ರಂಗಾಯಣ ರಘು ಪೋಲಿ ಪುಸ್ತಕ ಬರೆಯುತ್ತಾರೆ: ಯೋಗರಾಜ್ ಭಟ್
ಆರ್ ಕೇಶವಮೂರ್ತಿ
ನಿಮಗೂ ಈಗಲೂ ನೆನಪಿಗೆ ಬರುವ ಪಂಚತಂತ್ರದ ಕತೆಗಳು ಯಾವುವು?
ಬಾಲಮಿತ್ರ, ಚಂದಮಾಮ, ಬೇತಾಳನ ಕತೆಗಳು. ಜತೆಗೆ ಆಮೆ ಮತ್ತು ಮೊಲದ ಕತೆ. ಇವು ಯಾವಾಗಲೂ ನನ್ನ ತಲೆಯಲ್ಲಿರುತ್ತವೆ. ಬಾಲಕರಿಂದ ಹಿಡಿದು ವಯೋವೃದ್ಧರವರೆಗೂ ಓದಿಸಿಕೊಳ್ಳುವ ಗುಣ ಇರುವಂತಹ ಕತೆ ಇವು.
ನೀವು ಹೇಳಿದ ಈ ಕತೆಗಳ ಅಂತರಂಗದಲ್ಲಿ ಲೈಟಾಗಿ ನೀತಿ ಪಾಠ ಇರುತ್ತದೆ. ಹಾಗಾದರೆ ನಿಮ್ಮ ಈ ಪಂಚತಂತ್ರ ಚಿತ್ರವೂ ನೀತಿ ಪಾಠ ಹೇಳುತ್ತದೆಯೇ?
ಖಂಡಿತ ಇದೆ. ಆದರೆ, ‘ನಾನು ನಿಮಗೊಂದು ನೀತಿ ಪಾಠ ಹೇಳುತ್ತಿರುವೆ ಕೇಳಿ’ ಎನ್ನುವ ದಾಟಿಯಲ್ಲಂತೂ ಇರಲ್ಲ. ನೀವೇ ಹೇಳಿದಂತೆ ಲೈಟಾಗಿ ಮನರಂಜನಾತ್ಮಕವಾಗಿ ಹೇಳಿದ್ದೇನೆ. ಪಕ್ಕಾ ಕಮರ್ಷಿಯಲ್ ಚೌಕಟ್ಟಿನಲ್ಲೇ ಎಲ್ಲರಿಗೂ ಹಿಡಿಸುವ ನೀತಿ ಇಲ್ಲದೆ. ಅನನುಭವಿ ಅನುಭವ ಪಡೆದುಕೊಳ್ಳುವುದು ಹೇಗೆಂಬ ನೀತಿ ಇಲ್ಲದೆ. ತಲೆಮಾರುಗಳ ನಡುವೆ ಅಂತರ ಕಡಿಮೆ ಆಗಿ ಎಲ್ಲರೂ ಹ್ಯೂಮನ್ ಬೀಯಿಂಗ್ ಆದರೆ ಹೇಗೆ ಎನ್ನುವ ನೀತಿ ಇಲ್ಲಿದೆ.
ಇಂಥ ನೀತಿ ಪಾಠದ ಕತೆಯಲ್ಲಿ ಹೊಂಗೆ ಮರ, ಶೃಂಗಾರ ಯಾಕೆ ಬರುತ್ತದೆ?
ಇದು ಈ ಜನರೇಷನ್ನ ಕತೆ. ಪ್ರೇಮ- ಕಾಮ ಎನ್ನುವುದು ಬೆರಳ ತುದಿಯಲ್ಲೇ ಇದೆ. ಅದನ್ನೇ ನಾನು ಸಾಫ್ಟ್ ಆಗಿ, ರೊಮ್ಯಾಂಟಿಕ್ ಆಗಿ ಮನಸ್ಸಿಗೆ ಮುದ ನೀಡುವಂತೆ ಹೇಳುವುದಕ್ಕೆ ಹೊರಟಾಗ ಶೃಂಗಾರದ ಹೊಂಗೆ ಮರ ಹೂವು ಬಿಟ್ಟು ಸ್ಪರ್ಶಿಸಿತು. ಅಲ್ಲದೆ ‘ಶೃಂಗಾರದ ಹೊಂಗೆ ಮರ’ ಎನ್ನುವುದು ಚಿತ್ರದಲ್ಲಿ ರಂಗಾಯಣ ರಘು ಪಾತ್ರಧಾರಿ ಬರೆಯುವ ಒಂದು ಪೋಲಿ ಪುಸ್ತಕದ ಹೆಸರು.
ಶೃಂಗಾರದ ಜತೆಗೆ ಪೋಲಿ ಪುಸ್ತಕ ಕತೆಯೂ ಇದೆ. ಹಾಗಿದ್ದರೆ ಯಾವ ವಯಸ್ಸಿನವರ ಸಿನಿಮಾ ಇದು?
ಆರು ವರ್ಷದಿಂದ ತೊಂಭತ್ತೈದು ವರ್ಷ ವಯಸ್ಸಿನ ತನಕ ಎಲ್ಲರು ಖುಷಿಯಾಗಿ ನೋಡುವಂತಹ ಸಿನಿಮಾ ಇದು. ಈ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ. ಅದ್ಭುತವಾದ ಹಾಡುಗಳಿವೆ. ಹುಡುಗ- ಹುಡುಗಿಯ ಪ್ರೀತಿ, ಪ್ರೇಮ, ಜೀವನದ ಮೌಲ್ಯಗಳಿವೆ. ಸಿಕ್ಕಾಪಟ್ಟೆಥ್ರಿಲ್ ಕೊಡುವ ರೇಸು ಇದೆ.
ಪಂಚತಂತ್ರದ್ದು ಯಾವ ರೀತಿಯ ಕತೆ?
ಒಂದು ಸಾಲಿನಲ್ಲಿ ಹೇಳುವುದಾದರೆ ಹಿರಿಯರು ಮತ್ತು ಕಿರಿಯರು ಜತೆಯಾಗಿ ಓಡುವುದೇ ಈ ಚಿತ್ರದ ಕತೆ. ಅಂದರೆ ಆಮೆ ಮತ್ತು ಮೊಲದ ಕತೆ. ಇಲ್ಲಿ ಮೊಲ ಈಗಿನ ಜನರೇಷನ್. ಆಮೆ ಹಿರಿಯರನ್ನು ಪ್ರತಿನಿಧಿಸುತ್ತದೆ. ಹಾಗಿದ್ದರೆ ಇಲ್ಲಿ ಯಾರು ಗೆಲ್ಲಬೇಕು? ಎಂಬುದು ಚಿತ್ರದ ಮತ್ತೊಂದು ತಿರುವುದು. ರೇಸ್ ಅನ್ನು ಬೇಸ್ ಮಾಡಿಕೊಂಡು ಮಾಡಿರುವ ಸಿನಿಮಾ. ಕ್ರಿಕೆಟ್ ನೋಡುತ್ತಿದ್ದಾಗ ಹೇಗೆ ಕುತೂಹರ, ರೋಮಾಂಚನ ಮೂಡಿಸುತ್ತದೋ ಹಾಗೆ ಚಿತ್ರದ ಕೊನೆಯ 10- 15 ನಿಮಿಷ ಪ್ರೇಕ್ಷಕನನ್ನು ಹಿಡಿದು ಕೂರಿಸುವ ತಾಕತ್ತು ಇರುವ ಕತೆ ‘ಪಂಚತಂತ್ರ’ ಚಿತ್ರಲ್ಲಿದೆ.
ಸಾಫ್ಟ್ ಲವ್ ಸ್ಟೋರಿಗೆ ಕಾರ್ ರೇಸ್ ಯಾಕೆ?
