Asianet Suvarna News Asianet Suvarna News

ಇಂದು ಬುದ್ಧ ಪೂರ್ಣಿಮೆ; ಪ್ರಾಚೀನ ಕಾಲದ ಆಧುನಿಕ ಗುರು ಬುದ್ಧ

ಎಲ್ಲ ಧರ್ಮಗಳೂ ಆಯಾ ಧರ್ಮಕ್ಕೆ ಸೇರಿದ ದೇವರ ಬಗ್ಗೆಯೇ ಹೇಳುತ್ತ, ಆ ದೇವರನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸುತ್ತಿದ್ದರೆ ಬುದ್ಧ ಮಾತ್ರ ಯಾರನ್ನೂ ಪೂಜಿಸದೆ ನಿಮ್ಮಲ್ಲಿ ನೀವು ನಂಬಿಕೆಯಿಟ್ಟು ಸದ್ಗತಿ ಪಡೆಯಿರಿ ಎಂದು ಬೋಧಿಸಿದ. ಆದ್ದರಿಂದಲೇ ಅವನು ಪರಮ ಗುರುವಾದ.

Buddha Purnima 2022 history and significance of the festival skr
Author
Bangalore, First Published May 16, 2022, 9:57 AM IST

ಪ್ರಶಾಂತ್‌ ಕೆ.ಪಿ., ಬೆಂಗಳೂರು

ಜಗತ್ತಿನಲ್ಲಿ ಯಾವುದಾದರೂ ಒಳ್ಳೆಯ ಧರ್ಮ ಎಂಬುದು ಇದ್ದರೆ ಅದು ಬೌದ್ಧಧರ್ಮ ಎಂದು ಹೇಳಿದ್ದರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌. ನಾನಾ ಧರ್ಮಗಳಲ್ಲಿರುವ ಕಂದಾಚಾರ, ಮೌಢ್ಯಗಳು ಹಾಗೂ ಪ್ರಗತಿವಿರೋಧಿ ಸಂಗತಿಗಳನ್ನು ವಿರೋಧಿಸಿ ಅವರು ಕೊನೆಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದರು. ಎಲ್ಲ ಧರ್ಮಗಳಲ್ಲಿರುವ ಮೌಢ್ಯಗಳನ್ನೂ ವಿರೋಧಿಸುತ್ತಿದ್ದ ಅಂಬೇಡ್ಕರ್‌ರಂತಹ ವಿಚಾರವಾದಿ ಈ ಧರ್ಮವನ್ನು ಮನಃಪೂರ್ತಿಯಾಗಿ ಒಪ್ಪಿಕೊಂಡಿದ್ದರು ಎಂಬ ಒಂದೇ ಸಂಗತಿ ಸಾಕು - ಬುದ್ಧನ ವಿಚಾರಧಾರೆಗಳು ಎಷ್ಟುನೈಜ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿರುವ ವಾಸ್ತವ ಸಂಗತಿಗಳಾಗಿದ್ದವು ಎಂಬುದನ್ನು ತಿಳಿಯುವುದಕ್ಕೆ.

ಗೌತಮ ಬುದ್ಧ ಕ್ರಿಸ್ತಪೂರ್ವದಲ್ಲಿ ಹುಟ್ಟಿದ ವ್ಯಕ್ತಿ. ಆದರೆ ಇಂದಿಗೂ ಪ್ರಸ್ತುತವಾಗಿರುವ ಪ್ರಾಚೀನ ಕಾಲದ ಆಧುನಿಕ ಧರ್ಮಗುರು. ಎಲ್ಲ ಧರ್ಮಗಳೂ ಆಯಾ ಧರ್ಮಕ್ಕೆ ಸೇರಿದ ದೇವರ ಬಗ್ಗೆಯೇ ಹೇಳುತ್ತ, ಆ ದೇವರನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸುತ್ತಿದ್ದರೆ ಬುದ್ಧ ಮಾತ್ರ ಯಾರನ್ನೂ ಪೂಜಿಸದೆ ನಿಮ್ಮಲ್ಲಿ ನೀವು ನಂಬಿಕೆಯಿಟ್ಟು ಸದ್ಗತಿ ಪಡೆಯಿರಿ ಎಂದು ಬೋಧಿಸಿದ. ದೇವರನ್ನು ನಂಬಬೇಡಿ, ನಿಮ್ಮನ್ನು ನಂಬಿ ಎಂದು ಸಾವಿರಾರು ವರ್ಷಗಳ ಹಿಂದೆಯೇ ಉಪದೇಶ ಮಾಡಿ, ಆ ದಾರಿಯಲ್ಲೇ ಬದುಕಿನ ಗೆಲುವನ್ನು ತೋರಿಸಿಕೊಟ್ಟಜಗತ್ತಿನ ಮೊಟ್ಟಮೊದಲ ಮ್ಯಾನೇಜ್‌ಮೆಂಟ್‌ ಗುರು ಬುದ್ಧ.

