ಬಾಗಲಕೋಟೆಯಲ್ಲಿ ಗ್ರಾಮ ದೇವತೆಯರ ಜಾತ್ರೆ: ಕೊರೋನಾ ಇಲ್ಲದೆ ಈ ಬಾರಿ ಅದ್ಧೂರಿ ಜಾತ್ರೆ
ಅದು ಶಕ್ತಿದೇವತೆ ಮೇಲಿನ ಗ್ರಾಮಸ್ಥರ ನಂಬಿಕೆ, ಇಷ್ಟಾರ್ಥ ಸಿದ್ದಿಗಾಗಿ ಗ್ರಾಮಸ್ಥರು ಮಾಡಿಕೊಳ್ಳುವ ಸಂಪ್ರದಾಯಿಕ ಆಚರಣೆ, ಇಂದಿನ ಆಧುನಿಕತೆಯ ನಾಗಾಲೋಟದ ಭರಾಟೆಯಲ್ಲಿಯೂ ಜನರು ದೇವರ ಬಗ್ಗೆ ಇಟ್ಟ ನಂಬಿಕೆಯ ಪ್ರತೀಕ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಮೇ.22): ಅದು ಶಕ್ತಿದೇವತೆ ಮೇಲಿನ ಗ್ರಾಮಸ್ಥರ ನಂಬಿಕೆ, ಇಷ್ಟಾರ್ಥ ಸಿದ್ದಿಗಾಗಿ ಗ್ರಾಮಸ್ಥರು ಮಾಡಿಕೊಳ್ಳುವ ಸಂಪ್ರದಾಯಿಕ ಆಚರಣೆ, ಇಂದಿನ ಆಧುನಿಕತೆಯ ನಾಗಾಲೋಟದ ಭರಾಟೆಯಲ್ಲಿಯೂ ಜನರು ದೇವರ ಬಗ್ಗೆ ಇಟ್ಟ ನಂಬಿಕೆಯ ಪ್ರತೀಕ. ಇಂತಹ ದೈವಿ ನಂಬಿಕೆ, ಆಚರಣೆಗಳಿಗೆ ಸಾಕ್ಷಿಯಾಗುವುದು ಕೆರೂರ ಪಟ್ಟಣದ ಗ್ರಾಮ ದೇವತೆಯರ ಜಾತ್ರೆ. ಹೌದು! ಕಳೆದ ಎರಡು ವಷ೯ದಿಂದ ಕೊರೋನಾ ಮಹಾಮಾರಿಯಿಂದ ಯಾವೊಂದು ಹಬ್ಬ ಹರಿದಿನ ಜಾತ್ರೆಗಳನ್ನೂ ಸಹ ವಿಜೃಂಭಣೆಯಿಂದ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಮಾತ್ರ ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಗ್ರಾಮ ದೇವತೆಯರ ಜಾತ್ರೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ.
ಗ್ರಾಮದ ದ್ಯಾಮವ್ವ ಮತ್ತು ದುರಗಮ್ಮ ದೇವತೆಯರ ಬೃಹತ್ ಮೂತಿ೯ಗಳನ್ನು ಇಡೀ ಪಟ್ಟಣದಾದ್ಯಂತ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಪಟ್ಟಣದ ಪ್ರತಿಯೊಂದು ಓಣಿ ಓಣಿಗಳಲ್ಲಿ ಗ್ರಾಮ ದೇವತೆಯರ ಮೂತಿ೯ಗಳ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಗ್ರಾಮ ದೇವತೆಯರು ತಮ್ಮ ತಮ್ಮ ಕಾಲೋನಿಗಳಿಗೆ ಮೆರವಣಿಗೆ ಮೂಲಕ ಬರುತ್ತಿದ್ದರೆ ಇತ್ತ ಹೆಂಗಳೆಯರು ತಮ್ಮ ಮನೆಯ ಮುಂದೆ ನೀರು ಹಾಕಿ ಸಿಂಗರಿಸುತ್ತಾರೆ. ಬಳಿಕ ಮೆರವಣಿಗೆಯಲ್ಲಿ ಬಂದ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ ಬಳಿಕ ನಗರದ ಕಾಯಿಪಲ್ಯೆ ಮಾರ್ಕೆಟ್ ನ ಕಟ್ಟೆಯ ಮೇಲೆ ದ್ಯಾವಮ್ಮ ಮತ್ತು ದುರಗಮ್ಮ ದೇವತೆಯರನ್ನ ಪ್ರತಿಷ್ಠಾಪನೆ ಮಾಡಲಾಗತ್ತದೆ. ಇದಾದ ನಂತರ ನಿರಂತರ 5 ದಿನಗಳ ಕಾಲ ಇಡೀ ಭಕ್ತ ಸಮೂಹದಿಂದ ಪೂಜೆ, ಪುರಸ್ಕಾರ, ಅನ್ನ ಪ್ರಸಾದಗಳು ನಡೆದುಕೊಂಡು ಬರುತ್ತವೆ.
