Asianet Suvarna News Asianet Suvarna News

ಗೌರಿ ಹಬ್ಬ 2022 ಯಾವಾಗ? ಶುಭ ಮುಹೂರ್ತವೇನು?

ಗೌರಿ ಹಬ್ಬದ ಗುಂಗು ಶುರುವಾಗಿದೆ. ಮನಮನಗಳಲ್ಲಿ ಹಬ್ಬದ ರಂಗು ತುಂಬುತ್ತಿದೆ. ಅಂದ ಹಾಗೆ ಕರ್ನಾಟಕದಲ್ಲಿ ಗೌರಿ ಹಬ್ಬ ಯಾವಾಗ, ಆಚರಣೆಯ ಮಹತ್ವವೇನು?

Gowri Habba 2022 date Shubh Muhurth and Importance skr
Author
Bangalore, First Published Aug 22, 2022, 4:41 PM IST

ಗೌರಿ ಹಬ್ಬವೆಂದರೆ ಮನೆಮನೆಯಲ್ಲೂ ವಿವಾಹಿತ ಮಹಿಳೆಯರು ಗೌರಿಯಂತೆಯೇ ಸಜ್ಜಾಗುತ್ತಾರೆ. ಕೈಲಾಸದಿಂದ ಬರುವ ಗೌರಿದೇವಿಯನ್ನು ತವರಿಗೆ ಬರ ಮಾಡಿಕೊಳ್ಳುವ ಸಂಭ್ರಮ ಎಲ್ಲರಲ್ಲಿ ತುಂಬುತ್ತದೆ. ಸಾಮಾನ್ಯವಾಗಿ ಗಣೇಶ ಚತುರ್ಥಿಯ ಹಿಂದಿನ ದಿನ ಗೌರಿ ಹಬ್ಬ ಬರುತ್ತದೆ. ಅಪರೂಪದಲ್ಲಿ ಈ ಎರಡೂ ಹಬ್ಬಗಳು ಒಟ್ಟಿಗೇ ಬರುವುದೂ ಇದೆ. ಗೌರಿ ಹಬ್ಬಕ್ಕೆ ಬರುವ ಗೌರಮ್ಮನನ್ನು ಮನೆಯಲ್ಲಿ ಪೂಜಿಸಿ, ಆಕೆಗಿಷ್ಟದ ಅಡುಗೆ ಮಾಡಿ ಬಡಿಸಿ, ಬಾಗೀನ ನೀಡಿ ಸತ್ಕರಿಸಲಾಗುತ್ತದೆ. ದಕ್ಷಿಣದಲ್ಲಿ ಇದನ್ನು ಸ್ವರ್ಣ ಗೌರಿ ವ್ರತ ಎಂದು ಆಚರಿಸುವಂತೆ ಉತ್ತರ ಭಾರತದಲ್ಲಿ ಹರ್ತಾಲಿಕಾ ತೀಜ್ ಎಂದು ಆಚರಿಸಲಾಗುತ್ತದೆ. 

ಗೌರಿ ವ್ರತ ದಿನಾಂಕ
ಹಿಂದೂ ಕ್ಯಾಲೆಂಡರ್‌ನಂತೆ ಭಾದ್ರಪದ ಮಾಸದ ಶುಕ್ಲ ಪಕ್ಷದ (ಚಂದ್ರನ ಬೆಳವಣಿಗೆಯ ಹಂತ) ತೃತೀಯ ಅಂದರೆ ಮೂರನೇ ದಿನದಂದು ಗೌರಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಗೌರಿ ಹಬ್ಬವು ಆಗಸ್ಟ್ 30ರಂದು ಬರುತ್ತದೆ. ಈ ದಿನ ಪರಮೇಶ್ವರನ ಸತಿ ಪಾರ್ವತಿಯನ್ನು ಪೂಜಿಸಲಾಗುತ್ತದೆ. 

ಗೌರಿ ಹಬ್ಬ 2022: ಗೌರಿ ಬಾಗೀನದಲ್ಲಿ ಈ 16 ವಸ್ತುಗಳಿರಬೇಕು..

ಗೌರಿ ಹಬ್ಬವನ್ನು ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಮಾಡುತ್ತಾರೆ. ಗೌರಿ ಹಬ್ಬದ ದಿನದಂದು ಪಾರ್ವತಿ ದೇವಿಯ ಚಿನ್ನದ ಚಿತ್ರವನ್ನು ಕೆಲವು ಸಮುದಾಯಗಳು ಪೂಜಿಸಿದರೆ, ಮತ್ತೆ ಕೆಲವರು ಅರಿಶಿನದಿಂದ ತಯಾರಿಸುತ್ತಾರೆ. ಬಹುತೇಕರು ಗೌರಿಯ ವಿಗ್ರಹ ತಂದು ಇಲ್ಲವೇ ಕಲಶ ಸ್ಥಾಪಿಸಿ ಆವಾಹನೆ ಮಾಡಿ ಪೂಜಿಸುತ್ತಾರೆ..

