ಮಂಡ್ಯ (ಆ. 24): ನೂತನ ಸಂಸದೆ ಸುಮಲತಾ ಅಂಬರೀಶ್, ನಾಲ್ಕು ವರ್ಷಗಳ ಹಿಂದೆ ತೆಲುಗು ನಟ ಚಿರಂಜೀವಿ ಮಗಳ ಮದುವೆಯಲ್ಲಿ ಭಾಗವಹಿಸಿದ್ದ ವೀಡಿಯೋ ಹಾಗೂ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಿರಂಜೀವಿ ಹುಟ್ಟುಹಬ್ಬ ಆ. 23 ರಂದು ಈ ವಿಡಿಯೋವನ್ನು ಹರಿಯಬಿಡಲಾಗಿದ್ದು, ಚಿರಂಜೀವಿ ಬರ್ತಡೇ ಪಾರ್ಟಿಯಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎಂದು ವೈರಲ್ ಮಾಡಲಾಗಿತ್ತು.  ಸುಮಲತಾ ಅಂಬರೀಶ್ ಹೆಸರಿನ ಫೇಸ್ ಬುಕ್ ಖಾತೆಯಿಂದಲೇ ಅಪ್ಲೋಡ್ ಆಗಿದ್ದು ಇನ್ನಷ್ಟು ಪುಷ್ಟಿ ನೀಡಿದಂತಾಗಿತ್ತು. 

ಈ ವಿಡಿಯೋಗೆ ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಹಿಂದೆ ನಡೆದ ಚಿರಂಜೀವಿ ರವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಅಂಬರೀಶ್ ಅವರೊಂದಿಗೆ 4 ವರ್ಷಗಳ ಹಿಂದಿನ ಹಳೆಯ ನೆನಪುಗಳನ್ನು ಮರಳಿ ತಂದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ. 

 

ಚಿರಂಜೀವಿ ಹುಟ್ಟುಹಬ್ಬದಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿರುವ ವಿಡಿಯೋ 3 ವರ್ಷ ಹಿಂದಿನದ್ದು. ಅಂದರೆ 2016 ರಲ್ಲಿ ಅರಮನೆ ಮೈದಾನದಲ್ಲಿ ಚಿರಂಜೀವಿ ಮಗಳು ಶ್ರೀಜಾ ಮದುವೆ ನಡೆದಿತ್ತು. ಈ ಸಂದರ್ಭದಲ್ಲಿ ಸುಮಲತಾ, ಚಿರಂಜೀವಿ ಜೊತೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ಕಿಡಿಗೇಡಿಗಳು ಸುಮಲತಾ ತೇಜೋವಧೆಗೆ ಯತ್ನಿಸಿದ್ದಾರೆ.