Asianet Suvarna News Asianet Suvarna News

ಈ ಗ್ರಾಮದಲ್ಲಿ ಗಣೇಶನಿಗಿಂತ ಗೌರಿಗೇ ಅಗ್ರಸ್ಥಾನ: ಹೆಂಗಳೆಯರ ಇಷ್ಟಾರ್ಥ ಈಡೇರಿಸೋ ಆರಾಧ್ಯ ದೇವತೆ..!

ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿಯ ಚಾವಡಿ ವಂಶಸ್ಥರು ಕಳೆದ 270 ವರ್ಷಗಳಿಂದಲೂ ಗೌರಿಯನ್ನ ಪೂಜಿಸ್ತಾ ಬಂದಿದ್ದಾರೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಈ ಗೌರಿ ಚಿರಪರಿಚಿತಳು. 

Gowri Devi idol Installed in Chikkamagaluru During Ganesha Festival grg
Author
First Published Oct 7, 2023, 9:22 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.07):  ಗೌರಿ-ಗಣೇಶ ಹಬ್ಬ ಅಂದ್ರೆ, ಅಲ್ಲಿ ಗಣೇಶನಿಗೆ ಅಗ್ರಸ್ಥಾನ. ಆದ್ರೆ, ಈ ಊರಲ್ಲಿ ಮಾತ್ರ ಗೌರಿಗೆ ಅಗ್ರಸ್ಥಾನ. ಎಲ್ಲಾ ಕಡೆ ಗೌರಿ ವಿಗ್ರಹ ಚಿಕ್ಕದಿದ್ರೆ, ಇಲ್ಲಿ ಗಣೇಶನ ವಿಗ್ರಹ ಚಿಕ್ಕದ್ದು. ವಿವಿಧ ಧಾನ್ಯಗಳಿಂದಲೇ ತಯಾರಾಗೋ ಇಲ್ಲಿನ ಗೌರಿ ಮೂರು ದಿನಗಳಿಗೊಮ್ಮೆ ಒಂದೊಂದು ರೀತಿಯಲ್ಲಿ ಬದಲಾಗ್ತಾಳೆ. ಒಂದೇ ಮೂರ್ತಿಗೆ ಮೂರು ದಿನಗಳಿಗೊಮ್ಮೆ ವಿವಿಧ ರೀತಿಯ ಅಲಂಕಾರ ಮಾಡಿ ಪೂಜೆ ಸಲ್ಲಿಸೋದು ಇಲ್ಲಿನ ವಿಶೇಷ. ಒಂದು ತಿಂಗಳ ಕಾಲ ನಿರಂತರವಾಗಿ ಪೂಜೆ ಸಲ್ಲಿಸೋ ಈ ಗೌರಿ ಮೂರ್ತಿಯನ್ನ ಗಣೇಶನ ವಿಗ್ರಹದೊಂದಿಗೆ ವಿಸರ್ಜಿಸೋ ಈ ಆಚರಣೆಗೆ 270 ವರ್ಷಗಳ ಇತಿಹಾಸವಿದೆ. 

ಮೂರು ದಿನಗಳಿಗೊಮ್ಮೆ ಒಂದೊಂದು ರೀತಿ ಅಲಂಕಾರ : 

ಗಣೇಶನ ಹಬ್ಬದಂದು ರಾಜ್ಯದಲ್ಲಿ ಪ್ರತಿಷ್ಠಾಪಿಸೋ ಕೆಲವೇ ಗೌರಿ ಮೂರ್ತಿಗಳಲ್ಲಿ ಇದು ಒಂದು. ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿಯ ಚಾವಡಿ ವಂಶಸ್ಥರು ಕಳೆದ 270 ವರ್ಷಗಳಿಂದಲೂ ಗೌರಿಯನ್ನ ಪೂಜಿಸ್ತಾ ಬಂದಿದ್ದಾರೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಈ ಗೌರಿ ಚಿರಪರಿಚಿತಳು. ಅರಿಶಿನ, ಕಡಲೆಬೇಳೆ, ಬೆಣ್ಣೆ, ಕೇಸರಿಯನ್ನು ಬಳಸಿ ಶಾಸ್ತ್ರೋಕ್ತವಾಗಿ ಗೌರಿ ಮೂರ್ತಿಯನ್ನ ನಿರ್ಮಿಸಲಾಗುತ್ತೆ. 270 ವರ್ಷಗಳಿಂದಲೂ ಈ ಗ್ರಾಮದ ಐದು ಕುಟುಂಬಗಳು ಇಂದಿಗೂ ಈ ರೂಢಿ-ಪದ್ಧತಿಯನ್ನ ಉಳಿಸಿಕೊಂಡು-ಬೆಳೆಸಿಕೊಂಡು ಬಂದಿವೆ. ತಿಂಗಳಲ್ಲಿ 11 ದಿನ ವಿಶೇಷ ಪೂಜೆ ಸಲ್ಲಿಸೋ ಈ ಗೌರಿಯನ್ನ ಪ್ರತಿ ಮೂರು ದಿನಗಳಿಗೊಮ್ಮೆ ಹೊಸ ರೂಪ-ಅಲಂಕಾರ ನೀಡಲಾಗುತ್ತೆ. ಪ್ರತಿ ದಿನ ಹೆಂಗಳೆಯರು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಗೌರಿಯಲ್ಲಿ ಹರಕೆ ಕಟ್ಟಿಕೊಳ್ತಾರೆ. 

NAVARATRI 2023: ನವರಾತ್ರಿಯಲ್ಲಿ ರಾತ್ರಿ ಪೂಜೆ ಮಾಡುವುದರಿಂದ ಸಿದ್ಧಿ ಪಡೆಯೋಕೆ ಸಾಧ್ಯ!

ಗೌರಿ ಹಾಗೂ ಗಣೇಶ ಏಕಕಾಲದಲ್ಲಿ ವಿಸರ್ಜನೆ : 

ಗೌರಿ ಹಾಗೂ ಗಣೇಶ ಏಕಕಾಲದಲ್ಲಿ ವಿಸರ್ಜನೆಗೊಳ್ಳೋದು ಬಹುಶಃ ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ಮಾತ್ರ ಅನ್ಸತ್ತೆ. ಗೌರಿ ಯಾವ ನಕ್ಷತ್ರದಲ್ಲಿ ಬಂದಿರುತ್ತಾಳೋ ಅದೇ ನಕ್ಷತ್ರದಲ್ಲಿ ವಿಸರ್ಜನೆಗೊಳ್ತಾಳೆ ಈ ಜಾಗದಲ್ಲಿ. ತಿಂಗಳಿಗೆ ಒಂದು ದಿನ ಕಡಿಮೆ ಅಥವಾ ಮೂರು ದಿನ ಕಡಿಮೆ, ಇಲ್ಲ ಒಂದು ದಿನದ ನಂತರ ಗೌರಿಯನ್ನ ವಿಸರ್ಜಿಸ್ತಾರೆ. ಕಳೆದ ನೂರಾರು ವರ್ಷಗಳಿಂದಲೂ ಈ ಪದ್ಧತಿ ಇದೇ ರೀತಿ ನಡೆಯುತ್ತಿದೆ. ಸಾಲದಕ್ಕೆ ಹರಕೆಗಳನ್ನ ಈಡೇರಿಸೋದ್ರಲ್ಲಿ ಈ ದೇವಿ ಎತ್ತಿದ ಕೈ. ಮಕ್ಕಳಿಲ್ಲದವರು ಈಕೆ ಬಳಿ ಹರಕೆ ಕಟ್ಟಿದ್ರೆ ಅಂತವರಿಗೆ ಮಕ್ಕಳಾಗುತ್ತಂತೆ. ಕಷ್ಟ ಅಂತಾ ಯಾರೇ ಈಕೆಯ ಬಳಿ ಬಂದ್ರು ಅವರನ್ನ ಬರೀಗೈಲಿ ಕಳಿಸೋಲ್ಲ ಈಕೆ. ಆದ್ದರಿಂದಲೇ ವರ್ಷದಿಂದ ವರ್ಷಕ್ಕೆ ಈ ದೇವಿ ತನ್ನ ಭಕ್ತರ ಸಂಖ್ಯೆಯನ್ನ ಹೆಚ್ಚಿಸಿಕೊಳ್ತಿದ್ದಾಳೆ. ಒಟ್ಟು ಒಂದು ತಿಂಗಳ ಬಳಿಕ ಗಣೇಶನೊಂದಿಗೆ ಈ ಗೌರಿ ಕೂಡ ಮುಗುಳುವಳ್ಳಿಯ ದೇವಿ ಕೆರೆಯಲ್ಲಿ ವಿಸರ್ಜನೆಗೊಳ್ತಾಳೆ. ಒಟ್ಟಾರೆ, ಈ ಗೌರಿ ಲಕ್ಷಾಂತರ ಜನರ ಕಷ್ಟಗಳನ್ನ ನಿವಾರಿಸೋ ಇಷ್ಟದೈವೆ. ಗ್ರಾಮದ ಜನರು ಕೂಡ ಪ್ರತಿ ವರ್ಷ ಭಯ-ಭಕ್ತಿಯಿಂದ ಗೌರಿಯನ್ನ ಕೂರಿಸ್ತಾ ಬಂದಿದ್ದಾರೆ. 

ಗಣೇಶ ಹಬ್ಬದಂದು ದೇಶದಾದ್ಯಂತ ವಿಜೃಂಭಣೆಯಿಂದ ಗಣೇಶನನ್ನ ಕೂರಿಸಿದ್ರೆ, ಈ ಗ್ರಾಮ ಎಲ್ಲರಿಗಿಂತ ತುಸು ಭಿನ್ನ ಎಂಬಂತೆ ಗಣೇಶನ ಜೊತೆ ಗೌರಿಯನ್ನೂ ಕೂರಿಸಿ ಅಷ್ಟೇ ವಿಜೃಂಭಣೆಯಿಂದ ಪೂಜೆ ಸಲ್ಲಿಸುತ್ತಾ ಬರ್ತಿರೋದು ಮತ್ತೊಂದು ವಿಶೇಷವಾಗಿದೆ. 

Follow Us:
Download App:
  • android
  • ios