13ನೇ ಶುಕ್ರವಾರ: ಈ ದಿನವನ್ನು ಅನೇಕ ದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಅನೇಕ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಾರೆ.
13ನೇ ಶುಕ್ರವಾರದ ನಂಬಿಕೆಗಳು: ಶಕುನ-ಅಪಶಕುನಗಳ ನಂಬಿಕೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲೂ ಇಂತಹ ನಂಬಿಕೆಗಳಿವೆ. 13ನೇ ಶುಕ್ರವಾರ ಇದಕ್ಕೊಂದು ಉದಾಹರಣೆ. ಈ ದಿನವನ್ನು ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಕ್ರೈಸ್ತ ಧರ್ಮದಲ್ಲಿ ಕೆಲವರು ಇದನ್ನು ಸೈತಾನನ ದಿನವೆಂದೂ ಕರೆಯುತ್ತಾರೆ. ಅಮೆರಿಕದ ಜನಸಂಖ್ಯೆಯ ಸುಮಾರು 75% ಜನರು 13ನೇ ಶುಕ್ರವಾರದಂದು ಭಯಭೀತರಾಗಿರುತ್ತಾರೆ ಎಂದು ಒಂದು ಸಂಶೋಧನೆ ಹೇಳುತ್ತದೆ. ಅನೇಕರು ಈ ದಿನ ಮನೆಯಿಂದ ಹೊರಗೆ ಬರುವುದಿಲ್ಲ. 13ನೇ ಶುಕ್ರವಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ…
13ನೇ ಸಂಖ್ಯೆ ಏಕೆ ಅಶುಭ?
ಸಂಖ್ಯಾಶಾಸ್ತ್ರದ ಪ್ರಕಾರ, 13 ಅಪೂರ್ಣ ಸಂಖ್ಯೆ ಏಕೆಂದರೆ ಅದನ್ನು ಯಾವುದೇ ಸಂಖ್ಯೆಯಿಂದ ಭಾಗಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸಂಖ್ಯೆಯಲ್ಲಿ ಸಮತೋಲನದ ಕೊರತೆಯಿದೆ ಎಂದು ನಂಬಲಾಗಿದೆ. ಟ್ಯಾರೋ ಜ್ಯೋತಿಷ್ಯದಲ್ಲಿ 13 ಅನ್ನು ಮರಣದ ಸಂಖ್ಯೆ ಎಂದು ಪರಿಗಣಿಸಲಾಗಿದೆ. ಮರಣ ಎಂದರೆ ಕಷ್ಟದ ಸಮಯ. ಹೀಗೆ ಜ್ಯೋತಿಷ್ಯದ ಈ ಎರಡೂ ವಿಧಾನಗಳು 13ನೇ ಸಂಖ್ಯೆಯನ್ನು ಅಶುಭವೆಂದು ಪರಿಗಣಿಸುತ್ತವೆ.
13ನೇ ಸಂಖ್ಯೆಯ ಭಯ
ಪ್ರಪಂಚದ ಅನೇಕ ದೇಶಗಳಲ್ಲಿ 13ನೇ ಸಂಖ್ಯೆಯ ಭಯ ಎಷ್ಟಿದೆ ಎಂದರೆ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಕೆಲವು ದೇಶಗಳಲ್ಲಿ ಕಟ್ಟಡಗಳಲ್ಲಿ 13ನೇ ಮಹಡಿ ಅಥವಾ ಫ್ಲಾಟ್ ಇರುವುದಿಲ್ಲ. 13ನೇ ಮಹಡಿಯನ್ನು 12 ಬಿ ಎಂದು ಕರೆದುಬಿಡುತ್ತಾರೆ! ಇಲ್ಲವಾದ್ರೆ 12ರ ಬಳಿಕ 14ನೇ ಮಹಡಿ ಎಂದು ಹೆಸರಿಟ್ಟುಬಿಡುತ್ತಾರೆ. 13ನೇ ತಾರೀಖು ಶುಕ್ರವಾರಂದು 13ನೇ ಸಂಖ್ಯೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನೂ ಮಾಡೋದೇ ಇಲ್ಲ! ಲಾಡ್ಜ್‌ಗಳಲ್ಲಿ 13ನೇ ಸಂಖ್ಯೆಯ ರೂಂ ಬುಕ್ ಮಾಡೋದಿಲ್ಲ. ವಿಮಾನದಲ್ಲಿ 13ನೇ ಸಂಖ್ಯೆಯ ಸೀಟ್‌ನಲ್ಲಿ ಕೂರೋದಿಲ್ಲ. 13 ಜನರು ಒಂದೆಡೆ ಸೇರೋದಿಲ್ಲ. 13ನೇ ತಾರೀಖು ಮದುವೆ ಮಾಡಿಕೊಳ್ಳೋದಿಲ್ಲ. ಕಾರು, ಮನೆ ಖರೀದಿ ಮಾಡೋದಿಲ್ಲ. 13ನೇ ತಾರೀಖು ದೂರಪ್ರವಾಸವನ್ನಂತೂ ಮಾಡೋದೇ ಇಲ್ಲ! ಕೆಲವು ಕ್ರೈಸ್ತ ದೇಶಗಳಲ್ಲಿ 13ನೇ ಶುಕ್ರವಾರದಂದು ಅಪಘಾತ, ಕಳ್ಳತನ ಮತ್ತು ಬೆಂಕಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಜನರು ಈ ದಿನ ಮನೆಯಲ್ಲೇ ಇರಲು ಬಯಸುತ್ತಾರೆ.
