Asianet Suvarna News Asianet Suvarna News

Diwali 2021: ಶುಭ, ಲಾಭ, ಸಮೃದ್ಧಿಯ ಹಬ್ಬ ದೀಪಾವಳಿ: ಮಹತ್ವವೇನು? ಆಚರಣೆ ಹೇಗೆ?

* ಮೂರು ದಿನಗಳ ದೀಪದ ಹಬ್ಬದ ಹಿನ್ನೆಲೆ ಏನು? ಮಹತ್ವವೇನು? ಹೇಗೆ ಆಚರಿಸಬೇಕು?

* ಶುಭ ಲಾಭ ಸಮೃದ್ಧಿಯ ಹಬ್ಬ ದೀಪಾವಳಿ

Diwali 2021 Here is everything you need to know about the 3 days of the festival of lights pod
Author
Bangalore, First Published Nov 5, 2021, 9:10 AM IST

-ಗಣೇಶ್ ಭಟ್ಟ, ಕುಮಟಾ

ನವದೆಹಲಿ(ನ.05): ಮಥುರಾದಿಂದ ಮಣಿಪುರದ ತನಕ, ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಎಲ್ಲರೂ ಸಡಗರ-ಸಂಭ್ರಮದಿಂದ ಆಚರಿಸುವ ದೀಪಾವಳಿ. ದೀಪಗಳ ಅವಲಿ (ಸಾಲು) ದೀಪಾವಳಿ. ಮನೆ-ಮಂದಿರಗಳಲ್ಲಿ ಅಪಮೃತ್ಯುವಿನ ನಿವಾರಣೆಗೆ, ಸಕಲ ಸಂಪತ್ತು ನೆಲೆಗೊಳಿಸಲು ದೀಪಗಳ ಸಾಲು ಎಲ್ಲೆಲ್ಲೂ ರಾರಾಜಿಸುತ್ತವೆ. ನಮ್ಮ ಸಂತ-ಮಹಾಂತರು ಉತ್ಸವದ ಮೂಲಕ ಶ್ರೇಷ್ಠ ಸಂದೇಶವನ್ನು ನೀಡಿದ್ದಾರೆ. ಎಲ್ಲಾ ಧರ್ಮ ಶಾಸ್ತ್ರಗಳಲ್ಲೂ ಆರೋಗ್ಯ-ಧನ ಸಮೃದ್ಧಿಗಾಗಿ, ನೆಮ್ಮದಿಯ ಬದುಕಿಗಾಗಿ ಏನು ಮಾಡಬೇಕೆಂದು ಮಾರ್ಗ ಸೂಚಿಸಿದೆ. ಈ ಹಬ್ಬ ಉತ್ಸವಗಳ ಹಿನ್ನೆಲೆಯಲ್ಲಿ ಮಾನವ ಬದುಕಿನ ಸಂಪೂರ್ಣ ಜೀವನ ದರ್ಶನವೇ ಅಡಗಿದೆ.

