ಶ್ರೀಮದ್ ಭಗವದ್ಗೀತೆಹಿಂದೂಗಳ ಪವಿತ್ರ ಗ್ರಂಥವಾಗಿದೆ ನಾವು ಭಗವದ್ಗೀತೆಯಿಂದ ಅನುಸರಿಸಬೇಕಾದ ಜೀವನ ಪಾಠಗಳನ್ನು ಆರ್ಟ್ ಆಪ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಬರೆಯುತ್ತಾರೆ.
ಶ್ರೀಮದ್ ಭಗವದ್ಗೀತೆಹಿಂದೂಗಳ ಪವಿತ್ರ ಗ್ರಂಥವಾಗಿದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ಪ್ರಾರಂಭವಾಗುವ ಸಂದರ್ಭದಲ್ಲಿ ನಾವು ಶ್ರೀಕೃಷ್ಣನಿಂದ ಪಡೆದ ಜೀವನ ಪಾಠವಾಗಿದೆ. ಶ್ರೀಕೃಷ್ಣನ ಬೋಧನೆಗಳು ಅರ್ಜುನನ ಜೀವನದ ದೃಷ್ಟಿಕೋನವನ್ನು ಬದಲಾಯಿಸಲು ಸಹಾಯ ಮಾಡಿತು. ಗೀತೆಯು ಶತಮಾನಗಳಷ್ಟು ಹಳೆಯದಾಗಿದ್ದರೂ, ಅದರ ಬೋಧನೆಯು ಇಂದಿನವರೆಗೆ ಪ್ರಸ್ತುತವಾಗಿದೆ.
"ಆತ್ಮನೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ” ನೀವೇ ತೃಪ್ತಿ. ಯಾವುದೂ ನಿಮಗೆ ತೃಪ್ತಿಯನ್ನು ನೀಡಲು ಸಾಧ್ಯವಿಲ್ಲ. ತಮ್ಮಲ್ಲೇ ತೃಪ್ತಿಯಿದೆಯೆಂದು ಅರಿಯುವವರೇ ಸ್ಥಿತಪ್ರಜ್ಞರು.
"ಆಪೂರ್ಯಮಾಣಮಚಲ ಪ್ರತಿಷ್ಠಂ. ಸಮುದ್ರಮಾಪಃ ಪ್ರವಿಶಂತಿ ಯದ್ವತ್." ಆಗಲೇ ಪೂರ್ಣವಾಗಿ ತುಂಬಿರುವ ಸಮುದ್ರದೊಳಗೆ ಎಲ್ಲಾ ನದಿಗಳೂ ಹಗಲೂ ಇರುಳೂ ಹರಿಯುತ್ತವೆ. ಅದೇ ರೀತಿಯಾಗಿ, ತಮ್ಮಲ್ಲೇ ನೆಲೆಗೊಂಡು ಪೂರ್ಣರಾಗಿರುವವರ ಬಳಿ ಎಲ್ಲಾ ಬಯಕೆಗಳೂ ಹರಿಯುತ್ತವೆ, ಅವರ ಎಲ್ಲಾ ಕಾಮನೆಗಳೂ ಪೂರ್ಣವಾಗುತ್ತವೆ.
"ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ. ಸ್ಥಿತ್ವಾಸ್ಯಾಮಂತ ಕಾಲೇಪಿ ಬ್ರಹ್ಮನಿರ್ವಾಣಮೃಚ್ಛತಿ". ಜೀವನದ ಅಂತಿಮ ಕ್ಷಣಗಳಲ್ಲಿ, ತೃಪ್ತಿಯ ಸ್ಥಿತಿಯಲ್ಲಿ ಈ ದೇಹವನ್ನು ಬಿಟ್ಟರೆ, ಅದರಿಂದ ಬ್ರಹ್ಮನಿರ್ವಾಣವನ್ನು, ಅಂತಿಮ ನಿರ್ವಾಣವನ್ನು ಪಡೆಯುತ್ತೀರಿ.
"ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್” ಸ್ವಲ್ಪ ಧರ್ಮವನ್ನು ಪಾಲಿಸಿದರೂ ಸಾಕು. ನಿಮ್ಮ ನಿಜ ಸ್ವಭಾವವನ್ನು ಸ್ವಲ್ಪ ಅರ್ಥ ಮಾಡಿಕೊಂಡರೂ ಸಾಕು. ಅಪಾರ ಭಯದಿಂದ ರಕ್ಷಿಸಲ್ಪಡುತ್ತೀರಿ.
"ಅಶಾಂತಸ್ಯ ಕುತಃ ಸುಖಂ?" ಭಾವನಾತ್ಮಕವಾಗಿ ಶಾಂತವಾಗಿರದಿದ್ದರೆ, ನಿಮ್ಮ ಜೀವನದಲ್ಲಿ ಸಂತೋಷವು ಹೇಗೆ ತಾನೇ ಇರಲು ಸಾಧ್ಯ?
"ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ". ಏನೇ ಆಗಲಿ ಅಥವಾ ಆಗದಿರಲಿ, ನಿಮ್ಮ ಸಮಚಿತ್ತತೆಯನ್ನು ಕಾಯ್ದುಕೊಳ್ಳುವುದೇ ಯೋಗ. ನಿಮಗೆ ಹೇಗೆ ಬೇಕೋ ಹಾಗೆ ವಿಷಯಗಳು ನಡೆಯದಿದ್ದಾಗ, ಆಗ ನಿಮಗೆ ಸಹಿಷ್ಣುತೆ, ಬಲ ಬೇಕು. ಇವು ನಿಮ್ಮ ಸಮಚಿತ್ತತೆಯಿಂದ ಬರುತ್ತವೆ.
"ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ" ಜ್ಞಾನಿಗಳ ಬಳಿ ಕುಳಿತು, ಅವರ ಸೇವೆ ಮಾಡಿ. ಪ್ರಶ್ನೆಗಳು ಎದ್ದಲ್ಲಿ, ಭಕ್ಯಾದರಗಳಿಂದ ಅವರಿಗೆ ಪ್ರಶ್ನೆಗಳನ್ನು ಕೇಳಿ ಅದರ ಬಗ್ಗೆ ತಿಳಿದುಕೊಳ್ಳಿ. ಜ್ಞಾನಿಗಳಾದ ಗುರುಗಳಿಂದ ಮಾತ್ರ ನಿಮಗೆ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
"ನ ಸುಖಂ ಸಂಶಯಾತ್ಮನಃ. ಸಂಶಯಾತ್ಮಾ ವಿನಶ್ಯತಿ". ಸಂಶಯಾತ್ಮರಿಗೆ ಈ ಜಗತ್ತಿನಲ್ಲೂ ಅಥವಾ ಬೇರೆ ಎಲ್ಲಿಯಾದರೂ ಸರಿ, ಸುಖವೇ ಸಿಗುವುದಿಲ್ಲ. ಅಷ್ಟೊಂದು ಸಂಶಯಗಳಿದ್ದರೆ, ನೀವು ಸಂತೊಷವಾಗಿರಲೂ ಸಾಧ್ಯವಿಲ್ಲ, ನಿಮಗೆ ಯಾವ ಯಶಸ್ಸೂ ಸಿಗುವುದಿಲ್ಲ.
