ಹಳ್ಳಿ ಹಳ್ಳಿಗೆ ಒಳ್ಳೆಯ ಸಿನಿಮಾ ಕೊಂಡೊಯ್ಯಲಿದ್ದಾರೆ ನಾಗತೀಹಳ್ಳಿ ಚಂದ್ರಶೇಖರ್

Veteran Director Nagathihalli Chandrashekhar interview with Kannada Prabha
Highlights

ಓದು, ಬರಹ, ಸುತ್ತಾಟ ಹೀಗೆ ಬೇರೆ ಬೇರೆ ಥರದಲ್ಲಿ ಬದುಕಿನ ಶೋಧನೆಯನ್ನು ಕೈಗೊಂಡವರು ನಾಗತೀಹಳ್ಳಿ ಚಂದ್ರಶೇಖರ್. ಸಾಹಿತ್ಯದಲ್ಲಿ, ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಪ್ರಭದೊಂದಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಸಿನಿಮಾ ಬಗೆಗಿನ ಅಂತರಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. 

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದೀರಿ. ಏನೇನು ಯೋಜನೆಗಳಿವೆ?
ಚಲನಚಿತ್ರ ಅಕಾಡೆಮಿ ಸ್ಥಾಪಿಸಬೇಕು ಅಂತ ಶ್ರಮಿಸಿದ ಅನೇಕರಲ್ಲಿ  ನಾನೂ ಒಬ್ಬ. ಈಗ ಅಕಾಡೆಮಿಯಲ್ಲಿ ಕೆಲಸ ಮಾಡುವ ಅವಕಾಶ  ಸಿಕ್ಕಿದೆ. ಒಳ್ಳೆಯ ಸಿನಿಮಾಗಳ ಚಳುವಳಿ ನಡೆಸಬೇಕು. ಮುಖ್ಯವಾಗಿ ಶೈಕ್ಷಣಿಕ ಘನತೆ ತರಬೇಕು ಅನ್ನುವುದು ನನ್ನ ಮೂಲ ಆಶಯ.

ಬೆಂಗಳೂರಲ್ಲೇ ಸಿಕ್ಕಿ ಬಿದ್ದಿರುವ ಸಿನಿಮಾಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ತೆಗೆದುಕೊಂಡು ಹೋಗಬೇಕಿದೆ. ಕೆಲವು ತುಂಬಾ ಒಳ್ಳೆಯ ಸಿನಿಮಾಗಳು ಬೆಂಗಳೂರಿನಲ್ಲಿ ಬಿಡುಗಡೆಯಾದರೂ ಮೈಸೂರಿನಲ್ಲಿ ಪ್ರದರ್ಶನ ಕಾಣಲು ಕಷ್ಟ ಪಡುವ ಪರಿಸ್ಥಿತಿ ಇದೆ. ‘ತಿಥಿ’, ‘ರಾಮಾ ರಾಮಾ ರೇ’ಯಂತಹ ಸಿನಿಮಾಗಳು ಗ್ರಾಮಾಂತರ ಪ್ರದೇಶದ ಮಂದಿಯೂ ನೋಡುವಂತೆ ಮಾಡಬೇಕು. ಪ್ರತೀ ಹಳ್ಳಿಗಳಲ್ಲಿ ಆಗದೇ ಹೋದರೂ ಕೆಲವು ಕಡೆಗಳಲ್ಲಾದರೂ ಫಿಲ್ಮ್  ಸೊಸೈಟಿಗಳ ಮೂಲಕ ಚಿತ್ರಪ್ರದರ್ಶನ ಏರ್ಪಡಿಸಬೇಕು.