Bagalkot: ಇಲಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ..!
ವಾರದ ದಿನ ಕುಟ್ಟುವ ಹಾಗಿಲ್ಲ, ಬೀಸೋ ಹಾಗಿಲ್ಲ, ಗ್ರಾಮ ದೇವಿಯರ ಹೆಸರಲ್ಲಿ ವಾರದ ಆಚರಣೆ: ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ದ್ಯಾವಮ್ಮ ಮತ್ತು ದುರಗಮ್ಮ ಗ್ರಾಮ ದೇವತೆಯರ ಜಾತ್ರೆ ಅಂದರೆ ಹಾಗೇನೆ ಜಾತ್ರೆಗೂ ಮೊದಲು 4 ವಾರಗಳ ಆಚರಣೆಯನ್ನು ಮಾಡಲಾಗುತ್ತದೆ. ದೇವಿಯ ಹೆಸರಲ್ಲಿ ವಾರ ಹಿಡಿದು ಪೂಜೆ ಮಾಡುವಾಗ ಕೆಲವೊಂದು ಸಂಪ್ರದಾಯಿಕ ನಿಷಿದ್ಧತೆಗಳನ್ನ ಜನರು ತಾವೇ ಸ್ವಯಂ ಸ್ಪೂತಿ೯ಯಿಂದ ಕೆಲವು ಆಚರಣೆಗಳನ್ನು ಮಾಡಿಕೊಳ್ಳುತ್ತಾರೆ. ಅವೆಂದರೆ ವಾರದ ದಿನ ಯಾರೂ ಸಹ ಮನೆಯಲ್ಲಿ ಕುಟ್ಟುವ ಹಾಗಿಲ್ಲ, ಬೀಸುವ ಹಾಗಿಲ್ಲ ಸಾಲದ್ದಕ್ಕೆ ಉತ್ತರ ಕನಾ೯ಟಕದ ಜೋಳದ ರೊಟ್ಟಿಗೂ ಸಹ ಅಂದು ಬ್ರೇಕ್. ಅಂದರೆ ಯಾರೂ ಸಹ ತಮ್ಮ ಮನೆಯಲ್ಲಿ ಬೀಸುವ ಕಾರ್ಯ ಮಾಡುವಂತಿಲ್ಲ, ಮತ್ತು ಕುಟ್ಟಿ ಪದಾರ್ಥ ಮಾಡುವಂತಹ ಕೆಲಸ ಮಾಡುವಂತಿಲ್ಲ. ವಿಶೇಷ ಅಂದರೆ ಉತ್ತರ ಕನಾ೯ಟಕದಲ್ಲಿ ಪ್ರತಿನಿತ್ಯ ತಯಾರಾಗುವ ರೊಟ್ಟಿಗಳನ್ನು ಸಹ ಹೆಣ್ಣು ಮಕ್ಕಳು ಮಾಡುವ ಹಾಗಿಲ್ಲ. ವಾರದ ದಿನದಂದು ಹೀಗೆ ಹಿಂದಿನಿಂದ ಹಿರಿಯರು ಮಾಡಿಕೊಂಡು ಬಂದ ಸಂಪ್ರದಾಯಗಳನ್ನ ಚಾಚು ತಪ್ಪದೇ ಮಾಡಿಕೊಂಡು ಇಂದಿಗೂ ಮುನ್ನಡೆಯಲಾಗುತ್ತಿದೆ.
ಗ್ರಾಮಕ್ಕೆ ರೋಗ ರುಜಿನ ಬರದಂತೆ ಗ್ರಾಮ ದೇವತೆಯರಿಗೆ ಮೊರೆ ಹೋಗುವ ಜನ: ಸಾಮಾನ್ಯವಾಗಿ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗುವುದು ಸಹಜ ಅದರಂತೆ ಕೆರೂರು ಪಟ್ಟಣದಲ್ಲಿ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಗ್ರಾಮದೇವತೆ ಗಳ ಮೊರೆ ಹೋಗುತ್ತಾರೆ. ಮಕ್ಕಳಿಗೆ ರೋಗ ರುಜಿನ ಬಂದರೆ ಅದಕ್ಕೂ ಸಹ ದೇವರ ಮೊರೆ ಹೋಗುವುದನ್ನು ಇಲ್ಲಿ ಕಾಣಬಹುದಾಗಿದೆ. ಹಿಂದೆ ಹಿರಿಯರ ಕಾಲದಲ್ಲಿ ಗ್ರಾಮಗಳಿಗೆ ದೊಡ್ಡ ದೊಡ್ಡ ರೋಗಗಳು ಬಂದಾಗ ಆಗಲು ಗ್ರಾಮದೇವತೆಯರ ಮೊರೆ ಹೋಗಿರುವುದನ್ನು ನಾವು ಕಾಣುತ್ತೇವೆ ಆದರೆ ಇಂದಿನ ಆದುನಿಕತೆಯ ಯುಗದಲ್ಲೂ ಸಹ ಕೆಲವೊಂದು ಕಾಯಿಲೆಗಳು ಕಂಡು ಬಂದಾಗ ಈ ಸಂದರ್ಭದಲ್ಲಿ ಗ್ರಾಮದೇವತೆಯರ ಬಳಿ ಜನರು ಮೊರೆಹೋಗಿ ತಮ್ಮ ಬೇಡಿಕೆ ಈಡೇರಿದರೆ ಹರಕೆಯನ್ನು ತೀರಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ. ಹೀಗಾಗಿ ಗ್ರಾಮ ದೇವಿಗೆ ವಿಶೇಷ ಪೂಜೆ ಪುನಸ್ಕಾರ, ಆಚರಣೆ ಮಾಡುವುದರ ಮೂಲಕ ಜನರು ತಮ್ಮ ಹರಕೆಯನ್ನು ಪೂರೈಸುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ.
