‘ಮಯೂರ' ಸಿನಿಮಾ ಸೇರಿದಂತೆ ಅವರ ಬೇರೆ ಬೇರೆ ಚಿತ್ರಗಳೇ ‘ಬಾಹುಬಲಿ'ಗೆ ಸ್ಫೂರ್ತಿ. ಅಮರೇಂದ್ರ ಬಾಹುಬಲಿ ಪಾತ್ರ ರಾಜ್‌ ವ್ಯಕ್ತಿತ್ವ ಹಾಗೂ ಸಿನಿಮಾಗಳ ಪ್ರೇರಣೆಯಿಂದ ಹುಟ್ಟಿಕೊಂಡ ಕ್ಯಾರೆಕ್ಟರ್‌. - ವಿಜಯೇಂದ್ರ ಪ್ರಸಾದ್‌

ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ತಂದೆ, ‘ಈಗ', ‘ಬಾಹುಬಲಿ', ‘ಭಜರಂಗಿ ಭಾಯಿಜಾನ್‌' ಸೇರಿದಂತೆ ಹಲವು ಸೂಪರ್‌ ಹಿಟ್‌ ಚಿತ್ರಗಳಿಗೆ ಕತೆ ಕೊಟ್ಟಿರುವ ಕೆ. ವಿ. ವಿಜಯೇಂದ್ರ ಪ್ರಸಾದ್‌ ಕನ್ನಡವೂ ಸೇರಿದಂತೆ 4 ಭಾಷೆಗಳಲ್ಲಿ ನಿರ್ಮಾಣವಾಗ್ತಿರೋ ‘ಶ್ರೀವಲ್ಲಿ' ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಅವರು ‘ಕನ್ನಡಪ್ರಭ' ಜೊತೆ ಮಾತಾಡಿದ್ದಾರೆ.

ತುಂಬಾ ತಡವಾಗಿ ನಿರ್ದೇಶಕರಾಗುತ್ತಿದ್ದೀರಲ್ಲ?
ಏನ್‌ ಮಾಡ್ಲಿ, ಅವಕಾಶ ಈಗ ಸಿಕ್ಕಿತು. ಮೊದಲಿಂದಲೂ ನಿರ್ದೇಶನಾಗಬೇಕೆಂಬ ಆಸೆ ನನಗೆ ಇದ್ದಿದ್ದು ನಿಜ. ಯಾರೂ ಅವಕಾಶ ಕೊಡಲಿಲ್ಲ. ಸಿನಿಮಾಗಳಿಗೆ ಕತೆಗಳನ್ನು ಬರೆಯುವುದರಲ್ಲಿ ಬ್ಯುಸಿಯಾಗಿದ್ದೆ ಅಂತ ಹೇಳಬಹುದು.

ನಿಮ್ಮನ್ನು ನಿರ್ದೇಶಕರನ್ನಾಗಿ ಮೂರು ಭಾಷೆಗಳಿಗೆ ಪರಿಚಯಿಸುತ್ತಿರುವ ‘ಶ್ರೀವಲ್ಲಿ' ಚಿತ್ರದ ಕುರಿತು ಹೇಳುವುದಾದರೆ?
ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಮೂಡಿಬರುತ್ತಿರುವ ಚಿತ್ರವಿದು. ವೈಜ್ಞಾನಿಕ ಥ್ರಿಲ್ಲರ್‌ ಸಿನಿಮಾ. ಇಡೀ ಚಿತ್ರದಲ್ಲಿ 15 ರಿಂದ 20 ಟ್ವಿಸ್ಟ್‌'ಗಳಿವೆ. ಭಿನ್ನವಾದ ಕತೆ. ಭಾರತೀಯ ಚಿತ್ರರಂ​ಗದಲ್ಲೇ ಇದೊಂದು ಬೆಂಚ್‌ ಮಾರ್ಕ್ ಚಿತ್ರವಾಗು​ತ್ತದೆ. ಈಗಾಗಲೇ ಈ ಚಿತ್ರವನ್ನು ಕೆಲ ನಿರ್ದೇಶಕ ಹಾಗೂ ಕತೆಗಾರರಿಗೆ ತೋರಿಸಿ, ಮುಂದೇನಾಗುತ್ತದೆ ಅಂತ ಊಹೆ ಮಾಡಿ ಹೇಳಿ ಅಂತ ಕೇಳಿದೆ. ಒಂದು ವೇಳೆ ಹಾಗೆ ಊಹೆ ಮಾಡಿದರೆ ಚಿತ್ರವನ್ನು ಅಲ್ಲಿಗೆ ಸ್ಟಾಪ್‌ ಮಾಡುತ್ತೇನೆಂದು ಹೇಳಿದ್ದೆ. ಯಾರಿಗೂ ಸ್ಟೋರಿ ಗೆಸ್‌ ಮಾಡಕ್ಕೆ ಆಗಲಿಲ್ಲ. 