13ನೇ ತಾರೀಖಿನ ಶುಕ್ರವಾರ ಏಕೆ ಅಶುಭ?
ಯಾವುದೇ ತಿಂಗಳು 13ನೇ ತಾರೀಖು ಶುಕ್ರವಾರ ಬಂದರೆ ಅದು ಅಶುಭ ಎಂಬ ನಂಬಿಕೆ ಕ್ರೈಸ್ತ ಧರ್ಮ ಹುಟ್ಟುವುದಕ್ಕಿಂತಾ ಮೊದಲಿನಿಂದಲೇ ಇದೆ. ಹಾಗೆ ನೋಡಿದ್ರೆ, ಏಸು ಕ್ರಿಸ್ತ ಶಿಲುಬೆಗೇರಿದ್ದು ಕೂಡಾ ಶುಕ್ರವಾರವೇ. ‘ಅಂತಿಮ ಭೋಜನ’ದ ದಿನ ಏಸುಕ್ರಿಸ್ತನ ಜೊತೆ ಆಹಾರ ಸೇವಿಸಿದ 13 ಅತಿಥಿಗಳು, ಕೊನೆಗೆ ಕ್ರಿಸ್ತನಿಗೆ ಮೋಸ ಮಾಡಿ ಶಿಲುಬೆಗೇರಲು ಕಾರಣವಾದರು.
ಇನ್ನೊಂದು ಕಾರಣ
ರೋಮ್‌ನಲ್ಲಿ ಶುಕ್ರವಾರದಂದು ಗಲ್ಲಿಗೇರಿಸುವ ಪದ್ಧತಿ ಇತ್ತು ಎಂದು ಹೇಳಲಾಗುತ್ತದೆ. ಅಮೆರಿಕದಲ್ಲೂ ಶುಕ್ರವಾರದಂದು ಗಲ್ಲಿಗೇರಿಸಲಾಗುತ್ತಿತ್ತು. ಹಲವು ಬಾರಿ ಶುಕ್ರವಾರದಂದು ಗಲ್ಲಿಗೇರಿಸಿದ ದಿನ ೧೩ನೇ ತಾರೀಖಾಗಿರುತ್ತಿತ್ತು. ಇದರಿಂದಾಗಿ ೧೩ನೇ ಶುಕ್ರವಾರದ ಬಗ್ಗೆ ಜನರಲ್ಲಿ ಹೆಚ್ಚಿನ ಭಯ ಹುಟ್ಟಿಕೊಂಡಿತು. ಇಂದಿಗೂ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
Disclaimer
ಈ ಲೇಖನದಲ್ಲಿರುವ ಮಾಹಿತಿಯು ನಂಬಿಕೆಗಳನ್ನು ಆಧರಿಸಿದೆ. ನಾವು ಕೇವಲ ಮಾಹಿತಿಯನ್ನು ಒದಗಿಸುವ ಮಾಧ್ಯಮ. ಬಳಕೆದಾರರು ಈ ಮಾಹಿತಿಯನ್ನು ಕೇವಲ ಮಾಹಿತಿಗಾಗಿ ಬಳಸಬೇಕು.
