ಕೋವಿ, ಕತ್ತಿ ಆಯುಧಗಳೊಂದಿಗೆ ಮೆರವಣಿಗೆ, ಕೊಡಗಿನಲ್ಲಿ ಕೈಲ್ ಪೊಳ್ದ್ ಸಂಭ್ರಮ
ವಿಶಿಷ್ಟ ಹಬ್ಬ, ಆಚರಣೆಗಳಿಗೆ ಶ್ರೇಷ್ಠವಾಗಿರುವ ಕೊಡಗು ಜಿಲ್ಲೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ ಮನೆ ಮಾಡಿದೆ. ಕೃಷಿ ಚಟುವಟಿಕೆಗಳನ್ನು ಪೂರೈಸಿದ ಕೊಡವರು ಎಲ್ಲಾ ಸಲಕರಣೆಗಳನ್ನು ಶುದ್ಧಗೊಳಿಸಿ ಪೂಜೆ ಸಲ್ಲಿಸುವ ಪರಿಯೇ ವಿಶಿಷ್ಟ. ಆ ವಿಶಿಷ್ಟ ಆಚರಣೆಯ ಝಲಕ್ ಇಲ್ಲಿದೆ ನೋಡಿ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.2) : ವಿಶಿಷ್ಟ ಹಬ್ಬ, ಆಚರಣೆಗಳಿಗೆ ಶ್ರೇಷ್ಠವಾಗಿರುವ ಕೊಡಗು ಜಿಲ್ಲೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ ಮನೆ ಮಾಡಿದೆ. ಕೃಷಿ ಚಟುವಟಿಕೆಗಳನ್ನು ಪೂರೈಸಿದ ಕೊಡವರು ಎಲ್ಲಾ ಸಲಕರಣೆಗಳನ್ನು ಶುದ್ಧಗೊಳಿಸಿ ಪೂಜೆ ಸಲ್ಲಿಸುವ ಪರಿಯೇ ವಿಶಿಷ್ಟ. ಆ ವಿಶಿಷ್ಟ ಆಚರಣೆಯ ಝಲಕ್ ಇಲ್ಲಿದೆ ನೋಡಿ.
ಕುಪ್ಪೆ ಚಾಲೆ ಧರಿಸಿ, ಹೆಗಲಿಗೆ ಕೋವಿ ಏರಿಸಿ ಹೊರಟ ಕೊಡವರು. ಅದೇ ಕೋವಿಯಿಂದ ಗುರಿಯಿಟ್ಟು ಶೂಟ್ ಮಾಡುವುದಕ್ಕೆ ಸಿದ್ಧವಾಗಿರುವ ಕೊಡವತ್ತಿಯರು. ಸಾಲಾಗಿ ಕೋವಿ ನಿಲ್ಲಿಸಿ ಎಡೆಯಿಟ್ಟು ಪೂಜೆ ಸಲ್ಲಿಸುತ್ತಿರುವ ಸನ್ನಿವೇಶ. ಇದೇನಿದು ಯಾರಾದರೂ ಕೋವಿಗೆ ಪೂಜೆ ಸಲ್ಲಿಸುತ್ತಾರಾ ಎಂದು ನೀವು ಅಚ್ಚರಿ ಪಡುತ್ತಿರಬಹುದು. ಆದರೆ ಇದು ಕೋವಿಯನ್ನು ತಮ್ಮ ದೇವರೆಂದು ಪೂಜ್ಯನೀಯ ಭಾವದಿಂದ ಪೂಜಿಸುವ ಕೊಡವರ ಸಾಂಪ್ರದಾಯಿಕ ಹಬ್ಬ ಕೈಲ್ ಪೊಳ್ದ್ ನ ಪರಿ ಇದು.
ಮನಸೂರೆಗೊಂಡ ಹುತ್ತರಿ ಕೋಲಾಟ: ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಕೊಡಗಿನ ಮಂದಿ..!
