ಈ ನಾಲ್ಕು ರಾಶಿಯವರು ಮಿತವ್ಯಯಿಗಳು..
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಆಧಾರದ ಮೇಲೆ ಗುಣ ಸ್ವಭಾವಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ಯಾರು ಹೆಚ್ಚು ಖರ್ಚು ಮಾಡುವವರು ಮತ್ತು ಯಾವ ರಾಶಿಯವರು ಮಿತವ್ಯಯಿಗಳು ಎಂಬುದನ್ನು ಸಹ ತಿಳಿಯಬಹುದಾಗಿದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.....
ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳಿವೆ. ಪ್ರತಿ ರಾಶಿಯ ವ್ಯಕ್ತಿಗಳ ಗುಣ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ.
ಒಂದೇ ದಿನ ಜನಿಸಿದರೂ ರಾಶಿ ಭಿನ್ನವಾಗಿರುತ್ತವೆ. ಕೆಲವರದು ಅಗ್ನಿ ತತ್ವ ರಾಶಿಯಾದರೆ ಇನ್ನು ಕೆಲವು ರಾಶಿಯವರದ್ದು ವಾಯು ಮತ್ತು ಜಲ ತತ್ವ ರಾಶಿ ಆಗಿರುತ್ತದೆ. ಹಾಗಾಗಿ ಆಯಾ ತತ್ವಗಳಿಗೆ ತಕ್ಕಂತೆ ಗುಣಸ್ವಭಾವಗಳು ಆಧರಿಸಿರುತ್ತವೆ.
ಅಷ್ಟೇ ಅಲ್ಲದೆ ಪ್ರತಿ ರಾಶಿಯ ಗುಣಗಳು ಆಯಾ ರಾಶಿಯ ಅಧಿಪತಿ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಗ್ರಹ, ರಾಶಿ, ನಕ್ಷತ್ರಗಳ ಪ್ರಭಾವದಿಂದ ವ್ಯಕ್ತಿಯಿಂದ ವ್ಯಕ್ತಿಗೆ ರೂಪ, ಸ್ವಭಾವ, ಗುಣ, ವ್ಯಕ್ತಿತ್ವಗಳಲ್ಲಿ ಅನೇಕ ವ್ಯತ್ಯಾಸಗಳಿರುತ್ತವೆ. ಪ್ರತಿ ರಾಶಿಗೂ ಆಯಾ ರಾಶಿಯ ಅಧಿಪತಿ ಗ್ರಹಗಳು ಇರುತ್ತವೆ. ಅಧಿಪತಿ ಗ್ರಹಗಳ ಪ್ರಭಾವವು ರಾಶಿಯ ಮೇಲೆ ಆಗಿರುತ್ತದೆ. ಹಾಗಾಗಿ ಕೆಲವು ರಾಶಿಯವರು ಸೂಕ್ಷ್ಮ ಸ್ವಭಾವದವರಾದರೆ ಮತ್ತೆ ಕೆಲವರದು ಒರಟು ಸ್ವಭಾವವಾಗಿರುತ್ತದೆ. ಕೆಲವು ರಾಶಿಯವರು ಹಣವನ್ನು ಹೆಚ್ಚು ವ್ಯಯ ಮಾಡುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಅದೇ ಕೆಲವು ರಾಶಿಯವರು ಬಂದ ಹಣವನ್ನು ಕೂಡಿಟ್ಟು ಕಷ್ಟಕಾಲಕ್ಕೆ ಉಪಯೋಗಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ.
ಇದನ್ನು ಓದಿ: ಈ ನಾಲ್ಕು ರಾಶಿಯವರು ಬುದ್ಧಿವಂತರು ಜೊತೆಗೆ ಚತುರರು ಆಗಿರುತ್ತಾರಂತೆ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ, ವೃಷಭ, ಮಕರ ಮತ್ತು ಮಿಥುನ ರಾಶಿಯ ವ್ಯಕ್ತಿಗಳು ಮಿತವಾಗಿ ಖರ್ಚು ಮಾಡುವರು ಆಗಿರುತ್ತಾರೆ. ಈ ನಾಲ್ಕು ರಾಶಿಗಳ ಬಗ್ಗೆ ಇನ್ನಷ್ಟು ತಿಳಿಯೋಣ....
ಮಕರ ರಾಶಿ
ಮಕರ ರಾಶಿಯ ವ್ಯಕ್ತಿಗಳು ಎಲ್ಲ ವಿಷಯಗಳಲ್ಲಿ ಸರಳ ಮತ್ತು ನಿರ್ದಿಷ್ಟವಾಗಿರಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳಿಗೆ ತಮ್ಮ ಹಣವನ್ನು ಯಾವ ಕೆಲಸಕ್ಕೆ ಬಳಸಿದರೆ ಸೂಕ್ತ ಎಂಬ ಬಗ್ಗೆ ಹೆಚ್ಚಿನ ಅರಿವಿರುತ್ತದೆ. ಜೊತೆಗೆ ಯಾವ ಕೆಲಸಕ್ಕೆ ಹಣ ಖರ್ಚು ಮಾಡಿದರೆ ವ್ಯರ್ಥ ಎಂಬ ಬಗ್ಗೆ ಸಹ ಚೆನ್ನಾಗಿ ಯೋಚಿಸಿರುತ್ತಾರೆ. ಹಣವನ್ನು ಖರ್ಚು ಮಾಡುವ ಸಮಯದಲ್ಲಿ ಹಲವು ಬಾರಿ ಯೋಚಿಸುತ್ತಾರೆ. ಅತ್ಯಂತ ಮುಖ್ಯವಾದ ಕೆಲಸಕ್ಕೆ ಹಣ ವ್ಯಯ ಮಾಡುವ ಸಂದರ್ಭದಲ್ಲಿ ಸಹ ಮತ್ತೆರಡು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ವೃಷಭ ರಾಶಿ
ಈ ರಾಶಿಯ ವ್ಯಕ್ತಿಗಳು ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಸ್ನೇಹಿತರೊಂದಿಗೆ ಹೊರಗಡೆ ಊಟಕ್ಕೆ ಹೋದ ಸಮಯದಲ್ಲಿ ತಾವೇ ಹಣ ಕೊಡಲು ಮುಂದಾಗುವ ಗುಣ ಇವರದ್ದಾಗಿರುತ್ತದೆ. ಈ ರಾಶಿಯವರು ನಿರ್ದಿಷ್ಟ ಕಾರಣಕ್ಕೆ ಹಣ ವ್ಯಯ ಮಾಡುವ ಸಂದರ್ಭದಲ್ಲಿ ತಮ್ಮ ನಂಬಿಕಸ್ಥ ಸ್ನೇಹಿತರಿಂದ ಸಲಹೆಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಅನಗತ್ಯ ಕಾರಣಗಳಿಗೆ ಹಣ ಖರ್ಚು ಮಾಡುವ ಜಾಯಮಾನ ಈ ರಾಶಿಯವರದ್ದಲ್ಲ. ಹಾಗಾಗಿ ಈ ರಾಶಿಯವರು ಮಿತವ್ಯಯಿಗಳಾಗಿರುತ್ತಾರೆ.
ಇದನ್ನು ಓದಿ: ಆಶ್ಲೇಷಾ, ಮಘಾ, ಪೂರ್ವ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣವಿದು!
ಮಿಥುನ ರಾಶಿ
ಈ ರಾಶಿಯ ವ್ಯಕ್ತಿಗಳು ಉತ್ತಮವಾದ ಹಾಸ್ಯ ಪ್ರಜ್ಞೆ ಉಳ್ಳವರಾಗಿರುತ್ತಾರೆ. ಮಿಥುನ ರಾಶಿಯ ವ್ಯಕ್ತಿಗಳಿಗೆ ಯಾವ ಸಮಯದಲ್ಲಿ ಹಣ ಖರ್ಚು ಮಾಡಬೇಕು ಮತ್ತು ಯಾವುದು ಅನಗತ್ಯ ಖರ್ಚು ಎಂಬ ಬಗ್ಗೆ ಅರಿವಿರುತ್ತದೆ. ಈ ರಾಶಿಯ ವ್ಯಕ್ತಿಗಳಿಗೆ ಸ್ಮಾರ್ಟ್ ಇನ್ವೆಸ್ಟರ್ಸ್ ಎಂದು ಸಹ ಹೇಳುತ್ತಾರೆ. ಇವರು ಉತ್ತಮ ಲಾಭ ದೊರೆಯುವ ಕಡೆ ಹೂಡಿಕೆ ಮಾಡುತ್ತಾರೆ.
ಇದನ್ನು ಓದಿ: ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ ನಕ್ಷತ್ರದವರ ಆಸಕ್ತಿ ಗೊತ್ತಾ..?
ಸಿಂಹ ರಾಶಿ
ಸಿಂಹ ರಾಶಿಯ ವ್ಯಕ್ತಿಗಳು ಸಾಹಸ ಪ್ರವೃತ್ತಿ ಉಳ್ಳವರು ಮತ್ತು ಧೈರ್ಯ ಶಾಲಿಗಳು ಆಗಿರುತ್ತಾರೆ. ಜೊತೆಗೆ ಉತ್ತಮ ರೀತಿಯಲ್ಲಿ ಹಣ ಉಳಿತಾಯ ಮಾಡುವ ಕಲೆ ತಿಳಿದವರು ಇವರಾಗಿರುತ್ತಾರೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯಕ್ಕೂ ಅನಗತ್ಯವಾಗಿ ಖರ್ಚು ಮಾಡುವ ಸ್ವಭಾವ ಸಿಂಹರಾಶಿಯವರದ್ದಲ್ಲ. ಹಾಗಂತ ಸ್ನೇಹಿತರಿಗೆ ಖರ್ಚುಮಾಡಲು ಹಿಂದೆಮುಂದೆ ನೋಡುವುದಿಲ್ಲ. ಅದೇ ರೀತಿಯ ಸ್ನೇಹವನ್ನು ಅವರಿಂದಲೂ ಸಹ ಬಯಸುತ್ತಾರೆ. ಸಿಂಹ ರಾಶಿಯವರು ಐಷಾರಾಮಿ ವಸ್ತುಗಳಿಗೆ ಆಸೆ ಪಡುವುದಿಲ್ಲ ಜೊತೆಗೆ ಮಿತವ್ಯಯಿಗಳು ಇವರಾಗಿರುತ್ತಾರೆ.