ನಾಳೆ ಭೀಮನ ಅಮಾವಾಸ್ಯೆ, ಪತಿಯ ಪೂಜೆ ಏಕೆ ಮಾಡಬೇಕು ಗೊತ್ತಾ?
ಆಷಾಢದ ಕೊನೆಯ ದಿನದಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿ ಮತ್ತು ಸಹೋದರರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ.
ನಾಳೆ ಆಷಾಢ ಮಾಸದ ಅಮಾವಾಸ್ಯೆ ಇದೆ. ಇದನ್ನು ದಕ್ಷಿಣ ಭಾರತದಲ್ಲಿ ಭೀಮನ ಅಮಾವಾಸ್ಯೆ ಎಂದು ಸಹ ಕರೆಯುತ್ತಾರೆ. ಮನೆಯ ಹೆಣ್ಣು ತನ್ನ ಗಂಡ ಹಾಗೂ ಸೋದರರ ಜೀವನದ ಒಳಿತಿಗಾಗಿ ಮಾಡುವ ಪೂಜೆಯೇ ಭೀಮನ ಅಮಾವಾಸ್ಯೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಭೀಮನ ಅಮಾವಾಸ್ಯೆ ವ್ರತ ಏಕೆ ಆಚರಿಸುತ್ತಾರೆ?
ಭೀಮನ ಅಮಾವಾಸ್ಯೆಯ ವ್ರತದಲ್ಲಿ ಪ್ರಮುಖವಾಗಿ ಶಿವ ಮತ್ತು ಪಾರ್ವತಿ ದೇವರನ್ನು ಆರಾಧಿಸಲಾಗುತ್ತದೆ. ಈ ದಿನದಂದು ಹೆಣ್ಣು ಮಕ್ಕಳು ಒಂದು ದಿನ ಉಪವಾಸ ವಿದ್ದು ತಮ್ಮ ಪತಿ ಹಾಗೂ ಸಹೋದರ ಆರೋಗ್ಯ ಮತ್ತು ಆಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಆಚರಣೆ ಹೇಗೆ ಮಾಡಬೇಕು?
ಭೀಮನ ಅಮಾವಾಸ್ಯೆ ವ್ರತದಲ್ಲಿ ಮಣ್ಣಿನಿಂದ ಮಾಡಿದ ಎರಡು ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದೀಪವು ಶಿವ ಮತ್ತು ಪಾರ್ವತಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಭೀಮನ ಅಮಾವಾಸ್ಯೆಯ ದಿನದಂದು ಉಪವಾಸ ಆಚರಿಸುವ ಮಹಿಳೆಯರು ಬೇಯಿಸಿದ ಆಹಾರವನ್ನು ಸೇವಿಸಬಾರದು. ಶಿವ ಮತ್ತು ಪಾರ್ವತಿಯ ಪೂಜೆ ಮಾಡಿ ನೈವೇದ್ಯೆ ಮಾಡಿದ ನಂತರವಷ್ಟೇ ಮಹಿಳೆಯರು ಹಣ್ಣು, ಹಾಲು ಗಳನ್ನು ಸೇವಿಸಿ ಉಪವಾಸ ಆಚರಿಸಬೇಕು
ಪೂಜೆ ಹೇಗೆ ಮಾಡಬೇಕು?
ಭೀಮನ ಅಮಾವಾಸ್ಯೆಯ ವ್ರತವನ್ನು ಯಾವುದೇ ಶುಭ ಮುಹೂರ್ತದಲ್ಲಿ ಕೈಗೊಳ್ಳಬಹುದು. ಗಣಪತಿಯ ಪೂಜೆಯ ನಂತರ ಭೀಮೇಶ್ವರನ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ದೇವರಿಗೆ ಕಡುಬನ್ನು ನೈವೇದ್ಯವಾಗಿ ಅರ್ಪಿಸಿ ಆರತಿ ಮಾಡುವ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು. ಇದಾದ ಬಳಿಕ ಪತಿಯ ಪಾದ ಪೂಜೆಯನ್ನು ಮಾಡಬೇಕು. ಈ ಮೂಲಕ ವ್ರತ ಆಚರಣೆ ಮಾಡಿ, ಪತಿ ಹಾಗೂ ಸಹೋದರರ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಬೇಕು.
ಪಿಂಡದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ
ಭೀಮನ ಅಮಾವಾಸ್ಯೆಯ ದಿನದಂದು ಉತ್ತರ ಭಾರತ ಸೇರಿದಂತೆ ಹಲವೆಡೆ ಪಿತೃ ತರ್ಪಣ ಮತ್ತು ಪಿಂಡದಾನವನ್ನು ಮಾಡುತ್ತಾರೆ. ಪುರಾಣದ ಪ್ರಕಾರ ಈ ದಿನದಂದು ಪಿಂಡದಾನ ಮಾಡಿದರೆ, ನಮ್ಮ ಹಿರಿಯರ ಆತ್ಮ ಕ್ಕೆ ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಪೂರ್ವಜರ ಪೂಜೆಯಿಂದ ಜನನ ಮತ್ತು ಮರಣದ ಚಕ್ರದಿಂದ ಅವರು ಮುಕ್ತರಾಗುತ್ತಾರೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಜನರು ಪುಣ್ಯ ಕ್ಷೇತ್ರಗಳಿಗೆ ತೆರಳಿ ನದಿಯಲ್ಲಿ ಪಿಂಡದರ್ಪಣೆ ಮಾಡುತ್ತಾರೆ.