ದರ್ಗಾ ನವೀಕರಣದ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆ!
ಮಂಗಳೂರಿನ ಮಳಲಿ ಎಂಬಲ್ಲಿ ದರ್ಗಾ ನವೀಕರಣ ವೇಳೆ ದೇವಾಲಯ ಪತ್ತೆಯಾಗಿದ್ದು, ನವೀಕರಣ ಕಾರ್ಯಕ್ಕೆ ಜಿಲ್ಲಾಡಳಿತ ತಡೆ ಒಡ್ಡಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನದ ಗುಡಿ ಪತ್ತೆಯಾದ ಘಟನೆ ಮಂಗಳೂರು(Mangalore) ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ನಡೆದಿದೆ.
ಮಳಲಿ(MaLali)ಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾ(Darga)ದಲ್ಲಿ ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು. ಈ ವೇಳೆ ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದೆ. ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರೋ ಸಾಧ್ಯತೆ ಇದ್ದು, ಹಿಂದೆ ದೇವಸ್ಥಾನ ಕೆಡವಿ ದರ್ಗಾ ನಿರ್ಮಿಸಿರೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಮಂಗಳೂರು ತಹಶೀಲ್ದಾರ್ ಪುರಂದರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದ್ಯ ಜಾಗದ ದಾಖಲೆ ಹಾಗೂ ಇತಿಹಾಸ(history)ದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಮುಂದಾಗಿದ್ದು, ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶಿಲ್ದಾರ್ ಸೂಚನೆ ನೀಡಿದ್ದಾರೆ. ಹೀಗಾಗಿ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ದರ್ಗಾ ಆಡಳಿತ ಸಮ್ಮತಿ ಸೂಚಿಸಿದೆ.
ಕಂಚೀ ವರದರಾಜಸ್ವಾಮಿಯನ್ನು ನಾಣ್ಯಗಳಲ್ಲೇ ಮುಳುಗಿಸಿದ ಭಕ್ತವೃಂದ
ಜಾಗದ ದಾಖಲೆ ಮತ್ತು ಇತಿಹಾಸ ಅಧ್ಯಯನ
ಈ ಜಾಗದಲ್ಲಿ ಹಲವು ವರ್ಷಗಳಿಂದ ಈ ದರ್ಗಾ ಇದ್ದು, ಸ್ಥಳೀಯವಾಗಿ ಸೌಹಾರ್ದತೆಯ ಕೇಂದ್ರವಾಗಿದೆ. ಹೀಗಾಗಿ ದರ್ಗಾ ಮುಂಭಾಗ ಕೆಡವಿದರೂ ಆಡಳಿತ ಮಂಡಳಿ ದೇವಸ್ಥಾನ ಗುಡಿಯ ಮಾದರಿಗೆ ಯಾವುದೇ ಹಾನಿ ಮಾಡಿಲ್ಲ. ಸದ್ಯ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಸೇರಿ ಪ್ರಮುಖರು ದರ್ಗಾಗೆ ಭೇಟಿ ನೀಡಿ ಆಡಳಿತ ಮಂಡಳಿ ಪ್ರಮುಖರ ಜೊತೆ ಮಾತನಾಡಿದ್ದಾರೆ. ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಜಿಲ್ಲಾಡಳಿತದ ಮೂಲಕವೇ ಗೊಂದಲ ನಿವಾರಿಸಲು ಮುಂದಾಗಿದ್ದಾರೆ. ಹೀಗಾಗಿ ತಹಶಿಲ್ದಾರ್ ಕಂದಾಯ ಭೂ ದಾಖಲೆ ಹಾಗೂ ಪುರಾತತ್ವ ಇಲಾಖೆ ಮೂಲಕ ಜಾಗದ ಐತಿಹಾಸಿಕ ದಾಖಲೆಗಳ ಲಭ್ಯತೆ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ಧರಿಸಲಾಗಿದೆ.