನ್ನು ಗುಂಪು ಕಟ್ಟಿಕೊಂಡು ಮನೆ ಮನೆಗಳಿಗೆ ನುಗ್ಗಿ, ಬೆಣ್ಣೆ ಕದಿಯುವಲ್ಲಿ ಇವನೇ ಗುಂಪಿಗೆ ನಾಯಕ. ಬೆಣ್ಣೆ, ಮೊಸರು ಕಳ್ಳ ಕೃಷ್ಣ ಗೋಪಿಯರ ಮೊಸರು ತುಂಬಿದ ಗಡಿಗೆಯನ್ನು ಒಡೆಯುವುದರಲ್ಲಿ ನಿಸ್ಸೀಮ. ಗೋಪಿಯರೊಂದಿಗೆ ಕೊಳಲು ನುಡಿಸುತ್ತಾ ನೃತ್ಯ ಮಾಡುತ್ತಿದ್ದ ಪ್ರೇಮಿ. ಬಾಯಲ್ಲಿ ಮಣ್ಣು ಹಾಕಿಕೊಂಡು, ತಾಯಿಗೆ ವಿಶ್ವರೂಪ ತೋರಿದ ಭೂಪ. ವಾಸುಕಿ ಎಂಬ ಕಾಳಸರ್ಪವನ್ನು ಸದೆಬಡಿದ ವೀರ. ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೊಲ್ಲರು ಮತ್ತು ಹಸುಗಳನ್ನು ಕಾಪಾಡಿದ ಗೊಲ್ಲ. ಜಾಂಬವಂತನಿಗೂ ದೈವ ರೂಪ ತೋರಿಸಿ, ಶ್ಯಮಂತಕ ಮಣಿ ಪಡೆದ ಜಾಣ. ನರಕಾಸುರನೆಂಬ ಅಸುರನ ಸೆರೆಯಿಂದ ಹದಿನಾರು ಸಾವಿರ ಮಹಿಳೆಯರನ್ನು ಬಿಡುಗಡೆಗೊಳಿಸಿದ ರಕ್ಷಕ. ದ್ರೌಪದಿಯ ವಸ್ತಾ್ರಪಹರಣದ ವೇಳೆ ಮಾನ ಕಾಯ್ದ ಭಗವಂತ. ದುಷ್ಟಪೂತನಿಯನ್ನು ಕೊಂದ ಸಾಹಸಿ. ಮಹಾಭಾರತದುದ್ದಕ್ಕೂ ಪಾಂಡವರ ಮಾರ್ಗದರ್ಶಿ. ಯುದ್ಧ ಭೂಮಿಯಲ್ಲಿ ಅರ್ಜುನನ ಸಾರಥಿಯಾಗಿ ಬೋಧನೆಯ ಮೂಲಕ ಹುರಿದುಂಬಿಸುತ್ತ ಜಯ ತಂದುಕೊಟ್ಟದಾರ್ಶನಿಕ. ಕಡು ಬಡವ ಸುಧಾಮನನ್ನು ತನ್ನ ಸ್ನೇಹಿತನನ್ನಾಗಿ ಆದರಿಸಿ, ಉಪಕರಿಸಿ ಸ್ನೇಹವನ್ನು ಎತ್ತಿಹಿಡಿದ ಆಪದ್ಭಾಂಧವ.
ಎಲ್ಲೆಡೆ ವಿಭಿನ್ನ ಆಚರಣೆ
ಜನ್ಮಾಷ್ಟಮಿಯಂದು ಮಥುರಾ ನಗರವು ಮದುವಣಗಿತ್ತಿಯಂತೆ ಶೃಂಗರಿಸಲ್ಪಡುತ್ತದೆ. ಭಕ್ತಿಯ ಬಣ್ಣಗಳಿಂದ ಮುಳುಗಿ ಕೃಷ್ಣಮಯವಾಗುತ್ತದೆ. ಕೃಷ್ಣನ ದರ್ಶನಕ್ಕೆ ದೂರದೂರದಿಂದ ಭಕ್ತರು ಈ ದಿನ ಮಥುರಾಗೆ ಬರುತ್ತಾರೆ. ಕೃಷ್ಣ ತನ್ನ ಜೀವನದ ಬಹುಪಾಲು ಕಳೆದದ್ದು ಬೃಂದಾವನದಲ್ಲಿ. ಹಾಗೆಂದೇ ಜನ್ಮಾಷ್ಟಮಿ ಆಚರಣೆಯಲ್ಲಿ ಈ ಸ್ಥಳಕ್ಕೆ ಹೆಚ್ಚಿನ ವಿಶೇಷತೆ. ಕೃಷ್ಣ ಅಲ್ಲಿನ ಪ್ರತಿ ಕಣಕಣದಲ್ಲಿ ಮರಗಳಲ್ಲಿಯೂ ಇದ್ದಾನೆ ಎಂಬ ನಂಬುಗೆ ಭಕ್ತರದ್ದು. ಇಲ್ಲಿಯ ಜನ್ಮಾಷ್ಟಮಿಯ ಸೊಬಗನ್ನು ಕಂಗಳಲ್ಲಿ ತುಂಬಿಕೊಳ್ಳಲು ಜನ ಕಿಕ್ಕಿರಿಯುತ್ತಾರೆ.
ದೇಶ ವಿದೇಶಗಳಲ್ಲಿ ಜನ್ಮಾಷ್ಟಮಿಯನ್ನು ಪೂರ್ಣ ಶ್ರದ್ಧೆ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನು ರಾತ್ರಿ ಹನ್ನೆರಡು ಗಂಟೆಗೆ ಜನಿಸಿದ್ದರಿಂದ, ಅದೇ ಸಮಯಕ್ಕೆ ಆಚರಣೆ ಜರುಗುತ್ತದೆ. ತೊಟ್ಟಿಲಲ್ಲಿ ಬಾಲ ಕೃಷ್ಣನನ್ನಿಟ್ಟು ತೂಗುವುದು ಎಲ್ಲೆಡೆ ಕಂಡುಬರುವ ದೃಶ್ಯ. ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದಲ್ಲಿ ಅಂದು ವಿಶೇಷ ಪೂಜೆ. ಮಹಾರಾಷ್ಟ್ರದಲ್ಲಿ ರಸ್ತೆಗಳಲ್ಲಿ ಎತ್ತರಕ್ಕೆ ಕಟ್ಟಿರುವ ಮೊಸರಗಡಿಗೆಯನ್ನು ಒಡೆಯುವುದೇ ಒಂದು ಸಂಭ್ರಮ, ಮೋಜು. ಈ ಸ್ಪರ್ಧೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹರೆಯದ ಹುಡುಗರು ಭಾಗವಹಿಸುತ್ತಾರೆ. ಒಬ್ಬರ ಮೇಲೊಬ್ಬರು ಹತ್ತಿ, ಮೊಸರು ಗಡಿಗೆಯನ್ನು ತಲುಪುತ್ತಾರೆ. ಮರಾಠಿಯಲ್ಲಿ ಇದನ್ನು ದಹಿಹಂಡಿ ಎಂದು ಕರೆಯಲಾಗುತ್ತದೆ.
