Asianet Suvarna News Asianet Suvarna News

ಅಣ್ಣಾವ್ರೊಂದಿಗೆ ಎಂತಹ ಪಾತ್ರದಲ್ಲಿ ನಟಿಸಲು ಇಚ್ಚಿಸುತ್ತಾರೆ ಈ ನಟಿಯರು..?

ಈಗಿನ ನಾಯಕಿಯರಲ್ಲಿ ನಿಮಗೆ ಅಣ್ಣಾವ್ರ ಸಿನಿಮಾಗಳಲ್ಲಿ ಯಾವ ಪಾತ್ರದಲ್ಲಿ ನಟಿಸುವ ಆಸೆ ಇತ್ತು ಎಂದು ಕೇಳಿದರೆ ಜಾಸ್ತಿ ಓಟು ಸಿಕ್ಕಿದ್ದು ಸಂಪತ್ತಿಗೆ ಸವಾಲ್ ಮಂಜುಳಾ ಪಾತ್ರಕ್ಕೆ. ಅನಂತರ ಸರಿತಾ, ಕಲ್ಪನಾ, ಭಾರತಿ, ಆರತಿ ಪಾತ್ರಗಳೂ ಈಗಿನ ನಾಯಕಿಯರ ಕಣ್ಮನ ಸೆಳೆದಿದ್ದೂ ಇದೆ.

This is What Kannada Heroin Wants Act With Dr Rajkumar

ಈಗಿನ ನಾಯಕಿಯರಲ್ಲಿ ನಿಮಗೆ ಅಣ್ಣಾವ್ರ ಸಿನಿಮಾಗಳಲ್ಲಿ ಯಾವ ಪಾತ್ರದಲ್ಲಿ ನಟಿಸುವ ಆಸೆ ಇತ್ತು ಎಂದು ಕೇಳಿದರೆ ಜಾಸ್ತಿ ಓಟು ಸಿಕ್ಕಿದ್ದು ಸಂಪತ್ತಿಗೆ ಸವಾಲ್ ಮಂಜುಳಾ ಪಾತ್ರಕ್ಕೆ. ಅನಂತರ ಸರಿತಾ, ಕಲ್ಪನಾ, ಭಾರತಿ, ಆರತಿ ಪಾತ್ರಗಳೂ ಈಗಿನ ನಾಯಕಿಯರ ಕಣ್ಮನ ಸೆಳೆದಿದ್ದೂ ಇದೆ.

ಶಾನ್ವಿ ಶ್ರೀವಾಸ್ತವ್: ಪೌರಾಣಿಕ ಪಾತ್ರಗಳು ನಂಗಿಷ್ಟ ರಾಜ್‌ಕುಮಾರ್ ಅಭಿನಯದ ಪೌರಾಣಿಕ ಸಿನಿಮಾಗಳು ನನಗೆ ಹೆಚ್ಚು ಇಷ್ಟ. ‘ಭಕ್ತ ಪ್ರಹ್ಲಾದ’ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೇನೆ. ಅಲ್ಲಿ ರಾಜ್ ಜತೆ ನಟಿ ಸರಿತಾ ಅವರು ತೆರೆ ಹಂಚಿಕೊಂಡಿದ್ದಾರೆ. ಆ ಪಾತ್ರ ನನಗೆ ಅಚ್ಚುಮೆಚ್ಚು. ಅಂತಹ ಪಾತ್ರಗಳು ಅವರಯಾವುದೇ ಪೌರಾಣಿಕ ಸಿನಿಮಾಗಳಲ್ಲಿ ಸಿಕ್ಕರೂ ಅಭಿನಯಿಸುವ ಆಸೆ.

ಶ್ರದ್ಧಾ ಶ್ರೀನಾಥ್: ಎಲ್ಲಾ ಪಾತ್ರಗಳೂ ಇಷ್ಟವೇ ಕಾಲೇಜು ದಿನಗಳಲ್ಲಿ ‘ಬಬ್ರುವಾಹನ’ ಹಾಗೂ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿದ್ದೆ. ಆಗ ನನಗೆ ಸಿನಿಮಾದತ್ತ ಹೆಚ್ಚು ಆಸಕ್ತಿ ಇರಲಿಲ್ಲ. ರಾಜ್‌'ಕುಮಾರ್ ಎನ್ನುವ ಮೇರು ನಟ ಅವತ್ತು ನನಗೂ ನಟನೆಯ ಆಕರ್ಷಣೆ ಮೂಡಿಸಿದ್ದು ಸುಳ್ಳಲ್ಲ. ನಾನಲ್ಲಿ ಕಂಡ ಅವರ ನಟನೆ, ಪಾತ್ರ ಪೋಷಣೆಗೆ ಅವರ ದೊಡ್ಡ ಫ್ಯಾನ್ ಆಗಿದ್ದೆ. ಅಂತಹ ಮೇರು ಪ್ರತಿಭೆಯ ಜತೆಗೆ ನಟಿಸುವ ಅವಕಾಶ ಸಿಕ್ಕಿದ್ದರೆ ಅದೊಂದು ಸುವರ್ಣಾವಕಾಶ.

ಶುಭ ಪೂಂಜಾ: ಸಂಪತ್ತಿಗೆ ಸವಾಲ್ ನಾಯಕಿ ನಂಗಿಷ್ಟ ಅಣ್ಣಾವ್ರ ಸಿನಿಮಾಗಳಲ್ಲಿ ‘ಬಂಗಾರದ ಮನುಷ್ಯ’, ‘ಸಾಕ್ಷಾತ್ಕಾರ’, ‘ಸಂಪತ್ತಿಗೆ ಸವಾಲ್’ ನನಗೆ ಹೆಚ್ಚು ಇಷ್ಟ. ಅವರ ಜತೆಗೆ ನಾನು ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದರೆ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಮಂಜುಳಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಬಜಾರಿ ತರಹದ ಆ ಪಾತ್ರ ನನಗೆ ಹೆಚ್ಚು ಸೂಟ್ ಆಗ್ತಿತ್ತು ಅನ್ನೋದು ಒಂದು ಕಾರಣ. ಅದು ಹೀರೋಗೆ ಸರಿ ಸಮನಾದ ಪಾತ್ರ.

ಅದಿತಿ ಪ್ರಭುದೇವ್: ರಾಜ ನನ್ನ ರಾಜ ನನ್ನ ಫೇವರಿಟ್ ‘ರಾಜ ನನ್ನ ರಾಜ’ ಚಿತ್ರದಲ್ಲಿ ಅಣ್ಣಾವ್ರ ಜತೆಗೆ ಆರತಿ ಅಭಿನಯಿಸಿದ ಪಾತ್ರ ಹಾಗೂ ‘ಮಯೂರ’ ಚಿತ್ರದಲ್ಲಿ ಮಂಜುಳಾ ಅಭಿನಯಿಸಿದ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದರೆ ಅದು ನನ್ನ ಜೀವನದ ಸೌಭಾಗ್ಯ ಅಂದುಕೊಳ್ಳುತ್ತಿದ್ದೆ. ಯಾಕಂದ್ರೆ ಇವೆರಡು ಚಿತ್ರ ನೋಡಿದವರಿಗೆ ಆರತಿ ಮತ್ತು ಮಂಜುಳಾ ಅಭಿನಯಿಸಿದ ಪಾತ್ರಗಳು ಕಾಡಿಸದೆ ಬಿಟ್ಟಿಲ್ಲ.

ಹರಿಪ್ರಿಯ: ಮಂಜುಳಾ ಪಾತ್ರ ನನ್ನ ಕನಸಿನ ಪಾತ್ರ ‘ಸಂಪತ್ತಿಗೆ ಸವಾಲ್’ ನಾನು ಹಲವು ಬಾರಿ ನೋಡಿದ ಸಿನಿಮಾ. ಅಣ್ಣಾವ್ರ ಜತೆಗೆ ಈ ಸಿನಿಮಾದಲ್ಲಿ ಮಂಜುಳಾ ಅಭಿನಯಿಸಿದ್ದಾರೆ. ಇಲ್ಲಿ ಅವರ ಪಾತ್ರಕ್ಕೆ ನಾಯಕನ ಪಾತ್ರಕ್ಕೆ ಸಿಕ್ಕ ಆದ್ಯತೆ, ಪ್ರಾಮುಖ್ಯತೆ ಸಿಕ್ಕಿದೆ. ಆ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಮಂಜುಳಾ ಅಲ್ಲಿ ಬಜಾರಿ. ಅವರನ್ನು ಗಂಡುಬೀರಿ ಮಂಜುಳಾ ಅಂತ ಫೇಮಸ್ ಮಾಡಿದ್ದೇ ಆ ಪಾತ್ರ.

