ಬೆಂಗಳೂರು[ಡಿ.09]: ನಟ‌ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಆದರೆ ಈ ಬಾರಿಯ ವೆಡ್ಡಿಂಗ್ ಆ್ಯನಿವರ್ಸರಿ ಇಬ್ಬರಿಗೂ ತುಂಬ ಸ್ಪೆಷಲ್, ಯಾಕೆಂದರೆ ಈ ಬಾರಿ 'ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ'ಯ ಮನೆಗೆ ಬಂದಿರುವ ಪುಟ್ಟ ಕಂದಮ್ಮ ಇಬ್ಬರ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದೆ.

ತಾಯ್ತನದ ಆನಂದ ಅನುಭವಿಸುತ್ತಿರುವ ರಾಧಿಕಾ ಹಾಗೂ ತಂದೆಯಾದ ಖುಷಿಯಲ್ಲಿರುವ ಯಶ್ ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದಂದೇ ಮುದ್ದಿನ ಕಂದಮ್ಮನನ್ನು ಮನೆಗೆ ಕರೆದೊಯ್ಯುತ್ತಿದ್ದಾರೆ. ಈ ಮೂಲಕ ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಮತ್ತಷ್ಟು ವಿಶೇಷವನ್ನಾಗಿಸುತ್ತಿದ್ದಾರೆ. ಒಂದು ವಾರದ ಹಿಂದಷ್ಟೇ[ಡಿ.02] ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಹೆಣ್ಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಇಂದು ಬೆಳಗ್ಗೆ 9 ಗಂಟೆಗೆ ಡಿಸ್ಚಾರ್ಜ್ ಆಗಿ, ಪುಟ್ಟ ಕಂದಮ್ಮನೊಂದಿಗೆ ಮನೆಗೆ ತೆರಳಿದ್ದಾರೆ. 

ರಾಧಿಕಾ ಶೇರ್ ಮಾಡ್ಕೊಂಡ್ರು ಸ್ಪೆಷಲ್ ಫೋಟೋ

ವಿವಾಹ ವಾರ್ಷಿಕೋತ್ಸವದಂದೇ ರಾಧಿಕಾ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಮದುವೆ ದಿನದ ಹಾಗೂ ಸೀಮಂತದಂದು ಗಂಡ ಯಶ್ ಜೊತೆ ತೆಗೆಸಿಕೊಂಡ ಫೋಟೋಗಳನ್ನು ನೋಡಬಹುದಾಗಿದೆ.