ಹೌದು ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ಕೊಡವರು ತಮ್ಮ ಗದ್ದೆ ನಾಟಿಗಳನ್ನು ಮುಗಿಸುತ್ತಿದ್ದಂತೆ ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಿ ಪೂಜಿಸುವ ಹಬ್ಬ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ಸಮೀಪದಲ್ಲಿ ಸಾಮೂಹಿಕ ಕೈಲ್ ಮೂರ್ತ ನಡೆಯಿತು. ಮಂದ್ ನಲ್ಲಿ ಕೋವಿ, ಕತ್ತಿಗಳನ್ನು ಸಾಲಾಗಿ ಇಟ್ಟು ಅವುಗಳಿಗೆ ಎಡೆಯಿಟ್ಟು ಪೂಜಿಸಿದರು. ಅದಕ್ಕೂ ಮೊದಲು ದುಡಿಕೊಟ್ಟು ಪಾಟ್ ಬಡಿಯುತ್ತಾ ಮೆರವಣಿಗೆ ಬಂದ ಕೊಡವರು ಒಂದೆಡೆ ಇರಿಸಿದ್ದರೆ ಕೋವಿಯ ಸುತ್ತ ಮೂರು ಸುತ್ತು ಮೆರವಣಿಗೆ ಬಂದು ಗುರು ಕಾರೋಣರಿಗೆ ಅಕ್ಕಿ ಹಾಕಿ ಪೂಜೆ ಸಲ್ಲಿಸಿದರು.
ಬಳಿಕ ಬಾಳೆ ಕಡಿಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದೆವು. ಇದು ನಮ್ಮ ಸಂಸ್ಕೃತಿ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು. ಕೃಷಿ ಪರಿಕರ, ಆಯುಧಗಳಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ವಿಶಿಷ್ಟ ನೃತ್ಯಗಳಾದ ಚವರಿಯಾಟ್, ಕತ್ತಿಯಾಟ್, ಕೋಲಾಟ್ ಮತ್ತು ಪರೆಯಕಳಿ ಸೇರಿದಂತೆ ವಿವಿಧ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು.
ಅಷ್ಟೇ ಅಲ್ಲ ಎಲ್ಲವೂ ಆದ ಬಳಿಕ ತಾವು ಹಿಂದೆ ಹೋಗುತ್ತಿದ್ದ ಬೇಟೆಯ ಸಂಕೇತವಾಗಿ ಮರದ ಮೇಲೆ ಕಟ್ಟಿದ್ದ ತೆಂಗಿನ ಕಾಯಿಗಳಿಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ಸಾಮೂಹಿಕವಾಗಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಶೌರ್ಯ ಮೆರೆದರು. ಜೊತೆಗೆ ಕೋವಿ ಹಿಡಿದು ಮಹಿಳೆಯರು, ಪುರುಷರು ಮಕ್ಕಳೆನ್ನದೆ ಎಲ್ಲರೂ ಒಟ್ಟಾಗಿ ದುಡಿಕೊಟ್ಟು ಪಾಟ್ ವಾದ್ಯದ ಶಬ್ಧಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮಂಗಳೂರು: ಕೃಷ್ಣ ಜನ್ಮಾಷ್ಟಮಿ-ಮೊಸರುಕುಡಿಕೆಗೆ ಪೊಲೀಸ್ ಮಾರ್ಗಸೂಚಿ ಪ್ರಕಟ, ಇಲ್ಲಿದೆ ಮಾಹಿತಿ!
ಕೃಷಿ ಚಟುವಟಿಕೆಗಳನ್ನು ಮುಗಿಸಿದ ಬಳಿಕ ಆಚರಿಸುವ ಆಯುಧ ಪೂಜೆಯಂತೆ ನಮ್ಮ ಹಬ್ಬ ವಿಶೇಷ ಎಂದು ಹಿರಿಯರಾದ ಬೊಳ್ಳಮ್ಮ ನಾಣಯ್ಯ ಹೇಳಿದರು. ಜೊತೆಗೆ ವಿವಿಧ ಭಕ್ಷ್ಯ ಭೋಜ್ಯಗಳನ್ನು ಮಾಡಿ ಸವಿಯುತ್ತೇವೆ ಎಂದರು. ಒಟ್ಟಿನಲ್ಲಿ ವಿಶಿಷ್ಟ ಆಚರಣೆಗಳ ಮೂಲಕ ದೇಶದ ಗಮನ ಸೆಳೆಯುವ ಕೊಡವ ಸಂಸ್ಕೃತಿಯ ಹಬ್ಬ ಕೈಲ್ ಪೊಳ್ದ್ ಸಂಭ್ರಮ ಸಡಗರ ಜಿಲ್ಲೆಯಲ್ಲಿ ಮನೆ ಮಾಡಿದೆರುವುದಂತು ಸತ್ಯ.