ಸಂಯುಕ್ತ ಹೊರನಾಡು: ಬಂಗಾರದ ಮನುಷ್ಯದ ಭಾರತಿ ಅಷ್ಟು ದೊಡ್ಡ ನಟನ ಜತೆಗೆ ಅಭಿನಯಿಸುವ ಅವಕಾಶ ಬಂದ್ರೆ ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಭಾರತಿ ಅವರು ನಿರ್ವಹಿಸಿದ ಪಾತ್ರದಲ್ಲಿ ಅಭಿನಯಿಸುವ ಆಸೆ. ಭಾರತಿ ಅವರು ನಿರ್ವಹಿಸಿದ ಪಾತ್ರ ಹಲವು ಆಯಾಮಗಳನ್ನು ತೋರಿಸಿದೆ. ಒಂದು ಪಾತ್ರ ಹತ್ತಿಪ್ಪತ್ತು ಪಾತ್ರಗಳ ಚಹರೆಗಳನ್ನು ತೋರಿಸುತ್ತದೆ. ಅಂತಹ ಪಾತ್ರ ಸಿಕ್ಕರೆ ಯಾರು ತಾನೇ ಬೇಡ ಎನ್ನಲು ಸಾಧ್ಯ.

ಶ್ವೇತಾ ಶ್ರೀವಾಸ್ತವ್: ಐ ಲವ್ ಎರಡು ಕನಸು ಕಲ್ಪನಾ ಅವರ ಜತೆಗೆ ಅಭಿನಯಿಸುವುದಕ್ಕಲ್ಲ, ಪಕ್ಕದಲ್ಲಿ ನಿಲ್ಲುವಂತಹ ಪಾತ್ರ ಸಿಕ್ಕರೂ ನಾನು ಅಭಿನಯಿಸುವ ಆಸೆ. ರಾಜ್ ಅಂದ್ರೆ ನನಗೆ ಅಷ್ಟೊಂದು ಕ್ರೇಜ್. ‘ಎರಡು ಕನಸು’ ಚಿತ್ರದ ಕಲ್ಪನಾ, ‘ಹೊಸಬೆಳಕು’ ಚಿತ್ರದ ಸರಿತಾ ಪಾತ್ರಗಳಲ್ಲಿ ನಟಿಸುವ ಆಸೆಯಿದೆ. ಕಾರಣ ಇವೆರಡು ವಿಭಿನ್ನ ಪಾತ್ರಗಳು. ಆ ಪಾತ್ರಗಳಲ್ಲಿ ಆ ಇಬ್ಬರೂ ಪ್ರೇಕ್ಷಕರ ಮನಗೆದ್ದವರು.

ಭಾವನಾ ರಾವ್: ಸಿಡಿದೆದ್ದ ಹೆಣ್ಣಿನ ಪಾತ್ರ ಚೆಂದ ನಾನು ಅಣ್ಣಾವ್ರ ‘ಬ್ಲಾಕ್‌ಬಸ್ಟರ್’ ಸಿನಿಮಾಗಳನ್ನು ಒಂದಕ್ಕಿಂತ ಹೆಚ್ಚು ಸಲ ನೋಡಿದ್ದೇನೆ. ತೆರೆ ಮೇಲೆ ಅವರನ್ನು ನೋಡುತ್ತಲೇ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದರೆ ಹೇಗಿರುತ್ತಿತ್ತು ಎಂದು ಲೆಕ್ಕಾಚಾರ ಹಾಕಿದ್ದೂ ಇದೆ. ಆ ಪೈಕಿ ನನಗೆ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿನ ಮಂಜುಳಾ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದರೆ ಅದೊಂದು ಅದೃಷ್ಟವೇ ಎಂದುಕೊಳ್ಳುತ್ತಿದ್ದೆ.

 

Follow Us:
Download App:
  • android
  • ios