 ಹೊಸತಾಗಿ ಫಿಲ್ಮ್ ಸೊಸೈಟಿ ಮಾಡುವ ಯೋಜನೆ ಇದೆಯಾ?
ಈಗ ಇರುವ ಅನೇಕ ಚಿತ್ರ ಸಮಾಜಗಳು ನಿಷ್ಕ್ರಿಯವಾಗಿವೆ. ಆದರೆ ಅಲ್ಲಲ್ಲಿ ವೈಯಕ್ತಿಕವಾಗಿ ಸಣ್ಣ ಮಟ್ಟದಲ್ಲಿ ಫಿಲ್ಮ್ ಫೆಸ್ಟಿವಲ್ ಆಯೋಜಿಸುವವರು ಇದ್ದಾರೆ. ಅವರ ಮೂಲಕ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಕಾರಣದಿಂದ ನಾವು ಜಗತ್ತಿಗೆ ತೆರೆದುಕೊಂಡಿದ್ದೇವೆ. ಶ್ರೇಷ್ಠ ಚಿತ್ರಗಳು ಸಿಗುತ್ತಿವೆ. ಹೀಗಾಗಿ ಅಲ್ಲಲ್ಲಿ ಪಾಕೆಟ್ ಫಿಲ್ಮ್  ಫೆಸ್ಟಿವಲ್ ಆಯೋಜಿಸಬೇಕು ಅನ್ನುವ ಯೋಚನೆ ಕೂಡ ಇದೆ. ಸಿನಿಮಾ ಅಭಿರುಚಿ ಬೆಳೆಸುವ ಪ್ರಯತ್ನ ನಡೆಯಲಿದೆ.

ಗ್ರಾಮೀಣ ಭಾಗಕ್ಕೆ ಆದ್ಯತೆ ಕೊಡುತ್ತೀನಿ ಎಂದಿದ್ದೀರಿ..
ಗ್ರಾಮಮುಖಿ ಚಿಂತನೆ ನನ್ನದು. ಬೆಂಗಳೂರಿನಲ್ಲಿ ಉತ್ತಮ ಸಿನಿಮಾಗಳು ಸಿಗುತ್ತವೆ, ಉಪನ್ಯಾಸ ಮಾಲಿಕೆಗಳು, ಸೆಮಿನಾರ್‌ಗಳು ನಡೆಯುತ್ತವೆ. ಆದರೆ ಗ್ರಾಮೀಣ ಪ್ರದೇಶದ ಸಿನಿಮಾಸಕ್ತರು ಇದರಿಂದ ವಂಚಿತರಾಗುತ್ತಾರೆ. ಇದನ್ನು ತಪ್ಪಿಸಬೇಕು. ಎಲ್ಲಾ  ಊರಿನಲ್ಲೂ ಸಿನಿಮಾ ಉಪನ್ಯಾಸ ಮಾಲಿಕೆಗಳು, ಸೆಮಿನಾರ್‌ಗಳನ್ನು  ನಡೆಸಬೇಕು. ಈಗಾಗಲೇ ಪಶ್ಚಿಮ ಬಂಗಾಳ, ಕೇರಳದಲ್ಲಿ ಈ ಥರದ ಚಳುವಳಿಗಳು ನಡೆಯುತ್ತಿವೆ. ನಮ್ಮ ತಂಡ ಅಲ್ಲಿಗೆ ಹೋಗಿ ಅವರೆಲ್ಲಾ ಸಿನಿಮಾ ಅಭಿರುಚಿ ಬೆಳೆಸಲು ಏನೇನು ಮಾಡುತ್ತಿದ್ದಾರೆ ಎಂದು ನೋಡಿಕೊಂಡು ಬಂದು ಅದನ್ನು ಇಲ್ಲೂ ಅಳವಡಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ.