ಚಿತ್ರದ ತುಣುಕುಗಳನ್ನು ನೋಡಿದಾಗ ಕನ್ನಡಕ್ಕೆ ಡಬ್ಬಿಂಗ್‌ ಮಾಡಿದ್ದೀರಿ ಅನಿಸುತ್ತಿದೆಯಲ್ಲ?
ಖಂಡಿತ ಇಲ್ಲ. ಮೂರು ಭಾಷೆಗಳಿಗೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಿದ್ದೇನೆ. ಮಂಗಳೂರು, ಹೈದರಾಬಾದ್‌ ಮುಂತಾದ ಕಡೆ ಶೂಟಿಂಗ್‌ ಮಾಡಿದ್ದೇವೆ. 

ಪೌರಾಣಿಕ ಕತೆಯಿಂದ ಥ್ರಿಲ್ಲರ್‌ ಕತೆಯತ್ತ ಮುಖ ಮಾಡಿದ್ದೀರಲ್ಲ?
ಮೊದಲ ನಿರ್ದೇಶನದಲ್ಲಿ ಏನಾದರು ವಿಶೇಷತೆ ಇರಬೇಕು ಅಂದುಕೊಂಡೆ. ನಿರ್ದೇಶಕನಾಗಿ ನನ್ನ ಪ್ರತಿಭೆಯನ್ನು ತೋರಿಸುವ ಅಗತ್ಯವಿತ್ತು. ಜತೆಗೆ ನಾನು ಯಾವತ್ತೂ ಒಂದೇ ರೀತಿಯ ಕತೆಗಳಿಗೆ ಅಂಟಿಗೊಂಡವನಲ್ಲ. ‘ಬಾಹುಬಲಿ' ಆದ ಮೇಲೆ ‘ಬಜರಂಗಿ ಭಾಯ್‌ಜಾನ್‌'ಗೆ ಕತೆ ಮಾಡಿದ್ದೇನಲ್ಲ. 

ನಿಮಗಿರೋ ಹೆಸರಿಗೆ ನೀವು ಸ್ಟಾರ್‌ ಕಲಾವಿದರನ್ನೇ ಹಾಕಿಕೊಂಡು ಸಿನಿಮಾ ಮಾಡಬಹುದಿತ್ತಲ್ಲ?
ಸ್ಟಾರ್‌'ಗಳು ಇದ್ದರೆ ನಿರೀಕ್ಷೆಗಳು ಹೆಚ್ಚಾಗುತ್ತವೆ. ನಿರೀಕ್ಷೆ ಇದ್ದ ಕಡೆ ನಿರಾಸೆಯೂ ಇರುತ್ತದೆ. ಹೊಸ ರೀತಿಯ ಕತೆಗಳಿಗೆ ಸ್ಟಾರ್‌ ಇಮೇಜ್‌ ದೊಡ್ಡ ಸಮಸ್ಯೆ. ಜತೆಗೆ ಅವರನ್ನಿಟ್ಟುಕೊಂಡು ಪ್ರಯೋಗ ಮಾಡಲಾಗದು. ಒಂದು ವೇಳೆ ನಾನು ಈ ‘ಶ್ರೀವಲ್ಲಿ' ಚಿತ್ರದ ಕತೆಯನ್ನು ಪುನೀತ್‌ ರಾಜ್‌'ಕುಮಾರ್‌ ಅವರಿಗೆ ಹೇಳಿ ಒಪ್ಪಿಸಬಹುದು. ಆದರೆ, ಚಿತ್ರದಲ್ಲಿ ಅವರನ್ನು ಹೀರೋ ಆಗಿಯೇ ತೋರಿಸಬೇಕು. ಕೆಟ್ಟವನಾಗಿ ತೋರಿಸಿದರೆ ಜನ ನನಗೂ ಮತ್ತು ಸ್ಕ್ರೀನ್‌'ಗೂ ಕಲ್ಲಲ್ಲಿ ಹೊಡೆಯುತ್ತಾರೆ. 