ಜೀವನಪರ ಬೋಧನೆಗಳು
ಬುದ್ಧನ ಉಪದೇಶಗಳು ಅತ್ಯಂತ ಜೀವಪರ ಹಾಗೂ ಜೀವನಪರ. ಅವು ಪ್ರತಿಯೊಬ್ಬರ ಬದುಕಿಗೂ ಅನ್ವಯಿಸುವ ಪಕ್ಕಾ ಪ್ರಾಕ್ಟಿಕಲ್‌ ಸಂಗತಿಗಳು. ಇಂದಿಗೂ ಒಬ್ಬ ಮನುಷ್ಯ ಒಳ್ಳೆಯ ಬದುಕನ್ನು ಹೇಗೆ ನಡೆಸಬೇಕು ಎಂದು ಯೋಚಿಸಿದರೆ ಅದಕ್ಕೆ ಉತ್ತರವಾಗಿ ನಿಲ್ಲುವುದು ಬುದ್ಧನ ಉಪದೇಶಗಳು. ಇಂದು ಪರ್ಸನಾಲಿಟಿ ಮ್ಯಾನೇಜ್‌ಮೆಂಟ್‌ ಎಂಬ ಹೆಸರಿನಲ್ಲಿ ವ್ಯಕ್ತಿತ್ವ ವಿಕಸನ ಗುರುಗಳು ಏನು ಹೇಳುತ್ತಾರೋ ಅದನ್ನು ಕ್ರಿಸ್ತಪೂರ್ವ 600ರ ಸುಮಾರಿನಲ್ಲೇ ಬುದ್ಧ ಹೇಳಿದ್ದ. ಆದ್ದರಿಂದಲೇ ಆತ ಏಕಾಂಗಿಯಾಗಿ ಒಂದು ಹೊಸ ಧರ್ಮವನ್ನು ಸ್ಥಾಪಿಸಿ, ಇವತ್ತಿಗೂ ಅದು ಜನಪ್ರಿಯ ಧರ್ಮವಾಗಿ ಉಳಿಯುವುದಕ್ಕೆ ಸಾಧ್ಯವಾಗಿರುವುದು. ರಾಜಮನೆತನದಲ್ಲಿ ಹುಟ್ಟಿ, ರಾಜ್ಯವನ್ನೇ ತ್ಯಜಿಸಿ, ಪರಿವ್ರಾಜಕನಾಗಿ, ದುಃಖದಲ್ಲಿರುವ ಮನುಷ್ಯರನ್ನು ಮೇಲೆತ್ತುವುದೇ ನನ್ನ ಗುರಿ ಎಂದು ಜೀವನದ ಅರ್ಥವನ್ನು ಹುಡುಕಿಕೊಂಡು ಹೊರಟ ಬುದ್ಧನ ಬದುಕೇ ಒಂದು ಅದ್ಭುತ ಜೀವನಪಾಠ.

ವೈಶಾಖ ಪೂರ್ಣಿಮೆಯಂದು ಜನನ
ಈಗ ನೇಪಾಳದ ಭಾಗವಾಗಿರುವ ಲುಂಬಿನಿ ಎಂಬ ಗ್ರಾಮದಲ್ಲಿ ಕ್ರಿ.ಪೂ. 623ನೇ ವರ್ಷದಲ್ಲಿ ಗೌತಮನ ಜನನವಾಯಿತು. ಗೌತಮನ ತಾಯಿ ರಾಣಿ ಮಾಯಾದೇವಿಯು ಹೆರಿಗೆಗಾಗಿ ತನ್ನ ತವರಿಗೆ ತೆರಳುತ್ತಿದ್ದಾಗ ದಾರಿಯ ಮಧ್ಯೆಯೇ ಪ್ರಸವ ವೇದನೆ ಕಾಣಿಸಿಕೊಂಡಿದ್ದರ ಪರಿಣಾಮ ಲುಂಬಿನಿ ಗ್ರಾಮದ ಸಮೀಪದ ಸಾಲ ವೃಕ್ಷಗಳ ನಡುವೆ ಅವಳಿಗಾಗಿ ಹಾಕಿದ್ದ ಡೇರೆಯಲ್ಲಿ ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದಳು. ಅಂದು ವೈಶಾಖ ಶುದ್ಧ ಪೂರ್ಣಿಮೆ. ಶಾಕ್ಯ ವಂಶದವರ ರಾಜ್ಯವಾದ ಕಪಿಲವಸ್ತುವಿನ ಪ್ರಭು ಶುದ್ಧೋಧನನು ಮಾಯಾದೇವಿಯ ಪತಿ, ಗೌತಮನ ತಂದೆ. ಶುದ್ಧೋಧನ ದಂಪತಿಗಳು ಮಗನಿಗೆ ಸಿದ್ಧಾರ್ಥ ಎಂದು ನಾಮಕರಣ ಮಾಡಿದರು.

ಮುಂದೆ ಸಂಸಾರಿಯಾದರೂ ಸಿದ್ಧಾರ್ಥನಿಗೆ ರಾಜಮನೆತನದ ಐಷಾರಾಮಗಳು ಬೇಡವಾದವು. ಜನರ ಸಂಕಷ್ಟಗಳು ಹಾಗೂ ಅಜ್ಞಾನಕ್ಕೆ ಮರುಗಿದ ಆತ ಲೋಕೋದ್ಧಾರಕ್ಕಾಗಿ ರಾಜ್ಯವನ್ನು ತೊರೆದು ಸತ್ಯದ ಹುಡುಕಾಟಕ್ಕೆ ನಡೆದ.

ಜ್ಞಾನವೇ ಮೂರ್ತಿವೆತ್ತ ಮಾನವರೂಪಿ
ಅರಸೊತ್ತಿಗೆ, ಹೆಂಡತಿ ಮಕ್ಕಳು ಹಾಗೂ ರಾಜ್ಯವನ್ನು ತೊರೆದು ರಾತ್ರೋರಾತ್ರಿ ನಡೆದ ಗೌತಮ ಅನ್ನ ನೀರಿನ ಹಂಗಿಲ್ಲದೆ ತೀವ್ರವಾದ ಧ್ಯಾನದಲ್ಲಿ ಆರು ವರ್ಷಗಳನ್ನು ಕಳೆದ. ಆದರೆ ಹೀಗೆ ಆಹಾರಾದಿಗಳನ್ನು ತ್ಯಜಿಸಿ ಧ್ಯಾನಕ್ಕೆ ಕುಳಿತ ಪರಿಣಾಮ ಅವನ ದೈಹಿಕ ಶಕ್ತಿ ಕುಂದಿತು. ಪ್ರಾಣ ಹೋಗುವ ಸ್ಥಿತಿ ತಲುಪಿದರೂ ಸತ್ಯದ ಹುಡುಕಾಟ ಮಾತ್ರ ಕೊನೆ ಮುಟ್ಟಲಿಲ್ಲ. ಆಗ ಒಂದು ದಿನ ದೂರದಿಂದ ಕೇಳಿದ ಒಂದು ಹಳ್ಳಿ ಸೊಗಡಿನ ಹಾಡಿನ ಸಾಲು ಅವನ ಮನಸ್ಸಿಗೆ ತಟ್ಟಿತು. ಯಾವುದೂ ಅತಿಯಾಗದೆ ಮಿತವಾಗಿರಲು ಬೇಕು ಎಂಬುದು ಆ ಸಾಲಿನ ಭಾವಾರ್ಥ. ಗೌತಮನು ತಾನು ಇದುವರೆಗೆ ನಡೆಸುತ್ತಿದ್ದ ನಿರಾಹಾರ ವ್ರತವನ್ನು ತ್ಯಜಿಸಲು ನಿರ್ಧರಿಸಿದ.

Buddha Purnima: ಬುದ್ಧ ಮಾನವತೆಯ ಮಂದಹಾಸ ತೊರೆದು ಹೋದವನು ತೋರಿದ ದಾರಿ

ಅದೇ ಸಮಯದಲ್ಲಿ ಹಳ್ಳಿಯಲ್ಲಿದ್ದ ಸುಜಾತ ಎನ್ನುವ ಹೆಂಗಸು ತನಗೆ ಮಗ ಹುಟ್ಟಿದ ಕಾರಣದಿಂದ ಸಂತಸಗೊಂಡು ಗೌತಮನ ಬಳಿಗೆ ಬಂದಳು. ಅವನು ಒಬ್ಬ ತಪಸ್ವಿ, ಮಹಾನುಭಾವ ಎನ್ನುವ ಕಲ್ಪನೆ ಅವಳದಾಗಿತ್ತು. ಅವಳು ಸಿದ್ಧಾರ್ಥನಿಗೆ ಒಂದು ತಟ್ಟೆಯಲ್ಲಿ ಕ್ಷೀರಾನ್ನ ನೀಡಿದಳು. ಅವನು ಅದನ್ನು ಸ್ವೀಕರಿಸಿದ. ಇದು ಗೌತಮ ಸ್ವೀಕರಿಸಿದ ಮೊದಲ ಭಿಕ್ಷಾಹಾರವಾಗಿತ್ತು. ಸತ್ಯದ ಸಾಕ್ಷಾತ್ಕಾರಕ್ಕೆಂದು ದೇಹ ದಂಡಿಸಿದರೆ ಅದರಿಂದ ಯಾವುದೇ ಉಪಯೋಗವಿಲ್ಲ. ಕಾಯಕ್ಲೇಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯಕವಾಗಲಾರವು ಎನ್ನುವುದು ಅವನ ಅರಿವಿಗೆ ಬಂದಿತು.

ಅಲ್ಲಿಂದ ಮುಂದಿನ ಏಳು ವಾರಗಳ ಕಾಲ ಗೌತಮ ನಿತ್ಯವೂ ನಿಯಮಿತವಾಗಿ ಭಿಕ್ಷೆ ಎತ್ತಿ ಆಹಾರ ಸೇವಿಸುತ್ತಿದ್ದ. ಪ್ರತಿನಿತ್ಯವೂ ನದಿಯಲ್ಲಿ ಸ್ನಾನ ಮಾಡಿ ಶುಚಿಯಾಗಿರುತ್ತ, ಅಲ್ಲಿದ್ದ ಅರಳಿ ಮರದಡಿಯಲ್ಲಿ ಧ್ಯಾನದಲ್ಲಿ ತಲ್ಲೀನನಾಗುತ್ತಿದ್ದ. ಇದಾಗಿ ಏಳನೇ ವಾರದಲ್ಲಿ ವೈಶಾಖ ಶುದ್ಧ ಪೌರ್ಣಮಿಯಂದು ಗೌತಮನಿಗೆ ತಾನು ಕಾಣಬೇಕೆಂದುಕೊಂಡಿದ್ದ ಸತ್ಯದ ಅರಿವು ಮೂಡಿತು. ಅಂದು ಸೂರ್ಯೋದಯವಾಗುವುದರೊಳಗೆ ಗೌತಮನಿಗೆ ಜ್ಞಾನಸಿದ್ಧಿ ಉಂಟಾಗಿತ್ತು.