ಮುಹೂರ್ತ
ಬೆಳಿಗ್ಗೆ ಗೌರಿ ಪೂಜೆ ಮುಹೂರ್ತವು 5:22ಕ್ಕೆ ಪ್ರಾರಂಭವಾಗಿ 7:52ರವರೆಗೆ ಇರುತ್ತದೆ. ಪೂಜೆಯ ಅವಧಿ 2 ಗಂಟೆ 29 ನಿಮಿಷಗಳು. ತೃತೀಯಾ ತಿಥಿ 29 ಆಗಸ್ಟ್ 2022 ರಂದು ಮಧ್ಯಾಹ್ನ 03:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಇದು 30 ಆಗಸ್ಟ್ 2022ರಂದು ಮಧ್ಯಾಹ್ನ 03:32 ಕ್ಕೆ ಕೊನೆಗೊಳ್ಳುತ್ತದೆ.

ಗೌರಿ ಕತೆ
ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂಬ ಬಯಕೆಯಿಂದ ತಪಸ್ಸನ್ನು ಆಚರಿಸುತ್ತಾಳೆ. ಶಿವ ಅವಳಿಗೆ ಒಲಿದು, ಕೈಲಾಸದಿಂದ ಭೂಮಿಗೆ ಬಂದು ಅವಳನ್ನು ವರಿಸುತ್ತಾನೆ. ಸಂಪ್ರದಾಯದಂತೆ ಪತ್ನಿಯನ್ನು ತಾನಿರುವ ಸ್ಥಳಕ್ಕೆ ಅಂದರೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ. ಮದುವೆಯಾದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗುವ ಪದ್ಧತಿ ಇದೆಯಷ್ಟೇ. ಅಂತೆಯೇ ಪಾರ್ವತೀ ದೇವಿಯು ಭಾದ್ರಪದ ಶುಕ್ಲದ ತೃತೀಯದಂದು ಭೂಲೋಕಕ್ಕೆ ಬರುತ್ತಾಳೆ. ಈ ಸಂದರ್ಭ ತವರಿನಲ್ಲಿ ಮನೆಮಗಳನ್ನು ತುಂಬು ಪ್ರೀತಿಯಿಂದ ಸತ್ಕರಿಸಲಾಗುತ್ತದೆ. ಸಂಭ್ರಮದಿಂದ ಆಕೆಯ ಇರುವನ್ನು ಆಚರಿಸಲಾಗುತ್ತದೆ. ಮರುದಿನ ಗಣೇಶನು ತನ್ನ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಅಜ್ಜನ ಮನೆಗೆ ಬರುತ್ತಾನೆ. ಮೊಮ್ಮಗ ಎಂದರೆ ಯಾರಿಗಾದರೂ ತುಸು ಹೆಚ್ಚೇ ಪ್ರೀತಿ. ಹಾಗಾಗಿ, ಗಣೇಶ ಚತುರ್ಥಿಯಂದು ಆತನನ್ನು ಅಗಾಧ ಪ್ರೀತಿಯಿಂದ ಉಪಚರಿಸಿ, ಅವನಿಗಿಷ್ಟದ ಲಾಡು, ಮೋದಕ, ಕರಿಗಡುಬು ಇತ್ಯಾದಿಗಳನ್ನೆಲ್ಲ ಮಾಡಿ ಬಡಿಸಲಾಗುತ್ತದೆ. 10 ದಿನಗಳ ಕಾಲ ತಾಯಿಮಗನನ್ನು ಉಳಿಸಿಕೊಂಡು ಉಪಚರಿಸಿ ಮತ್ತೆ ಅವರ ಮನೆಗೆ ಕಳುಹಿಸಿಕೊಡಲಾಗುತ್ತದೆ. ಇದನ್ನೇ ಪ್ರತಿಯೊಬ್ಬರೂ ಆಚರಿಸುವುದು. 

ಭಾದ್ರಪದ ಮಾಸ ಯಾವಾಗ ಆರಂಭ, ಹಬ್ಬಹರಿದಿನಗಳೇನು, ಮಹತ್ವವೇನು?

ಗೌರಿ ಹಬ್ಬ
ಮಹಿಳೆಯರು 16 ವರ್ಷಗಳ ಕಾಲ ಈ ವ್ರತವನ್ನು ಅನುಸರಿಸುತ್ತಾರೆ. ಏಕೆಂದರೆ ಗೌರಿ ದೇವಿಯು 16 ವರ್ಷಗಳ ತಪಸ್ಸು ಮಾಡಿದ್ದಳು. ಆಕೆಯ ತಪಸ್ಸಿಗೆ ಮೆಚ್ಚಿದ ಶಿವನು ಗೌರಿ ದೇವಿಯನ್ನು ವಿವಾಹವಾದನು. 
ವಿವಾಹಿತ ಮಹಿಳೆಯರು ಸಂತೋಷ ಮತ್ತು ಶಾಂತಿಯುತ ದಾಂಪತ್ಯ ಜೀವನಕ್ಕಾಗಿ ಗೌರಿಯಲ್ಲಿ ಪ್ರಾರ್ಥಿಸುತ್ತಾರೆ. ಅವಿವಾಹಿತ ಮಹಿಳೆಯರು ಒಳ್ಳೆಯ ಗಂಡಂದಿರನ್ನು ಪಡೆಯಲು ಇದನ್ನು ಮಾಡುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios