ಅಸ್ಪೃಶ್ಯರು ಯಾರು? ತನ್ನ ಶಿಷ್ಯನೊಬ್ಬನನ್ನು ಅಸ್ಪೃರ್ಶ್ಯ ಎಂದು ಬುದ್ಧ ಹೇಳಿದ್ದೇಕೆ?
ನಮ್ಮ ನಡುವೆ ಅಸ್ಪೃಶ್ಯತೆಯ ಅರ್ಥ ಮತ್ತು ವ್ಯಾಪ್ತಿ ಜಾತಿಗೆ ಸಂಬಂಧಿಸಿದೆ. ಇಂಥ ಜಾತಿ, ಮತಗಳನ್ನು ಮೀರಿದ ಮಹಾನ್ ವ್ಯಕ್ತಿ ಬುದ್ಧನೆಂಬುದು ನಮಗೆಲ್ಲ ಗೊತ್ತು. ಹಾಗಿದ್ದೂ, ಬುದ್ಧನು ಒಮ್ಮೆ ತನ್ನ ಶಿಷ್ಯನನ್ನು ಅಸ್ಪೃಶ್ಯ ಎಂದು ದೂರವಿಡುತ್ತಾನೆ. ಇದಕ್ಕೆ ಕಾರಣವೇನು?
ಜನಸಾಮಾನ್ಯರ ನಡುವೆ ಅಸ್ಪೃಶ್ಯತೆ ಎಂಬುದು ಆಗಾಗ ಹಾದು ಹೋಗಿ ಗಲಾಟೆ, ದ್ವೇಷ, ಜಗಳ, ಅವಮಾನಗಳಿಗೆ ಕಾರಣವಾಗುತ್ತದೆ. ಇದೊಂದು ಕೆಟ್ಟ ಪಿಡುಗೆಂಬುದು ಗೊತ್ತಿದ್ದರೂ ಸಮಾಜದಿಂದ ಸಂಪೂರ್ಣ ತೊಲಗಿಲ್ಲ. ಆದರೆ, ಜ್ಞಾನೋದಯ ಹೊಂದಿದ, ಎಲ್ಲ ವಿಚಾರದಲ್ಲೂ ಸರಿಯಾಗಿಯೇ ನಡೆಯುವ ಆದರ್ಶ ವ್ಯಕ್ತಿ ಗೌತಮ ಬುದ್ಧ ಕೂಡಾ ತನ್ನ ಶಿಷ್ಯನೊಬ್ಬನನ್ನು ಅಸ್ಪೃಶ್ಯ ಎಂದು ದೂರವಿಟ್ಟಿದ್ದರು ಎಂದರೆ ಶಾಕ್ ಆಗುವುದಲ್ಲವೇ?
ಬುದ್ಧನ ಈ ಕತೆಯಲ್ಲಿ ಯಾರು ಅಸ್ಪೃಶ್ಯರು ಎಂಬುದರ ನಿಜವಾದ ಅರ್ಥವನ್ನು ಗೌತಮ ಬುದ್ಧ ತಿಳಿಸಿದ್ದಾನೆ. ಏನಿದು ಕತೆ ತಿಳಿಯೋಣ..
ಒಮ್ಮೆ ಭಗವಾನ್ ಗೌತಮ ಬುದ್ಧನು ಪ್ರವಚನ ಸಭೆಗೆ ಬಂದು ಮೌನವಾಗಿ ಕುಳಿತನು. ಎಷ್ಟು ಸಮಯವಾದರೂ ಬುದ್ಧ ಬಾಯಿ ಬಿಚ್ಚಲಿಲ್ಲ. ಮಹಾತ್ಮ ಬುದ್ಧನನ್ನು ನೋಡಿದ ಶಿಷ್ಯರು ಚಿಂತಿತರಾಗಲು ಪ್ರಾರಂಭಿಸಿದರು. ಮಹಾತ್ಮ ಬುದ್ಧನು ಅನಾರೋಗ್ಯ ಪೀಡಿತನಾಗಿದ್ದಾನೆಯೇ ಎಂದು ಅವರು ಆಶ್ಚರ್ಯ ಪಡಲು ಪ್ರಾರಂಭಿಸಿದರು. ಅಂತೂ, ಅಂತಿಮವಾಗಿ ಒಬ್ಬ ಶಿಷ್ಯ ಬುದ್ಧನನ್ನು ಕೇಳಿಯೇ ಬಿಟ್ಟನು, ಶಿಷ್ಯನು ಹೇಳಿದನು - 'ಗುರುದೇವ, ನೀವೇಕೆ ಇಂದು ಮೌನವಾಗಿರುವಿರಿ?'