ಆಧುನಿಕ ಯುಗದಲ್ಲಿ ಬುದ್ಧನ ಪ್ರಸ್ತುತತೆ
ಅಹಿಂಸೆ, ಜ್ಞಾನ, ಕರುಣೆಯ ಪ್ರತಿರೂಪವಾಗಿದ್ದ ಬುದ್ಧ ಇಂದಿಗೂ ಪ್ರಸ್ತುತನಾಗುತ್ತಾನೆ. ಇಂದು ವಿಶ್ವದಾದ್ಯಂತ ಯುದ್ಧ, ಸೇಡು, ಕೊಲೆಗಳು, ಅತ್ಯಾಚಾರ, ಅನಾಚಾರಗಳು ಸಂಭವಿಸುತ್ತಿರುವುದಕ್ಕೆ ನಾವು ಬುದ್ಧನ ಮಾರ್ಗವನ್ನು ಮರೆತದ್ದೇ ಕಾರಣ. ಜೀವನವು ಒಂದು ಯಾತ್ರೆ. ಅದನ್ನು ದಃಖದ ಸ್ಥಿತಿಗೆ ತಳ್ಳಬಹುದು, ಸುಖದ ಔನ್ನತ್ಯಕ್ಕೆ ಏರಿಸಬಹುದು. ಇದನ್ನು ಪ್ರತಿಯೊಬ್ಬನೂ ಸ್ವ ಪ್ರಯತ್ನದಿಂದ ಗಳಿಸಬಹುದು ಎಂದು ಮೊಟ್ಟಮೊದಲ ಬಾರಿಗೆ ಬುದ್ಧನೇ ತೋರಿಸಿಕೊಟ್ಟ. ಮನಸ್ಸನ್ನು ಉತ್ತುಂಗಕ್ಕೆ ಏರಿಸುವವನೇ ಮನುಷ್ಯ ಎನ್ನುವ ಮೂಲಕ ಜಗತ್ತಿಗೆ ಮಾನವೀಯತೆ, ತ್ಯಾಗದ ಪರಿಣಾಮವನ್ನು ತೋರಿಸಿದ.

Spirituality: ಆಧ್ಯಾತ್ಮ ಬಳಸಿ ನಕಾರಾತ್ಮಕ ಯೋಚನೆಗಳಿಗೆ ಬೈ ಹೇಳಿ..

ಬುದ್ಧನ ಬೋಧನೆಗಳು ನಮಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ. ಯಾರು ಶೀಲ, ಸದಾಚಾರ, ಮನೋಬಲ ಬೆಳೆಸಿಕೊಳ್ಳುತ್ತಾರೆಯೋ ಅವರಿಗೆ ಫಲ ಪ್ರಾಪ್ತಿಯಾಗುತ್ತದೆ. ಆ ಫಲವೇ ಮನಸ್ಸಿನ ಶಾಂತಿ. ಬದುಕಿನಲ್ಲಿ ಪಾರದರ್ಶಕತೆಯಿದ್ದರೆ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ ಎಂಬುದು ಅವನ ಉಪದೇಶವಾಗಿತ್ತು. ಬುದ್ಧನಲ್ಲಿ ಯಾವುದೇ ತಾರತಮ್ಯವಿಲ್ಲ. ಹಾಗಂತ ಅವನು ಎಲ್ಲರನ್ನೂ ಎಲ್ಲವನ್ನೂ ಒಪ್ಪಿಕೊಳ್ಳಿ ಎನ್ನಲಿಲ್ಲ, ಬದಲಾಗಿ ಪ್ರತಿಯೊಬ್ಬರೂ ಪ್ರತಿಯೊಂದನ್ನೂ ಪರೀಕ್ಷಿಸಿ ನೋಡಿರಿ ಎಂದ.

ಮಧ್ಯಮ ಮಾರ್ಗದ ಪ್ರವರ್ತಕ
ಬುದ್ಧ ಈ ಜಗತ್ತಿಗೆ ಮಧ್ಯಮ ಮಾರ್ಗವನ್ನು ತೋರಿದ. ಸಮಾಜದಲ್ಲಿ ಅಜ್ಞಾನದ ಕಾರಣದಿಂದ ಅನೇಕ ಅನ್ಯಾಯಗಳು ನಡೆಯುತ್ತವೆ. ಹಿಂಸೆಗಳು ಸಂಭವಿಸುತ್ತವೆ. ಇದಕ್ಕೆಲ್ಲಾ ಬುದ್ಧ ಕರುಣೆಯ ಮೂಲಕ ಪರಿಹಾರವನ್ನು ನೀಡಿದ. ದ್ವೇಷದಿಂದ ದ್ವೇಷವೆಂದೂ ತೊಲಗುವುದಿಲ್ಲ. ಪ್ರೀತಿಯಿಂದ ದ್ವೇಷವನ್ನು ಗೆಲ್ಲಬಹುದು. ಅಹಿಂಸೆಯೇ ಜೀವನದ ತಳಹದಿಯಾಗಬೇಕು ಎನ್ನುವುದು ಬುದ್ಧನ ಮಾರ್ಗವಾಗಿತ್ತು. ಬಡತನವೇ ದೊಡ್ಡ ರೋಗವೆಂದು ಭಾವಿಸಿದ್ದ ಬುದ್ಧ ಪ್ರತಿಯೊಬ್ಬರೂ ಆರ್ಥಿಕವಾಗಿ ಶಕ್ತರಾಗಬೇಕು. ಸರಿಯಾದ ಜೀವನೋಪಾಯ ಹಾಗೂ ಪ್ರಯತ್ನದಿಂದ ಸಂಪತ್ತು ಗಳಿಸಿಕೊಳ್ಳಬೇಕು ಎಂದು ಹೇಳುತ್ತಿದ್ದ.

