Asianet Suvarna News Asianet Suvarna News

ರಾಮನವಮಿ: 2 ಕೋಟಿ ತಲುಪಿದ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ'

ಶ್ರೀರಾಮನನ್ನು ಆತ್ಮೀಯ ಭಾವದಿಂದ ಸ್ತುತಿಸುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಎರಡು ಕೋಟಿ ಹಿಟ್ ತಲುಪಿದೆ, 

2 crore hits for the song Innashtu bekenna hrudayakke Rama
Author
Bengaluru, First Published Apr 21, 2021, 1:44 PM IST

ಯೂಟ್ಯೂಬ್‌ನಲ್ಲಿ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಎಂಬ ಗೀತೆ ತುಂಬಾ ಪ್ರಸಿದ್ಧವಾಗಿದೆ. ಇತರ ಮೀಡಿಯಾಗಳಲ್ಲೂ ಅದು ವೈರಲ್ ಆಗಿ ಓಡಾಡ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ 2 ಕೋಟಿ ಸಲ ಈ ಹಾಡನ್ನು ಮೀಡಿಯಾದಲ್ಲಿ ಕೇಳಲಾಗಿದೆ. ಯೂಟ್ಯೂಬ್‌ನಲ್ಲಿ 1.3 ಲಕ್ಷ, ಇತರ ಮೀಡಿಯಾಗಳಲ್ಲಿ 70 ಲಕ್ಷ ಸಲ ಕೇಳಲಾಗಿದೆ. ಇದೊಂದು ದಾಖಲೆಯೇ ಸರಿ. ಶ್ರೀರಾಮನವಮಿಯ ಸಂದರ್ಭದಲ್ಲಿ ಅದು ಇನ್ನೂ ಹೆಚ್ಚಾಗಿ ಶೇರ್ ಆಗುತ್ತದೆ, ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಕೇಳಿಸಲ್ಪಡುತ್ತದೆ. ಇದೊಂದು ಭಕ್ತಿಗೀತೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಭಕ್ತಿಗೀತೆ ಇಷ್ಟೊಂದು ಪಾಪ್ಯುಲರ್ ಆಗಿರುವ ಉದಾಹರಣೆಗಳು ಕಡಿಮೆ.

ಈ ಹಾಡಿನ ಇಷ್ಟೊಂದು ಪಾಪ್ಯುಲಾರಿಟಿಗೆ ಏನು ಕಾರಣ? ಇದನ್ನು ಬರೆದವರು ಯಾರು? ತಿಳಿಯೋಣ ಬನ್ನಿ.

ರಾಮಾಯಣವೆಂಬ ವೇದದಲ್ಲಿ ರಾಮನೆಂಬ ಪರಬ್ರಹ್ಮ ...

ಇದನ್ನು ಬರೆದವರು ಶ್ರೀ ಗಜಾನನ ಶರ್ಮ. ಇವರು ಮೂಲತಃ ಲಿಂಗನಮಕ್ಕಿ ಅಣೆಕಟ್ಟಿನ ಸಮೀಪದ ಹಕ್ಕಲಿನವರು. ಈ ಹಿಂದೆ ಕೆಪಿಟಿಸಿಎಲ್‌ನಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ, ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಆ ಸಂದರ್ಭದಲ್ಲಿ ಅವರು ವಿಶ್ವವಿಖ್ಯಾತ ಲಿಂಗನಮಕ್ಕಿ ಅಣೆಕಟ್ಟು ಪವರ್ ಪ್ರಾಜೆಕ್ಟ್ ಮುಂತಾದ ಕಡೆ ಕೆಲಸ ಮಾಡಿದ್ದರು. ಈ ಹಾಡು ಹುಟ್ಟಿದ ಬಗೆ ಸ್ವಾರಸ್ಯಕರವಾಗಿದೆ. ಕೆಲವು ವರ್ಷಗಳ ಹಿಂದೆ, ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು, ಚಾತುರ್ಮಾಸ್ಯದ ಸಂದರ್ಭದಲ್ಲಿ ಹಾಡಲು ಶ್ರೀರಾಮನ ಬಗ್ಗೆ ಒಂದು ಹಾಡನ್ನು ಬರೆದುಕೊಡುವಂತೆ ಸೂಚಿಸಿದ್ದರಂತೆ. ಆಗ ಕೆಪಿಟಿಸಿಎಲ್‌ನಲ್ಲಿ ಅಧಿಕ್ಷಕ ಎಂಜಿನಿಯರ್ ಆಗಿದ್ದ ಗಜಾನನ ಶರ್ಮ, ಕೆಲಸದ ಒತ್ತಡದಲ್ಲಿ ಬರೆಯಲು ಆಗದೆ ಅದನ್ನು ಮುಂದೂಡುತ್ತ ಬಂದಿದ್ದರು. ಒಂದು ದಿನ ತರಬೇತಿ ನಿಮಿತ್ತ ಕೇರಳಕ್ಕೆ ಹೋಗಿದ್ದಾಗ, 'ಏ ದಿಲ್ ಮಾಂಗೇ ಮೋರ್' ಎಂದು ಹಾಡು ಕೇಳಿಸಿತು. ಅದು 'ಏ ದಿಲ್ ಮಾಂಗೇ ರಾಮ್' ಅನ್ನುತ್ತಿರುವಂತೆ ಅವರಿಗೆ ಭಾಸವಾಯಿತಂತೆ. ಆಗ ಹುಟ್ಟಿಕೊಂಡಿತು ಈ ಹಾಡು.

ಕಲ್ಯಾಣ ರಾಮನ ಕಲ್ಯಾಣ ಚರಿತೆ ...

ನಂತರ ಈ ಹಾಡಿಗೆ ಶರ್ಮಾ ಅವರ ಪುತ್ರ ಸಾಕೇತ್ ಶರ್ಮಾ ಸಂಗೀತ ಸಂಯೋಜಿಸಿದರು. ಕೆ.ವಿ.ಸುಪ್ರಭಾ ಅದನ್ನು ಹಾಡಿದರು. ಇವರು ಮೂಲತಃ ಬೆಂಗಳೂರಿನಾಕೆ. ಇವರು ಪತಿಯ ಜೊತೆಗೆ ಹಂಬರ್ಗ್ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಪತಿಯ ಜೊತೆಗೆ ಡಿಗ್ರಿ ಪಡೆದಿದ್ದು, ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಐದು ಭಾಷೆಗಳಲ್ಲಿ ಹಾಡಬಲ್ಲರು.

'ಇನ್ನಷ್ಟು ಬೇಕೆನ್ನ' ಹಾಡು ಕೂಡ ತಮಿಳು ತೆಲುಗು ತುಳು ಭಾಷೆಗಳಿಗೆ ಅನುವಾದವಾಗಿ ಅಲ್ಲಿ ಕೂಡ ಅದನ್ನು ಹಾಡಲಾಗಿದೆ. ಆದಿಚುಂಚನಗಿರಿ, ಹೊಸನಗರ ಶ್ರೀಗಳು ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ದೇವಾಲಯಗಳಲ್ಲಿ ಇದನ್ನು ಕೇಳಿಸಲಾಗುತ್ತದೆ. ಶ್ರೀರಾಮನವಮಿಯ ಸುಸಂದರ್ಭದಲ್ಲಿ ಇದನ್ನು ಇನ್ನಷ್ಟು ಮತ್ತಷ್ಟು ನೀವು ಕೇಳಬಹುದು ಕೂಡ. ಅಷ್ಟು ಸೊಗಸಾಗಿರುವ ಈ ಹಾಡು ಮತ್ತಷ್ಟು ಹಿಟ್ಸ್ ಪಡೆಯುವುದರಲ್ಲಿ ಸಂದೇಹವಿಲ್ಲ.

ಇಂದು ಶ್ರೀ ರಾಮ ನವಮಿ: ರಾಮನ ಈ ಪುಟ್ಟ ಕತೆಗಳನ್ನು ಮಕ್ಕಳಿಗೆ ಹೇಳಿ! ...

ಈ ಹಾಡಿನ ಪೂರ್ತಿ ಪಾಠ ಹೀಗಿದೆ:

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ||

ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|

ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ರಘುರಾಮ ರಘುರಾಮ ರಘುರಾಮ ರಾಮ|

ಒಳಿತಿನೆಡೆ ಮುನ್ನಡೆವ ಮನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|

ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ|

ರಘುರಾಮ ರಘುರಾಮ ರಘುರಾಮ ರಾಮ||

ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
ಸಹವಾಸ ಕೊಡು ನಾನು ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
ರಘುರಾಮ ರಘುರಾಮ ರಘುರಾಮ ರಾಮ||

ಮಡಿಲಲ್ಲಿ ಮರಣಕೊಡು ನಾ ಜಟಾಯುವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರ ಕರೆಯುವೆನು ನನ್ನತನ ಕಳೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
ರಘುರಾಮ ರಘುರಾಮ ರಘುರಾಮ ರಾಮ||

ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|

ರಘುರಾಮ ರಘುರಾಮ ರಘುರಾಮ ರಘುರಾಮ|
ನಗು ರಾಮ ನಗ ರಾಮ ಜಗ ರಾಮ ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ||

2 crore hits for the song Innashtu bekenna hrudayakke Rama

Follow Us:
Download App:
  • android
  • ios