ಜೀವನದಲ್ಲಿ ಎಲ್ಲರು ರೇಸಿಗೆ ಬಿದ್ದಿದ್ದಾರೆ. ಪರೀಕ್ಷೆಯಲ್ಲಿ ಪಾಸಾಗೋ ರೇಸು, ಟಿಆರ್ಪಿ ರೇಸು, ರಾಜಕಾರಣಿಗಳ ಗೆಲ್ಲೋ ರೇಸು. ಎಲ್ಲಿ ನೋಡಿದರೂ ಈಗ ರೇಸು. ಹಾಗೆ ನಮ್ಮ ಚಿತ್ರದಲ್ಲೂ ಕಾರ್ ರೇಸ್ ಇದೆ. ಅದು ಯಾಕೆ ಬರುತ್ತದೆ ಎಂಬುದನ್ನು ನೀವು ಸಿನಿಮಾ ನೋಡಬೇಕು. ಆದರೆ, 25 ನಿಮಿಷಗಳ ಕಾಲ ಬರುವ ಈ ಕಾರ್ ರೇಸ್, ಪ್ರೇಮದ ಜತೆಗೆ ರೋಮಾಂಚನ ಮೂಡಿಸುತ್ತದೆ. ಈ ಕಾರಣಕ್ಕೆ ಕಾರ್ ರೇಸು ಕತೆಯ ಒಂದು ಭಾಗ. ಯಾರೂ ಮುಟ್ಟಿರದ ಅಂಶವನ್ನು ಹೇಳುವ ಪ್ರಯತ್ನ. ಹೀಗಾಗಿ ಚಿತ್ರದಲ್ಲಿ ಕಾರ್ ರೇಸ್ ಬಹು ಮುಖ್ಯವಾದ ಪಾತ್ರ ವಹಿಸಿದೆ.
ಭಟ್ಟರ ಪಂಚತಂತ್ರಕ್ಕೆ ಬಂದ ಜೋಗಿ ಪ್ರೇಮ್!
ಒಬ್ಬ ನಿರ್ದೇಶಕರಾಗಿ ಬೇರೊಬ್ಬರ ಕತೆಯನ್ನು ನಿಭಾಯಿಸಿದ ಅನುಭವ ಹೇಗಿತ್ತು?
ನಿಭಾಯಿಸಿದೆ ಅನ್ನುವುದಕ್ಕಿಂತ ನನಗೆ ಸವಾಲು ಒಡ್ಡಿದ ಕತೆ ಇದು. ಕಾಂತರಾಜ್ ಹಾಗೂ ಮಾಸ್ತಿ ಇಬ್ಬರು ಸೇರಿಕೊಂಡು ಬರೆದ ಕತೆಗೆ ನಾನು ಚಿತ್ರಕತೆ ಮತ್ತು ಸಂಭಾಷಣೆ ಬರೆದುಕೊಂಡೆ. ಆದರೆ, ಕಾರ್ ರೇಸ್ ನನಗೆ ಹೊಸದು. ಕನ್ನಡದಲ್ಲೂ ಯಾರೂ ಕೂಡ ಆಯ್ಕೆ ಮಾಡಿಕೊಂಡಿರದ ಗೇಮ್ ಇದು. ಇದನ್ನ ಇಂಟರ್‌ನ್ಯಾಶನಲ್ ಸ್ಟ್ಯಾಂಡರ್ಡ್‌ನಲ್ಲಿ ತೆಗೆಯಬೇಕೆಂದು ಯೋಚಿಸಿ, ಅದಕ್ಕೆ ಎಂಟೆಂಟು ಕ್ಯಾಮೆರಾ ಬೇಕೆಂದು ತಿಳಿದುಕೊಳ್ಳಲು ನಮಗೆ ಮೂರು ದಿನ ಬೇಕಾಯಿತು. ಆ ನಂತರ ಇಂಟರ್‌ನ್ಯಾಶನಲ್ ರೇಸ್ ತಂಡವನ್ನು ಕರೆಸಿ, ಅವರಿಂದಲೇ ರೇಸ್ ಶೂಟಿಂಗ್ ಮಾಡಿಸಿದೆ. ಹೀಗೆ ನನಗೆ ಹೊಸ ಬಗೆಯ ಮತ್ತು ಸವಾಲು ಹಾಕಿದ ಚಿತ್ರವಿದು. ಪ್ರೀತಿಯಲ್ಲಿ ಬರುವ ಬ್ರೇಕಪ್ ಅನ್ನು ಹೇಗೋ ಸುಲಭವಾಗಿ ಹ್ಯಾಂಡಲ್ ಮಾಬಹುದು. ಆದರೆ, ಆಮೆ ಮತ್ತು ಮೊಲ ಗ್ಲೋಬಲ್ ಕಂಟೆಂಟ್. ಈ ಎರಡೂ ಪ್ರಾಣಿಗಳನ್ನು ಪ್ರತಿನಿಧಿಸುವ ಯುವಕರು- ವೃದ್ಧರು. ಅದನ್ನು ಕ್ಲೈಮ್ಯಾಕ್ಸ್‌ಗೆ ಅಳವಡಿಸೋದು ಮತ್ತೊಂದು ಸವಾಲು ಎನಿಸಿತು.
