Chikkamagaluru: ಐತಿಹಾಸಿಕ ಮಹಾಕುಂಭಾಭಿಷೇಕಕ್ಕೆ ಹರಿಹರಪುರ ಸಾಕ್ಷಿ
ಐತಿಹಾಸಿಕ ಕುಂಭಾಭಿಷೇಕಕ್ಕೆ ಮಲೆನಾಡು ಸಾಕ್ಷಿ ಆಗುತ್ತಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಹಾ ಕುಂಭಾಭಿಷೇಕ ನೆರವೇರಿಸಲು ಸಿದ್ದತೆಗಳು ಪೂರ್ಣಗೊಂಡಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.14): ಐತಿಹಾಸಿಕ ಕುಂಭಾಭಿಷೇಕಕ್ಕೆ (Historic Kumbhabhishekham) ಮಲೆನಾಡು ಸಾಕ್ಷಿ ಆಗುತ್ತಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಹಾ ಕುಂಭಾಭಿಷೇಕ (Maha Kumbhabhishekha) ನೆರವೇರಿಸಲು ಸಿದ್ದತೆಗಳು ಪೂರ್ಣಗೊಂಡಿದೆ. ತುಂಗಾನದಿ ತಟದಲ್ಲಿ ಭವ್ಯವಾಗಿ ಎದ್ದುನಿಂತಿರುವ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ (Lakshmi Narasimha Temple) ನಾಳೆ ನಡೆಯುವ ಐತಿಹಾಸಿಕ ಮಹಾ ಕುಂಭಾಷೇಕಕ್ಕೆ ಕ್ಷಣಗಣನೆ ಬಾಕಿ ಇದೆ.
ಶ್ರೀಗಳಿಂದ ಶಾರದಾ ದೇವಿಗೆ ಮಹಾ ಕುಂಭಾಭಿಷೇಕ: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಶ್ರೀ ಮಠವು (Hariharpur Mutt) ಧರ್ಮಪ್ರಸಾರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಜ್ಞಾನಾರ್ಜನೆಯ ಸಲುವಾಗಿ ಹಲವಾರು ರೀತಿಯ ಕಾಯಕಗಳನ್ನು ಮಾಡುತ್ತಾ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಶ್ರೀ ಮಠದಲ್ಲಿ ಈ ಹಿಂದಿನಿಂದಲೂ ಶ್ರೇಷ್ಟವಾದ ಗುರುಪರಂಪರೆಯಿದ್ದು, ಪ್ರಸ್ತುತ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಿಂದ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನಡೆದ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವು ಇದೀಗ ಸಂಪನ್ನಗೊಂಡಿದೆ.
ಇದೀಗ ದೇವಾಲಯಗಳ ಪುನಃ ಪ್ರತಿಷ್ಠಾ ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 10 ರಿಂದ ಏಪ್ರಿಲ್ 24 ರವರೆಗೆ ಆಯೋಜನೆಗೊಂಡಿದೆ. ಶುಭಕೃತ್ ಸಂವತ್ಸರದ ಚೈತ್ರ ಶುದ್ಧ ಚತುರ್ದಶಿ ದಿನವಾದ ನಾಳೆ 8.20ಕ್ಕೆ ಲಕ್ಷ್ಮೀನರಸಿಂಹ ಹಾಗೂ ಶಾರದಾ ಪರಮೇಶ್ವರೀ ದೇವಸ್ಥಾನಗಳ ಪುನಃಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕವನ್ನು ಶ್ರೀಗಳು ನೆರವೇರಿಸಲಿದ್ದಾರೆ.
ಹರಿಹರಪುರದಲ್ಲಿ ಮಹಾಕುಂಭಾಭಿಷೇಕ ವೈಭವ
15 ದಿನಗಳ ನಿರಂತರ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ: ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ 15 ದಿನಗಳ ಕಾಲ ನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹರಿಹರಪುರದಲ್ಲಿ ನಡೆಯುತ್ತಿವೆ. ಏ.10ರ ಭಾನುವಾರ ಚತುದ್ರ್ರವ್ಯ ಮಹಾಗಣಪತಿ ಹೋಮದಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಅಂದೇ ಶ್ರೀರಾಮನವಮಿ ಪೂಜೆ ಹಾಗೂ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮಗಳು ಜರುಗಿವೆ. ಏ.11ರಂದು ದೇವನಾಂದಿ, ರಾಕ್ಷೋಘ್ನ ಹೋಮಾದಿಗಳು, ಏ.12ರಂದು ನವಗ್ರಹ ಹೋಮಾದಿಗಳು ನಡೆದಿವೆ.