ದೇವನೊಬ್ಬ ನಾಮ ಹಲವು
ಸುದರ್ಶನ ಚಕ್ರವನ್ನು ಹೊಂದಿದ್ದಕ್ಕೆ ಚಕ್ರಧಾರಿ, ಕೊಳಲನ್ನು ಹೊಂದಿದ್ದಕ್ಕೆ ಮುರಳೀಧರ, ಕಪ್ಪು ಮೈ ಬಣ್ಣ ಹೊಂದಿದ್ದಕ್ಕೆ ಘನಶ್ಯಾಮನೆಂಬ ಹೆಸರುಗಳು ಬಂದರೆ, ಅವನ ಸಾಹಸಕ್ಕೂ ಅನೇಕ ಹೆಸರುಗಳು ಬಂದವು. ಗೋವರ್ಧನ ಗಿರಿಯನ್ನು ಎತ್ತಿದ್ದಕ್ಕೆ ಗಿರಿಧರನಾದ. ರಾಕ್ಷಸ ಮಧುವನ್ನು ಕೊಂದುದಕ್ಕೆ ಮಧುಸೂಧನ, ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದುದಕ್ಕೆ ನವನೀತ ಚೋರನೆಂದೂ ಕರೆಯಲ್ಪಟ್ಟಕೃಷ್ಣನಿಗೆ ನೂರಾರು ಹೆಸರುಗಳು. ಭಕ್ತರು ಯಾವ ಹೆಸರಿಂದಲೇ ಕರೆಯಲಿ ಅವರ ಪ್ರಾರ್ಥನೆ ತಲುಪುವುದು ಅವನಿಗೇ. ಹಾಗೆಯೇ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣಾಷ್ಟಮಿ, ಗೋಕುಲಾಷ್ಟಮಿ, ಅಷ್ಟಮಿ ರೋಹಿಣಿ ಎಂದೂ ಕರೆಯುತ್ತಾರೆ.
ಪೂಜೆ ಸಲ್ಲಿಸುವುದು ಹೇಗೆ?
ಏಕಾದಶಿ ಉಪವಾಸದ ಎಲ್ಲ ನಿಯಮಗಳನ್ನು ಜನ್ಮಾಷ್ಟಮಿ ಉಪವಾಸದ ಸಮಯದಲ್ಲಿಯೂ ಅನುಸರಿಲಾಗುತ್ತದೆ. ಈ ದಿನ ಭಕ್ತರು ನಿರ್ಜಲ ಉಪವಾಸ ಮಾಡುವುದಿದೆ. ಉಪವಾಸ ಮಾಡುವವರು ರಾತ್ರಿ ಕೃಷ್ಣನಿಗೆ ಅಘ್ರ್ಯ ನೀಡಿದ ನಂತರವೇ ಫಲಾಹಾರ ಸೇವಿಸುತ್ತಾರೆ. ಜನ್ಮಾಷ್ಟಮಿಯಂದು ಪೂಜೆ ಮಾಡುವ ಭಕ್ತರ ಎಲ್ಲ ಆಸೆ, ಬಯಕೆಗಳನ್ನೂ ಶ್ರೀಕೃಷ್ಣ ಈಡೇರಿಸುತ್ತಾನೆ ಮತ್ತು ಅವರ ಮನೆಗಳಲ್ಲಿ ಲಕ್ಷ್ಮೇ ಸ್ಥಿರವಾಗಿ ನೆಲೆಸುತ್ತಾಳೆ ಎಂಬುದು ಪ್ರತೀತಿ.
ಭಕ್ತರು ಕೃಷ್ಣನನ್ನು ಪೂರ್ಣ ವೇದ ಮಂತ್ರಗಳೊಂದಿಗೆ ವಿಧಿವತ್ತಾಗಿ ಪೂಜಿಸುತ್ತಾರೆ. ಅರಿಶಿನ, ಕುಂಕುಮ, ಬೆಣ್ಣೆ, ಮೊಸರು, ತುಪ್ಪ, ಎಣ್ಣೆ, ಪನ್ನೀರು, ಕರ್ಪೂರಗಳ ಅರ್ಪಣೆಯೊಂದಿಗೆ ನಡೆಯುವ ಪೂಜೆಗೆ ಭಜನೆ, ಸಂಕೀರ್ತನೆ, ನೃತ್ಯ, ಸಂಗೀತ ವಾದ್ಯಗಳು ಜೊತೆ ನೀಡುತ್ತವೆ. ಜನ್ಮಾಷ್ಟಮಿಯಂದು ತೊಟ್ಟಿಲೊಳಗಿಟ್ಟು ತೂಗಲು ಬಾಲಕೃಷ್ಣನನ್ನು ಎಲ್ಲರೂ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಮಾನವ ಕುಲದ ಮೇಲೆ ಅವನ ಅನುಗ್ರಹಕ್ಕಾಗಿ ತುಂಬು ವಿಶ್ವಾಸದಿಂದ ಪ್ರಾರ್ಥಿಸುತ್ತಾರೆ.