Asianet Suvarna News Asianet Suvarna News

ಐತಿಹಾಸಿಕ ಬಾಗಲಕೋಟೆಯ ರಂಗಿನಾಟಕಕ್ಕೆ ಕ್ಷಣಗಣನೆ...!

ಪಶ್ಚಿಮ ಬಂಗಾಳದ ಕೋಲ್ಕತಾ ಹೊರತುಪಡಿಸಿದರೆ 5 ದಿನಗಳ ಕಾಲ ಹೋಳಿ ಆಚರಿಸುವ ಹೆಗ್ಗಳಿಕೆ ಬಾಗಲಕೋಟೆಯದ್ದಾಗಿದೆ. ಭಾವೈಕ್ಯತೆ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಬಾಗಲಕೋಟೆಯ ಹೋಳಿಹಬ್ಬವು ಜಾತಿ, ಮತ, ಪಂಥಗಳನ್ನು ಮೀರಿ ಸಂಭ್ರಮದಿಂದ ಸಹಸ್ರಾರು ಜನ ಭಾಗವಹಿಸುವುದನ್ನು ನೋಡುವುದೇ ಸಂತಸ.

Countdown to Bagalkot Holi Festival grg
Author
First Published Mar 7, 2023, 10:00 PM IST | Last Updated Mar 7, 2023, 10:00 PM IST

ಈಶ್ವರ ಶೆಟ್ಟರ

ಬಾಗಲಕೋಟೆ(ಮಾ.07):  ಐತಿಹಾಸಿಕ ಪರಂಪರೆಯುಳ್ಳ ಬಾಗಲಕೋಟೆಯ ಹೋಳಿ ಆಚರಣೆಗೆ ಶತಮಾನಗಳ ಇತಿಹಾಸವಿದ್ದು, ಪಶ್ಚಿಮ ಬಂಗಾಳದ ಕೋಲ್ಕತಾ ಹೊರತುಪಡಿಸಿದರೆ 5 ದಿನಗಳ ಕಾಲ ಹೋಳಿ ಆಚರಿಸುವ ಹೆಗ್ಗಳಿಕೆ ಬಾಗಲಕೋಟೆಯದ್ದಾಗಿದೆ. ಭಾವೈಕ್ಯತೆ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಬಾಗಲಕೋಟೆಯ ಹೋಳಿಹಬ್ಬವು ಜಾತಿ, ಮತ, ಪಂಥಗಳನ್ನು ಮೀರಿ ಸಂಭ್ರಮದಿಂದ ಸಹಸ್ರಾರು ಜನ ಭಾಗವಹಿಸುವುದನ್ನು ನೋಡುವುದೇ ಸಂತಸ.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಿಂದ ಬಾಧಿತವಾಗಿರುವ ಬಾಗಲಕೋಟೆ ನಗರ ಶೇ.60ರಷ್ಟುಹಿನ್ನೀರಿನಲ್ಲಿ ಬಾಧಿತವಾಗಿದ್ದರೂ ಮುಳುಗಡೆಯ ಈ ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಯ ಹೋಳಿ ಆಚರಣೆಗೆ ಮಾತ್ರ ಯಾವುದೇ ರೀತಿಯಲ್ಲಿಯೂ ಭಂಗವಾಗಿಲ್ಲ. ಕಾರಣ ಭಾವೈಕ್ಯತೆಯನ್ನು ಬೆಸೆಯುವ ಹಬ್ಬವಾಗಿ ಆಚರಿಸುವ ನಗರದ ಜನತೆಯಲ್ಲಿನ ವಿಶಾಲ ಮನೋಭಾವವೆ ಕಾರಣವಾಗಿದೆ.

ಎಲ್ಲೆಲ್ಲೂ ರಂಗು ತುಂಬೋ ಬಣ್ಣದೋಕುಳಿ.. ಮಕ್ಕಳ ಹೋಳಿ ಮಜಾ ನೋಡಿ..