ಮತ್ತೆ ಮತ್ತೆ ಯಂಗ್ ಜನರೇಷನ್ ಜತೆ ಸಿನಿಮಾ ರೂಪಿಸುತ್ತಿರುವ ಗುಟ್ಟೇನು?
ನನ್ನ ಚಿತ್ರಗಳ ಕತೆಗಳು ಹೊಸದಾಗಿರುತ್ತವೆ. ನನ್ನ ಈ ಹೊಸ ಕತೆಗಳಿಗೆ ಹೊಸಬರೇ ಬೇಕು. ಇದೇ ಗುಟ್ಟು. ಇನ್ನೂ ನನಗೆ ಹೀರೋಗಳಿಗಾಗಿ ಕಾಯುವುದಕ್ಕೆ ಆಗಲ್ಲ. ಅವರು ಇಮೇಜ್, ಟೈಮ್, ಬಂಡವಾಳ ಎಲ್ಲವೂ ನಿರೀಕ್ಷೆಗೆ ಮೀರಿ ನಿಂತಿರುತ್ತದೆ. ಆದರೆ, ಹೊಸ ತಂಡದ ಜತೆ ಸಿನಿಮಾ ಮಾಡಿದರೆ ಏನೋ ಸಾಧಿಸಿದ ಹೆಮ್ಮೆ. ಮೊದಲಿಂದಲೂ ಹೊಸಬರ ಜತೆ ಸಿನಿಮಾ ಮಾಡಿ ತೃಪ್ತಿ ಕಂಡಿರುವ ನಿರ್ದೇಶಕ ನಾನು. ಜತೆಗೆ ಎಲ್ಲ ಹೀರೋಗಳು ಒಂದು ಟೈಮ್ನಲ್ಲಿ ಹೊಸಬರೇ ಆಗಿದ್ದರಲ್ಲವೇ ಎಂಬುದು ನನ್ನ ನಂಬಿಕೆ. ಈಗ ನಮ್ಮ ಚಿತ್ರದಲ್ಲಿ ನಟಿಸಿರುವ ವಿಹಾನ್, ಸೋನಾಲ್, ಅಕ್ಷರ ಇವರುಗಳು ಮುಂದೆ ದೊಡ್ಡ ಹೀರೋಗಳಾಗಬಹುದು. ಆ ಕ್ರೆಡಿಟ್ಟು ನನ್ನ ಚಿತ್ರಕ್ಕೆ ಸಲ್ಲುತ್ತದೆ ಎನ್ನುವ ಖುಷಿಯೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಸಬರನ್ನಿಟ್ಟುಕೊಂಡು ಹೊಸ ಪ್ರಯೋಗ ಮಾಡುವುದು ಸುಲಭ. ಅವರು ನನ್ನ ಕಲ್ಪನೆಗೆ ಸಾಥ್ ಕೊಡುತ್ತಾರೆ.
ಭಟ್ಟರಿಗೆ ಗಂಭೀರವಾದ ಸಿನಿಮಾ, ಕತೆ ಮಾಡೋದು ಬರಲ್ಲ ಅನ್ನುವವರಿಗೆ ನಿಮ್ಮ ರಿಯಾಕ್ಷನ್?
ಈ ಗಂಭೀರ ಅನ್ನೋ ಪದ ಕೇಳಿದಾಗ ನನಗೆ ಸಿಕ್ಕಾಪಟ್ಟೆನಗು ಬರುತ್ತದಪ್ಪ. ನೂರಾರು ಜನರನ್ನ ಒಬ್ಬನೇ ಹೊಡಿಯೋದು, ಎಲ್ಲಿಂದಲೋ ಜಂಪ್ ಮಾಡಿಕೊಂಡು ಬರುವುದು, ಹಾರುವುದು, ಜಿಗಿಯುವುದು ನನಗೆ ಕಾಮಿಡಿ ಥರ ಕಾಣುತ್ತದೆ. ಹಾಗೆ ನನ್ನ ಸಿನಿಮಾ- ಕತೆಗಳು ಅವರಿಗೂ ಹಾಸ್ಯವಾಗಿ ಕಾಣಬಹುದು. ಆದರೆ, ನಾನು ಮೂಲತಃ ತುಂಬಾ ಗಂಭೀರ ವ್ಯಕ್ತಿ ಗೊತ್ತಾ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 29, 2019, 10:04 AM IST