Asianet Suvarna News Asianet Suvarna News

ಬೆಂಗಳೂರು: ಉದ್ಯಾನ ನಗರಿಯಲ್ಲಿ ಶಿವನಾಮ ಸ್ಮರಣೆ..!

ಶುಕ್ರವಾರ ನಸುಕಿನಿಂದಲೇ ದೇವಸ್ಥಾನಗಳಿಗೆ ತೆರಳಿದ ಭಕ್ತರು ಶಿವಲಿಂಗದ ದರ್ಶನ ಪಡೆದರು. ಕ್ಷೀರಾಭಿಷೇಕ, ಜಲಾಭಿಷೇಕ, ಪುಷ್ಪ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಮಠ ಮಂದಿರಗಳಲ್ಲಿ ಇಷ್ಟಲಿಂಗ ಪೂಜೆ, ಲಿಂಗಾಷ್ಟಕ ಪಠಣ, ಶಿವ ಅಷ್ಟೋತ್ತರ ಶತನಾಮಾವಳಿ ಪಠಣ, ಪಂಚಾಮೃತ, ಏಕಾದಶ ರುದ್ರಾಭಿಷೇಕ ನಡೆಯಿತು. ನಾಲ್ಕು ಜಾವದ ಪೂಜೆಯನ್ನು ಅರ್ಚಕರು ನೆರವೇರಿಸಿದರು.

Devotees Celebrated Mahashivaratri in Bengaluru grg
Author
First Published Mar 9, 2024, 10:30 AM IST

ಬೆಂಗಳೂರು(ಮಾ.09):  ಶಿವಲಿಂಗಕ್ಕೆ ಅಭಿಷೇಕ, ಬಿಲ್ವಪತ್ರೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಕೆ, ರಾತ್ರಿಯಿಡೀ ನಾಮ ಸ್ಮರಣೆಯಲ್ಲಿ ಪಾಲ್ಗೊಂಡು ಜಾಗರಣೆ ನಡೆಸುವ ಮೂಲಕ ಭಕ್ತರು ಉದ್ಯಾನನಗರದಲ್ಲಿ ಶಿವರಾತ್ರಿಯನ್ನು ಭಕ್ತಿಪೂರ್ವಕವಾಗಿ ಆಚರಿಸಿದರು. ಶುಕ್ರವಾರ ನಸುಕಿನಿಂದಲೇ ದೇವಸ್ಥಾನಗಳಿಗೆ ತೆರಳಿದ ಭಕ್ತರು ಶಿವಲಿಂಗದ ದರ್ಶನ ಪಡೆದರು. ಕ್ಷೀರಾಭಿಷೇಕ, ಜಲಾಭಿಷೇಕ, ಪುಷ್ಪ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಮಠ ಮಂದಿರಗಳಲ್ಲಿ ಇಷ್ಟಲಿಂಗ ಪೂಜೆ, ಲಿಂಗಾಷ್ಟಕ ಪಠಣ, ಶಿವ ಅಷ್ಟೋತ್ತರ ಶತನಾಮಾವಳಿ ಪಠಣ, ಪಂಚಾಮೃತ, ಏಕಾದಶ ರುದ್ರಾಭಿಷೇಕ ನಡೆಯಿತು. ನಾಲ್ಕು ಜಾವದ ಪೂಜೆಯನ್ನು ಅರ್ಚಕರು ನೆರವೇರಿಸಿದರು.

ನಗರದ ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಮಲ್ಲೇಶ್ವರ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಬಳೇಪೇಟೆಯ ಶ್ರೀ ಕಾಶಿವಿಶ್ವನಾಥ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ, ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನ, ಬೆಂಗಳೂರು ವಿವಿ ಆವರಣದ ಮುನೇಶ್ವರಸ್ವಾಮಿ ದೇವಾಲಯ, ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವ ದೇಗುಲ, ಜೆ.ಪಿ.ನಗರದ ಶ್ರೀ ಶಿವಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಶಿವನ ದೇವಾಲಯಗಳಲ್ಲಿ ಇಡೀ ದಿನ ಭಕ್ತರು ಕಕ್ಕಿರಿದು ನೆರೆದಿದ್ದರು. ಎಲ್ಲೆಡೆ ವಿಶೇಷ ಹೋಮ ಹವನಾದಿಗಳು ನಡೆದವು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ರಾಜ್ಯಾದ್ಯಂತ ಶ್ರದ್ಧಾ, ಭಕ್ತಿಯಿಂದ ಶಿವರಾತ್ರಿ ಆಚರಣೆ

ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ನಸುಕಿನಿಂದ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದರು. ಅದೇ ರೀತಿ ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನದಲ್ಲಿ ಸುಪ್ರಭಾತ ಸೇವೆ, ಪ್ರಾತಃಕಾಲ ಪೂಜೆ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಿತು. ನಂದೀಶ್ವರ ಸ್ವಾಮಿಗೆ ಅಭಿಷೇಕ ನಡೆಯಿತು. ಇಂದು (ಶನಿವಾರ) ಬೆಳಗ್ಗೆ ಪುಷ್ಪಾಲಂಕಾರದ ಜೊತೆಗೆ ಸ್ವಾಮಿಯ ಬಂಡಿ ಉತ್ಸವ ನಡೆಯಲಿದೆ.

