Asianet Suvarna News Asianet Suvarna News

ಸಂದರ್ಶನ: ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮೊಮ್ಮಗಳ ಸಿನಿ ಜರ್ನಿ

ಸ್ಯಾಂಡಲ್‌ವುಡ್‌ಗೆ ಕಾಲಿಡುವ ಮುನ್ನ ಪರಭಾಷೆಗಳಲ್ಲಿ ಮಿಂಚಿ, ಹೆಸರು ಮಾಡಿದ ಕನ್ನಡದ ನಟಿಯರು ಸಾಕಷ್ಟಿದ್ದಾರೆ. ಕೆಲವರು ಅಲ್ಲಿಯೇ ಭದ್ರವಾಗಿ ನೆಲೆ ಕಂಡುಕೊಂಡು, ಬೇಡಿಕೆಯ ನಟಿಯರಾಗಿದ್ದರೆ, ಮತ್ತೆ ಕೆಲವರು ತವರೂರಿಗೆ ಮರಳಿ ಇಲ್ಲೂ ನಟಿಯಾಗಿ ಬ್ಯುಸಿ ಆಗಿದ್ದಾರೆ. ಆ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾದವರು ನಟಿ ಧನ್ಯ.

veene doraiswamy iyengar mysore granddaughter sandalwood journey
Author
Bengaluru, First Published Nov 9, 2018, 9:07 AM IST

ನೀವು ಮೈಸೂರು ಹುಡುಗಿಯಂತೆ ಹೌದಾ?
ನಿಜ, ನಮ್ದು ಮೂಲ ಮೈಸೂರು. ಆದರೆ, ನಾನು ಹುಟ್ಟಿ, ಬೆಳೆದಿದ್ದು ಬೆಂಗಳೂರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವೈಣಿಕ ದೊರೆಸ್ವಾಮಿ ಅಯ್ಯಂಗಾರ್ ನನ್ನ ತಾತ. ಕಲೆ ಮೇಲಿನ ಆಸಕ್ತಿಗೆ ಅವರೇ ಕಾರಣ.

ಸಿನಿಮಾ ಕರಿಯರ್ ಶುರುವಾಗಿದ್ದು ಹೇಗೆ?
ಸಿನಿಮಾ ಎಂಟ್ರಿಗೆ ರಂಗಭೂಮಿ ಕಾರಣ. ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಅದಕ್ಕಾಗಿಯೇ ಆಗಾಗ ಚೆನ್ನೈಗೆ ಹೋಗಿ ಬರುತ್ತಿದ್ದೆ. ಆ ಸಮಯದಲ್ಲಿ ನಿರ್ದೇಶಕ ಮುರುಗದಾಸ್ ಪರಿಚಯವಾದರು. ಆನಂತರದ ದಿನಗಳಲ್ಲಿ ಅವರು ‘ಎಳಂ ಅರಿವು’ ಚಿತ್ರ ನಿರ್ದೇಶನಕ್ಕೆ ಮುಂದಾದರು. ಅದು ಸೂರ್ಯ ಮತ್ತು ಶ್ರುತಿ ಹಾಸನ್ ಅಭಿನಯದ ಚಿತ್ರ. ಆ ಚಿತ್ರದಲ್ಲಿನ ಒಂದು ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. ಅಲ್ಲಿಂದ ಸಿನಿಮಾ ಜರ್ನಿ ಶುರುವಾಯಿತು. ಅದೇ ಚಿತ್ರ ತೆಲುಗಿಗೆ ಡಬ್ ಆಯಿತು. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತು. ಆಗ ಅಲ್ಲಿಂದಲೂ ಆಫರ್ಸ್‌ ಬಂದವು. ತಮಿಳಿನಿಂದ ತೆಲುಗಿನತ್ತ ಪಯಣ ಶುರುವಾಯಿತು. 

