ಆರ್‌ ಕೇಶವಮೂರ್ತಿ

ಇದ್ದಕ್ಕಿದಂತೆ ಕಾಣದಂತೆ ಮಾಯವಾಗಿಬಿಟ್ರಲ್ಲ ಯಾಕೆ?

‘ಕಾಣದಂತೆ ಮಾಯವಾದನು’ ಎಂಬುದು ನಾನು ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ ಹೆಸರು. ‘ಜಯಮ್ಮನ ಮಗ’ ಚಿತ್ರ ನಿರ್ದೇಶಿಸಿದ್ದ ವಿಕಾಸ್‌ ಅವರೇ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಇದು.

ಸುಮಾರು ದಿನ ಪತ್ತೆ ಇರಲಿಲ್ಲವಲ್ಲ?

ಯಾರು ಹೇಳಿದ್ದು ನಾನು ಚಿತ್ರರಂಗದಿಂದ ದೂರವಾಗಿದ್ದೀನಿ ಅಂತ. ಖಂಡಿತ ನಾನು ಸಿನಿಮಾ ಬಿಟ್ಟು ಬೇರೆ ಎಲ್ಲೂ ಹೋಗಿಲ್ಲ. ಅಫ್‌ಕೋರ್ಸ್‌ ನಮಗೆ ಸೂಕ್ತ ಅಲ್ಲ ಅನಿಸೋ ಕತೆಗಳು, ಪಾತ್ರಗಳು ಬಂದರೂ ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಹೀಗಾಗಿ ನಟಿಸುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿರಬಹುದು. ಚಿತ್ರರಂಗವನ್ನು ಬಿಟ್ಟಿಲ್ಲ.

ಮದುವೆ ಆದ ಮೇಲೂ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅನುಮತಿ ಇದೆ ಅನ್ನಿ?

ಯಾರ ಅನುಮತಿ, ಯಾಕೆ ಪಡೆದುಕೊಳ್ಳಬೇಕು? ನನಗಂತೂ ಗೊತ್ತಾಗುತ್ತಿಲ್ಲ. ಯಾಕೆಂದರೆ ನಾನು ನಟಿ. ಸಿನಿಮಾ ನನ್ನ ವೃತ್ತಿ ಕ್ಷೇತ್ರ. ಮದುವೆಯಾದ ಮೇಲೂ ಸಿನಿಮಾಗಳಲ್ಲಿ ನಟಿಸುತ್ತೀರಾ ಅಥವಾ ಮದುವೆ ನಂತರ ಸಿನಿಮಾಗಳಿಂದ ದೂರವಾಗುತ್ತೀರಾ ಅಂತ ನಟಿಯರಿಗೇ ಯಾಕೆ ಇಂಥ ಪ್ರಶ್ನೆಗಳು ಬರುತ್ತವೆ ಗೊತ್ತಾಗುತ್ತಿಲ್ಲ. ಇದೇ ಪ್ರಶ್ನೆ ಸಾಫ್ಟ್‌ವೇರ್‌ ಅಥವಾ ಯಾವುದೇ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಕೇಳಕ್ಕೆ ಆಗುತ್ತಾ? ಆದರೆ, ನಟಿಯರಿಗೆ ಮಾತ್ರ ಇಂಥ ಪ್ರಶ್ನೆಗಳು ಎದುರಾಗುತ್ತವೆ. ನಾನು ಹೇಳೋದು ಇಷ್ಟೆ, ಮದುವೆಯ ನಂತರವೂ ನಾನು ಚಿತ್ರರಂಗದಲ್ಲಿ ಇರಬೇಕು ಎಂದುಕೊಂಡಿದ್ದೇನೆ. ಇರುತ್ತೇನೆ ಕೂಡ. ಮದುವೆ ಕಾರಣಕ್ಕೆ ನಟನೆಯನ್ನು ದೂರ ಮಾಡಿಕೊಳ್ಳಲಾರೆ.

ಮದುವೆ ನಂತರ ಬಹುತೇಕ ನಟಿಯರು ಚಿತ್ರರಂಗದಿಂದ ದೂರವಾಗುತ್ತಾರಲ್ಲ?

ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾನು ಮದುವೆಗೂ ಮುನ್ನ ಯಾವ ರೀತಿಯ ಪಾತ್ರಗಳನ್ನು ಮಾಡುತ್ತಿದ್ದೆನೋ ಅದೇ ರೀತಿಯ ಪಾತ್ರಗಳನ್ನು ಮದುವೆ ನಂತರವೂ ಮಾಡುತ್ತೇನೆ. ಯಾವತ್ತೂ ನನ್ನ ವ್ಯಾಪ್ತಿ ನಾನು ಮೀರಿಲ್ಲ. ಮದುವೆಗಿಂತ ಮುಂಚೆ ಒಂದು ರೀತಿಯ ಪಾತ್ರ ಮಾಡಿ ಮದುವೆ ನಂತರ ಅಂಥ ಪಾತ್ರಗಳು ಬೇಡ ಎಂದುಕೊಳ್ಳುವವರು ಬಹುಶಃ ನಟನೆಯಿಂದ ದೂರವಾಗಿರಬಹುದು. ಆದರೆ, ನನ್ನದು ಇದಕ್ಕೆ ತದ್ವಿರುದ್ಧ ಹೆಜ್ಜೆ.

ನಿಮ್ಮಲ್ಲಿ ಇಷ್ಟುಭರವಸೆ ಮೂಡಿಸುತ್ತಿರುವ ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ನನ್ನದು ಎನ್‌ಜಿಓ ಸಂಸ್ಥೆಯಲ್ಲಿ ಕೆಲಸ ಮಾಡುವ ಪಾತ್ರ. ತುಂಬಾ ಪ್ರೌಢವಾಗಿರುವ ಕ್ಯಾರೆಕ್ಟರ್‌. ‘ಲಗೇ ರಹೋ ಮುನ್ನ ಬಾಯ್‌’ ಚಿತ್ರದಲ್ಲಿ ವಿದ್ಯಾಬಾಲನ್‌ ಮಾಡಿರುವ ಪಾತ್ರದಂತೆ ‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ನನ್ನ ಪಾತ್ರ ಇರುತ್ತದೆ. ಫ್ಯಾಂಟಸಿ ಕಂ ಥ್ರಿಲ್ಲರ್‌ ಸಿನಿಮಾ.

ನಿಮ್ಮ ಡ್ರೀಮ್‌ ಕತೆ ಅಥವಾ ಸಿನಿಮಾ ಯಾವುದು?

ಕ್ರೀಡಾಪಟು ಪಿಟಿ ಉಷಾ ಜೀವನ ಆಧರಿಸಿದ ಬಯೋಪಿಕ್‌ ಸಿನಿಮಾ ಮಾಡಬೇಕೆಂಬುದು ನನ್ನ ಆಸೆ. ಇಲ್ಲಿ ನಾನೇ ಉಷಾ ಪಾತ್ರ ಮಾಡುವ ಕನಸು ಇದು. ತುಂಬಾ ದಿನಗಳಿಂದ ಕಾಡುತ್ತಿರುವ ಯೋಚನೆ. ನೋಡೋಣ, ಯಾರಾದರೂ ಬಂದು ಪಿ ಟಿ ಉಷಾ ಅವರ ಬಗ್ಗೆ ಸಿನಿಮಾ ಮಾಡಿ, ನನಗೆ ಉಷಾ ಪಾತ್ರ ಕೊಡುತ್ತಾರ ಅಂತ.

ಈಗ ಇದ್ದಕ್ಕಿದ್ದಂತೆ ಫೋಟೋಶೂಟ್‌ ಮಾಡಿಸಿಕೊಂಡಿರುವ ಗುಟ್ಟೇನು?

ಗುಟ್ಟು ಅಂತೇನಿಲ್ಲು. ಹೊಸ ವರ್ಷದಲ್ಲಿ ಹೊಸ ರೀತಿಯಲ್ಲಿ ಬರೋಣ ಅಂತ ನನ್ನ ನಾನು ಅಪ್‌ಡೇಟ್‌ ಮಾಡಿಕೊಳ್ಳುವುದಕ್ಕೆ ಮಾಡಿಸಿರುವ ಫೋಟೋಶೂಟ್‌. ಹೊಸ ಫೋಟೋಶೂಟ್‌ ನೋಡಿದ ಮೇಲೆ ನನ್ನ ಮೇಲೆ ನನಗೆ ಮತ್ತಷ್ಟುವಿಶ್ವಾಸ ಬಂತು. ಇದು ನನ್ನ ನ್ಯೂ ಎಂಟ್ರಿ ಅಂತಾನೂ ಅಂದುಕೊಳ್ಳಬಹುದು. ಹೊಸ ಸಿನಿಮಾ ತಯಾರಿ ನಡೆಯುತ್ತಿದೆ. ‘ಕಾಣದಂತೆ ಮಾಯವಾದನು’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ.