ಮಂಗಳೂರು (ಜು. 28): ತುಳು ಬಾಷೆಯ ಖ್ಯಾತ ಗೀತ ರಚನೆಗಾರ, ಸಾಹಿತಿ ಎಂ ಕೆ ಸೀತಾರಾನ್ ಕುಲಾಲ್ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. 

11 ತುಳು ಚಿತ್ರಗಳಿಗೆ 25 ಕ್ಕೂ ಹೆಚ್ಚು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹಿರಿಯ ತುಳು ಸಾಹಿತಿ ಎಂ.ಕೆ.ಸೀತಾರಾಮ್ ಕುಲಾಲ್. ಸೀತಾರಾಮ್ ಕುಲಾಲ್ ರವರು ಮೊದಲು ‘ದಾಸಿ ಪುತ್ರ’ ಕನ್ನಡ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು. ನಂತರ ‘ಪಗೆತ ಪುಗೆ’ ತುಳು ಚಲನಚಿತ್ರಕ್ಕೆ ಸಾಹಿತ್ಯ ಬರೆಯುವುದರೊಂದಿಗೆ ತುಳು ಚಿತ್ರರಂಗದ ಪ್ರವೇಶಿಸಿದರು. ಅಲ್ಲದೇ ಬಯ್ಯಮಲ್ಲಿಗೆ, ಬೊಳ್ಳಿತೋಟ, ಉಡಲ್ದ ತುಡರ್ ಬದ್ಕದ ಬಿಲೆ,  ಕೋಟಿ ಚೆನ್ನಯ, ಬದಿ ಸೇರಿ ಒಟ್ಟು ಹನ್ನೊಂದು ಚಿತ್ರಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಸುಮಾರು 17 ಕನ್ನಡ ಚಾರಿತ್ರಿಕ ನಾಟಕ 6 ಕನ್ನಡ ಪೌರಾಣಿಕ ಸೇರಿ ಒಟ್ಟು 66 ಕೃತಿಗಳನ್ನು ರಚಿಸಿದ್ದಾರೆ.

ಕಲಾವಿದರಾಗಿ ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ ನಟನೆ ನಾಟಕ ಹಾಗೂ ಹಾಡುಗಳಗಾಗಲಿ ಯಾವುದೇ ರೀತಿಯ ಸಂಭಾವನೆಯನ್ನು ಪಡೆಯದೇ ಇರುವುದು ವಿಶೇಷ. 

ರಂಗಕಲಾ ಭೂಷಣʼ, ತುಳು ರತ್ನ, ಪೆರ್ಮೆದ ತುಳುವೆ, ತುಳು ಸಿರಿ, ತುಳು ಸಾಹಿತ್ಯ ರತ್ನಾಕರ, ತೌಳವ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ಕುಲಾಲರು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.