ನಿಜಕ್ಕೂ ಕದ್ದವರಾರೆಂದು ಗೊತ್ತಿಲ್ಲ, ಆದರೆ ಅನುಶ್ರೀಗೆ ಎಲ್ಲರ ಮೇಲೆ ಅನುಮಾನ ಹುಟ್ಟಿದ್ದಂತೂ ನಿಜ. ಅದು ಸಹಜ ಕೂಡ. ಅವರ ಕಣ್ಣಲ್ಲಿ ನೀರು ಜಿನುಗಿತು. ಸುದ್ದಿಗೋಷ್ಠಿಯಲ್ಲಿ ಅವಸರವಸರದಲ್ಲಿ ಮಾತಾಡಿ, ಮತ್ತೆ ಹುಡುಕಾಡಿದರು. ಹಾಲ್ ಒಳಗಡೆ ಇದ್ದ ಸಿಸಿಟಿವಿಯಲ್ಲಿ ಶೋಧ ನಡೆಯಿತು.
24 ಗಂಟೆ, 365 ದಿನ; ಅನುಶ್ರೀ ಮೊಗದಲ್ಲಿ ಯಾವತ್ತೂ ನಗು ನಾಪತ್ತೆ ಆಗೋದೇ ಇಲ್ಲ. ಆದ್ರೆ ನಿನ್ನೆ ಮಲ್ಲೇಶ್ವರಂನ ರೇಣುಕಾಂಬಾದಲ್ಲಿ ಅನುಶ್ರೀ ಮಂಕಾಗಿದ್ದರು. ಕಣ್ಣಲ್ಲಿ ಭರ್ತಿ ನೀರು ತುಂಬಿಕೊಂಡಿದ್ದರೂ, ಅದನ್ನು ಅಡಗಿಸಿಡುವ ಯತ್ನದಲ್ಲಿದ್ದರು. ಅಷ್ಟಕ್ಕೂ ಅನುಶ್ರೀಗೆ ಆಗಿದ್ದೇನು?
ಅವರ ಮೊಬೈಲ್ ಕಳುವಾಗಿತ್ತು! ಆ ಮಿನಿ ಥಿಯೇಟರ್‌ಗೆ ‘ಉಪ್ಪು ಹುಳಿ ಖಾರ’ದ ಪತ್ರಿಕಾಗೋಷ್ಠಿಗೆ ಬಂದಿದ್ದ ಈ ನಟಿ, ಛಾಯಾಗ್ರಾಹಕರಿಗೆ ಪೋಸು ಕೊಡುವುದರಲ್ಲಿ ಮಗ್ನರಾಗಿದ್ದರು. ಪಕ್ಕದಲ್ಲಿದ್ದ ಸಣ್ಣ ಟೇಬಲ್ ಮೇಲೆ ಮೊಬೈಲ್ ಇಟ್ಟು, ಕ್ಯಾಮೆರಾಗಳಿಗೆ ನಗುನಗುತ್ತಾ ಪೋಸು ನೀಡುತ್ತಿದ್ದಾಗ ಅವರ ದುಬಾರಿ ಮೊಬೈಲ್ ನಾಪತ್ತೆ. ಹತ್ತಿಪ್ಪತ್ತು ನಿಮಿಷಗಳ ನಂತರ ಮೊಬೈಲ್‌ಗೆ ಹುಡುಕಾಡಿದಾಗ ಅದು ಅಲ್ಲಿರಲಿಲ್ಲ! ಆ ಹೊತ್ತಿಗೆ ಮಾಧ್ಯಮದವರು, ಚಿತ್ರತಂಡದ ಸದಸ್ಯರೆಲ್ಲರೂ ಅಲ್ಲಿದ್ದರು. ಇದ್ದವರೊಳಗೆ ಕದ್ದವರಾರು? ಪ್ರತಿಯೊಬ್ಬರೊಳಗೂ ಪ್ರಶ್ನೆ ಹುಟ್ಟಿಕೊಂಡಿತು.
ನಿಜಕ್ಕೂ ಕದ್ದವರಾರೆಂದು ಗೊತ್ತಿಲ್ಲ, ಆದರೆ ಅನುಶ್ರೀಗೆ ಎಲ್ಲರ ಮೇಲೆ ಅನುಮಾನ ಹುಟ್ಟಿದ್ದಂತೂ ನಿಜ. ಅದು ಸಹಜ ಕೂಡ. ಅವರ ಕಣ್ಣಲ್ಲಿ ನೀರು ಜಿನುಗಿತು. ಸುದ್ದಿಗೋಷ್ಠಿಯಲ್ಲಿ ಅವಸರವಸರದಲ್ಲಿ ಮಾತಾಡಿ, ಮತ್ತೆ ಹುಡುಕಾಡಿದರು. ಹಾಲ್ ಒಳಗಡೆ ಇದ್ದ ಸಿಸಿಟಿವಿಯಲ್ಲಿ ಶೋಧ ನಡೆಯಿತು. ನಿಜವಾದ ಕಳ್ಳ ಅಲ್ಲಿ ಸಿಕ್ಕಿ ಬಿದ್ದಿದ್ದ! ಕಾರ್ ಚಾಲಕನೊಬ್ಬ ಟೇಬಲ್ ಮೇಲಿದ್ದ ಮೊಬೈಲ್ ಎಗರಿಸಿ, ಜೇಬಿನಲ್ಲಿಟ್ಟುಕೊಳ್ಳುತ್ತಿದ್ದ ದೃಶ್ಯ ಅಲ್ಲಿ ಸೆರೆಯಾಗಿತ್ತು. ಕೊನೆಗೂ ಆ ಮೊಬೈಲನ್ನು ಪತ್ತೆ ಹಚ್ಚಿ, ಅನುಶ್ರೀ ಅವರಿಗೆ ಒಪ್ಪಿಸಲಾಯಿತು. ಅಷ್ಟು ಹೊತ್ತಿನ ತನಕ ದುಃಖ, ಆತಂಕದಲ್ಲಿದ್ದ ಅನುಶ್ರೀ, ಅಂತೂ ಸಿಕ್ಕಿತಲ್ಲ ಎಂದು ನಿಟ್ಟುಸಿರೆಳೆದು, ಪುನಃ ನಗುವನ್ನು ಧರಿಸಿದರು. ‘ಮೊಬೈಲ್ ಕಳೆದು ಹೋಯಿತು ಅಂತಲ್ಲ, ಅದರಲ್ಲಿ ಸಾಕಷ್ಟು ನಂಬರ್‌ಗಳಿದ್ದವು. ಫ್ಯಾಮಿಲಿ ಫೋಟೊಗಳಿದ್ದವು. ಹಾಗಾಗಿ ದುಃಖ ಆಯಿತಷ್ಟೇ’ ಎಂದು ಮಾಮೂಲಿ ಟ್ರ್ಯಾಕಿಗೆ ಇಳಿದರು.