ಧನ್ವಂತರಿ ತ್ರಯೋದಶಿ

ಧನ್ವಂತರಿ ಹುಟ್ಟಿದ ದಿನವೇ ಧನ್ವಂತರಿ ತ್ರಯೋದಶಿ. ಆರೋಗ್ಯವಿದ್ದಲ್ಲಿ ಮಾತ್ರ ಗಳಿಸಿದ ಸಂಪತ್ತು ಸ್ಥಿರವಾಗಿರುವುದು, ಹಣದ ವಿನಿಯೋಗವಾಗುವುದು. ಇದಕ್ಕಾಗಿಯೇ ದೀಪಾವಳಿಯ ಲಕ್ಷ್ಮೀಪೂಜೆಯ ಎರಡು ದಿನ ಮೊದಲು ಅಂದರೆ ತ್ರಯೋದಶಿ ದಿನದಂದು ಆರೋಗ್ಯ ಅಧಿದೇವತೆ ಧನ್ವಂತರಿಯನ್ನು ಪೂಜಿಸಲಾಗುವುದು. ದೇವಾಸುರರು ಸಮುದ್ರಮಥನ ಮಾಡಿದಾಗ ಉದ್ಭವಿಸಿದ 14 ರತ್ನಗಳಲ್ಲಿ ಲಕ್ಷ್ಮೀ ಹಾಗೂ ಧನ್ವಂತರಿ ಪ್ರಮುಖವಾದವು. ಈ ಧನ್ವಂತರಿ ತ್ರಯೋದಶಿಗೆ ಧಾರ್ಮಿಕ ಹಾಗೂ ಅಧ್ಯಾತ್ಮ ದೃಷ್ಟಿಯಿಂದ ವಿಶೇಷ ಮಹತ್ವವಿದೆ. ಹಣದಿಂದ ಭೌತಿಕ ಜೀವನದ ಇಚ್ಛೆಗಳನ್ನು ಪೂರ್ತಿಗೊಳಿಸಬಹುದು. ಆದರೆ ಹಣದಿಂದ ಪ್ರೀತಿ-ನೆಮ್ಮದಿಯ ಬದುಕನ್ನು ಕಟ್ಟುಕೊಳ್ಳಬಹುದೆಂದು ಹೇಳಲಾಗದು. ಬದುಕಿನ ಮೂಲ ಆರೋಗ್ಯ. ತನು-ಮನದಿಂದ ಆರೋಗ್ಯವಾಗಿರುವುದೇ ದೊಡ್ಡ ಸಂಪತ್ತು.

ಹೀಗಾಗಿ ಈ ತೃಯೋದಶಿ ದಿನದಂದು ನಮ್ಮ ಮನೆ, ವ್ಯಾಪಾರ ಕಾರ್ಯಕ್ಷೇತ್ರಗಳನ್ನು ಸ್ವಚ್ಛಗೊಳಿಸಿ, ಸ್ನಾನಾದಿಗಳನ್ನು ಪೂರೈಸಿ, ದೇವತಾಶಕ್ತಿಯ ಸಮಕ್ಷಮ ದೀಪ ಬೆಳಗಿಸಿ, ಆರೋಗ್ಯಕ್ಕಾಗಿ ಧನ್ವಂತರಿಯಲ್ಲಿ ಪ್ರಾರ್ಥಿಸುವುದು. ಸ್ವಚ್ಛತೆ ಇದ್ದಲ್ಲಿ ಆರೋಗ್ಯ. ಆರೋಗ್ಯವಿದ್ದಲ್ಲಿ ಸಂಪತ್ತು-ನೆಮ್ಮದಿ-ಸುಖ ಎನ್ನುವುದು ಈ ದಿನದ ಮಹತ್ವ. ಈ ದಿನ ಸಾಯಂಕಾಲ ನೀರು ತುಂಬುವ ಶಾಸ್ತ್ರ. ಹಂಡೆಯಲ್ಲಿ ನೀರು ತುಂಬಿ ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಮಹಾಲಿಂಗ ಬಳ್ಳಿಯನ್ನು ಸುತ್ತಿಡುವ ಕ್ರಮ ಹಾಗೂ ಅಪಮೃತ್ಯು ನಿವಾರಣೆಗೆ ಯಮರಾಜನ ಪ್ರಸನ್ನತೆಗಾಗಿ ಮನೆಯದ್ವಾರದಲ್ಲಿ ಅಥವಾ ದೇವಾಲಯಗಳಲ್ಲಿ ನಾಲ್ಕು ನೆಣೆಯ ದೀಪವನ್ನು ಯಮರಾಜನ ನಿಮಿತ್ತ ಹೊತ್ತಿಸಲಾಗುತ್ತದೆ.