ಸಂಪ್ರದಾಯದ ಹೋಳಿ ಆಚರಣೆ:

ನೂರಾರು ವರ್ಷಗಳಿಂದ ಬಾಗಲಕೋಟೆಯ ಹೋಳಿಯನ್ನು ಆಚರಿಸಲಾಗುತ್ತಿದ್ದು, 5 ಪ್ರಮುಖ ಓಣಿಗಳ 5 ವಿವಿಧ ಜಾತಿ ಜನಾಂಗದ ಮನೆತನಗಳು ಹೋಳಿಯ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಗೆ ದಲಿತ ಸಮುದಾಯದ ಖಾತೆದಾರ ಮನೆಯಿಂದಲೇ ಬೆಂಕಿಯನ್ನು ತಂದು ಮೊದಲು ಕಾಮದಹನ ಮಾಡುವ ವಾಡಿಕೆ ಇಲ್ಲಿದೆ. ಬಾಗಲಕೋಟೆಯ ಹೋಳಿ ಹಬ್ಬದ ವಿಶೇಷತೆಯೆಂದರೆ ಹಲಿಗೆ ಬಾರಿಸುವುದು. ಈ ವಿಶಿಷ್ಟವಾದ ಪದ್ಧತಿ ಏಲ್ಲಿಯೂ ಇಲ್ಲ. ನಿಶಾನೆ ಹಾಗೂ ತುರಾಯಿ ಹಲಿಗೆಗಳು ಪ್ರಮುಖವಾಗಿ ನಗರದ ಕಿಲ್ಲಾ, ಹೋಸಪೇಟೆ, ಹಳಪೇಟೆ, ಜೈನಪೇಟ, ವೆಂಕಟಪೇಟೆಯಲ್ಲಿನ ಪ್ರಸಿದ್ದವಾಗಿರುವ 5 ಮನೆತನಗಳಿಂದ ತಂದು ಸಾರ್ವಜನಿಕವಾಗಿ ಹಲಿಗೆ ಮೇಳವನ್ನು ಏರ್ಪಡಿಸಿ ಸಂಭ್ರಮಿಸುತ್ತಾರೆ.

ವಿಶಿಷ್ಟವಾದ ಆಚರಣೆ:

ಪೇಶ್ವೆ ಆಡಳಿತ ಹಾಗೂ ಸವಣೂರು ನವಾಬರು ಬಾಗಲಕೋಟೆಯ ಹೋಳಿ ಆಚರಣೆಗೆ ವಿಶೇಷವಾದ ಗೌರವ ನೀಡಿದ್ದರೆಂದು ಹೇಳಲಾಗುತ್ತಿದ್ದು, ಅಸ್ಪೃಶ್ಯತೆಯ ಕಾಲದಲ್ಲಿಯೇ ಸಮಾನತೆಯನ್ನು ತಂದ ಬಾಗಲಕೋಟೆಯ ಹೋಳಿ ಹಬ್ಬ ದಲಿತ ಮತ್ತು ಮೇಲ್ವರ್ಗದ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ದಲಿತ ಸಮುದಾಯದ ಮನೆಯಿಂದ ಬೆಂಕಿಯನ್ನು ತಂದು ಕಾಮದಹನ ಮಾಡವ ಪರಂಪರೆಯಿದೆ. ತುರಾಯಿ ಹಲಿಗೆ, ಶಹನಾಯಿ ವಾದನ ಅದಕ್ಕೆ ತಕ್ಕಂತೆ ಹಿಮ್ಮೆಳಗಳ ನಾದಸ್ವರ ಆರಂಭಗೊಂಡರೇ ಯುವಕರಿಂದ ಹಿಡಿದು ವಯೋ ವೃದ್ಧರು ಸಹ ಕುಣಿಯುವ ಉತ್ಸಾಹವನ್ನು ಮಾಡುವ ಶಕ್ತಿ ಹಲಿಗೆ ಮೇಳಕ್ಕಿದೆ. ಹೋಳಿ ಹಬ್ಬದ ವೈಭವವನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳು ಸಹ 5 ದಿನಗಳ ಕಾಲ ನಡೆಯುವದು ವಿಶೇಷ.

ಮೂರು ದಿನಗಳ ಬಣ್ಣದಾಟ:

5 ದಿನಗಳ ಹಬ್ಬದ ಆಚರಣೆಯಲ್ಲಿ 3 ದಿನಗಳ ಸತತ ಕಾಲ ಬಣ್ಣದಾಟ ನಡೆಯುವುದು ಬಾಗಲಕೋಟೆಯಲ್ಲಿ ಮಾತ್ರ. 3 ದಿನಗಳಲ್ಲಿ ನಗರದ ವಿವಿಧ ಬಡಾವಣೆಗಳಾದ ಕಿಲ್ಲಾ, ಹಳಪೇಟೆ, ಹೊಸಪೇಟೆ, ಜೈನಪೇಟೆ, ವೆಂಕಟಪೇಟೆಯ ಜನತೆ ವಿಶಿಷ್ಟರೀತಿಯಲ್ಲಿ ಬಣ್ಣದಾಟದಲ್ಲಿ ತೊಡಗುವ ಬಾಗಲಕೋಟೆ ಜನತೆಗೆ ಈ ಬಾರಿ ಬಣ್ಣದಾಟವನ್ನು ಮತ್ತಷ್ಟುರಂಗಿನಿಂದ ಆಡಲು ಸಜ್ಜಾಗಿದ್ದಾರೆ. ಜೊತೆಗೆ ಮಾ.9ರಂದು ರೇನ್‌ಡ್ಯಾನ್ಸ್‌ ಹಾಗೂ ಬಣ್ಣದ ಬಂಡಿಗಳು ಸಹ ಈ ಬಾರಿ ಹೋಳಿ ಆಚರಣೆಗೆ ಮತ್ತಷ್ಟು ಹೊಸ ಹುರುಪನ್ನು ನೀಡಲಿದೆ. ಇಲ್ಲದೇ ಇರುವುದು ಸಹಜವಾಗಿ ನಿರಾಶೆ ಮೂಡಿಸಿದೆ.

Holi 2023: ಹೋಳಿ ಹಬ್ಬಕ್ಕೆ ಹುಬ್ಬಳ್ಳಿಯಲ್ಲಿ ರಂಗಿನ ತಯಾರಿ: ಹರ್ಬಲ್ ಬಣ್ಣಕ್ಕೆ ಭಾರೀ ಬೇಡಿಕೆ

ಮಧ್ಯರಾತ್ರಿಯೇ ಆರಂಭ

ಮಾಚ್‌ರ್‍ 6 ಮಧ್ಯರಾತ್ರಿ ನಡೆಯುವ ಕಾಮದಹನದಿಂದ ಆರಂಭಗೊಳ್ಳುವ ಬಾಗಲಕೋಟೆಯ ಹೋಳಿ ಆಚರಣೆ 7ರಂದು ನಗರದೆಲ್ಲೆಡೆ ಕಾಮದಹನ, 8,9,10 ರಂದು ಮೂರು ದಿನಗಳ ಕಾಲ ವಿವಿಧ ಬಡಾವಣೆಯಲ್ಲಿ ನಡೆಯುವ ಹೋಳಿ ಬಣ್ಣದಾಟವನ್ನು ವೀಕ್ಷಿಸುವುದು ಹಾಗೂ ಭಾಗವಹಿಸಿ ಪರಸ್ಪರ ಬಣ್ಣದಾಟದಲ್ಲಿ ತೊಡಗುವುದೇ ಒಂದು ಸಂಭ್ರಮ.

ಶತಮಾನಗಳ ಇತಿಹಾಸವಿರುವ ಬಾಗಲಕೋಟೆ ಹೋಳಿ ಆಚರಣೆಗೆ ರಾಷ್ಟ್ರೀಯ ಮಾನ್ಯತೆ ಅಗತ್ಯವಾಗಿದೆ. ದೇಶದಲ್ಲಿ 5 ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಏಕಮಾತ್ರ ನಗರ ಬಾಗಲಕೋಟೆಯಾಗಿದೆ. ಹೋಳಿ ವೈಭವವನ್ನು ಇನ್ನಷ್ಟುಹೆಚ್ಚಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಅಂತ ಹೋಳಿ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಾಬಳೇಶ ಗುಡಗುಂಟಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios