ದೇವಸ್ಥಾನಗಳಲ್ಲಿ ಪೂಜೆ ಬಳಿಕ ಬಿಸಾಡುವ ಹೂವುಗಳು, ಅಡುಗೆಮನೆಯಲ್ಲಿನ ಈರುಳ್ಳಿ ಸಿಪ್ಪೆ, ಆವಕಾಡೊ ಸಿಪ್ಪೆ… ಇವೆಲ್ಲವೂ ಸಾಮಾನ್ಯವಾಗಿ ತ್ಯಾಜ್ಯವಾಗಿ ಕಾಣಿಸುತ್ತವೆ. ಆದರೆ ಇದೇ ವಸ್ತುಗಳನ್ನು ಬಟ್ಟೆಗಳಿಗೆ ನೈಸರ್ಗಿಕ ಬಣ್ಣ ನೀಡಲು ಬಳಸಬಹುದು ಎಂಬುದನ್ನು ಕಾನ್ಪುರದ ಇಬ್ಬರು ಯುವತಿಯರು ತೋರಿಸಿಕೊಟ್ಟಿದ್ದಾರೆ.

ದೇವಸ್ಥಾನಗಳಲ್ಲಿ ಪೂಜೆ ಬಳಿಕ ಬಿಸಾಡುವ ಹೂವುಗಳು, ಅಡುಗೆಮನೆಯಲ್ಲಿನ ಈರುಳ್ಳಿ ಸಿಪ್ಪೆ, ಆವಕಾಡೊ ಸಿಪ್ಪೆ… ಇವೆಲ್ಲವೂ ಸಾಮಾನ್ಯವಾಗಿ ತ್ಯಾಜ್ಯವಾಗಿ ಕಾಣಿಸುತ್ತವೆ. ಆದರೆ ಇದೇ ವಸ್ತುಗಳನ್ನು ಬಟ್ಟೆಗಳಿಗೆ ನೈಸರ್ಗಿಕ ಬಣ್ಣ ನೀಡಲು ಬಳಸಬಹುದು ಎಂಬುದನ್ನು ಕಾನ್ಪುರದ ಇಬ್ಬರು ಯುವತಿಯರು ತೋರಿಸಿಕೊಟ್ಟಿದ್ದಾರೆ. ಪರಿಸರ ಸ್ನೇಹಿ ಫ್ಯಾಷನ್‌ಗೆ ಹೊಸ ರೂಪ ನೀಡುವುದರ ಜೊತೆಗೆ, ಮಹಿಳಾ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತಿದ್ದಾರೆ.

ಅವರೇ ಅಕೃತಿ ಮತ್ತು ಭವ್ಯಾ. ವೇಗವಾಗಿ ಬದಲಾಗುತ್ತಿರುವ ಫ್ಯಾಷನ್ ಜಗತ್ತಿನಲ್ಲಿ ಪರಿಸರಕ್ಕೆ ಹಾನಿ ಕಡಿಮೆ ಮಾಡುವ ಉಡುಪುಗಳನ್ನು ಸೃಷ್ಟಿಸುವ ಉದ್ದೇಶದಿಂದ ಆರಂಭವಾದ ಇವರ ಪ್ರಯತ್ನವೇ SewMuchBetter ಸಂಸ್ಥೆ. ಜನವರಿ 2025ರಿಂದ ಫೆಬ್ರವರಿ 2026ರವರೆಗೆ ಈ ಇಬ್ಬರು ಸುಮಾರು 200ರಿಂದ 300 ಕೆಜಿ ದೇವಸ್ಥಾನದ ಹೂವು ಮತ್ತು ಅಡುಗೆಮನೆಯ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದಾರೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ.

ಫ್ಯಾಷನ್ ಮೇಲಿನ ಆಸಕ್ತಿಯಿಂದ ಹುಟ್ಟಿದ ಹೊಸ ಆಲೋಚನೆ

ಅಕೃತಿ ಮತ್ತು ಭವ್ಯಾ ಪದವಿ ಓದುವ ಸಮಯದಲ್ಲಿ ಸ್ನೇಹಿತರಾದರು. ಇಬ್ಬರಿಗೂ ಸೃಜನಶೀಲ ಕೆಲಸಗಳ ಬಗ್ಗೆ ಆಸಕ್ತಿ ಇತ್ತು. ಭವ್ಯಾ ಫ್ಯಾಷನ್ ಮತ್ತು ಜವಳಿ ವಿನ್ಯಾಸದತ್ತ ಆಕರ್ಷಿತರಾಗಿದ್ದರೆ, ಅಕೃತಿಗೆ ಸುಸ್ಥಿರತೆ ಹಾಗೂ ಬಳಕೆಯ ಸಂಸ್ಕೃತಿಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಆಸಕ್ತಿ ಹೆಚ್ಚಿತ್ತು. ಜನಪ್ರಿಯ ಫ್ಯಾಷನ್ ಬ್ರ್ಯಾಂಡ್‌ಗಳ ಉಡುಪುಗಳನ್ನು ಖರೀದಿಸುವಾಗ, ಅವುಗಳನ್ನು ತಯಾರಿಸುವವರು ಯಾರು, ಯಾವ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆಗಳು ಇವರಲ್ಲಿ ಮೂಡಿದವು. ಬಟ್ಟೆ ಉತ್ಪಾದನೆಯಲ್ಲಿನ ಕಡಿಮೆ ವೇತನ, ಕಾರ್ಖಾನೆಗಳಲ್ಲಿನ ಕಠಿಣ ಪರಿಸ್ಥಿತಿ ಮತ್ತು ವೇಗವಾಗಿ ಬದಲಾಗುವ ಫ್ಯಾಷನ್‌ನಿಂದ ಉಂಟಾಗುವ ತ್ಯಾಜ್ಯದ ಬಗ್ಗೆ ತಿಳಿದುಕೊಂಡರು. ಇದರಿಂದಲೇ ದೀರ್ಘಕಾಲ ಬಳಸಬಹುದಾದ, ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಉಡುಪುಗಳನ್ನು ತಯಾರಿಸುವ ಆಲೋಚನೆ ಬಲವಾಯಿತು.

ಸಂಸ್ಥೆಯ ಪ್ರಮುಖ ಆಲೋಚನೆಗಳಲ್ಲಿ ಒಂದು ದೇವಸ್ಥಾನಗಳಲ್ಲಿ ಪೂಜೆ ಬಳಿಕ ಬಿಸಾಡುವ ಹೂವುಗಳನ್ನು ಮರುಬಳಕೆ ಮಾಡುವುದು. ಕಾನ್ಪುರದ ಸುತ್ತಮುತ್ತಲಿನ ದೇವಸ್ಥಾನಗಳನ್ನು ಸಂಪರ್ಕಿಸಿದ ಅಕೃತಿ ಮತ್ತು ಭವ್ಯಾ, ಬಳಕೆಯಾದ ಹೂವುಗಳನ್ನು ತ್ಯಾಜ್ಯವಾಗಿ ಎಸೆಯುವ ಬದಲು ತಮಗೆ ನೀಡುವಂತೆ ಮನವಿ ಮಾಡಿದರು. ಇದೀಗ ಸುಮಾರು ಆರು ದೇವಸ್ಥಾನಗಳು ಪ್ರತಿ ವಾರ ಹೂವಿನ ತ್ಯಾಜ್ಯವನ್ನು ಇವರಿಗಾಗಿ ಪ್ರತ್ಯೇಕವಾಗಿ ಸಂಗ್ರಹಿಸಿಡುತ್ತವೆ.

ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹಬ್ಬಗಳಲ್ಲಿ ಉಳಿಯುವ ಹೂವುಗಳನ್ನೂ ಇವರು ಸಂಗ್ರಹಿಸುತ್ತಾರೆ. ನಂತರ ಹೂವಿನ ದಳಗಳನ್ನು ಸಂಸ್ಕರಿಸಿ ಬಟ್ಟೆಗಳಿಗೆ ಬಳಸಬಹುದಾದ ನೈಸರ್ಗಿಕ ಬಣ್ಣಗಳನ್ನು ತಯಾರಿಸುತ್ತಾರೆ. ಅಡುಗೆಮನೆಯ ತ್ಯಾಜ್ಯವೂ ಇವರಿಗೆ ಬಣ್ಣದ ಮೂಲವಾಗಿದೆ. ಈರುಳ್ಳಿ ಸಿಪ್ಪೆ ಮತ್ತು ಆವಕಾಡೊ ಸಿಪ್ಪೆಯಂತಹ ಸಾವಯವ ವಸ್ತುಗಳಿಂದಲೂ ಬಟ್ಟೆಗಳಿಗೆ ಬಣ್ಣ ನೀಡುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

SewMuchBetterನ ಮತ್ತೊಂದು ವಿಶೇಷತೆ ಮಹಿಳಾ ಸಬಲೀಕರಣ. ಕಾನ್ಪುರದ ಸ್ಟುಡಿಯೋದಲ್ಲಿ ಆರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಕಾನ್ಪುರ ಮತ್ತು ದೆಹಲಿಯಲ್ಲಿ ಐವರು ಮಹಿಳೆಯರು ತಮ್ಮ ಮನೆಗಳಿಂದಲೇ ಹೊಲಿಗೆ, ಫಿನಿಶಿಂಗ್ ಮತ್ತು ಆಕ್ಸೆಸರಿಗಳ ತಯಾರಿಕೆಯ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅವರಲ್ಲಿ ರಿತು ದೇವಿ ಕೂಡ ಒಬ್ಬರು. ಉತ್ತರ ಪ್ರದೇಶದ ರಾಮೈಪುರ ಗ್ರಾಮದವರಾದ ಅವರು ಮಾರ್ಚ್ 2025ರಿಂದ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಹೊಲಿಗೆ ಮತ್ತು ಉಡುಪುಗಳ ಫಿನಿಶಿಂಗ್ ಕೆಲಸದ ಮೂಲಕ ತಮ್ಮ ಕೌಶಲ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. 21 ವರ್ಷದ ನಿಶಾ ಪಟೇಲ್‌ಗೂ ಈ ಸಂಸ್ಥೆ ಹೊಸ ಅವಕಾಶ ನೀಡಿದೆ. ಫ್ಯಾಷನ್ ಕ್ಷೇತ್ರದಲ್ಲಿ ಆಸಕ್ತಿ ಇದ್ದರೂ, ಅದನ್ನು ಕಲಿಯಲು ಮತ್ತು ಮುಂದುವರಿಸಲು ಸೂಕ್ತ ಅವಕಾಶ ಸಿಗದಿದ್ದ ಅವರಿಗೆ, ಇಲ್ಲಿ ಇಕೋ-ಪ್ರಿಂಟಿಂಗ್ ಸೇರಿದಂತೆ ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶ ದೊರೆತಿದೆ. ಕೆಲಸದಿಂದ ಗಳಿಸುವ ಹಣವನ್ನು ತಮ್ಮ ವಿದ್ಯಾಭ್ಯಾಸಕ್ಕೆ ಸಹ ಬಳಸುತ್ತಿದ್ದಾರೆ.

ಒಂದು ಕಥೆ ತಂದ ಬದಲಾವಣೆ

ಹೆಚ್ಚುತ್ತಿರುವ ಆರ್ಡರ್‌ಗಳು ಮಹಿಳಾ ಕುಶಲಕರ್ಮಿಗಳಿಗೆ ಹೆಚ್ಚು ನಿರಂತರವಾಗಿ ಕೆಲಸ ಸಿಗಲು ಸಹಾಯ ಮಾಡುತ್ತಿವೆ. ಮುಖ್ಯವಾಗಿ, ಅವರ ಪರಿಶ್ರಮಕ್ಕೆ ಮನ್ನಣೆ ದೊರೆಯುತ್ತಿದೆ; ಅವರ ಕೈಚಳಕ ಮತ್ತು ಸೃಜನಶೀಲತೆ ಜನರ ಗಮನ ಸೆಳೆಯುತ್ತಿದೆ. ಈ ಕಥೆಯ ವಿಶೇಷತೆ ಕೇವಲ ತ್ಯಾಜ್ಯವನ್ನು ಮರುಬಳಕೆ ಮಾಡುವುದಲ್ಲ. ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವುದೂ ಹೌದು. ದೇವಸ್ಥಾನದ ಹೂವುಗಳು ಮತ್ತು ಅಡುಗೆಮನೆಯ ತ್ಯಾಜ್ಯಕ್ಕೂ ಮೌಲ್ಯವಿದೆ; ಸರಿಯಾದ ಆಲೋಚನೆ ಮತ್ತು ಪರಿಶ್ರಮದಿಂದ ಅವು ಹೊಸ ಉತ್ಪನ್ನಗಳಾಗಿ ರೂಪಾಂತರಗೊಳ್ಳಬಹುದು ಎಂಬುದನ್ನು ಈ ಇಬ್ಬರು ಗೆಳತಿಯರು ತೋರಿಸಿಕೊಟ್ಟಿದ್ದಾರೆ.