ನರಕ ಚತುರ್ದಶಿ ಹಿನ್ನೆಲೆ ಇದು

ಭೂದೇವಿಯ ಪುತ್ರನಾದ ನರಕಾಸುರನು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ, ಅನುಗ್ರಹ ಪಡೆದು ದೇವಾಸುರರನ್ನು ಮಣಿಸಿದ್ದ. ಭೂಲೋಕದ ರಾಜರುಗಳನ್ನು ಜಯಿಸಿ ಅವರ ಹದಿನಾರು ಸಾವಿರ ಕನ್ಯೆಯರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ. ಕೃಷ್ಣ, ದೇವತೆಗಳ ಪ್ರಾರ್ಥನೆಯ ಮೇರೆಗೆ ಆಶ್ವೀಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ನಡುರಾತ್ರಿ ನರಕಾಸುರನನ್ನು ಸಂಹರಿಸಿದ. ನರಕಾಸುರನ ತಾಯಿ ಭೂದೇವಿಯ ಇಚ್ಛೆಯಂತೆ ವರ್ಷದಲ್ಲಿ ಒಮ್ಮೆ ಆತನ ಸ್ಮರಿಸುವ ರೀತಿಯಲ್ಲಿ ಕೃಷ್ಣನು ಈ ಹಬ್ಬವನ್ನು ನೆಲೆಗೊಳಿಸಿದ. ನರಕಾಸುರನ ಸಂಹರಿಸಿದ ದಿನವೇ ನರಕ ಚತುರ್ದಶಿ.

ಈ ದಿನ ಸೂರ್ಯೋದಯಕ್ಕೆ ಮುಂಚೆಯೇ ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಮನೆಯವರೆಲ್ಲಾ ಅಭ್ಯಂಗ ಸ್ನಾನ ಮಾಡುವರು. ಯಮತರ್ಪಣಾದಿಗಳ ನಂತರ, ದೇವರನ್ನು ಪೂಜಿಸಿ, ಮಂಗಳ ಆರತಿಗಳನ್ನು ಬೆಳಗಿದ ಮೇಲೆ, ಮನೆಯ ಗಂಡಸರಿಗೆ, ಮುತ್ತೈದೆಯರಿಗೆ, ಕುಮಾರಿಯರಿಗೆ ಆರತಿ ಬೆಳಗುವರು. ಹಬ್ಬಕ್ಕೋಸ್ಕರ ಸಿಹಿಕಡಬು ಕಜ್ಜಾಯ, ಉಪಹಾರ ಸೇವಿಸಿ, ಸಿದ್ಧಗೊಳಿಸಿ ಬಂಧು-ಬಾಂಧವರೊಂದಿಗೆ ಸೇವಿಸುತ್ತಾ, ಹೊಸವಸ್ತ್ರ ಧರಿಸಿ, ಹಬ್ಬದ ಸಂಭ್ರಮವನ್ನು ತಾವೂ ಅನುಭವಿಸುತ್ತಾರೆ.