ವಿಶ್ವ ಶಾಂತಿಗಾಗಿ ಬುದ್ಧನ ಮಾರ್ಗ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಬುದ್ಧ ಭೂತ ಮತ್ತು ಭವಿಷ್ಯದ ಕುರಿತಂತೆ ಚಿಂತಿಸದೆ ವರ್ತಮಾನದ ಸ್ಥಿತಿಗೆ ಹೆಚ್ಚು ಒತ್ತು ನೀಡುವಂತೆ ಹೇಳಿದ್ದ. ವರ್ತಮಾನದಲ್ಲಿ ಒದಗಿರುವ ಸ್ಥಿತಿಯನ್ನು ತೃಪ್ತಿಕರ ಮನೋಭಾವದಿಂದ ಸ್ವೀಕರಿಸಿದ ವ್ಯಕ್ತಿ ಪ್ರಪಂಚದಲ್ಲಿ ಹೆಚ್ಚು ಸುಖಿಯಾಗುತ್ತಾನೆ. ವಾಸ್ತವಿಕವಾಗಿ ಜೀವನವನ್ನು ಅನುಸರಿಸಿದ್ದಾದರೆ ಬದುಕು ಸುಂದರವಾಗುತ್ತದೆ ಎಂದು ಉಪದೇಶ ಮಾಡಿದ್ದ.

ಬುದ್ಧ ಪೂರ್ಣಿಮಾ 2022ರ ಶುಭಾಶಯಗಳು

ಭೂಮಿಯಲ್ಲಿ ಹುಟ್ಟಿದ ವ್ಯಕ್ತಿ ಅಥವಾ ಜೀವಿಯು ಇನ್ನೊಂದು ವ್ಯಕ್ತಿ ಅಥವಾ ಜೀವಿಯ ಸಹಕಾರವಿಲ್ಲದೆ ಬಾಳುವುದಿಲ್ಲ. ಇಲ್ಲಿ ಎಲ್ಲವೂ ಸಹ-ಜೀವನವನ್ನು ಅವಲಂಬಿಸಿದೆ. ಇತರರ ಸಹಕಾರವಿಲ್ಲದೆ ನಾವು ಬದುಕಲಾರೆವು. ಹೀಗಿರಲು ಸ್ವಾರ್ಥದಿಂದ ಸಾಧಿಸುವುದೇನು? ಇತರರ ಮೇಲೆ ನಾವು ತೋರುವ ಸಹಾನುಭೂತಿಯಿಂದ ಪ್ರಾಪಂಚಿಕ ಸಮಸ್ಯೆಯನ್ನು ಸುಲಭದಲ್ಲಿ ಬಗೆಹರಿಸಬಹುದು. ಒಬ್ಬರು ಇನ್ನೊಬ್ಬರ ಮೇಲೆ ತೋರುವ ಸಹನಾ ಮನೋಭಾವ ವಿಶ್ವದ ಅತ್ಯದ್ಭುತ ಮಾನವ ಶಕ್ತಿಯಾಗಿದೆ. ಇದರಿಂದಲೇ ಪ್ರಪಂಚದ ವಿಕೋಪಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಇದುವೇ ಬುದ್ಧನ ಸಂದೇಶ. ಈ ಕಾರಣಕ್ಕೇ ಬುದ್ಧ ನಿಜವಾದ ಗುರು.

Follow Us:
Download App:
  • android
  • ios