ಕನ್ನಡದಲ್ಲಿ ನೀವು ಸ್ಟಾರ್‌ ನಟರಿಗೆ ಸಿನಿಮಾ ಮಾಡುವುದಾದರೆ ನಿಮ್ಮ ಮೊದಲ ಆಯ್ಕೆ ಯಾರು?
ನನಗೂ ಕನ್ನಡದಲ್ಲಿ ದೊಡ್ಡ ನಟರಿಗೆ ಸಿನಿಮಾ ಮಾಡುವ ಆಸೆ ಇದೆ. ಕತೆಗಳೂ ಸಿದ್ಧವಾಗಿವೆ. ಆದರೆ, ಯಾವ ಸ್ಟಾರು ಅಂತ ಬಂದಾಗ ರಾಜ್‌ಕುಮಾರ್‌ ಅವರ ಹೆಸರು ನೆನಪಾಗುತ್ತದೆ. ಅವರನ್ನು ನಿರ್ದೇಶಿಸಬೇಕೆಂದಿದ್ದೆ, ಕೊನೇ ಪಕ್ಷ ಅವರು ನನ್ನ ಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನಾದರೂ ಮಾಡಬೇಕೆಂಬ ಆಸೆ ಇತ್ತು. ಈಗಲೂ ನನ್ನ ಆಯ್ಕೆ ರಾಜ್‌'ಕುಮಾರ್‌ ಅವರೇ!

ಅಂದರೆ ನೀವು ರಾಜ್‌'ಕುಮಾರ್‌ ಚಿತ್ರಗಳನ್ನು ಹೆಚ್ಚು ನೋಡಿರುತ್ತೀರಲ್ಲ?
ಇಲ್ಲ ತುಂಬಾ ಕಡಿಮೆ. ನಾನು ರಾಯಚೂರಲ್ಲಿದ್ದಾಗ ಮೊದಲು ನೋಡಿದ್ದು ‘ಕಸ್ತೂರಿ ನಿವಾಸ'. ಆ ನಂತರ ‘ಮಯೂರ'. ಮುಂದೆ ಚೆನ್ನೈಗೆ ಹೋದ ಮೇಲೆ ಕನ್ನಡ ಸಿನಿಮಾಗಳನ್ನು ನೋಡುವ ಅವಕಾಶ ಸಿಗಲಿಲ್ಲ. 

ಒಬ್ಬ ಕತೆಗಾರನಾಗಿ ನೀವು ರಾಜ್‌ ಸಿನಿಮಾಗಳಿಂದ ಎಷ್ಟು ಪ್ರಭಾವಿತರಾಗಿದ್ದೀರಿ?
ನಾನು ಯಾವುದೇ ಚಿತ್ರಕ್ಕೆ ಶ್ರೇಷ್ಠ ಪಾತ್ರಗಳನ್ನು ಸೃಷ್ಟಿಮಾಡಬೇಕಾದರೆ ರಾಜ್‌'ಕುಮಾರ್‌ ಅವರನ್ನು ನೆನಪಿಸಿಕೊಳ್ಳುತ್ತೇನೆ. ಜತೆಗೆ ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಅವರ ಸರಳತೆ ನಾನು ಸೃಷ್ಟಿಸುವ ಚಿತ್ರಗಳ ಪಾತ್ರಗಳಿಗೆ ಫಾದರ್‌ ಇದಂತೆ. ಹಾಗೆ ‘ಮಯೂರ' ಸಿನಿಮಾ ಸೇರಿದಂತೆ ಅವರ ಬೇರೆ ಬೇರೆ ಚಿತ್ರಗಳೇ ‘ಬಾಹುಬಲಿ'ಗೆ ಸ್ಫೂರ್ತಿ. ಅಮರೇಂದ್ರ ಬಾಹುಬಲಿ ಪಾತ್ರ ರಾಜ್‌ ವ್ಯಕ್ತಿತ್ವ ಹಾಗೂ ಸಿನಿಮಾಗಳ ಪ್ರೇರಣೆಯಿಂದ ಹುಟ್ಟಿಕೊಂಡ ಕ್ಯಾರೆಕ್ಟರ್‌. ಹಾಗೆ ನೋಡಿದರೆ ನನ್ನ ಮತ್ತು ರಾಜ್‌'ಕುಮಾರ್‌ ಒಡನಾಟ ಇರಲಿಲ್ಲ. ‘ಕುರುಬನ ರಾಣಿ'ಗೆ ಚಿತ್ರಕತೆ ಮಾಡುವಾಗ ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿದ್ದೆ ಅಷ್ಟೆ. 

ನಿಮ್ಮ ಪ್ರಕಾರ ಒಬ್ಬ ಕತೆಗಾರನಿಗೆ ಇರಬೇಕಾದ ಲಕ್ಷಣ ಏನು?
ಅಫ್‌ ದಿ ರೆಕಾರ್ಡ್‌ ಹೇಳ್ತೀನಿ... ಸುಳ್ಳು ಹೇಳೋಕೆ ಬರಬೇಕು. ಯಾಕೆಂದರೆ ನನ್ನ ಪ್ರಕಾರ ಕತೆ ಅನ್ನೋದು ಇಲ್ಲದ್ದನ್ನು ಇದೆ ಅಂತ ನಂಬಿಸಿ ಬರೆಯುವುದು. ಹೀಗಾಗಿ ಯಾರಿಗೆ ಅದ್ಭುವಾಗಿ ಸುಳ್ಳು ಹೇಳಕ್ಕೆ ಬರುತ್ತದೋ ಅವರು ಒಳ್ಳೆಯ ಕತೆಗಾರ ಅನಿಸಿಕೊಳ್ಳುತ್ತಾನೆ. ಕತೆಗಾರನಾಗಬೇಕು ಅಂತ ನನ್ನ ಬಳಿ ಬರುವವರಿಗೆ ನಾನು ಇದನ್ನೇ ಹೇಳುತ್ತೇನೆ. 

ಬಾಹುಬಲಿ ನಂತರ ನಿಮ್ಮ ಬಳಿ ಕತೆ ಕೇಳಿಕೊಂಡು ಬರುವ ನಿರ್ದೇಶಕ, ನಿರ್ಮಾಪಕರ ಸಂಖ್ಯೆ ಹೆಚ್ಚಾಗಿರಬೇಕಲ್ಲವೇ?
ತಮಿಳು ಹಾಗೂ ಹಿಂದಿನಲ್ಲಿ ಬೇಡಿಕೆ ಇದೆ. ಆದರೆ, ತೆಲುಗಿನವರು ಯಾರೂ ಕೇಳುತ್ತಿಲ್ಲ. ಶಂಕರ್‌ ನಿರ್ದೇಶನದ ‘ನಾಯಕ್‌-2' ಚಿತ್ರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಕಾ ಪೋಲಿಟಿಕಲ್‌ ಡ್ರಾಮಾ ಸಿನಿಮಾ. ಹೀರೋ ಯಾರು ಅಂತ ಗೊತ್ತಿಲ್ಲ.

- ಆರ್. ಕೇಶವಮೂರ್ತಿ, ಕನ್ನಡಪ್ರಭ
(epaper.kannadaprabha.in)