ಗ್ರಾಮದೇವತೆಯರ ವಾರದ ದಿನ ರೈತರಿಂದ ಕೃಷಿ ಕಾರ್ಯಗಳಿಗೂ ಸಹ ಬ್ರೇಕ್: ಗ್ರಾಮದೇವತೆಯರ ಜಾತ್ರೆಯಲ್ಲಿ ಆಚರಣೆಯ ಆಗುವಂತಹ 4 ವಾರಗಳ ಆಚರಣೆಯಲ್ಲಿ ಪ್ರಮುಖವಾಗಿ ರೈತರಿಂದ ನಡೆಯುವ ಕೃಷಿ ಕಾರ್ಯಗಳಿಗೂ ಸಹ ಬ್ರೇಕ್ ಬೀಳುತ್ತೆ ಯಾಕೆಂದರೆ ವಾರದ ದಿನ ಯಾರೂ ಸಹ ಎತ್ತುಗಳನ್ನು ಕಟ್ಟಿ ಚಕ್ಕಡಿ ಹೂಡೋದಿಲ್ಲ, ನೇಗಿಲ ಹೊಡೆಯೋದಿಲ್ಲ ಎಂಬುದು ಸೇರಿದಂತೆ ಹೊಲಗದ್ದೆಗಳಲ್ಲಿ ಯಾರೊಬ್ಬ ರೈತರು ಅಂದು ಕೃಷಿ ಕಾರ್ಯ ಚಟುವಟಿಕೆಗಳನ್ನು ಮಾಡುವುದಿಲ್ಲ. ದೇವಿಯರ ಹೆಸರಲ್ಲಿ ಇಂದಿಗೂ ಇಂತಹ ಕೆಲವೊಂದು ಆಚರಣೆಗಳು ಇಂದಿಗೂ ಸಹ ಮಾಡಿಕೊಂಡು ಬಂದಿವೆ.
Bagalkote: ಕೊಡಗಿನ ತ್ರಿಶೂಲ ದೀಕ್ಷೆ ತಪ್ಪೇನಲ್ಲ, ಅದೇನು ಕಾನೂನು ಬಾಹಿರವಲ್ಲ: ಪ್ರಮೋದ್ ಮುತಾಲಿಕ್
ಜಾತಿ ಮತ ಮೀರಿ ಭಾವೈಕ್ಯತೆಯಿಂದ ನಡೆವ ಅದ್ಧೂರಿ ಗ್ರಾಮ ದೇವತೆಯರ ಜಾತ್ರೆ: ಗ್ರಾಮದೇವತೆಯ ಜಾತ್ರೆ ಅಂದರೆ ಸಾಕು ಅದು ಒಂದೇ ಜಾತಿ ಮತಕ್ಕೆ ಸೀಮಿತವಾಗಿರುವಂಥದ್ದಲ್ಲ, ಬದಲಾಗಿ ಗ್ರಾಮದ ತುಂಬೆಲ್ಲ ಇರುವ ಎಲ್ಲ ಸಮಾಜಗಳ ಪ್ರತೀಕವಾಗಿ ಈ ದ್ಯಾಮವ್ವ ಮತ್ತು ದುರ್ಗಮ್ಮ ಗ್ರಾಮ ದೇವತೆಯರ ಜಾತ್ರೆ ನಡೆಯುತ್ತೆ. ಇಡೀ ಊರಿಗೆ ಊರೇ ಈ ಗ್ರಾಮ ದೇವತೆಯರ ಜಾತ್ರೆಯಲ್ಲಿ ಸಂಭ್ರಮಿಸುತ್ತದೆ. ಈ ಮೂಲಕ ಇಂದಿನ ಯುಗದಲ್ಲಿ ಜಾತಿ ಜಾತಿಗಳ ಸಮನ್ವಯತೆ ಮೂಡಿಸಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿ ಭಾವೈಕ್ಯತೆಗೆ ಈ ಗ್ರಾಮ ದೇವತೆಯರ ಜಾತ್ರೆ ಸಾಕ್ಷಿಯಾಗುತ್ತದೆ.