ಅಕಾಡೆಮಿಯ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳು ಮುಂದುವರಿಯಲಿವೆಯೇ?
ಬೆಳ್ಳಿ ಹೆಜ್ಜೆ, ಬೆಳ್ಳಿ ಸಿನಿಮಾ ಮುಂತಾದವು ಯಶಸ್ವೀ ಕಾರ್ಯಕ್ರಮಗಳು. ಇವು ಯಾವುದನ್ನೂ ನಿಲ್ಲಿಸುವ ಪ್ರಶ್ನೆಯಿಲ್ಲ. ಹೊಸ ಕಾರ್ಯ ಕ್ರಮಗಳನ್ನು ರೂಪಿಸುವುದಷ್ಟೇ ನನ್ನ ಕೆಲಸ. ಇನ್ನು ಪುಸ್ತಕ ಪ್ರಕಟಣೆ ಮಾಡಬೇಕು. ಸಿನಿಮಾ ಕುರಿತಂತಹ ವಿಭಿನ್ನ ಪುಸ್ತಕಗಳನ್ನು ಪ್ರಕಟಿಸಬೇಕು. ಆ ಪುಸ್ತಕ ಪಠ್ಯಗಳಾಗುವಂತೆ ನೋಡಿಕೊಳ್ಳಬೇಕು. ಅರ್ಹರಿಗೆ ತಲುಪಿಸಬೇಕು.

ಟೆಂಟ್ ಮೂಲಕ ಸಿನಿಮಾಸಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದೀರಿ. ಅಕಾಡೆಮಿ ಮೂಲಕ ಅಂಥಾ ಕೆಲಸ ನಡೆಸುತ್ತೀರಾ?
ಟೆಂಟ್ ಸಂಸ್ಥೆ ನಮ್ಮ ಕುಟುಂಬ ನಡೆಸುವ ಒಂದು ಶಾಲೆ. ಆ ಶಾಲೆಯಲ್ಲಿ ಸಿನಿಮಾ ಅಧ್ಯಯನ ಮಾಡಲಾಗುತ್ತದೆ. ಈ ಕೆಲಸ ಗ್ರಾಮೀಣ ಭಾಗದಲ್ಲೂ ನಡೆಯಬೇಕು. ಈ ಥರದ ಶಾಲೆ ನಡೆಸುವವರಿಗೆ ಅನುದಾನ ನೀಡಿ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದ್ದೇಶ ಇದೆ. ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಬರವಣಿಗೆ ವರ್ಕ್‌ಶಾಪ್ ಕೂಡ ನಡೆಸಬೇಕಿದೆ.

ಸಿನಿಮಾ, ಪ್ರವಾಸ, ಓದು, ಬರಹ, ಬೋಧನೆ, ಇದೀಗ ಅಕಾಡೆಮಿ ಜವಾಬ್ದಾರಿ...
ಓದು, ಬರಹ, ಸುತ್ತಾಟ ಹೀಗೆ ಬೇರೆ ಬೇರೆ ಥರದಲ್ಲಿ ಬದುಕಿನ ಶೋಧನೆಯನ್ನು ಕೈಗೊಂಡವನು ನಾನು. ಸೃಜನಶೀಲವಾಗಿ ತೊಡಗಿಸಿಕೊಂಡರೆ ನನಗೆ ನೆಮ್ಮದಿ. ಈಗ ಅಕಾಡೆಮಿ ಜವಾಬ್ದಾರಿ ನನಗೆ ನೀಡಿದ್ದಾರೆ. ವಿನಯದಿಂದ ಸ್ವೀಕಾರ ಮಾಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ ಅನ್ನುವುದು ನನಗೆ ಗೊತ್ತಿದೆ. ನಾನು ಸಿನಿಕನೂ ಅಲ್ಲ. ಅತಿ ವಿರಕ್ತಿಯೂ ನನಗಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡಲು ಉದ್ದೇಶಿಸಿದ್ದೇನೆ. ಎಲ್ಲರ ರಚನಾತ್ಮಕ ಸಲಹೆಗಳಿಗೆ ತೆರೆದುಕೊಂಡಿದ್ದೇನೆ. ಒಟ್ಟಾರೆ ಒಳ್ಳೆಯ ಕೆಲಸ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. 
 

loader