ಮುಳ್ಳುಕೊಂಪೆಯಲ್ಲಿ ಕುಣಿದಾಡುವ ಮಕ್ಕಳು, ಕೊಪ್ಪಳ ಜಿಲ್ಲೆಯಲ್ಲೊಂದು ವಿಶಿಷ್ಟ ಆಚರಣೆ
* ಮುಳ್ಳುಕೊಂಪೆಯಲ್ಲಿ ಕುಣಿದಾಡುವ ಮಕ್ಕಳು
* ಮುಳ್ಳು ಕೊಂಪೆಯನ್ನು ಹೊತ್ತುಕೊಂಡು ನಾನಾ ವಾದ್ಯವೃಂದ ಮೆರವಣಿಗೆ
* ಕೊಪ್ಪಳ ಜಿಲ್ಲೆಯಲ್ಲೊಂದು ವಿಶಿಷ್ಟ ಆಚರಣೆ
ಸೋಮರಡ್ಡಿ ಅಳವಂಡಿ
ಕೊಪ್ಪಳ, (ಏ.03): ಮುಳ್ಳು ಕೊಂಪೆಯನ್ನು ಹೊತ್ತುಕೊಂಡು ನಾನಾ ವಾದ್ಯವೃಂದ ಮೆರವಣಿಗೆಯಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗುವುದು, ಹೀಗೆ ಸಾಗುವಾಗ ಅಲ್ಲಲ್ಲಿ ಮುಳ್ಳುಕೊಂಪೆಯನ್ನು ಕೆಳಗಿಳಿಸುತ್ತಾರೆ. ಆಗ ಮಕ್ಕಳು ಸೇರಿದಂತೆ ಭಕ್ತರು ಮುಳ್ಳುಕೊಂಪೆಯಲ್ಲಿ ಥೇಟ್ ಹನುಮಂತನಂತೆ ಕುಣಿದಾಡುತ್ತಾರೆ. ಇದು ಕೊಪ್ಪಳ ಜಿಲ್ಲಾದ್ಯಂತ ಯುಗಾದಿ ವೇಳೆಯಲ್ಲಿ ನಡೆಯುವ ಶ್ರೀ ಮಾರುತೇಶ್ವರ ಜಾತ್ರೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತದೆ.
ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಶನಿವಾರ ಹಾಗೂ ಹಿರೇಸಿಂದೋಗಿ ಗ್ರಾಮದಲ್ಲಿ ಭಾನುವಾರ ಈ ಮುಳ್ಳುಹರಕೆ ನಡೆಯಿತು. ನೋವಾಗುತ್ತದೆ ಎನ್ನುವ ಪರಿವೇ ಇಲ್ಲದೇ ಮುಳ್ಳುಕೊಂಪೆಯಲ್ಲಿ ಹಾರುವ ದೃಶ್ಯ ಮೈಜುಮ್ಮೆನ್ನುವಂತೆ ಇರುತ್ತದೆ. ಮಾಳಿಗೆ ಮೇಲಿಂದಲೂ ಮುಳ್ಳುಕೊಂಪೆಗೆ ಜಿಗಿದಾಡುತ್ತಾರೆ.
ಪುನೀತ್ ಫೋಟೋ ಹಿಡಿದು ಮುಳ್ಳುಗಳ ಮೇಲೆ ಕುಣಿದು ಕುಪ್ಪಳಿಸಿದ ಅಪ್ಪು ಅಭಿಮಾನಿಗಳು
ಹೇಗೆ ಆಚರಣೆ?
ಯುಗಾದಿ ವೇಳೆಯಲ್ಲಿ ಶ್ರೀ ಮಾರುತೇಶ್ವರ ಜಾತ್ರೆಯ ಅಂಗವಾಗಿ ಬ್ಯಾಟಿ ಗಿಡ ಮುಳ್ಳುಗಿಡ ಎಂದೆಲ್ಲಾ ಮಾಡುವ ಪದ್ಧತಿ ಇದೆ. ಬ್ಯಾಟಿ ಗಿಡ ಎಂದರೇ ಪೂಜಾರಿಯೇ ಗಿಡವನ್ನು ಕಿತ್ತುಕೊಂಡು ಬಂದು, ಮೆರವಣಿಗೆಯಲ್ಲಿ ಕುಣಿತ ಹಾಕುತ್ತಾರೆ. ಮುಳ್ಳುಗಿಡ ಎನ್ನುವ ಪದ್ಧತಿಯಲ್ಲಿ ಕಾರಿಕಂಟಿಯ ಮುಳ್ಳನ್ನು ಕೊಂಪೆಗಟ್ಟಲೇ ಕಡಿದುಕೊಂಡು ಹೆಟ್ಟದಲ್ಲಿ ಕಟ್ಟಿ, ಹೊತ್ತು ತರುತ್ತಾರೆ. ಹೀಗೆ ತಂದ ಮುಳ್ಳಿನಕೊಂಪೆ ಅಥವಾ ಹೆಟ್ಟವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ.
ಮೆರವಣಿಗೆ ಮಾಡುವ ವೇಳೆಯಲ್ಲಿ ಬೇಡಿಕೊಂಡ ಭಕ್ತರು ಹರಕೆ ತೀರಿಸಲು ಮುಳ್ಳು ಹೆಟ್ಟದಲ್ಲಿ ಜಿಗಿದಾಡುತ್ತಾರೆ. ಥೇಟ್ ಹನುಮಂತನಂತೆ ಕುಣಿದಾಡುತ್ತಾರೆ. ಕೆಲವರು ಹನುಮಂತ ಜಿಗಿಯುವಂತೆ ಮಾಳಿಗೆಯ ಮೇಲಿಂದ ಹೆಟ್ಟದಲ್ಲಿ ಹಾರುವ ದೃಶ್ಯ ನೆರವದವರನ್ನು ಮೂಕವಿಸ್ಮೀತರನ್ನಾಗಿಸುತ್ತದೆ. ಹೀಗೆ ಜಿಗಿದಾಡಿದರೂ ಯಾರಿಗೂ ಮುಳ್ಳು ಚುಚ್ಚುವುದಿಲ್ಲ. ಹಾಗೊಂದು ವೇಳೆ ಚುಚ್ಚಿದರು ನೋವಾಗುವುದಿಲ್ಲ ಎನ್ನುವುದು ಹರೆಕೆ ತೀರಿಸಿದವರು ಅನಿಸಿಕೆಯಾಗಿದೆ.
ಮುಳ್ಳುಗಿಡ ಮುನ್ನಾದಿನವೇ ಕಾರಿಕಂಟಿಯ ಮುಳ್ಳು ಗುರುತಿಸಿ, ನೀರು ಹಾಕಿ ಗೊತ್ತು ಮಾಡಿರುತ್ತಾರೆ. ಜಾತ್ರೆಯ ದಿನದಂದು ಮೆರವಣಿಗೆಯಲ್ಲಿ ಇಡೀ ಊರ ಜನರು ತೆರಳಿ, ಪೈಪೋಟಿಯ ಮೇಲೆ ಕಾರಕಂಟಿಯ ಮುಳ್ಳುಗಿಡಗನ್ನು ಕಿಳುತ್ತಾರೆ. ಹೀಗೆ ಕಿತ್ತ ಮೇಲೆ ಅವುಗಳನ್ನು ಒಟ್ಟುಗೂಡಿಸಿ ಹೆಟ್ಟದಂತೆ ಮಾಡುತ್ತಾರೆ. ಇದಕ್ಕಾಗಿ ಮುಳ್ಳುಕಂಟಿಯನ್ನು ಬೊಂಬಿನ ಮೇಲೆ ಹಾಕಿ, ಹೆಟ್ಟ ಮಾಡಿರುತ್ತಾರೆ. ಅದು ಹತ್ತಾರು ಜನರು ಹೊತ್ತುಕೊಂಡು ಹೋಗುವುದಕ್ಕೆ ಬರುವಂತೆ ಮಾಡಿರುತ್ತಾರೆ. ಹೀಗೆ ಮುಳ್ಳು ಹೆಟ್ಟ ಸಿದ್ಧವಾದ ಮೇಲೆ ಪೂಜೆಯನ್ನು ಮಾಡಿ, ದೇವರ ಪೂಜಾರಿಯ ಅಣತಿಯಂತೆ ಹೆಟ್ಟವನ್ನು ಹೊತ್ತುಕೊಂಡು ಊರವರೆಗೂ ಆಗಮಿಸುತ್ತಾರೆ. ಊರ ಹತ್ತಿರ ಬಂದ ಮೇಲೆ ಭರ್ಜರಿ ಮೆರವಣಿಗೆ ಪ್ರಾರಂಭವಾಗುತ್ತದೆ. ಹೀಗೆ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಮುಳ್ಳು ಹರಕೆ ತೀರಿಸುವವರು ಮುಳ್ಳುಕೊಂಪೆಗೆ ಹಾರುತ್ತಾರೆ.
ಚಪ್ಪಲಿ ತೊಟ್ಟುಬರುವಂತಿಲ್ಲ
ಹೀಗೆ ನಡೆಯುವ ಮುಳ್ಳು ಹರಕೆ ತೀರಿಸುವ ಮೆರವಣಿಗೆಗೆ ಯಾರು ಚಪ್ಪಲಿಯನ್ನು ತೊಟ್ಟು ಬರುವಂತೆ ಇಲ್ಲ. ಹಾಗೊಂದು ವೇಳೆ ಚಪ್ಪಲಿಯನ್ನು ತೊಟ್ಟುಬಂದರೇ ಅವರನ್ನು ಮುಳ್ಳುಗಿಡವನ್ನು ಹಿಡಿದು ಓಡಾಡಿಸಿ, ಬಡಿದು ಕಳುಹಿಸಲಾಗುತ್ತದೆ. ಹೀಗಾಗಿ, ಉರಿಬಿಸಲು ಇದ್ದವರು ಮುಳ್ಳು ಹರಕೆ ತೀರಿಸುವವರು ಮತ್ತು ಇದನ್ನು ನೋಡಲು ಬರುವವರು ಯಾರು ಮೆಟ್ಟುಮೆಟ್ಟಿಕೊಂಡು ಬರುವುದಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಚಿತ್ರ ಕೃಪೆ - ನಾಭಿರಾಜ ದಸ್ತೇನವರ