ಬೆಂಗಳೂರು (ಮಾ.24): ಕನ್ನಡದಲ್ಲಿ ಕೋಟ್ಯಾಧಿಪತಿಯ ಮತ್ತೊಂದು ಸುತ್ತಿನ ಶೋ ಸದ್ದಿಲ್ಲದೆ  ಸಿದ್ಧವಾಗುತ್ತಿದೆ. ಈಗಾಗಲೇ ನಟ ಪುನೀತ್ ರಾಜ್‌ಕುಮಾರ್ ಅವರ  ಸಾರಥ್ಯದಲ್ಲಿ ಎರಡು ಸೀಸನ್‌ಗಳನ್ನು ಮುಗಿಸಿಕೊಂಡಿರುವ ಕೋಟ್ಯಾಧಿಪತಿಯ
ಮೂರನೇ ಸೀಸನ್‌ನ ನಿರೂಪಕರಾಗಿ ನಟ ಯಶ್ ಆಗಮಿಸಲಿದ್ದಾರೆಂಬುದು ಸದ್ಯದ ಹಾಟ್ ಟಾಪಿಕ್. ಇಂಥದ್ದೊಂದು ಸುದ್ದಿ ಹಲವು ದಿನಗಳಿಂದ ಸದ್ದು ಮಾಡುತ್ತಿದ್ದರೂ ಯಾವುದೂ ಅಧಿಕೃತವಾಗಿರಲಿಲ್ಲ. ಆದರೆ, ಈಗಷ್ಟೆ ಸಿಕ್ಕಿರುವ ಮಾಹಿತಿ ಪ್ರಕಾರ ‘ಕನ್ನಡದ ಕೋಟ್ಯಾಧಿಪತಿ’ಯ ಮೂರನೇ ಸೀಸನ್‌ಗೆ  ನಿರೂಪಕರಾಗಿ ಯಶ್ ಹೆಸರು ಅಂತಿಮಗೊಂಡಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಒಪ್ಪಂದಗಳಿಗೆ ಯಶ್ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ  ಈ ಶೋಗೆ ನಿರೂಪಕರು ಸಿಕ್ಕ ಮೇಲೆ ಪ್ರೋಮೋ ಶೂಟ್‌ಗಾಗಿ ವಾಹಿನಿಯ ಮುಖ್ಯಸ್ಥರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿಭಿನ್ನವಾಗಿ ಪ್ರೊಮೋ ಶೂಟ್  ಮಾಡುವುದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೋಟ್ಯಾಧಿಪತಿ ಮುಂದಿನ  ತಿಂಗಳೇ ಶುರುವಾಗಲಿದೆ. ಪುನೀತ್ ಅವರು ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಕಲರ್ಸ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಹೀಗಾಗಿ ಕೋಟ್ಯಾಧಿಪತಿಗೆ ಪುನೀತ್ ಬರುವುದು ಡೌಟು. ಯಶ್ ಅವರ
ಮನಒಲಿಸುವ ಎರಡು ವರ್ಷದ ಯತ್ನ ಇದೀಗ ಫಲಪ್ರದವಾಗಿದೆ ಎಂಬುದು ಸದ್ಯದ ಸುದ್ದಿ.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳೇ ‘ಕೋಟ್ಯಾಧಿಪತಿ’ಯ ಮೂರನೇ ಸೀಸನ್ ಪ್ರೋಮೋ ಶೂಟ್ ಆಗಲಿದೆ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ಮುಗಿದ ಕೂಡಲೇ ‘ಕೋಟ್ಯಾಧಿಪತಿ’ ಶೋ ಪ್ರಸಾರ ಆರಂಭವಾಗಲಿದೆ ಎಂಬುದು ವಾಹಿನಿ ಮೂಲಗಳೇ ಹೇಳುವ ಮಾಹಿತಿ.