ಅಮೃತಾ

ಚಿತ್ರ: ಪಾಪ್‌ಕಾರ್ನ್ ಮಂಕಿ ಟೈಗರ್

ಅಮೃತಾಗೆ ಹಳೇ ಸಿನಿಮಾಗಳು ಅಂದ್ರೆ ಇಷ್ಟ. ರಾಜ್ ಕುಮಾರ್- ಮಂಜುಳಾ ಅಂದ್ರೆ ಪ್ರೀತಿ. ಹುಟ್ಟಿದ್ದು ಬೆಳೆದಿದ್ದು ಮೈಸೂರಲ್ಲೇ. ಅಪ್ಪ ಮುರಳೀಧರ್, ಅಮ್ಮ ಭಾರ್ಗವಿಯವರ ಮುದ್ದಿನ ಪುತ್ರಿ. ಸೈಕಾಲಜಿ, ಕ್ರಿಮಿನಾಲಜಿ, ಫೊರೆನ್ಸಿಕ್ ಸೈನ್ಸ್ ಪದವೀಧರೆ. ಭರತ ನಾಟ್ಯ ಕಲಾವಿದೆ. ಅಮೃತಾಗೆ ಚಿತ್ರರಂಗಕ್ಕೆ ಬರುತ್ತೇನೆ ಎಂಬ ಐಡಿಯಾ ಇರಲಿಲ್ಲ. ಒಂದೊಳ್ಳೆ ದಿನ ಯಾರದೋ ಸಲಹೆಯಿಂದ ಚಿತ್ರರಂಗಕ್ಕೆ ಕಾಲಿಟ್ಟರು. ನಿರ್ದೇಶಕ ದೇವರಾಜ್ ಚಿತ್ರದಲ್ಲಿ ನಟಿಸಿದರು. ಆ ಚಿತ್ರ ಪೂರ್ತಿಯಾಗುವ ಮೊದಲೇ ಸೂರಿ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸಪ್ತಮಿ

ಚಿತ್ರ: ಪಾಪ್‌ಕಾರ್ನ್ ಮಂಕಿ ಟೈಗರ್

ಬೆಂಗಳೂರಿನ ಸಪ್ತಮಿ ಸಿವಿಲ್ ಇಂಜಿನಿಯರಿಂಗ್ ಪದವೀಧರೆ. ಸ್ವಿಮ್ಮಿಂಗ್‌ನಲ್ಲಿ ರಾಷ್ಟ್ರ ಮಟ್ಟದ ಗೋಲ್ಡ್ ಮೆಡಲ್ ವಿನ್ನರ್. ಡಿವೈಎಸ್‌ಪಿ ಎಸ್.ಕೆ. ಉಮೇಶ್ ಮತ್ತು ಶಾಂತ ಅವರ ಪ್ರೀತಿಯ ಮಗಳು. ತಂಗಿ ಉತ್ತರೆಯ ಮುದ್ದಿನ ಅಕ್ಕ. ಪದವಿ ಮುಗಿಸಿ ಮುಂದೇನು ಎಂದು ಯೋಚಿಸುತ್ತಿದ್ದಾಗ ಒಂದು ದಿನ ಸೂರಿ ಕಣ್ಣಿಗೆ ಬಿದ್ದರು. ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಯಕಿ ಹುಡುಕುತ್ತಿದ್ದರು. ಆಗ ಅವರಿಗೆ ತನಗೆ ಬೇಕಾದ ಪಾತ್ರಕ್ಕೆ ಇವರು ಸರಿಯಾದ ಹುಡುಗಿ ಅನ್ನಿಸಿದೆ. ತಕ್ಷಣ ಸಪ್ತಮಿ ಬಳಿ ಮಾತನಾಡಿದ್ದಾರೆ. ಆ ಕ್ಷಣ ಸಪ್ತಮಿಯವರ ಬದುಕಿನಲ್ಲಿ ಮರೆಯಲಾಗದ ಕ್ಷಣ.

ಮೃದುಲಾ

ಚಿತ್ರ: ರಾಜು ಜೇಮ್ಸ್‌ಬಾಂಡ್

ಹುಬ್ಬಳ್ಳಿ ಹುಡುಗಿ ಮೃದುಲಾ. ಪ್ರತಿಭಾನ್ವಿತ ನಿರ್ದೇಶಕ ದೀಪಕ್ ಮಧುವನಹಳ್ಳಿಯವರು ಆಗ ತಾನೇ ರಾಜು ಜೇಮ್ಸ್‌ಬಾಂಡ್ ಚಿತ್ರದ ಪಾತ್ರವನ್ನು ಕಡೆದಿದ್ದರು. ಒಂದೊಳ್ಳೆ ಸಮಯಕ್ಕೆ ಅವರ ಕಣ್ಣಿಗೆ ಬಿದ್ದಿದ್ದು ಈ ಹುಡುಗಿ. ಪಕ್ಕದ ಮನೆ ಹುಡುಗಿ ಥರ ಅನ್ನಿಸುವ ನಟಿಯನ್ನು ಹುಡುಕುತ್ತಿದ್ದ ದೀಪಕ್‌ಗೆ ಸಂತೋಷವಾಯಿತು. ಆಕೆಯನ್ನು ಕರೆಸಿ ಮಾತನಾಡಿದಾಗ ಈಕೆಯೇ ಸರಿಯಾದ ಆಯ್ಕೆ ಅನ್ನಿಸಿತು. ಮೃದುಲಾಗೆ ಇದು ಮೊದಲ ಸಿನಿಮಾ. ಆರಂಭದಲ್ಲೇ ದೊಡ್ಡ ಕಲಾವಿದರ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಮುಂದಿನ ವಾರ ಈ ಚಿತ್ರಕ್ಕೆ ಮುಹೂರ್ತ.