ಕನ್ನಡತಿಯಾದರೂ, ಇಲ್ಲಿ ತನಕ ಪರಭಾಷೆಯಲ್ಲೇ ಜಾಸ್ತಿ ಹೆಸರು ಮಾಡಿದ್ದು ಹೇಗೆ?
ಕಲೆಯತ್ತ ಆಸಕ್ತಿಯಿದ್ದರೂ ಸಿನಿಮಾ ನನ್ನ ಮೊದಲ ಆದ್ಯತೆ ಆಗಿರಲಿಲ್ಲ. ಹಾಗಾಗಿ ನಾನು ಇಲ್ಲಿನ ಸಿನಿಮಾ ಅವಕಾಶಗಳತ್ತ ಹೆಚ್ಚು ಗಮನ ಹರಿಸಿರಲಿಲ್ಲ. ನಾಟಕಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೆ. ಅದರಲ್ಲೂ ಇಂಗ್ಲಿಷ್ ನಾಟಕಗಳಲ್ಲೆ ಹೆಚ್ಚು ಆಸಕ್ತಿ ಇತ್ತು.ಆಗಲೇ ಅಲ್ಲಿ ಸಿನಿಮಾ ಅವಕಾಶಗಳು ಬಂದವು. ಮುರುಗದಾಸ್ ಅವರೇ ನನ್ನ ಅಲ್ಲಿನ ಸಿನಿಮಾ ಜಗತ್ತಿಗೆ ಪರಿಚಯಿಸಿದರು. ಅವಕಾಶಗಳು ಬಂದವು. ಅವುಗಳ ಮೂಲಕ ಮೊದಲು ತಮಿಳು, ಆನಂತರ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದೆ ಎನ್ನುವುದನ್ನು ಬಿಟ್ಟರೆ ಅಂಥದ್ದೇನು ವಿಶೇಷತೆ ಇಲ್ಲ. ನನಗೆ ನನ್ನದೇ ಭಾಷೆ, ನೆಲವೇ ಶ್ರೇಷ್ಟ.

ನಟನೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ಮೊದಲಿಗೆ ನನ್ನ ಕುಟುಂಬದ ಹಿನ್ನೆಲೆ. ತಾತ ದೊರೆಸ್ವಾಮಿ ಅಯ್ಯಂಗಾರ್ ಶ್ರೇಷ್ಟ ವೈಣಿಕ. ಅವರ ಜನಪ್ರಿಯತೆ, ಮನ್ನಣೆಯನ್ನು ನೋಡುತ್ತಿದ್ದಾಗ ಅವರ ಹಾಗೆಯೇ ಕಲೆಯಲ್ಲಿ ನಾನು ಗುರುತಿಸಿಕೊಳ್ಳಬೇಕು ಎಂದೆನಿಸುತ್ತಿತ್ತು. ಅಷ್ಟಾಗಿ ಯೂ ಓದು ಮುಖ್ಯ ಎನಿಸಿತ್ತು. ಆ ದಿನಗಳಲ್ಲೂ ಮತ್ತೆ ನನಗೆ ನಾಟಕದತ್ತ ಆಸಕ್ತಿ ಮೂಡಿಸಿದ್ದು ನಿರ್ದೇಶಕ ಬಿ.ಎಂ. ಗಿರಿರಾಜ್ ಸರ್. ಮೌಂಟ್ ಕಾರ್ಮೆಲ್ ಕಾಲೇಜ್‌ನಲ್ಲಿ ನಾನು ಓದುವಾಗ ಗಿರಿರಾಜ್ ಅವರು ನಾಟಕದ ಬಗ್ಗೆ ವರ್ಕ್ ಶಾಪ್ ಮಾಡುತ್ತಿದ್ದರು. ಅಲ್ಲಿಂದಲೇ ನಟನೆ ಬಗ್ಗೆ ಆಸಕ್ತಿ ಹುಟ್ಟಿತು. ರಂಗಭೂಮಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡೆ. ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟೆ.

‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರಕ್ಕೆ ನಾಯಕಿ ಆಗಲು ಅವಕಾಶ ಸಿಕ್ಕಿದ್ದು ಹೇಗೆ?
ರಂಗಭೂಮಿಯಿಂದ ನಾನು ಚಿತ್ರರಂಗಕ್ಕೆ ಕಾಲಿಟ್ಟು ಆರೇಳು ವರ್ಷಗಳಾದವು. ತೆಲುಗಿನಲ್ಲಿ 10, ತಮಿಳಿನಲ್ಲೂ ಐದಾರು ಸೇರಿ ಒಟ್ಟು 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ನಿವಿನ್ ಪೌಲಿ ಅಭಿನಯದ ಸಿನಿಮಾದ ಮೂಲಕ ಮಲಯಾಳಂನಲ್ಲೂ ಕಾಣಿಸಿಕೊಂಡಿದ್ದೇನೆ. ಆದರೂ ಕನ್ನಡದಲ್ಲಿ ನಟಿಸುವಾಸೆ ನನ್ನನ್ನು ಕಾಡುತ್ತಲೇ ಇತ್ತು. ಯಾಕೆಂದರೆ, ಇದು ನನ್ನೂರು. ಇಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕೆನ್ನುವ ತುಡಿತವಿತ್ತು. ಅವಕಾಶಗಳನ್ನು ಎದುರು ನೋಡುತ್ತಿದ್ದಾಗ ಆಡಿಷನ್ ಮೂಲಕ ಈ ಸಿನಿಮಾದ ಅವಕಾಶ ಸಿಕ್ಕಿತು.

