ಬೆಂಗಳೂರು (ಸೆ. 03): ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರೀಕ್ಷೆಗೂ ಮೀರಿದ ಪ್ರಯೋಗಕ್ಕೆ ಕೈ ಹಾಕಿದ್ದಾರೆಯೇ? ‘ಉದ್ಘರ್ಷ’ ಚಿತ್ರದ ಸುತ್ತ ಇಂಥದ್ದೊಂದು ಕುತೂಹಲ ಹುಟ್ಟಿಕೊಂಡಿದೆ.

ಹಾಗೆ ನೋಡಿದರೆ ದೇಸಾಯಿ ಅವರಿಗೆ ಪ್ರಯೋಗ ಹೊಸದಲ್ಲ. ಒಂದೇ ಬಿಲ್ಡಿಂಗ್‌ನಲ್ಲಿ ‘ನಿಷ್ಕರ್ಷ’ ಮಾಡಿ ಗೆದ್ದವರು. ಒಂದೇ ಮನೆಯಲ್ಲಿ ‘ತರ್ಕ’ ಮಾಡಿ ಯಶಸ್ಸು ಕಂಡರು. ನಾಯಕಿ ಮುಖವನ್ನೇ ತೋರಿಸದೆ ‘ಬೆಳದಿಂಗಳ ಬಾಲೆ’ಯನ್ನು ಎಲ್ಲರೂ ಮೆಚ್ಚುವಂತೆ ಮಾಡಿದರು.

ಕೆಲವು ತಿಂಗಳುಗಳ ಹಿಂದೆ ಬಂದ ‘ರೆ...’ ಎನ್ನುವ ಚಿತ್ರದ ಮೂಲಕ ಎಲ್ಲಾ ಡೈಲಾಗ್ ಅನ್ನೂ ‘ರೆ’ ಅಕ್ಷರದಿಂದಲೇ ಮುಕ್ತಾಯ ಮಾಡುವಂತಹ ಸಾಹಸ ಮಾಡಿದ್ದರು. ಹೀಗೆ ತಮ್ಮ ಪ್ರತಿ ಚಿತ್ರದ ಜತೆಗೂ ಪ್ರಯೋಗದ ನೆರಳನ್ನು ಟ್ರಂಪ್ ಕಾರ್ಡ್ ರೀತಿ ಬಳಸಿಕೊಂಡು ಬರುತ್ತಿದ್ದ ದೇಸಾಯಿ ಈಗ ‘ಉದ್ಘರ್ಷ’ದಲ್ಲೂ ಯಾರ ಊಹೆಗೂ ನಿಲುಕದಂತಹ ಪ್ರಯೋಗಕ್ಕೆ  ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಕೇವಲ ೨೦ ನಿಮಿಷ ಮಾತ್ರ ಡೈಲಾಗ್‌ಗಳು ಇರುತ್ತವೆ. ಉಳಿದಂತೆ
ಸಿನಿಮಾ ಪೂರ್ತಿ ಸೈಲೆಂಟ್!

ಅಚ್ಚರಿಯಾದರೂ ಇದು ನಿಜ. ಒಟ್ಟು ಚಿತ್ರದ ಅವಧಿ 2.30 ಗಂಟೆ. ಇದರಲ್ಲಿ ಕೇವಲ 20 ನಿಮಿಷಗಳ ಕಾಲ ಮಾತ್ರ ಸಂಭಾಷಣೆಗಳು ಬರಲಿವೆ. ‘ಹೊಸವರ್ಷದ ದಿನದಂದು ರೆಸಾರ್ಟ್‌ವೊಂದರಲ್ಲಿ ನಡೆಯುವ ಒಂದು ಕೊಲೆಯ ಸುತ್ತ ಈ ಚಿತ್ರದ ಕತೆ ಸಾಗುತ್ತದೆ.

10 ನಿಮಿಷದ ಕತೆಯನ್ನು 2.30  ಗಂಟೆ ಸಿನಿಮಾ ಮಾಡಿದ್ದು, ಇದರಲ್ಲಿ ಕೇವಲ 20 ನಿಮಿಷಗಳು ಮಾತ್ರ ಸಂಭಾಷಣೆಗಳು ಸದ್ದು ಮಾಡಲಿವೆ. ಕನ್ನಡದಲ್ಲಿ ಇದುವರೆಗೂ ಮಾಡಿರದ ಪ್ರಯೋಗ ಅಂತೂ ಹೌದು’ ಎನ್ನುತ್ತಾರೆ ಸುನೀಲ್ ಕುಮಾರ್ ದೇಸಾಯಿ. ಠಾಕೂರ್ ಅನುಪ್ ಸಿಂಗ್, ಧನ್ಸಿಕಾ, ಪ್ರಭಾಕರ್, ಕಬೀರ್ ದುಹಾನ್ ಸಿಂಗ್, ಹರ್ಷಿಕಾ ಪೂಣಚ್ಚ ಚಿತ್ರದಲ್ಲಿ ನಟಿಸಿದ್ದಾರೆ.

ಪೋಸ್ಟರ್‌ಗಳಲ್ಲಿ ಏನಿರುತ್ತೆ?

ಈ ಚಿತ್ರದ ಫಸ್ಟ್ ಲುಕ್‌ನಲ್ಲಿ ರಕ್ತ ಸಿಕ್ತ ಹುಡುಗಿಯೊಬ್ಬಳ ಕಾಲುಗಳನ್ನು ತೋರಿಸಿ ಕುತೂಹಲ ಮೂಡಿಸಿದ್ದ ನಿರ್ದೇಶಕರು, ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಪೋಸ್ಟರ್‌ನಲ್ಲಿ ಬಟ್ಟೆಯಿಂದ ಕಟ್ಟಿರೋ ಗಂಡಿನ ಕೈಗಳಿದ್ದು ಹುಡುಗಿಯೊಬ್ಬಳು ಕೈನಲ್ಲಿ ಚಾಕು ಹಿಡಿದಿರೋದನ್ನ ತೋರಿಸಲಾಗಿದೆ. ಇಷ್ಟೇ ಅಲ್ಲ ಮುಂದೆ ಬರೋ ಚಿತ್ರದ ಎಲ್ಲಾ ಪೋಸ್ಟರ್‌ಗಳಲ್ಲೂ ಕೇವಲ ಪಾತ್ರಗಳ ಕೈಕಾಲುಗಳು, ಮುಖದ ನೆರಳು, ಭಯ ಹುಟ್ಟಿಸೋ ಕಣ್ಣುಗಳನ್ನು ಮಾತ್ರ ತೋರಿಸುವಂತೆ ಪೋಸ್ಟರ್ ವಿನ್ಯಾಸಗಳಿರುತ್ತವೆಯೇ ಹೊರತು, ಚಿತ್ರ ಬಿಡುಗಡೆಯಾಗುವ ತನಕ ಪೋಸ್ಟರ್‌ಗಳಲ್ಲಿ ಯಾವ ಕಲಾವಿದನ ಮುಖ ಕಾಣಲ್ಲವಂತೆ. ‘ಉದ್ಘರ್ಷ’ ಚಿತ್ರದ ಮತ್ತೊಂದು ಹೊಸ ಸಾಹಸ ಕೂಡ ಇದು.