ಬುದ್ಧ ಯಾವುದೇ ಉತ್ತರ ನೀಡಲಿಲ್ಲ. ಇದಾದ ನಂತರ ಮತ್ತೊಬ್ಬ ಶಿಷ್ಯನು ಮತ್ತೆ ಅದೇ ಪ್ರಶ್ನೆಯನ್ನು ಕೇಳಿದನು - 'ಗುರುದೇವ! ನೀವು ಆರೋಗ್ಯವಾಗಿದ್ದೀರಾ?' ಆದರೆ ಮಹಾತ್ಮಾ ಬುದ್ಧ ಮತ್ತೆ ಉತ್ತರ ನೀಡದೆ ಮೌನವಾದನು.
ಬೇಡವೆಂದರೂ ಬರ್ತಿವೆಯಾ ಅಶ್ಲೀಲ ಆಲೋಚನೆಗಳು? ಬುದ್ಧನ ಈ ಕತೆ ನಿಮ್ಮ ಯೋಚನೆ ಬದಲಿಸುತ್ತೆ..
ಅಷ್ಟರಲ್ಲಿ ಹೊರಗಿನಿಂದ ಒಬ್ಬನ ಕೂಗು ಜೋರಾಗಿ ಕೇಳಿಸಿತು. 'ಇವತ್ತು ನಿಮ್ಮ ಪ್ರವಚನ ಸಭೆಗೆ ಬರಲು ನನಗೆ ಯಾಕೆ ಅವಕಾಶ ನೀಡಲಿಲ್ಲ' ಎಂದು ಕೇಳುತ್ತಿದ್ದನು. ಬುದ್ಧನು ಆ ವ್ಯಕ್ತಿಯ ಪ್ರಶ್ನೆಗೂ ಉತ್ತರ ಕೊಡದೆ ಕಣ್ಣು ಮುಚ್ಚಿ ಧ್ಯಾನದಲ್ಲಿ ಮಗ್ನನಾದನು.
ಆ ವ್ಯಕ್ತಿ ಮತ್ತೆ ಅದೇ ಪ್ರಶ್ನೆಯನ್ನು ಪುನರಾವರ್ತಿಸುತ್ತಾ ಹೊರಗಿನಿಂದ ಕೂಗುತ್ತಿದ್ದನು, 'ಪ್ರವಚನಕ್ಕೆ ಪ್ರವೇಶಿಸಲು ನನಗೆ ಏಕೆ ಅವಕಾಶ ನೀಡುತ್ತಿಲ್ಲ?'
ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದ ಮಹಾತ್ಮ ಬುದ್ಧನ ಶಿಷ್ಯರಲ್ಲಿ ಒಬ್ಬರು, ಆ ವ್ಯಕ್ತಿಯನ್ನು ಬೆಂಬಲಿಸುತ್ತಾ ಬುದ್ಧನಿಗೆ ಹೇಳಿದನು - 'ಗುರುದೇವ! ಆ ವ್ಯಕ್ತಿಯನ್ನು ಪ್ರವಚನ ಕೇಂದ್ರದೊಳಗೆ ಬರಲು ಅನುಮತಿಸಿ.'
ಈಗ ಮಹಾತ್ಮ ಬುದ್ಧ ಕಣ್ಣು ತೆರೆದು ಹೇಳಿದನು - 'ಇಲ್ಲ, ಅವನನ್ನು ಪ್ರವಚನ ಸಭೆಗೆ ಬರಲು ಬಿಡಲಾಗುವುದಿಲ್ಲ. ಏಕೆಂದರೆ ಆತ ‘ಅಸ್ಪೃಶ್ಯ’.'
ಅಸ್ಪೃಶ್ಯ! ಆದರೆ ಯಾಕೆ? ಬುದ್ಧನ ಬಾಯಿಯಿಂದ ಈ ಮಾತುಗಳನ್ನು ಕೇಳಿದ ಶಿಷ್ಯರೆಲ್ಲರೂ ಇಂದು ಗುರುದೇವನಿಗೆ ಏನಾಯಿತು ಎಂದು ಆಶ್ಚರ್ಯ ಪಟ್ಟರು. ಈ ಗುರುಗಳಾದರೂ ಅಸ್ಪೃಶ್ಯತೆಯನ್ನು ನಂಬಲು ಆರಂಭಿಸಿದ್ದು ಯಾವಾಗ?
ಎಲ್ಲಾ ಶಿಷ್ಯರ ಭಾವನೆಗಳನ್ನು ಪರಿಶೀಲಿಸಿದ ನಂತರ, ಬುದ್ಧ ಹೇಳಿದನು, 'ಹೌದು, ಅವನು ಅಸ್ಪೃಶ್ಯ. ಯಾಕೆಂದರೆ ಇವತ್ತು ಹೆಂಡತಿ ಜೊತೆ ಜಗಳ ಮಾಡಿಕೊಂಡು ಬಂದಿದ್ದಾನೆ. ಕೋಪವು ಜೀವನದ ಶಾಂತಿಯನ್ನು ಹಾಳು ಮಾಡುತ್ತದೆ. ಕೋಪಗೊಂಡ ವ್ಯಕ್ತಿ ಮಾನಸಿಕ ಹಿಂಸೆಯನ್ನು ಮತ್ತೊಬ್ಬರಿಗೂ ಕೊಟ್ಟು, ತಾನೂ ಅನುಭವಿಸುತ್ತಾನೆ. ಈ ಕೋಪದಿಂದಾಗಿ, ದೈಹಿಕ ಹಿಂಸೆ ನಡೆಯುತ್ತದೆ ಮತ್ತು ಕೋಪಗೊಳ್ಳುವ ವ್ಯಕ್ತಿಯು ಅಸ್ಪೃಶ್ಯನಾಗಿರುತ್ತಾನೆ, ಏಕೆಂದರೆ ಅವನ ಆಲೋಚನೆ ಅಲೆಗಳು ಇತರರ ಮೇಲೂ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಇಂದು ಆತ ಪ್ರವಚನ ಸಭೆಯ ಹೊರಗೆ ಉಳಿಯಬೇಕು. ಅವನು ಅಲ್ಲಿಯೇ ನಿಂತು ಪಶ್ಚಾತ್ತಾಪವೆಂಬ ಬೆಂಕಿಯಲ್ಲಿ ಉರಿದು ಶುದ್ಧನಾಗಬೇಕಾಗುತ್ತದೆ'.
ಬುದ್ಧನ ಚಿಂತನೆ: ಶ್ರೀಮಂತ ವೇಶ್ಯೆಯಿಂದ ಸಾಮಾನ್ಯ ಭಿಕ್ಷುಣಿಯಾದ ಅತಿ ಲೋಕ ಸುಂದರಿ ಆಮ್ರಪಾಲಿ
ಮಹಾತ್ಮ ಬುದ್ಧನು ವಿವರಿಸಲು ಪ್ರಯತ್ನಿಸುತ್ತಿರುವುದು ಏನನ್ನು ಎಂದು ಶಿಷ್ಯ ಸಮುದಾಯವು ಅರ್ಥ ಮಾಡಿಕೊಂಡಿತು. ಅಸ್ಪೃಶ್ಯತೆಯ ನಿಜ ವ್ಯಾಖ್ಯಾನದ ಜೊತೆಗೆ ಕೋಪದಿಂದ ದೂರವಿರಬೇಕು ಎಂಬುದನ್ನೂ ಅರಿತರು.
ಆ ವ್ಯಕ್ತಿಯೂ ತನ್ನ ತಪ್ಪಿಗಾಗಿ ಸಾಕಷ್ಟು ಪಶ್ಚಾತ್ತಾಪ ಪಟ್ಟನು ಮತ್ತು ನಂತರ ಅವನು ಎಂದಿಗೂ ಕೋಪಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ಇದಾದ ನಂತರ ಮಹಾತ್ಮಾ ಬುದ್ಧ ಅವನಿಗೆ ಪ್ರವಚನ ಸಭೆಗೆ ಬರಲು ಅನುಮತಿ ನೀಡಿದನು.