ರಾಜಾಜಿನಗರದ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಪುಷ್ಪಾಲಂಕಾರ, ಮಹಾಮಂಗಳಾರತಿ ಹಾಗೂ ಬೆಳಗ್ಗೆ 11ಕ್ಕೆ ಉತ್ಸವ ಮೂರ್ತಿಯ ಪೂಜೆ, ಮೆರವಣಿಗೆ ನಡೆಯಿತು. ಯಶವಂತಪುರದ ಮಹಾಯಾಗ ಕ್ಷೇತ್ರ ಗಾಯತ್ರಿ ದೇವಸ್ಥಾನದಲ್ಲಿ ಸ್ವರ್ಣಗೌರಿ ಸಮೇತ ಅಗಸ್ತ್ಯೇಶ್ವರ ಸ್ವಾಮೀಜಿ ಹಾಗೂ ಕಾಶಿ ಶತಲಿಂಗಗಳಿಗೆ ರುದ್ರಾಭಿಷೇಕ ನಡೆಯಿತು. ಕಲ್ಯಾಣೋತ್ಸವ, ಸಾಲಿಗ್ರಾಮ ಶತಲಿಂಗಗಳಿಗೆ ಕ್ಷೀರಾಭಿಷೇಕ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿತ್ತು.
ಸರ್ಕಾರದ ಆದೇಶದಂತೆ ನಗರದ ಧಾರ್ಮಿಕ ದತ್ತಿ ಇಲಾಖೆಯಡಿಯ ಅನೇಕ ದೇವಸ್ಥಾನಗಳಲ್ಲಿ ಜಾನಪದ ಕಲೆಗಳ ಉತ್ಸವ ನಡೆಯಿತು.

ಜಾಗರಣೆ

ನಗರದ ಎಲ್ಲ ಶಿವ ಸನ್ನಿಧಿಗಳಲ್ಲೂ ಶುಕ್ರವಾರ ರಾತ್ರಿ ಜಾಗರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶೃಂಗೇರಿ ಶಂಕರಮಠದಲ್ಲಿ ರೋಟ್ರಿ ಸೃಷ್ಟಿ ಶಿವರಾತ್ರಿ ಉತ್ಸವ ಆಯೋಜಿಸಲಾಗಿತ್ತು. ಹತ್ತಾರು ತಂಡಗಳಿಂದ ಸಂಗೀತ, ನೃತ್ಯ ಪ್ರದರ್ಶನ ನಡೆದವು. ರಾಜಾಜಿನಗರ ಶಿರೂರು ಪಾರ್ಕ್‌ನಲ್ಲಿ ಮಹಾರುದ್ರ ಹೋಮ, ಪೂರ್ಣಾಹುತಿ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ಜಾಣ ಜಾಣೆಯರು ತಂಡದಿಂದ ನಗೆ ಜಾಗರಣೆ ಕಾರ್ಯಕ್ರಮದ ಬೆಳ್ಳಿಹಬ್ಬ ನಡೆಯಿತು. ಶಾಡೋ ಪ್ಲೇ, ಮಾತನಾಡುವ ಗೊಂಬೆ, ಹಾಸ್ಯ, ಜಾದೂ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.

ಬೆಂಗಳೂರು: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ಅದ್ಧೂರಿಯಾಗಿ ನೆರವೇರಿದ ಮಹಾಶಿವರಾತ್ರಿ

ಇಂದು ಬ್ರಹ್ಮರಥೋತ್ಸವ

ಶ್ರೀ ಭ್ರಮರಾಂಬ ಸಮೇತ ಕಾಡುಮಲ್ಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಸಂಜೆಯಿಂದ ಶಿವರಾತ್ರಿ ಜಾಗರಣೆ ನಡೆಯಿತು. ಶನಿವಾರ 10 ಗಂಟೆಗೆ ಬ್ರಹ್ಮರಥೋತ್ಸವ ಆರಂಭವಾಲಿದೆ 300ಕ್ಕೂ ಹೆಚ್ಚು ಕಲಾ ತಂಡಗಳು, ಪಂಜಿನ ಆರತಿ ನೇರವೇರಲಿದೆ.

ಹೂವು ದುಬಾರಿ

ಮಳೆ ಅಭಾವದಿಂದ ಹೆಚ್ಚು ಬೆಳೆಯಾಗದ ಕಾರಣ ಹೂವು ದುಬಾರಿಯಾಗಿತ್ತು. ಒಂದು ಗುಲಾಬಿ ಹಾರದ ಬೆಲೆ ಬರೋಬ್ಬರಿ ₹1 ಸಾವಿರ ಗಡಿ ದಾಟಿದೆ. 1 ಮಲ್ಲಿಗೆ ಹಾರಕ್ಕೆ ₹800 ಇದೆ. ಹಾಗೆ 1 ಕೇಜಿ ಗುಲಾಬಿ ಹೂಗೆ ₹400 ಇದ್ದರೆ ಸೇವಂತಿಗೆ ಹೂವಿಗೂ 1 ಕೇಜಿಗೆ ₹400 ಇದೆ. ಇನ್ನು 1 ಮೊಳ ಮಲ್ಲಿಗೆ ಹೂವಿಗೆ ₹80 ₹100 ಇದೆ. ಕನಕಾಂಬರ 1 ಮೊಳಕ್ಕೆ ₹60- ₹80, ಬಿಲ್ವಪತ್ರೆ ಕಟ್ಟಿಗೆ ₹50- ₹80 ಇತ್ತು.

Follow Us:
Download App:
  • android
  • ios