ಏ.13ರಂದು ಶ್ರೀ ಸ್ವಯಂಪ್ರಕಾಶ ಅಭಿನವ ರಾಮಾನಂದ ಸರಸ್ವತೀ ಮಹಾಸ್ವಾಮಿಗಳ ಜನ್ಮಜಯಂತಿ ಶತಮಾನೋತ್ಸವ ಕಾರ್ಯಕ್ರಮ, ಏ.14ರಂದು ಗುರು ದತ್ತಾತ್ರೇಯ ಮಹಾಯಾಗ ಹಾಗೂ ಏ.15ರಂದು ದೇವತಾ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ನಡೆಯಲಿದೆ. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ತಮ್ಮ ಅಮೃತಹಸ್ತದಿಂದ ಮಹಾಕುಂಭಾಭಿಷೇಕ ನೆರವೇರಿಸಲಿದ್ದಾರೆ. ಏ.16ರಿಂದ ಏ.24ರವರೆಗೆ ಕೋಟಿ ತುಳಸಿ ಅರ್ಚನೆ, ಲಕ್ಷ ಮೋದಕ ಗಣಪತಿ ಮಹಾಯಾಗ, ಸಹಸ್ರ ಚಂಡಿಕಾ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಮಹಾಮೃತ್ಯುಂಜಯ ಯಾಗ, ಆಂಜನೇಯ ಮಹಾಯಾಗ, ಲಕ್ಷ್ಮೀನಾರಾಯಣಹೃದಯ ಹೋಮ, ಧನ್ವಂತರೀ ಮಹಾಯಾಗ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ, ಮಹಾರಥೋತ್ಸವ ನಡೆಯಲಿದೆ.
ಹರಿಹರಪುರ ಪಟ್ಟಣ ಅಲಂಕೃತ: ಈಗಾಗಲೇ ಹರಿಹರಪುರ ಮಠದ ಮಾರ್ಗ ಸೇರಿದಂತೆ ಇಡೀ ಪಟ್ಟಣವನ್ನು ಅಲಂಕೃತಗೊಳಿಸಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಮಠದ ಪ್ರವೇಶದ್ವಾರದಲ್ಲಿ ಸ್ವಯಂಸೇವಕರು ಭಕ್ತರ ಪಾದಗಳನ್ನು ತೊಳೆದು ಸ್ವಾಗತಮಾಡುತ್ತಿದ್ದಾರೆ.ಮಠದ ಒಳಗೆ ಗಜ ಅಶ್ವಗಳು ಸಾಕ್ಷಿ ಆಗಿವೆ.ಮಠದಲ್ಲಿ ಯಾಗ ಶಾಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಡೆಯುತ್ತಿದ್ದು ಇದೇ ತಿಂಗಳು 24 ರವರೆಗೂ ನಿತ್ಯವೂ ಹೋಮ ಹವನಗಳು ನಡೆಯುಲಿದೆ. ಕೋಟಿ ಕುಂಕುಮಾರ್ಚನೆ, ಕೋಟಿ ತುಳಿಸಿ ಆರ್ಚನೆ, ಧನ್ವಂತರೀ ಮಹಾಯೋಗ, ಸಹಸ್ರ ಚಂಡಿಕಾಮಹಾಯೋಗ ನಡೆಯುಲಿದೆ. ಮಠಕ್ಕೆ ಭಕ್ತರಿಂದ ಹೊರಕಾಣಿಕೆ ರೂಪದಲ್ಲಿ ಅಕ್ಕಿ, ತರಿಕಾರಿ, ಅಡಿಕೆ, ತೆಂಗಿನ ಕಾಯಿ, ಬಾಳೆಹಣ್ಣು, ಬಟ್ಟೆ ಸೇರಿದಂತೆ ದಿನಸಿ ವಸ್ತುಗಳು ಬಂದಿವೆ.
Chikkamagaluru: ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಅದ್ಧೂರಿ ಸಿದ್ಧತೆ: ಅಲಂಕೃತಗೊಂಡ ಪಟ್ಟಣ
ಈ ಮಹಾ ಕುಂಭಾಭಿಷೇಕದಲ್ಲಿ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ. ಧಾರ್ಮಿಕಕಾರ್ಯಕ್ರಮಗಳ ಜೊತೆಗೆ ಸಾಂಸ್ಕ್ರತಿಕ ಕಾರ್ಯವೂ ನಡೆಯುತ್ತಿದೆ. ಅಗಸ್ತ್ಯ ಮಹರ್ಷಿಗಳು ತಪಸ್ಸು ಮಾಡಿರುವ ಜಾಗದಲ್ಲಿ ಭವ್ಯವಾದ ದೇವಾಲಯ ನಿರ್ಮಾಣಗೊಂಡಿದೆ.ಐತಿಹಾಸಿಕ ಮಹಾಕುಂಭಾಭಿಷೇಕಕ್ಕೆ ಕ್ಷಣಕ್ಷಣಗಣನೆ ಆರಂಭವಾಗಿದ್ದು, ಹೊರನಾಡಿನ ಅನ್ನಪೂಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮಲೆನಾಡಿನ ಹತ್ತು ತಾಲೂಕಿನ ಎಲ್ಲಾ ಸಮುದಾಯದ ಸುಮಾರು ಎರಡು ಲಕ್ಷ ಮನೆಗಳಿಗೆ ಅಕ್ಷತೆಯೊಂದಿಗೆ ಆಹ್ವಾನ ಪತ್ರಿಕೆಯನ್ನು ಖುದ್ದಾಗಿ ಕೊಟ್ಟು ಈ ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಆತ್ಮೀಯವಾಗಿ ಆಮಂತ್ರಿಸಿರುವುದು ಮತ್ತೊಂದು ವಿಶೇಷವಾಗಿದೆ.