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ನಿರ್ದೇಶಕರು ಪಾತ್ರದ ಬಗ್ಗೆ ಹೆಚ್ಚೇನು ಹೇಳಿಲ್ಲ. ಪಕ್ಕಾ ಬ್ರಾಹ್ಮಣ ಕುಟುಂಬದ ಒಂದು ಹುಡುಗಿ ಆಕೆ. ಕಾಲೇಜು ಸ್ಟೂಡೆಂಟ್. ಆ ಸಂದರ್ಭದಲ್ಲಿ ನಾಯಕನ ಪರಿಚಯವಾಗುತ್ತದೆ. ಆ ಪರಿಚಯ ಪ್ರೀತಿಗೆ ತಿರುಗಿದಾಗ ಅಲ್ಲಿ ಏನೆಲ್ಲ ಆಗುತ್ತೆ ಎನ್ನುವುದನ್ನು ನನ್ನ ಪಾತ್ರ ಹೇಳುತ್ತದೆ. ನನ್ನ ಮಟ್ಟಿಗೆ ಇದೊಂದು ಹೊಸ ಬಗೆಯ ಪಾತ್ರ. ಪರಭಾಷೆಯಲ್ಲಿ ಅಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಇಂತಹ ಪಾತ್ರ ಸಿಕ್ಕಿರಲಿಲ್ಲ.

ಅದು ಸರಿ,ಕನ್ನಡಕ್ಕೆ ಬರಲು ಇಷ್ಟು ತಡವಾಗಿದ್ದು ಯಾಕೆ?
ಅಲ್ಲಿದ್ದರೂ ನನಗೆ ಇಲ್ಲಿಗೆ ಬರಬೇಕು ಎನ್ನುವುದು ಇದ್ದೇ ಇತ್ತು. ಮನೆಯಲ್ಲೂ ಅಪ್ಪ-ಅಮ್ಮ ಕನ್ನಡದಲ್ಲಿ ನಟಿಸಬೇಕು ಎನ್ನುತ್ತಿದ್ದರು. ಆದರೆ, ಅಂತಹ ಅವಕಾಶಗಳ್ಯಾವು ಬಂದಿರಲಿಲ್ಲ. ಹೆಚ್ಚು ದಿನ ಅಲ್ಲಿಯೇ ಉಳಿದು ಬಿಟ್ಟೆ. ನನಗಿಲ್ಲಿ ಗಿರಿರಾಜ್ ಒಬ್ಬರು ಮಾತ್ರ ನನಗೆ ಗೊತ್ತಿದ್ದರು. ಹಾಗಾಗಿ ಅವರ ‘ರಕ್ತ ಚಂದನ’ ಎಂಬ ವೆಬ್ ಸಿರೀಸ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರ ಫಲವೋ ಏನೋ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಆಫರ್ ಬಂತು.

ಸಿನಿಮಾ ಅವಕಾಶಗಳ ಬ್ಯುಸಿಯಲ್ಲಿ ರಂಗಭೂಮಿ ಮರೆತು ಬಿಟ್ರಾ?
ಖಂಡಿತಾ ಇಲ್ಲ, ಈಗ ಒಂದಷ್ಟು ಸಿನಿಮಾದಲ್ಲಿ ಬ್ಯುಸಿ ಇರೋದ್ರಿಂದ ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಅವಸರಕ್ಕೆ ಅಲ್ಲಿಗೆ ಹೋಗಿ ಬರಲು ಸಾಧ್ಯವಿಲ್ಲ. ಯಾಕೆಂದರೆ, ಅದು ಜಾಸ್ತಿ ಸಮಯವನ್ನು ಬೇಡುತ್ತದೆ. ಹಾಗಾಗಿ ಸದ್ಯಕ್ಕೆ ಬಿಡುವಿದ್ದಾಗ ನಾಟಕಗಳನ್ನು ನೋಡುತ್ತೇನೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಾಟಕಗಳಲ್ಲಿ ಅಭಿನಯಿಸಲು ನಾನು ಸಿದ್ಧಳಿದ್ದೇನೆ.

ನಟನೆಯನ್ನು ನೀವು ಹೇಗೆ ಪರಿಗಣಿಸಿದ್ದೀರಿ?
ನನಗೆ ಸ್ಟಾರ್ ಆಗಬೇಕು ಎಂಬ ಉದ್ದೇಶ ಇಲ್ಲ. ನಾನೊಬ್ಬಳು ಕಲಾವಿದೆ ಎನಿಸಿಕೊಂಡರೆ ಸಾಕು.

 

 

Follow Us:
Download App:
  • android
  • ios