Bagalkote: ಸಾವಳಗಿ ಗ್ರಾಮದಲ್ಲಿ ಅದ್ಧೂರಿ ಮಾಳಿಂಗೇಶ್ವರ ಜಾತ್ರೆ

ಭಂಡಾರದಲ್ಲಿ ಮಿಂದೆದ್ದ ಇಡೀ ಊರು
ಏಕಕಾಲಕ್ಕೆ 50ಕ್ಕೂ ಅಧಿಕ ಊರುಗಳ ಪಲ್ಲಕ್ಕಿಗಳ ಸಮಾಗಮ ಉತ್ಸವ

Bagalkote Mahalingeshwara Jatre held with grandeur skr

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಅದು ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ಇಲ್ಲಿ ಜಾತ್ರೆ ಬಂದ್ರೆ ಸಾಕು, ಇಡೀ ಊರು ತುಂಬ ಸಂಭ್ರಮವೋ ಸಂಭ್ರಮ, ಸಾಲದ್ದಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 50ಕ್ಕೂ ಅಧಿಕ ಊರಿನ ಪಲ್ಲಕ್ಕಿಗಳು ಸೇರೋದು ಇಲ್ಲಿನ ವಿಶೇಷ. ಇಂತಹ ಅಪರೂಪದ ಭಂಡಾರದಲ್ಲಿ ಮಿಂದೇಳುವ ಮಾಳಿಂಗೇಶ್ವರ ಜಾತ್ರೆ ನಡೆಯೋದು ಎಲ್ಲಿ ಅಂತೀರಾ? ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಅಂದ ಹಾಗೆ ಇಂತಹ ಅಪರೂಪದ ಮಾಳಿಂಗೇಶ್ವರ ಜಾತ್ರೆ ನಡೆಯೋದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ. ಪ್ರತಿ ಮೂರು ವರ್ಷಕೊಮ್ಮೆ ಇಲ್ಲಿ ಮಾಳಿಂಗೇಶ್ವರ ಜಾತ್ರೆ ನಡೆಯುತ್ತದೆ. ನಿರಂತರ ಮೂರ್ನಾಲ್ಕು ದಿ‌ನಗಳ ಕಾಲ ನಡೆಯೋ ಜಾತ್ರೆಯಲ್ಲಿ ಸಂಭ್ರಮವೋ ಸಂಭ್ರಮ. 

ಜಾತ್ರೆಯಲ್ಲಿ ಸೇರುತ್ತವೆ 50ಕ್ಕೂ ಅಧಿಕ ಊರಿನ ಪಲ್ಲಕ್ಕಿಗಳು..
ಮಾಳಿಂಗೇಶ್ವರ ಜಾತ್ರೆಯಲ್ಲಿ ಒಂದೇ ಊರಿನ ಪಲ್ಲಕ್ಕಿ ಉತ್ಸವ ನಡೆಯೋದಿಲ್ಲ, ಇದಕ್ಕಾಗಿ ಅಕ್ಕಪಕ್ಕದ ಸುಮಾರು 50 ಊರುಗಳಿಂದ ಪಲ್ಲಕ್ಕಿಯನ್ನ ಹೊತ್ತು ಸಾವಳಗಿಗೆ ಕರೆ ತರಲಾಗುತ್ತದೆ. ಊರಿಗೆ ಬಂದ ಪಲ್ಲಕ್ಕಿಗಳನ್ನ ಸ್ವಾಗತಿಸೋದನ್ನ ನೋಡೋದೆ ಒಂದು ಹಬ್ಬವಾಗಿರುತ್ತದೆ. ಹೀಗಾಗಿ ಇಡೀ ಊರಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರು ಸಹ ಈ ಜಾತ್ರೆಯನ್ನು ನೋಡಲು ನೆರೆದಿರುತ್ತಾರೆ.

ಪ್ರೇಮಿಗೆ ಗಿಫ್ಟ್ ಕೊಟ್ಟು ಇಂಪ್ರೆಸ್‌ ಮಾಡೋದ್ರಲ್ಲಿ ಈ ರಾಶಿಯವರು ಎತ್ತಿದ ಕೈ!