ದೀಪಾವಳಿ ಅಮವಾಸ್ಯೆ: ಲಕ್ಷ್ಮೀಪೂಜೆ

ಸರ್ವಸಂಪತ್‌ ಪ್ರದಾಯನಿಯಾದ ಮಹಾಲಕ್ಷ್ಮೀ ಜ್ಯೋತಿಯ ಸ್ವರೂಪಿಣಿ. ದೀಪಾವಳಿಯಂದು ಲಕ್ಷ್ಮೀಯನ್ನು ಪೂಜಿಸಿದರೆ ಸಂಪತ್ತು ಸ್ಥಿರವಾಗುವುದು, ವೃದ್ಧಿಸುವುದು. ಅದಕ್ಕಾಗಿ ದೀಪಾವಳಿ ಅಮವಾಸ್ಯೆಯಂದು ಲಕ್ಷ್ಮೀ ಪೂಜೆಗೆ ಪ್ರಾಶಸ್ತ್ಯ. ಈ ದಿನ ಅಮಾವಾಸ್ಯೆಯ ಸಾಯಂಕಾಲ ದೀಪ ಬೆಳಗಿಸಿ, ತಳಿರು-ತೋರಣಗಳಿಂದ ಲಕ್ಷ್ಮೀಯನ್ನು ಅಲಂಕರಿಸಿ ಪೂಜಿಸಬೇಕು. ವಿಶೇಷವಾಗಿ ಗೃಹಸ್ಥರು, ವ್ಯಾಪಾರಸ್ಥರು ಮುಂತಾದವರು ಲಕ್ಷ್ಮೀ ಕೃಪಾಕಟಾಕ್ಷ ಬಯಸಿ ಪೂಜನೆ-ವಂದನೆಗಳನ್ನು ಸಲ್ಲಿಸುವರು. ದೀಪಾವಳಿ ಅಮಾವಾಸ್ಯೆಯ ದಿನ ಸಿದ್ಧಿಬುದ್ಧಿದಾಯಕ ಗಣಪತಿಯೊಂದಿಗಿನ ಲಕ್ಷ್ಮೀಯನ್ನು ಪೂಜಿಸಲಾಗುವುದು.

ಬಲಿಪಾಡ್ಯ, ಗೋಪೂಜೆ ಮಹತ್ವ

ಪ್ರಹ್ಲಾದನ ಮೊಮ್ಮಗ, ಬಲಿ ಚಕ್ರವರ್ತಿ ತಾನು ಕೈಗೊಂಡ ಅಶ್ವಮೇಧಯಾಗದಲ್ಲಿ ಬಂದವರಿಗೆ ಕೇಳಿದ್ದನ್ನು ಕೊಡುವ ಸಂಕಲ್ಪ ಮಾಡಿದ್ದ. ಮಹಾವಿಷ್ಣು ವಾಮನ ರೂಪದಿಂದ ಅಲ್ಲಿಗೆ ಬಂದು ಬಲಿಯಲ್ಲಿ ಮೂರು ಹೆಜ್ಜೆಗಳನ್ನು ಬೇಡಿದ. ಬಲಿ ಅದಕ್ಕೆ ಒಪ್ಪಿಗೆ ನೀಡಿದ. ಭಗವಂತ ಒಂದು ಹೆಜ್ಜೆಯಿಂದ ಆಕಾಶ, ಇನ್ನೊಂದು ಹೆಜ್ಜೆಯಿಂದ ಭೂಮಿ ಹಾಗೂ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಬಲಿಯನ್ನು ಪಾತಾಳಕ್ಕೆ ಅಟ್ಟಿದ. ಆತನ ದಾನÜ ಶೂರತ್ವಕ್ಕೆ ಮೆಚ್ಚಿ ಬೇಕಾದ ವರ ಕೇಳು ಎಂದಾಗ ಬಲಿ ‘ವರ್ಷದಲ್ಲಿ ಮೂರು ದಿನ ನನ್ನ ರಾಜ್ಯವನ್ನುನೋಡುವ ಅವಕಾಶ ಕೊಡು, ಈ ದಿನಗಳಲ್ಲಿ ಯಾರು ದೀಪ ಬೆಳಗುವರೋ ಅವರ ಮನೆಯಲ್ಲಿ ಲಕ್ಷ್ಮೀ ಸ್ಥಿರವಾಗಿ ನೆಲೆ ನಿಲ್ಲಲಿ’ಎಂದು ಬೇಡಿಕೊಂಡ ಪ್ರಕಾರ ವಿಷ್ಣು‘ ತಥಾಸ್ತು’ಎಂದ.

ಮಹಾ ವ್ಯಕ್ತಿತ್ವ ಶಾಲಿ, ಪ್ರಜಾಹಿತವನ್ನೇ ಬಯಸುವವ ಬಲಿಯ ನೆನೆಪಿಗಾಗಿ ಬಲಿಪಾಡ್ಯದ ತನಕ ಮೂರು ದಿನ ಬಲೀಂದ್ರನನ್ನು ಪೂಜಿಸುವ ಪದ್ಧತಿ ಬೆಳದು ಬಂದಿದೆ. ಇಷ್ಟನೈವೇಧ್ಯ ಅರ್ಪಿಸಿ, ಹಾಲು- ಹೈನುಗಳನ್ನು ನೀಡುವ ರೈತರ ಕೃಷಿ ಬದುಕಿಗೆ ಆಧಾರವಾದ ಗೋಶಾಲೆಯನ್ನು ಗೋವುಗಳನ್ನು ಅಲಂಕರಿಸಿ, ಗೋವುಗಳಿಗೆ ಗೋಗ್ರಾಸ, ಇಷ್ಟತಿನಿಸುಗಳನ್ನು ನೀಡಿ, ಗೋವುಗಳನ್ನು ಬೆಚ್ಚಿಸಿ ಬಿಡುವುದನ್ನು ಕಾಣುತ್ತೇವೆ. ಆ ಕಾರಣಕ್ಕಾಗಿ ಈ ದಿನಬಲಿ ಪಾಡ್ಯ ಎಂದೂ ಕರೆಯುವರು. ಮನೆಯಲ್ಲಿ ಪೂಜಿಸಿದ ಬಲೀಂದ್ರನನ್ನು

ಬಲಿರಾಜ ನಮಸ್ತುಭ್ಯಂ, ದೈತ್ಯದಾನವವಂದಿತ

ಇಂದ್ರಶತ್ರೋ ಮರಾರಾತೇ, ಪೂಜೇಯಂ ವಿಷ್ಣುಸಾನ್ಯಿಧ್ಯದೋ ಭವ

ಎಂದು ಪ್ರಾರ್ಥಿಸಿ, ಬಂಧು-ಬಾಂಧವರೊಂದಿಗೆ ಭೋಜನ ಸೇವಿಸಿ ಹೊಸ ಬಟ್ಟೆತೊಟ್ಟು ಸಂಭ್ರಮಿಸುವುದನ್ನು ಕಾಣುತ್ತೇವೆ.

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಮರಳಿ ಪಟ್ಟಾಭಿಷೇಕಗೊಂಡ ದಿನವೂ ಹೌದು. ಪಾಂಡವರು ಅಜ್ಞಾತವಾಸ ಕಳೆದು ವನವಾಸ ಮುಗಿಸಿದ ದಿನ. ಕೃಷ್ಣ ಭಗವಾನ್‌ ಗೋವರ್ಧನ ಪರ್ವತ ಎತ್ತಿ ಹಿಡಿದ ದಿನ, ಕೆಲವು ಕಡೆದ್ಯೂತ (ಜೂಜು) ವನ್ನು ಆಡುವುದನ್ನು ಕಾಣುತ್ತೇವೆ.

ಕೆಟ್ಟದರ ವಿರುದ್ಧ ಒಳ್ಳೆಯ, ಅಂಧಕಾರದ ವಿರುದ್ಧ ಪ್ರಕಾಶದ, ಅಜ್ಞಾನದ ವಿರುದ್ಧ ಜ್ಞಾನದ ವಿಜಯದ ಪ್ರತೀಕವೇ ದೀಪಾವಳಿ. ಜೀವನದ ಪರಮ ಸತ್ಯದ ನೆಮ್ಮದಿಯ ಬದುಕಿನ ಬೆಳಕನ್ನು ಕಂಡುಕೊಳ್ಳುವ ದಿನ. ಈ ಮೂಲಕ ನಮ್ಮ ಬದುಕಿಗೆ ಇಷ್ಟಸಮೃದ್ಧಿಯನ್ನು ನೀಡಿದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ಮಹಾಪರ್ವ.

Follow Us:
Download App:
  • android
  • ios