ಮುಂಬೈ (ಡಿ. 27):  ಶಿವಸೇನಾ ಪ್ರಮುಖ ದಿ. ಬಾಳಾ ಠಾಕ್ರೆ ಅವರ ಜೀವನ ಆಧರಿತ ಬಹುನಿರೀಕ್ಷಿತ ‘ಠಾಕ್ರೆ’ ಚಲನಚಿತ್ರದ ಟ್ರೇಲರ್‌ ಬುಧವಾರ ಬಿಡುಗಡೆಯಾಗಿದೆ. ಠಾಕ್ರೆ ಅವರ ಪಾತ್ರದಲ್ಲಿ ನಟಿಸಿರುವ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಖಿ ಅವರು ಥೇಟ್‌ ಠಾಕ್ರೆ ಅವರ ರೀತಿಯೇ ಕಾಣಿಸಿಕೊಂಡಿದ್ದು, ಭಾರಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜನವರಿ 25ರಂದು ಮರಾಠಿ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೇಲರ್‌ ಅನ್ನು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಚಿತ್ರಕತೆ ಬರೆದಿರುವ ಶಿವಸೇನಾ ವಕ್ತಾರ ಸಂಜಯ ರಾವುತ್‌ ಬಿಡುಗಡೆ ಮಾಡಿದರು.

ಕತ್ತರಿ ಪ್ರಯೋಗಿಸಲ್ಲ- ರಾವುತ್‌:

ಈ ನಡುವೆ, ಸಿನಿಮಾದಲ್ಲಿ ಕೆಲವು ವಿವಾದಿತ ಅಂಶಗಳು ಇವೆ. ಇವುಗಳಿಗೆ ಕತ್ತರಿ ಪ್ರಯೋಗಿಸಬೇಕು ಎಂದು ಸೆನ್ಸಾರ್‌ ಮಂಡಳಿ ನಿರ್ಧರಿಸಿದೆ. ಆದರೆ ಇದಕ್ಕೆ ಸಂಜಯ ರಾವುತ್‌ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕತ್ತರಿ ಪ್ರಯೋಗಿಸಲು ಇದೇನೂ ಲವ್‌ ಸ್ಟೋರಿ ಅಲ್ಲ. ಬಾಳಾಸಾಹೇಬ್‌ ಹೇಗಿದ್ದರೋ ಹಾಗೆ ತೋರಿಸುವುದೇ ಚಿತ್ರದ ಉದ್ದೇಶ. ಕತ್ತರಿ ಪ್ರಯೋಗಿಸಲ್ಲ’ ಎಂದು ಸೆನ್ಸಾರ್‌ ಮಂಡಳಿಗೆ ಸಡ್ಡು ಹೊಡೆದಿದ್ದಾರೆ.