ಭಂಡಾರದಲ್ಲಿ ಮಿಂದೇಳುವ ಗ್ರಾಮ..
ನಿರಂತರ ನಾಲ್ಕು ದಿನಗಳ ಕಾಲ ನಡೆಯುವ ಮಾಳಿಂಗೇಶ್ವರ ಜಾತ್ರೆ ವಿಶೇಷ ಅಂದ್ರೆ ಭಂಡಾರ. ಹೌದು, ಊರಿಗೆ ಜಾತ್ರೆ ನಿಮಿತ್ಯ ಬಂದ 50ಕ್ಕೂ ಅಧಿಕ ದೇವರ ಪಲ್ಲಕ್ಕಿಗಳನ್ನು ಏಕಕಾಲಕ್ಕೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮುಂದೆ ಡೊಳ್ಳು ಸಹಿತ ವಿವಿಧ ವಾದ್ಯಗಳ ಮೇಳ ಕಂಡು ಬಂದರೆ ಅದರ ಹಿಂದೆಯೇ ಪಲ್ಲಕ್ಕಿಗಳ ಮೆರವಣಿಗೆ ನಡೆದಿರುತ್ತೆ. ಹೀಗೆ ನಡೆಯುವಾಗಲೇ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಪ್ರತಿ ಪಲ್ಲಕ್ಕಿಯ ಮೇಲೆ ಭಂಡಾರ ಎರಚುತ್ತಾರೆ. ಹೀಗೆ ನಿರಂತರ ಭಂಡಾರ ಎರಚುವುದರಿಂದ ಇಡೀ ಊರಿಗೆ ಊರೇ ಭಂಡಾರಮಯವಾಗಿರೋ ದೃಶ್ಯಗಳು ಇಲ್ಲಿ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತವೆ. ಇದೇ ವೇಳೆ ಸುಮಂಗಲೆಯರು ಕುಂಭವನ್ನು ಜೊತ್ತು ಸಾಲಂಕೃತವಾಗಿ  ಕುಂಭ ಮೇಳ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಸಾಲಮುಕ್ತರಾಗಲು 10 vastu ಸಲಹೆಗಳು

ಜಾತಿ ಮತ ಪಂಥ ಮೀರಿ ನಡೆಯುವ  ಜಾತ್ರೆ..
ನಿರಂತರ ನಾಲ್ಕೈದು ದಿನಗಳ ಕಾಲ ನಡೆಯುವ ಮಾಳಿಂಗೇಶ್ವರ ಜಾತ್ರೆಯಲ್ಲಿ ಎಲ್ಲ ಜಾತಿ ಮತ ಪಂಥದ ಜನರು ಸಹ ಭಕ್ತಿಯಿಂದ ಭಾಗವಹಿಸುತ್ತಾರೆ. ತಮ್ಮ ಇಷ್ಟಾನುಸಾರ ಭಕ್ತಿಯಿಂದ ಸೇವೆ ಸಲ್ಲಿಸುತ್ತಾರೆ. ಇವುಗಳ ಮಧ್ಯೆ ಕೆಲವು ಭಕ್ತರು ನಿರಂತರ ನಾಲ್ಕು ದಿನಗಳ ಕಾಲ ಅನ್ನ ಪ್ರಸಾದ ಸೇವೆ ಮಾಡಿಸಲು ಮುಂದಾಗ್ತಾರೆ. ಹೀಗಾಗಿ ಬೇರೆ ಬೇರೆ ಊರುಗಳಿಂದ ಬರುವ ಭಕ್ತರಿಗಷ್ಟೇ ಅಲ್ಲದೆ ಸಾವಳಗಿ ಗ್ರಾಮದ ಜನರು ಸಹ ಸಾಮೂಹಿಕ ಅನ್ನಪ್ರಸಾದದಲ್ಲಿ ಭಾಗವಹಿಸ್ತಾರೆ. ಊರಲ್ಲಿ ಮನೆಯಲ್ಲಿ ಒಲೆಯನ್ನ ಸಹ ಹಚ್ಚೋದಿಲ್ಲ, ಬದಲಾಗಿ ಇಡೀ ದಿನ ಜಾತ್ರೆಯಲ್ಲಿ ಭಾಗವಹಿಸಿ ದೇವರ ಕಾರ್ಯ ಮಾಡಿ, ಅದರೊಟ್ಟಿಗೆ ಸಾಮೂಹಿಕ ಅನ್ನಪ್ರಸಾದ ಸೇವಿಸಲು ಮುಂದಾಗ್ತಾರೆ.

ಒಟ್ಟಿನಲ್ಲಿ ಸಂಪ್ರದಾಯಗಳೇ ಮರೆಮಾಚುತ್ತಿರುವ ಇಂದಿನ ಆಧುನಿಕತೆಯ ಭರಾಟೆಯ ಕಾಲದಲ್ಲಿ ಭಕ್ತರೆಲ್ಲಾ ಸೇರಿ ಭಾವೈಕ್ಯತೆಯಿಂದ ಸಾವಳಗಿ ಗ್ರಾಮದಲ್ಲಿ ಅದ್ಧೂರಿ ಮಾಳಿಂಗೇಶ್ವರ ಜಾತ್ರೆ ಮಾಡುತ್ತಿರುವುದು ಮಾತ್ರ ಇತರರಿಗೆ ಮಾದರಿಯೇ ಸರಿ.

Latest Videos
Follow Us:
Download App:
  • android
  • ios